AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಎಲ್ಲಿಯೂ ಪ್ಲಾಸ್ಟಿಕ್​ ಧ್ವಜ ಬಳಕೆಯಾಗದಂತೆ ನಿಗಾ ವಹಿಸಿ; ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಕೇಂದ್ರ ಸರ್ಕಾರ ಸೂಚನೆ

ರಾಷ್ಟ್ರಧ್ವಜಕ್ಕೆ ಅತ್ಯುನ್ನತ ಸ್ಥಾನವಿದೆ. ದೇಶದ ಪ್ರತಿಯೊಬ್ಬ ಪ್ರಜೆಯೂ ಆ ಗೌರವವನ್ನು ಸಲ್ಲಿಸಬೇಕು. ಆದರೆ, ಆ ವಿಚಾರದಲ್ಲಿ ತಿಳುವಳಿಕೆಯ ಕೊರತೆ ಇನ್ನೂ ಇದ್ದು, ಪ್ಲಾಸ್ಟಿಕ್​ ಧ್ವಜ ಬಳಕೆ ಮಾಡಿ ಅದನ್ನು ಎಲ್ಲೆಂದರಲ್ಲಿ ಎಸೆಯುವ ಮೂಲಕ ಅಪಮಾನ ಮಾಡಲಾಗುತ್ತಿದೆ.

ಎಲ್ಲಿಯೂ ಪ್ಲಾಸ್ಟಿಕ್​ ಧ್ವಜ ಬಳಕೆಯಾಗದಂತೆ ನಿಗಾ ವಹಿಸಿ; ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಕೇಂದ್ರ ಸರ್ಕಾರ ಸೂಚನೆ
ಪ್ಲಾಸ್ಟಿಕ್​ನಿಂದ ತಯಾರಿಸಿದ ತ್ರಿವರ್ಣ ಧ್ವಜ (ಸಂಗ್ರಹ ಚಿತ್ರ)
TV9 Web
| Edited By: |

Updated on: Aug 09, 2021 | 10:40 AM

Share

ಭಾರತದ ಸ್ವಾತಂತ್ರ್ಯ ದಿನಾಚರಣೆಗೆ (Independence Day) ಕೆಲ ದಿನಗಳಷ್ಟೇ ಬಾಕಿ ಉಳಿದಿದ್ದು, ಕೊರೊನಾ ಮೂರನೇ ಅಲೆ ಆತಂಕದ ನಡುವೆಯೇ ಆಚರಿಸುವಂತಾಗಿದೆ. ಈ ಬಾರಿ ಸ್ವಾತಂತ್ರ್ಯೋತ್ಸವ ಸಂದರ್ಭದಲ್ಲಿ ಎಲ್ಲಿಯೂ ಪ್ಲಾಸ್ಟಿಕ್ ಧ್ವಜ (Plastic Flag) ಬಳಕೆಯಾಗದಂತೆ ನಿಗಾ ವಹಿಸಿ ಎಂದು ಭಾರತ ಸರ್ಕಾರ (Union Government of India) ಎಲ್ಲಾ ರಾಜ್ಯ ಸರ್ಕಾರ ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಸೂಚನೆ ನೀಡಿದ್ದು, ಕಟ್ಟುನಿಟ್ಟಾಗಿ ಅದನ್ನು ಪಾಲಿಸಲು ತಿಳಿಸಿದೆ. ಸ್ವಾತಂತ್ರ್ಯ ದಿನಾಚರಣೆಯ ನಂತರ ಪ್ಲಾಸ್ಟಿಕ್ ಧ್ವಜಗಳು ಎಲ್ಲೆಂದರಲ್ಲಿ ಬಿದ್ದು ಕಸದ ತೊಟ್ಟಿ ಸೇರುವಂತಹ ಘಟನೆಗಳು ನಡೆಯುವುದರಿಂದ ಅದು ರಾಷ್ಟ್ರಧ್ವಜದ ಗೌರವಕ್ಕೆ ಧಕ್ಕೆ ಉಂಟಾಗುತ್ತದೆ. ತಿರಂಗದ ಗೌರವವನ್ನು ಎತ್ತಿ ಹಿಡಿಯುವುದು ನಮ್ಮ ಕರ್ತವ್ಯವಾಗಿದ್ದು, ಸ್ವಚ್ಛತೆಯ ದೃಷ್ಟಿಯಿಂದಲೂ ಪ್ಲಾಸ್ಟಿಕ್ ಧ್ವಜ ಬಳಕೆ ನಿಷೇಧ ಮಾಡಬೇಕಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.

ರಾಷ್ಟ್ರಧ್ವಜಕ್ಕೆ ಅತ್ಯುನ್ನತ ಸ್ಥಾನವಿದೆ. ದೇಶದ ಪ್ರತಿಯೊಬ್ಬ ಪ್ರಜೆಯೂ ಆ ಗೌರವವನ್ನು ಸಲ್ಲಿಸಬೇಕು. ಆದರೆ, ಆ ವಿಚಾರದಲ್ಲಿ ತಿಳುವಳಿಕೆಯ ಕೊರತೆ ಇನ್ನೂ ಇದ್ದು, ಪ್ಲಾಸ್ಟಿಕ್​ ಧ್ವಜ ಬಳಕೆ ಮಾಡಿ ಅದನ್ನು ಎಲ್ಲೆಂದರಲ್ಲಿ ಎಸೆಯುವ ಮೂಲಕ ಅಪಮಾನ ಮಾಡಲಾಗುತ್ತಿದೆ. ಸಂವಿಧಾನಬದ್ಧವಾಗಿ ಹಾಗೂ ಕಾನೂನಿನ ಪ್ರಕಾರ ರಾಷ್ಟ್ರಧ್ವಜಕ್ಕೆ ಹೇಗೆ ಗೌರವ ನೀಡಬೇಕು ಎನ್ನುವ ಅರಿವಿನ ಕೊರತೆ ಎದ್ದುಕಾಣುತ್ತಿರುವುದು ಬೇಸರದ ವಿಷಯ. ಜತೆಗೆ, ಪ್ಲಾಸ್ಟಿಕ್ ಧ್ವಜಗಳು ಮಣ್ಣಿನಲ್ಲಿ ಸೇರುವುದೂ ಇಲ್ಲವಾದ್ದರಿಂದ ಅವು ಕರಗದ ತ್ಯಾಜ್ಯವಾಗಿ ಪರಿವರ್ತನೆ ಹೊಂದಿ ಮತ್ತಷ್ಟು ಸಮಸ್ಯೆ ಸೃಷ್ಟಿಸುತ್ತವೆ ಎಂದು ಹೇಳಿದೆ.

ವಿವಿಧ ಸಂದರ್ಭಗಳಲ್ಲಿ ಪೇಪರ್​ನಿಂದ ಮಾಡಲ್ಪಟ್ಟ ಧ್ವಜದ ಬದಲಾಗಿ ಜನರಿನ್ನೂ ಪ್ಲಾಸ್ಟಿಕ್ ಧ್ವಜಗಳನ್ನೇ ಬಳಸುತ್ತಾರೆ. ಕ್ರೀಡಾಕೂಟ, ರಾಷ್ಟ್ರೀಯ ಹಬ್ಬಗಳಿದ್ದಾಗ ಎಲ್ಲರ ಕೈಯಲ್ಲೂ ಪ್ಲಾಸ್ಟಿಕ್ ಧ್ವಜ ಇರುತ್ತದೆ. ಆದರೆ, ಸಮಾರಂಭ ಮುಗಿಯುತ್ತಿದ್ದಂತೆಯೇ ಜನರು ತಮ್ಮ ಕೈಯಲ್ಲಿರುವುದು ರಾಷ್ಟ್ರಧ್ವಜ ಎನ್ನುವುದನ್ನು ಮರೆತು ಎಲ್ಲೆಂದರಲ್ಲಿ ಹಾಕಿ ಹೋಗುವುದು ಸರಿಯಲ್ಲ. ಇದನ್ನು ತಡೆಗಟ್ಟಬೇಕೆಂದರೆ ಪ್ಲಾಸ್ಟಿಕ್ ಧ್ವಜ ಬಳಸುವುದನ್ನು ನಿಲ್ಲಿಸಬೇಕು. ಅವಶ್ಯಕತೆ ಇದ್ದಾಗ ಭಾರತದ ಧ್ವಜ ಸಂಹಿತೆ, 2002ರ ಪ್ರಕಾರ ಪೇಪರ್​ನಿಂದ ಮಾಡಲ್ಪಟ್ಟ ತ್ರಿವರ್ಣ ಧ್ವಜಕ್ಕೆ ಒತ್ತು ಕೊಟ್ಟು ಅವು ಎಲ್ಲೆಂದರಲ್ಲಿ ಎಸೆಯದಂತೆ, ನೆಲಕ್ಕೆ ಬೀಳದಂತೆ ನಿಗಾ ವಹಿಸಿ ಎಂದು ಸಲಹೆ ನೀಡಿದೆ.

ಪೇಪರ್​ನಿಂದ ಮಾಡಲ್ಪಟ್ಟ ಧ್ವಜಗಳನ್ನೂ ನಿರ್ದಿಷ್ಟ ಸ್ಥಳದಲ್ಲಿ ಗೌರವಯುತವಾಗಿಯೇ ಹಾಕಬೇಕು. ರಾಷ್ಟ್ರಧ್ವಜಕ್ಕೆ ಅಗೌರವ ಆಗದಂತೆ ಎಚ್ಚರ ವಹಿಸುವುದು ಎಲ್ಲರ ಆದ್ಯ ಕರ್ತವ್ಯವಾಗಬೇಕು ಎಂದು ಗೃಹ ಸಚಿವಾಲಯ ಎಲ್ಲಾ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಕಳುಹಿಸಿರುವ ಪತ್ರದಲ್ಲಿ ತಿಳಿಸಿದೆ.

(Centre asks State Governments union territories to stop using tricolour flag made of plastic ahead of Independence day)

ಇದನ್ನೂ ಓದಿ: ಮಾಣಿಕ್ ಷಾ ಪರೇಡ್ ಸ್ವಾತಂತ್ರ್ಯ ದಿನಕ್ಕೆ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲ್ಲ, ಸಾರ್ವಜನಿಕರು ಭಾಗವಹಿಸುವಂತಿಲ್ಲ 

ಒಲಿಂಪಿಕ್ಸ್​​ನಲ್ಲಿ ಭಾಗಿಯಾದ ಕ್ರೀಡಾಪಟುಗಳನ್ನು ಸ್ವಾತಂತ್ರ್ಯೋತ್ಸವದಂದು ಕೆಂಪುಕೋಟೆಗೆ ಆಹ್ವಾನಿಸಲಿದ್ದಾರೆ ಪ್ರಧಾನಿ ಮೋದಿ