ಚೆನ್ನೈ: ತಮಿಳುನಾಡಿನ ಪೊಲೀಸ್ (Police)ಠಾಣೆಯಲ್ಲಿ ಆರೋಪಿಯೊಬ್ಬ ಮೃತಪಟ್ಟ ಪ್ರಕರಣ ಇದೀಗ ಮಹತ್ವದ ತಿರುವು ಪಡೆದುಕೊಂಡಿದೆ. ಆರೋಪಿ ಸಾವು ಸಹಜವಲ್ಲ ಕೊಲೆ ಎನ್ನುವ ವಿಚಾರ ಬೆಳಕಿಗೆ ಬಂದಿದೆ. ಕಳೆದ ತಿಂಗಳಷ್ಟೇ ಆರೋಪಿ ವಿಗ್ನೇಶ್ನನ್ನು ಗಾಂಜಾ ಸಾಗಾಟ ಪ್ರಕರಣದಲ್ಲಿ ಬಂಧಿಸಿದ್ದರು, ಆ ಸಮಯದಲ್ಲಿ ಆರೋಪಿ ಪೊಲೀಸರ ಮೇಲೆ ಹಲ್ಲೆಗೂ ಮುಂದಾಗಿದ್ದ. ಬಳಿಕ ಆತನನ್ನು ಬಂಧಿಸಿದ್ದರು, ಇದೀಗ ಲಾಕ್ಅಪ್ನಲ್ಲಿ ಅನುಮಾನಾಸ್ಪದವಾಗಿ ಆತ ಮೃತಪಟ್ಟಿದ್ದ.
ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಆತನ ದೇಹದಲ್ಲಿ 13 ಕಡೆ ಗಾಯದ ಗುರುತುಗಳಿರುವುದು ಕಂಡುಬಂದಿದ್ದು, ಆತನ ಸಾವಿನ ಕುರಿತು ಸಂಶಯ ಮೂಡಿದೆ. ಸಾವಿಗೆ ಪೊಲೀಸರೇ ಕಾರಣ ಎಂದು ಪೊಲೀಸರ ಕಡೆ ಬೆರಳುಮಾಡಿ ತೋರಿಸಲಾಗುತ್ತಿದೆ. ಈ ಪ್ರಕರಣದಲ್ಲಿ ಸಂಬಂಧ ಹೊಂದಿದ್ದಾರೆ ಎನ್ನುವ ಆರೋಪದ ಮೇರೆಗೆ ಸಬ್ಇನ್ಸ್ಪೆಕ್ಟರ್, ಕಾನ್ಸ್ಟೆಬಲ್, ಹೋಂಗಾರ್ಡ್ ಅಮಾನತುಗೊಳಿಸಲಾಗಿದೆ. ಹಾಗೆಯೇ ಇನ್ನೂ ಹಲವು ಪೊಲೀಸ್ ಅಧಿಕಾರಿಗಳ ವಿಚಾರಣೆ ನಡೆದಿದೆ ಸಮನ್ಸ್ ಜಾರಿಮಾಡಲಾಗಿದೆ.
ತಮಿಳುನಾಡಿನ ವಿರೋಧ ಪಕ್ಷ ನಾಯಕ ಕೆ ಪಳನಿಸ್ವಾಮಿ ಈ ಕುರಿತು ಧ್ವನಿ ಎತ್ತಿದ ಬಳಿಕ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಮಾತನಾಡಿ, ‘ಮರಣೋತ್ತರ ಪರೀಕ್ಷೆಯಲ್ಲಿ ಆರೋಪಿ ಮೇಲೆ ನಡೆದಿದ್ದ ಹಲ್ಲೆ ಕುರಿತು ತಿಳಿದುಬಂದಿದೆ. ಸಹಜ ಸಾವು ಇದೀಗ ಕೊಲೆಯಾಗಿ ಮಾರ್ಪಾಡಾಗಿದೆ, ಪೊಲೀಸರ ವಿರುದ್ಧ ಕೊಲೆ ಪ್ರಕರಣ ದಾಖಲಿಸಲಾಗುತ್ತದೆ, ಈ ಪ್ರಕರಣವನ್ನು ಸಿಬಿ-ಸಿಐಡಿಗೆ ನೀಡಲಾಗುತ್ತದೆ’ ಎಂದಿದ್ದಾರೆ.
ವರದಿ ಪ್ರಕಾರ ವಿಗ್ನೇಶ್ ತಲೆಭಾಗ, ಕಣ್ಣಿನ ಮೇಲ್ಭಾಗ, ಕೆನ್ನೆ ಸೇರಿದಂತೆ ದೇಹದ ಹಲವು ಕಡೆ ಗಾಯಗಳಾಗಿವೆ, ಆದರೆ ಸಾವಿಗೆ ಕಾರಣವೇನೆಂಬುದು ಇನ್ನೂ ತಿಳಿದುಬಂದಿಲ್ಲ. ಆದರೆ ಪೊಲೀಸರು ನೀಡಿದ್ದ ಮಾಹಿತಿ ಪ್ರಕಾರ ವಿಗ್ನೇಶ್ ಬಳಿ ಚಾಕು ಇತ್ತು, ಆತನನ್ನು ಆಸ್ಪತ್ರೆಗೆ ಸೇರಿಸಲಾದರೂ ಯಾವುದೇ ಪ್ರಯೋಜನವಾಗಿಲ್ಲ ಎಂದಿದ್ದಾರೆ.
ಆದರೆ ಬೇರೆ ಆರೋಪಿಗಳನ್ನು ವಿಚಾರಿಸಿದಾಗ ವಿಗ್ನೇಶ್ ಮೇಲೆ ಹಲ್ಲೆಯಾಗಿರುವುದು ತಿಳಿದುಬಂದಿದೆ, ರಾತ್ರಿ 11ರಿಂದ ಬೆಳಗಿನ ಜಾವ 3.30ರವರೆಗೆ ಆತನಿಗೆ ಹಿಂಸೆ ನೀಡಲಾಗಿತ್ತು ಎಂಬ ವಿಚಾರ ಬೆಳಕಿಗೆ ಬಂದಿದೆ. ಇದೀಗ ಪೊಲೀಸರಿಗೆ ಬಂಧನ ಬೀತಿ ಎದುರಾಗಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ