ಪೊಲೀಸ್ ಕಸ್ಟಡಿಯಲ್ಲಿದ್ದ ಯುವಕನ ಸಾವು ಪ್ರಕರಣ; ಪೊಲೀಸರು ಅಟ್ಟಾಡಿಸಿಕೊಂಡು ಹೋಗಿ ಥಳಿಸುವ ದೃಶ್ಯ ಸಿಸಿಟಿವಿಯಲ್ಲಿ ಸೆರೆ
ವಿಡಿಯೊದಲ್ಲಿ ವ್ಯಕ್ತಿಯೊಬ್ಬರು ಮುಖ್ಯ ರಸ್ತೆಯಿಂದ ಕಿರಿದಾದ ರಸ್ತೆಯ ಕಡೆಗೆ ಓಡಿಹೋಗುತ್ತಿರುವುದು ಮತ್ತು ಆಯ ತಪ್ಪಿ ಕೆಳಗೆ ಬೀಳುವುದನ್ನು ಕಾಣಬಹುದು. ಇಬ್ಬರು ಪೋಲೀಸರು ಅವನನ್ನು ಬೆನ್ನಟ್ಟುತ್ತಾರೆ. ಅವರಲ್ಲಿ ಒಬ್ಬ ಪೊಲೀಸ್ ಆ ವ್ಯಕ್ತಿಗೆ ಕೋಲಿನಿಂದ ಹೊಡೆಯುವುದನ್ನು...
ಚೆನ್ನೈನ (Chennai) ಪೊಲೀಸ್ ಠಾಣೆಯೊಂದರಲ್ಲಿ 25 ವರ್ಷದ ವ್ಯಕ್ತಿಯೊಬ್ಬರು ಚಿತ್ರಹಿಂಸೆಯಿಂದ ಸಾವನ್ನಪ್ಪಿದ ಘಟನೆ ನಡೆದು ವಾರಗಳ ನಂತರ ಸಿಸಿಟಿವಿಯಲ್ಲಿ (CCTV) ಸೆರೆಯಾಗಿರುವ ದೃಶ್ಯವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿದೆ. ಈ ವಿಡಿಯೊದಲ್ಲಿ ವ್ಯಕ್ತಿ ರಸ್ತೆಯಲ್ಲಿ ಓಡುತ್ತಿರುವುದನ್ನು ತೋರಿಸುತ್ತದೆ. ಹೀಗೆ ಓಡಿದ ವ್ಯಕ್ತಿ ಕೆಳಗೆ ಬಿದ್ದಾಗ ಇಬ್ಬರು ಪೊಲೀಸರು ಥಳಿಸುತ್ತಿರುವುದು ಕಾಣಿಸುತ್ತದೆ. ಈ ದೃಶ್ಯಾವಳಿಗಳು ಮತ್ತೊಮ್ಮೆ ಕಸ್ಟಡಿ ಚಿತ್ರಹಿಂಸೆಯ (custodial torture) ಬಗ್ಗೆ ಚರ್ಚೆಯನ್ನು ಹುಟ್ಟುಹಾಕಿದ್ದು ಪೊಲೀಸ್ ಚಿತ್ರಹಿಂಸೆಯಿಂದ ಆತ ಸಾವನ್ನಪ್ಪಿದ್ದಾನೆ ಎಂಬ ವ್ಯಕ್ತಿಯ ಕುಟುಂಬದ ಆರೋಪಗಳಿಗೆ ಪುಷ್ಠಿ ನೀಡಿದೆ. ಏಪ್ರಿಲ್ 18 ರಂದು ನಗರದ ಕೆಲ್ಲಿಸ್ ಸಿಗ್ನಲ್ ಬಳಿ ಗಾಂಜಾ ಹೊಂದಿದ್ದ ಆರೋಪದ ಮೇಲೆ ಸೆಕ್ರೆಟರಿಯೇಟ್ ಕಾಲೋನಿ ಪೊಲೀಸರು ವಿ ವಿಘ್ನೇಶ್ ಮತ್ತು ಅವರ ಸ್ನೇಹಿತ ಸುರೇಶ್ ಅವರನ್ನು ಆಟೋರಿಕ್ಷಾದಿಂದ ಬಂಧಿಸಿದ್ದರು. ವಿಘ್ನೇಶ್ ನಮ್ಮ ಮೇಲೆ ಚಾಕುವಿನಿಂದ ಹಲ್ಲೆಗೆ ಯತ್ನಿಸಿದ್ದು, ನಾವು ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾದೆವು ಎಂದು ಪೊಲೀಸರು ಹೇಳಿದ್ದಾರೆ. ನಂತರ ಇಬ್ಬರನ್ನೂ ಸೆಕ್ರೆಟರಿಯೇಟ್ ಕಾಲೋನಿ ಠಾಣೆಗೆ ಕರೆದೊಯ್ಯಲಾಗಿದೆ.. ಕೆಲವು ಗಂಟೆಗಳ ನಂತರ ಏಪ್ರಿಲ್ 19 ರಂದು ಬೆಳಗಿನ ಉಪಾಹಾರ ಸೇವಿಸಿದ ನಂತರ ವಿಘ್ನೇಶ್ ವಾಂತಿ ಮಾಡಿ ಅಸ್ವಸ್ಥರಾಗಿದ್ದರು. ಅವರನ್ನು ಪೊಲೀಸರು ಆಸ್ಪತ್ರೆಗೆ ಕರೆದೊಯ್ದಾಗ ಆತ ಮೃತಪಟ್ಟಿದ್ದಾನೆ ಎಂದು ಆಸ್ಪತ್ರೆಯ ವೈದ್ಯರು ಹೇಳಿದ್ದರು.
ವಿಡಿಯೊದಲ್ಲಿ ವ್ಯಕ್ತಿಯೊಬ್ಬರು ಮುಖ್ಯ ರಸ್ತೆಯಿಂದ ಕಿರಿದಾದ ರಸ್ತೆಯ ಕಡೆಗೆ ಓಡಿಹೋಗುತ್ತಿರುವುದು ಮತ್ತು ಆಯ ತಪ್ಪಿ ಕೆಳಗೆ ಬೀಳುವುದನ್ನು ಕಾಣಬಹುದು. ಇಬ್ಬರು ಪೋಲೀಸರು ಅವನನ್ನು ಬೆನ್ನಟ್ಟುತ್ತಾರೆ. ಅವರಲ್ಲಿ ಒಬ್ಬ ಪೊಲೀಸ್ ಆ ವ್ಯಕ್ತಿಗೆ ಕೋಲಿನಿಂದ ಹೊಡೆಯುವುದನ್ನು ಕಾಣಬಹುದು. ಮತ್ತೊಬ್ಬ ಪೊಲೀಸ್ ನೆಲದಿಂದ ಏನನ್ನೋ ಹುಡುಕಿ ತೆಗೆಯುವುದು ಕಾಣಿಸುತ್ತದೆ. ಈ ಕುರಿತು ಪ್ರತಿಕ್ರಿಯಿಸಲು ಸೆಕ್ರೆಟರಿಯೇಟ್ ಕಾಲೋನಿ ಪೊಲೀಸರು ಲಭ್ಯವಾಗಿಲ್ಲ ಎಂದು ದಿ ಇಂಡಿಯನ್ ಎಕ್ಸ್ ಪ್ರೆಸ್ ವರದಿ ಮಾಡಿದೆ.
ವಿಘ್ನೇಶ್ ಸಾವಿನ ನಂತರ ಅವರ ಕುಟುಂಬವು ಪೊಲೀಸರ ದೌರ್ಜನ್ಯದಿಂದ ಸಾವನ್ನಪ್ಪಿದ್ದಾನೆ. ಈ ವಿಷಯದ ಬಗ್ಗೆ ಮೌನವಾಗಿರಲು ಅವರಿಗೆ 1 ಲಕ್ಷ ರೂಪಾಯಿ ನೀಡಲಾಗುತ್ತಿದೆ ಎಂದು ಆರೋಪಿಸಿದ್ದಾರೆ. ಪ್ರತಿಪಕ್ಷಗಳು ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಸರ್ಕಾರವನ್ನು ಒತ್ತಾಯಿಸಿವೆ.
ತಮಿಳುನಾಡು ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್ ಅವರು ವಿಘ್ನೇಶ್ ಅವರ ಕುಟುಂಬಕ್ಕೆ 10 ಲಕ್ಷ ರೂಪಾಯಿ ಪರಿಹಾರವನ್ನು ಘೋಷಿಸಿದ್ದು ಸುರೇಶ್ ಅವರ ವೈದ್ಯಕೀಯ ವೆಚ್ಚವನ್ನು ಸರ್ಕಾರ ಭರಿಸಲಿದೆ ಎಂದು ಹೇಳಿದ್ದಾರೆ. ಪ್ರಕರಣವನ್ನು ಸಿಬಿ-ಸಿಐಡಿಗೆ ವರ್ಗಾಯಿಸಲಾಗಿದೆ. ಒಬ್ಬ ಸಬ್ ಇನ್ಸ್‌ಪೆಕ್ಟರ್, ಒಬ್ಬ ಕಾನ್‌ಸ್ಟೆಬಲ್ ಮತ್ತು ಒಬ್ಬ ಹೋಂ ಗಾರ್ಡ್ ನ್ನು ಅಮಾನತುಗೊಳಿಸಲಾಗಿದೆ.
ದೇಶದ ಇತರ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 9:27 pm, Tue, 3 May 22