ಪಾಟ್ನಾದ ಶ್ರೀಹರಿ ಮಂದಿರ ಸಾಹೀಬ್ನ ಮುಖ್ಯ ಗ್ರಂಥಿ ಭಾಯಿ ರಾಜೇಂದ್ರ ಸಿಂಗ್ ನಿಗೂಢ ಸಾವು; ಸೂಕ್ತ ತನಿಖೆಗೆ ಆಗ್ರಹ
ಬೇರೆ ಕೆಲವು ಸಮಸ್ಯೆಗಳಿಂದ ಬಳಲುತ್ತಿದ್ದ ಭಾಯಿ ರಾಜೇಂದ್ರ ಸಿಂಗ್ರನ್ನು ಜನವರಿ 13ರಂದು ಪಾಟ್ನಾದ ಪಿಎಂಸಿಎಚ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಅಂದಿನಿಂದಲೂ ಅಲ್ಲಿಯೇ ಚಿಕಿತ್ಸೆ ಪಡೆಯುತ್ತಿದ್ದ ಅವರು, ಭಾನುವಾರ ರಾತ್ರಿ 2.45ರ ಹೊತ್ತಿಗೆ ಮೃತಪಟ್ಟಿದ್ದಾರೆ.
ಬಿಹಾರದ ಪಾಟ್ನಾ ಸಾಹೀಬ್ ಗುರುದ್ವಾರದ ಶ್ರಿಹರಿ ಮಂದಿರ ಸಾಹೀಬ್ನ ಮುಖ್ಯ ಗ್ರಂಥಿ ಭಾಯಿ ರಾಜೇಂದ್ರ ಸಿಂಗ್ ಇಂದು ನಿಧನರಾದರು. ಆದರೆ ಅವರ ಸಾವು ನಿಗೂಢವಾಗಿದೆ. ಅವರ ಕುತ್ತಿಗೆಯ ಮೇಲೆ ಸಣ್ಣ ಚಾಕುವಿನಿಂದ ಮಾಡಲಾದ ಗಾಯದ ಗುರುತಿದ್ದು, ಅದರಿಂದ ರಕ್ತಸ್ರಾವ ಆಗಿದೆ. ಹೀಗಾಗಿ ಅವರು ಸಹಜವಾಗಿ ಸತ್ತಿಲ್ಲ ಎಂಬುದು ಸ್ಪಷ್ಟವಾಗಿದ್ದರೂ, ಅವರನ್ನು ಯಾರಾದರೂ ಕೊಲೆ ಮಾಡಿದರಾ? ಅಥವಾ ರಾಜೇಂದ್ರ ಸಿಂಗ್ ಚಾಕುವಿನಿಂದ ಕತ್ತು ಕೊಯ್ದುಕೊಂಡು ಆತ್ಮಹತ್ಯೆ ಮಾಡಿಕೊಂಡರಾ? ಎಂಬುದಿನ್ನೂ ಸ್ಪಷ್ಟವಾಗಿಲ್ಲ. ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡಿದ್ದು, ತನಿಖೆ ಪ್ರಾರಂಭಿಸಿದ್ದಾರೆ.
ಬೇರೆ ಕೆಲವು ಸಮಸ್ಯೆಗಳಿಂದ ಬಳಲುತ್ತಿದ್ದ ಭಾಯಿ ರಾಜೇಂದ್ರ ಸಿಂಗ್ರನ್ನು ಜನವರಿ 13ರಂದು ಪಾಟ್ನಾದ ಪಿಎಂಸಿಎಚ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಅಂದಿನಿಂದಲೂ ಅಲ್ಲಿಯೇ ಚಿಕಿತ್ಸೆ ಪಡೆಯುತ್ತಿದ್ದ ಅವರು, ಭಾನುವಾರ ರಾತ್ರಿ 2.45ರ ಹೊತ್ತಿಗೆ ಮೃತಪಟ್ಟಿದ್ದಾರೆ. ಈ ಬಗ್ಗೆ ಮಾಧ್ಯಮಗಳಿಗೆ ಹೇಳಿಕೆ ನೀಡಿದ ರಾಜೇಂದ್ರ ಸಿಂಗ್ ಪುತ್ರ ದಯಾ ಸಿಂಗ್, ನನ್ನ ತಂದೆಯವರ ಆರೋಗ್ಯ ಹದಗೆಟ್ಟಿತ್ತು. ಆದರೆ ಚಿಕಿತ್ಸೆಯ ಬಳಿಕ ತುಂಬ ಸುಧಾರಣೆಯಾಗಿತ್ತು. ಆದರೆ ನಿನ್ನೆ ಅವರ ಒಮ್ಮೆಲೇ ಉಸಿರಾಡಲು ಕಷ್ಟಪಟ್ಟರು. ವೈದ್ಯರನ್ನು ಕರೆಸಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗಲಿಲ್ಲ. ಅವರ ಕುತ್ತಿಗೆಯ ಮೇಲೆ ಚಿಕ್ಕ ಚಾಕುವಿನಿಂದ ಹೊಡೆದ ಗುರುತು ಇದೆ. ಮೃತದೇಹದ ಪೋಸ್ಟ್ಮಾರ್ಟಮ್ ಆದ ಬಳಿಕವಷ್ಟೇ ಸತ್ಯ ಸ್ಪಷ್ಟವಾಗಲಿದೆ ಎಂದು ತಿಳಿಸಿದ್ದಾರೆ.
ಗುರುದ್ವಾರದ ಮುಖ್ಯಗ್ರಂಥಿ ಭಾಯಿ ರಾಜೇಂದ್ರ ಸಿಂಗ್ ಸಾವಿಗೆ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಅವತಾರ್ ಸಿಂಗ್, ಪ್ರಧಾನ ಕಾರ್ಯದರ್ಶಿ ಇಂದ್ರಜಿತ್ ಸಿಂಗ್ ಮತ್ತು ಇತರ ಪದಾಧಿಕಾರಿಗಳು, ಸದಸ್ಯರು ಸಂತಾಪ ಸೂಚಿಸಿದ್ದಾರೆ. ಗುರುದ್ವಾರ ಪ್ರಬಂಧಕ್ ಸಮಿತಿ ಸದಸ್ಯ ಮಹೇಂದ್ರ ಪಾಲ್ ಸಿಂಗ್ ದಿಲ್ಲೋನ್, ಸರ್ದಾರ್ ರಾಜಾ ಸಿಂಗ್, ತ್ರಿಲೋಕ್ ಸಿಂಗ್ ನಿಶಾದ್ ಇತರರು ದುಃಖ ವ್ಯಕ್ತಪಡಿಸಿದ್ದು, ಸೂಕ್ತ ತನಿಖೆಗೆ ಆಗ್ರಹಿಸಿದ್ದಾರೆ. ಭಾಯಿ ರಾಜೇಂದ್ರ ಸಿಂಗ್ ಅವರು ಆಸ್ಪತ್ರೆಯ ಬೆಡ್ ಮೇಲೆ ರಕ್ತದ ಮಡುವಲ್ಲಿ ಸಾವನ್ನಪ್ಪಿದ್ದಾರೆ. ಅದು ಹೇಗಾಯಿತು ಎಂಬುದನ್ನು ಕೂಡಲೇ ತನಿಖೆ ಮಾಡಬೇಕು ಎಂದು ಹೇಳಿದ್ದಾರೆ.
ಇದನ್ನೂ ಓದಿ:ಬಿಜೆಪಿ ಕಾರ್ಯಕರ್ತರೊಂದಿಗೆ ಜ.18ರಂದು ನಮೋ ಆ್ಯಪ್ ಮೂಲಕ ಆನ್ಲೈನ್ ಸಂವಾದ ನಡೆಸಲಿದ್ದಾರೆ ನರೇಂದ್ರ ಮೋದಿ