ದೆಹಲಿ: ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಎನ್.ವಿ.ರಮಣ ದೇಶದ ಎಲ್ಲ ಹೈಕೋರ್ಟ್ಗಳ ಮುಖ್ಯ ನ್ಯಾಯಮೂರ್ತಿಗಳ ಜೊತೆಗೆ ಶುಕ್ರವಾರ ಮಾತನಾಡಿದರು. ಲಸಿಕೆಗಳ ಪೂರೈಕೆ, ನ್ಯಾಯಾಲಯಗಳಲ್ಲಿ ತ್ವರಿತವಾಗಿ ಪರಿಹಾರವಾಗಬೇಕಾದ ಮೂಲಸೌಕರ್ಯ ಸಮಸ್ಯೆಯಂಥ ವಿಚಾರಗಳನ್ನು ಕೇಂದ್ರ ಸರ್ಕಾರದ ಗಮನಕ್ಕೆ ತರಲಾಗುವುದು ಎಂದು ಭರವಸೆ ನೀಡಿದರು. ಲಸಿಕೆ ನೀಡುವಲ್ಲಿ ಆದ್ಯತೆ ಸಿಗಬೇಕು ಎನ್ನುವ ಕಾರಣಕ್ಕೆ ನ್ಯಾಯಾಲಯ ಸಿಬ್ಬಂದಿಯನ್ನು ಮುಂಚೂಣಿ ಕೆಲಸಗಾರರು ಎಂದು ಪರಿಗಣಿಸಲು ಸೂಚಿಸಲಾಗುವುದು ಎಂದು ಹೇಳಿದರು.
ಜೂನ್ 1 ಮತ್ತು 2ರಂದು ಒಟ್ಟು ನಾಲ್ಕು ಬಾರಿ ವಿಡಿಯೊ ಕಾನ್ಫರೆನ್ಸ್ ಮೂಲಕ ಸಿಜೆ ರಮಣ ಅವರು ಎಲ್ಲ ಹೈಕೋರ್ಟ್ಗಳ ಮುಖ್ಯ ನ್ಯಾಯಮೂರ್ತಿಗಳ ಜೊತೆಗೆ ಸಂವಾದ ನಡೆಸಿದರು. ಕೊವಿಡ್-19 ಪಿಡುಗಿನ ವೇಳೆ ಹೈಕೋರ್ಟ್ ಮತ್ತು ಅಧೀನ ನ್ಯಾಯಾಲಯಗಳು ಹೇಗೆ ಕಾರ್ಯನಿರ್ವಹಿಸುತ್ತಿವೆ? ಏನೆಲ್ಲಾ ಸಮಸ್ಯೆ ಎದುರಿಸುತ್ತಿವೆ ಎಂಬ ಬಗ್ಗೆ ಮಾಹಿತಿ ಪಡೆದುಕೊಂಡರು.
ಮುಖ್ಯ ನ್ಯಾಯಮೂರ್ತಿಯಾಗಿ ಅಧಿಕಾರ ಸ್ವೀಕರಿಸಿದ ನಂತರ ಇದೇ ಮೊದಲ ಬಾರಿಗೆ ಸಿಜೆ ರಮಣ ರಾಷ್ಟ್ರೀಯ ನ್ಯಾಯಾಂಗ ಮೂಲಸೌಕರ್ಯ ನಿಗಮ ರಚಿಸುವ ತಮ್ಮ ಆಲೋಚನೆಯನ್ನು ಹಂಚಿಕೊಂಡರು. ಈ ನಿಗಮವು ದೇಶದಾದ್ಯಂತ ನ್ಯಾಯಾಲಯಗಳಲ್ಲಿ ಮೂಲಸೌಕರ್ಯ ಒದಗಿಸುವ ಕೆಲಸ ಮಾಡಲಿದೆ. ಹೈಕೋರ್ಟ್ ಮತ್ತು ಇತರ ನ್ಯಾಯಾಲಯಗಳಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೂ ಗಮನ ನೀಡಬೇಕು ಎಂದು ಸಿಜೆ ಸೂಚಿಸಿದರು. ಪಿಡುಗನ್ನು ಸಕಾರಾತ್ಮಕವಾಗಿ ಬಳಸಿಕೊಳ್ಳಿ. ನ್ಯಾಯಾಂಗದ ಅಧಿಕಾರಿಗಳಿಗೆ ವರ್ಚುವಲ್ ತರಬೇತಿಗಳನ್ನು ಕೊಡಿ ಎಂದು ಸಲಹೆ ಮಾಡಿದರು.
ಜಿಲ್ಲೆಗಳು, ಗ್ರಾಮಾಂತರ ಪ್ರದೇಶಗಳು ಮತ್ತು ಬುಡಕಟ್ಟು ಪ್ರದೇಶಗಳಲ್ಲಿ ಕನೆಕ್ಟಿವಿಟಿ ಸಮಸ್ಯೆ ಇರುವುದು ಅರಿವಿಗೆ ಬಂದಿದೆ. ಅಧೀನ ನ್ಯಾಯಾಲಯಗಳಲ್ಲಿ ಮೂಲಸೌಕರ್ಯ ಸುಧಾರಣೆಗೆ ಗಮನ ನೀಡುತ್ತೇನೆ ಎಂದು ಭರವಸೆ ನೀಡಿದರು.
ಇದನ್ನೂ ಓದಿ:
Sputnik Vaccine: ಸ್ಫುಟ್ನಿಕ್ ಲಸಿಕೆ ಉತ್ಪಾದನೆಗೆ ಸೆರಂ ಇನ್ಸ್ಟಿಟ್ಯೂಟ್ಗೆ ಕೇಂದ್ರ ಸರ್ಕಾರ ಅನುಮತಿ
ಅಮೆರಿಕದಿಂದ ಲಸಿಕೆ ರಫ್ತು ನಿರ್ಬಂಧ ತೆರವು: ಜೋ ಬೈಡನ್, ಜೈಶಂಕರ್ಗೆ ಧನ್ಯವಾದ ಹೇಳಿದ ಅದಾರ್ ಪೂನಾವಾಲಾ