Sputnik Vaccine: ಸ್ಫುಟ್ನಿಕ್ ಲಸಿಕೆ ಉತ್ಪಾದನೆಗೆ ಸೆರಂ ಇನ್​ಸ್ಟಿಟ್ಯೂಟ್​ಗೆ ಕೇಂದ್ರ ಸರ್ಕಾರ ಅನುಮತಿ

Sputnik Vaccine: ಸ್ಫುಟ್ನಿಕ್ ಲಸಿಕೆ ಉತ್ಪಾದನೆಗೆ ಸೆರಂ ಇನ್​ಸ್ಟಿಟ್ಯೂಟ್​ಗೆ ಕೇಂದ್ರ ಸರ್ಕಾರ ಅನುಮತಿ
ಸ್ಪುಟ್ನಿಕ್​ ವಿ ಲಸಿಕೆ

ಕೊವಿಡ್ ವಿರುದ್ಧ ರಷ್ಯಾ ಅಭಿವೃದ್ಧಿಪಡಿಸಿರುವ ಸ್ಫುಟ್ನಿಕ್ ಲಸಿಕೆಯನ್ನು ಉತ್ಪಾದಿಸಲು ಪುಣೆಯ ಸೆರಂ ಇನ್​ಸ್ಟಿಟ್ಯೂಟ್​ ಆಫ್ ಇಂಡಿಯಾ ಕಂಪನಿಗೆ ಕೇಂದ್ರ ಸರ್ಕಾರ ಅನುಮತಿ ನೀಡಿದೆ. ಶೀಘ್ರಗತಿಯಲ್ಲಿ ಹೆಚ್ಚಿನ ಸಂಖ್ಯೆಯ ಲಸಿಕೆ ಅಭಿವೃದ್ಧಿಪಡಿಸುವ ಗುರಿಯನ್ನು ತಲುಪುವಲ್ಲಿ ಇದು ಮಹತ್ವದ ಬೆಳವಣಿಗೆ ಎನಿಸಿದೆ.

TV9kannada Web Team

| Edited By: Ghanashyam D M | ಡಿ.ಎಂ.ಘನಶ್ಯಾಮ

Jun 04, 2021 | 9:14 PM

ಕೊವಿಡ್ ವಿರುದ್ಧ ರಷ್ಯಾ ಅಭಿವೃದ್ಧಿಪಡಿಸಿರುವ ಸ್ಫುಟ್ನಿಕ್ ಲಸಿಕೆಯನ್ನು ಉತ್ಪಾದಿಸಲು ಪುಣೆಯ ಸೆರಂ ಇನ್​ಸ್ಟಿಟ್ಯೂಟ್​ ಆಫ್ ಇಂಡಿಯಾ ಕಂಪನಿಗೆ ಕೇಂದ್ರ ಸರ್ಕಾರ ಅನುಮತಿ ನೀಡಿದೆ. ಶೀಘ್ರಗತಿಯಲ್ಲಿ ಹೆಚ್ಚಿನ ಸಂಖ್ಯೆಯ ಲಸಿಕೆ ಅಭಿವೃದ್ಧಿಪಡಿಸುವ ಗುರಿಯನ್ನು ತಲುಪುವಲ್ಲಿ ಇದು ಮಹತ್ವದ ಬೆಳವಣಿಗೆ ಎನಿಸಿದೆ. ಭಾರತದಲ್ಲಿ ಈಗ ಕೊರೊನಾ ಲಸಿಕೆಗೆ ತೀವ್ರ ಕೊರತೆ ಇದೆ. ಕೊರತೆ ನೀಗಿಸಲು ಕೇಂದ್ರ ಸರ್ಕಾರ ಏನೇ ಕ್ರಮ ಕೈಗೊಂಡರೂ, ಬೇಗ ಹೆಚ್ಚಿನ ಪ್ರಮಾಣದ ಲಸಿಕೆ ಜನರಿಗೆ ಸಿಗುತ್ತಿಲ್ಲ. ಭಾರತದಲ್ಲಿ ಜನರಿಗೆ ಮೊದಲು ಕೊರೊನಾ ಲಸಿಕೆ ಉತ್ಪಾದಿಸಿ ನೀಡಿದ್ದು, ಪುಣೆಯ ಸೆರಮ್ ಇನ್​ಸ್ಟಿಟ್ಯೂಟ್​ ಆಫ್ ಇಂಡಿಯಾ ಕಂಪನಿ. ಆಕ್ಸ್​ಫರ್ಡ್​ ವಿವಿ-ಅಸ್ಟ್ರಾಜೆನೆಕಾ ಕಂಪನಿಯ ಕೊವಿಶೀಲ್ಡ್ ಲಸಿಕೆಯನ್ನು ಉತ್ಪಾದಿಸಿದ್ದು ಸೆರಮ್ ಇನ್​ಸ್ಟಿಟ್ಯಟ್​ ಆಫ್ ಇಂಡಿಯಾ. ಈಗ ಇದೇ ಕಂಪನಿಗೆ ಮತ್ತೊಂದು ವಿದೇಶಿ ಲಸಿಕೆಯನ್ನು ಭಾರತದಲ್ಲಿ ಉತ್ಪಾದಿಸಲು ಅನುಮತಿ ಸಿಕ್ಕಿದೆ.

ಭಾರತದ ಹಳೇ ಔಷಧಿ ಉತ್ಪಾದನಾ ಸಂಸ್ಥೆ ಪುಣೆಯ ಸೆರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ಮತ್ತೊಂದು ಮೈಲುಗಲ್ಲು ಸ್ಥಾಪನೆಗೆ ಮುಂದಾಗಿದೆ. ಕೊರೊನಾ ವಿರುದ್ಧದ ನಿರ್ಣಾಯಕ ಯುದ್ಧದಲ್ಲಿ ಮೊದಲು ಲಸಿಕೆ ಉತ್ಪಾದಿಸಿ ಜನರಿಗೆ ನೀಡಿರೋ ಹೆಗ್ಗಳಿಕೆ ಸೆರಮ್ ಇನ್​ಸ್ಟಿಟ್ಯೂಟ್​ಗೆ ಇದೆ. ಟ್ಗಿದೆ. ಇಂಗ್ಲೆಂಡ್​ನ ಆಕ್ಸ್​ಫರ್ಡ್​ ವಿಶ್ವವಿದ್ಯಾಲಯ-ಆಸ್ಟ್ರಾಜೆನೆಕಾ ಕಂಪನಿಯ ಕೊವಿಶೀಲ್ಡ್ ಲಸಿಕೆಯನ್ನು ಪುಣೆಯಲ್ಲಿ ಉತ್ಪಾದಿಸಿ ದೇಶದ ಜನರಿಗೆ ನೀಡಿದೆ. ಇದರ ಜೊತೆಗೆ ನೊವಾವ್ಯಾಕ್ಸ್ ಒಕ್ಕೂಟದ ಕೋವಾವ್ಯಾಕ್ಸ್ ಲಸಿಕೆ ಉತ್ಪಾದಿಸೋ ಗುರಿಯನ್ನೂ ಇಟ್ಟುಕೊಂಡಿದೆ. ಆದರೆ ಅಮೆರಿಕದಿಂದ ಕಚ್ಚಾವಸ್ತುಗಳ ಪೂರೈಕೆಯಾಗದ ಹಿನ್ನೆಲೆ ಕೊವಾವ್ಯಾಕ್ಸ್ ಉತ್ಪಾದನೆ ಆರಂಭವಾಗಿಲ್ಲ. ಈ ನಡುವೆ ಸೆರಮ್ ಸಂಸ್ಥೆ, ರಷ್ಯಾದ ಸ್ಪುಟ್ನಿಕ್ ವಿ ಲಸಿಕೆ ಉತ್ಪಾದನೆಗೂ ಕೈ ಹಾಕಲು ಮುಂದಾಗಿದೆ. ಭಾರತದಲ್ಲಿ ಸ್ಪುಟ್ನಿಕ್ ಲಸಿಕೆ ಉತ್ಪಾದಿಸಲು ಕೇಂದ್ರ ಸರ್ಕಾರದಿಂದ ಇದೀಗ ಅನುಮತಿ ಸಿಕ್ಕಿದೆ.

ಸ್ಫುಟ್ನಿಕ್ ಲಸಿಕೆ ಉತ್ಪಾದನೆಗೆ ರಷ್ಯಾದ ಆರ್​ಡಿಐಎಫ್ ಜೊತೆಗೆ ಈಗಾಗಲೇ 6 ಕಂಪನಿಗಳು ಒಪ್ಪಂದ ಮಾಡಿಕೊಂಡಿವೆ. 7ನೇ ಕಂಪನಿಯಾಗಿ ಸೆರಮ್ ಮನವಿ ಮಾಡಿತ್ತು. ವರ್ಷಕ್ಕೆ 85 ಕೋಟಿ ಡೋಸ್ ಉತ್ಪಾದನೆಯ ಗುರಿಯನ್ನು ಆರ್​ಡಿಐಎಫ್ ಇಟ್ಟುಕೊಂಡಿದೆ. ಭಾರತದಲ್ಲೇ ಶೇ 70ರಷ್ಟು ಉತ್ಪಾದನೆಗೆ ಟಾರ್ಗೆಟ್ ಇದೆ. ರಷ್ಯಾದಿಂದ ಭಾರತಕ್ಕೆ ಈಗಾಗಲೇ 32.10 ಲಕ್ಷ ಸ್ಪುಟ್ನಿಕ್ ಲಸಿಕೆ ಬಂದಿವೆ.

ಅಮೆರಿಕಾ ಉಪಾಧ್ಯಕ್ಷರೊಂದಿಗೆ ಪ್ರಧಾನಿ ಮೋದಿ ಮಾತುಕತೆ ಇನ್ನು ಗುರುವಾರ ರಾತ್ರಿ ಅಮೆರಿಕದ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್, ಪ್ರಧಾನಿ ನರೇಂದ್ರ ಮೋದಿ ಜೊತೆಗೆ ದೂರವಾಣಿಯಲ್ಲಿ ಮಾತುಕತೆ ನಡೆಸಿದ್ದಾರೆ. ಅಮೆರಿಕದ ಜಾಗತಿಕ ಲಸಿಕೆ ಹಂಚಿಕೆಯ ಕಾರ್ಯತಂತ್ರದ ಬಗ್ಗೆ ಚರ್ಚೆ ನಡೆಸಿದ್ದಾರೆ. ಅಮೆರಿಕದ ಲಸಿಕೆ ಹಂಚಿಕೆಯಲ್ಲಿ ಭಾರತವು ಸೇರಿದೆ. ಭಾರತ ಸೇರಿದಂತೆ ವಿಶ್ವದ ಇತರೆ ದೇಶಗಳಿಗೆ ಅಮೆರಿಕ ಲಸಿಕೆಯನ್ನ ಹಂಚುವ ಕಾರ್ಯತಂತ್ರ ಹೊಂದಿದೆ ಅಂತಾ ಕಮಲಾ ಹ್ಯಾರಿಸ್, ಪ್ರಧಾನಿ ಮೋದಿಗೆ ತಿಳಿಸಿದ್ದಾರೆ. ಅಮೆರಿಕದ ತೀರ್ಮಾನಕ್ಕೆ ಮೋದಿ ಅಭಿನಂದನೆ ಸಲ್ಲಿಸಿದ್ದಾರೆ.

ಗುರುವಾರ ರಾತ್ರಿ ಅಮೆರಿಕ ವಿಶ್ವದ ವಿವಿಧ ದೇಶಗಳಿಗೆ 2.5 ಕೋಟಿ ಡೋಸ್ ಕೊರೊನಾ ಲಸಿಕೆ ನೀಡುವ ಘೋಷಣೆ ಮಾಡಿದೆ. ಇದರಲ್ಲಿ 1.9 ಕೋಟಿ ಡೋಸ್ ಲಸಿಕೆಯನ್ನು ಕೊವಾಕ್ಸ್ ಮೂಲಕ ಬಡ, ಮಧ್ಯಮ ಆದಾಯದ ರಾಷ್ಟ್ರಗಳಿಗೆ ನೀಡಲಿದೆ. 60 ಲಕ್ಷ ಡೋಸ್ ಲಸಿಕೆಯನ್ನು ಕೆನಡಾ, ಮೆಕ್ಸಿಕೋ, ಭಾರತ, ದಕ್ಷಿಣ ಕೊರಿಯಾಗೆ ನೇರವಾಗಿ ನೀಡಲಿದೆ. ಭಾರತಕ್ಕೆ ಕೊವಾಕ್ಸ್ ಮೂಲಕವೂ ಕೊರೊನಾ ಲಸಿಕೆ ಅಮೆರಿಕದಿಂದ ಸಿಗಲಿದೆ. 60 ಲಕ್ಷ ಡೋಸ್ ಲಸಿಕೆಯ ಪೈಕಿ ಭಾರತಕ್ಕೂ ಸುಮಾರು 15 ಲಕ್ಷ ಡೋಸ್ ಲಸಿಕೆ ಸಿಗೋ ನಿರೀಕ್ಷೆ ಇದೆ.

(ಬರಹ: ಸಿ.ಚಂದ್ರಮೋಹನ್)

(Serum Institute of India gets Centre Nod for Producing Sputnik Vaccine)

ಇದನ್ನೂ ಓದಿ: ಅಮೆರಿಕದಿಂದ ಲಸಿಕೆ ರಫ್ತು ನಿರ್ಬಂಧ ತೆರವು: ಜೋ ಬೈಡನ್, ಜೈಶಂಕರ್​ಗೆ ಧನ್ಯವಾದ ಹೇಳಿದ ಅದಾರ್ ಪೂನಾವಾಲಾ

ಇದನ್ನೂ ಓದಿ: ಕೊವಿಡ್ ಲಸಿಕೆ ವಿತರಣೆ ವೇಗ ಹೆಚ್ಚಿಸಲು ಅಮೆರಿಕ ಸರ್ಕಾರದಿಂದ ಉತ್ತೇಜನಕಾರಿ ಕ್ರಮ

Follow us on

Related Stories

Most Read Stories

Click on your DTH Provider to Add TV9 Kannada