ಅಮೆರಿಕದಿಂದ ಲಸಿಕೆ ರಫ್ತು ನಿರ್ಬಂಧ ತೆರವು: ಜೋ ಬೈಡನ್, ಜೈಶಂಕರ್ಗೆ ಧನ್ಯವಾದ ಹೇಳಿದ ಅದಾರ್ ಪೂನಾವಾಲಾ
ಲಸಿಕೆ ಉತ್ಪಾದನೆಗೆ ಬೇಕಿರುವ ಅತಿಮುಖ್ಯ ಕಚ್ಚಾವಸ್ತುಗಳ ರಫ್ತಿಗೆ ವಿಧಿಸಿದ್ದ ನಿರ್ಬಂಧವನ್ನು ಅಮೆರಿಕ ಹಿಂಪಡೆದಿದೆ. ವಿಶ್ವದ ಹಲವು ದೇಶಗಳು ಒಗ್ಗೂಡಿ ಕೊರೊನಾ ಪಿಡುಗಿನ ವಿರುದ್ಧ ಹೋರಾಡಲು ಅಮೆರಿಕದ ಈ ಕ್ರಮ ಸಹಾಯಕ ಎಂದು ಅವರು ಹೇಳಿದ್ದಾರೆ.
ದೆಹಲಿ: ಅಮೆರಿಕದ ಸರ್ಕಾರದ ನೀತಿ ಬದಲಾವಣೆಗೆ ಕಾರಣರಾಗುವ ಮೂಲಕ ಭಾರತ ಮತ್ತು ಇತರ ದೇಶಗಳಲ್ಲಿ ಲಸಿಕೆ ಉತ್ಪಾದನೆಗೆ ಹೊಸ ವೇಗ ನೀಡಲು ಅವಕಾಶ ಮಾಡಿಕೊಟ್ಟ ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಮತ್ತು ಭಾರತದ ವಿದೇಶಾಂಗ ಸಚಿವ ಎಸ್.ಜೈಶಂಕರ್ ಅವರನ್ನು ಕೋವಿಶೀಲ್ಡ್ ಲಸಿಕೆ ಉತ್ಪಾದಿಸುತ್ತಿರುವ ಸೆರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅದಾರ್ ಪೂನಾವಾಲಾ ಅಭಿನಂದಿಸಿದ್ದಾರೆ.
ಲಸಿಕೆ ಉತ್ಪಾದನೆಗೆ ಬೇಕಿರುವ ಅತಿಮುಖ್ಯ ಕಚ್ಚಾವಸ್ತುಗಳ ರಫ್ತಿಗೆ ವಿಧಿಸಿದ್ದ ನಿರ್ಬಂಧವನ್ನು ಅಮೆರಿಕ ಹಿಂಪಡೆದಿದೆ. ವಿಶ್ವದ ಹಲವು ದೇಶಗಳು ಒಗ್ಗೂಡಿ ಕೊರೊನಾ ಪಿಡುಗಿನ ವಿರುದ್ಧ ಹೋರಾಡಲು ಅಮೆರಿಕದ ಈ ಕ್ರಮ ಸಹಾಯಕ ಎಂದು ಅವರು ಹೇಳಿದ್ದಾರೆ.
ಅಮೆರಿಕದ ಅಧ್ಯಕ್ಷರು, ಶ್ವೇತಭವನದ ಸಿಬ್ಬಂದಿ ಮತ್ತು ಭಾರತದ ವಿದೇಶಾಂಗ ಸಚಿವ ಎಸ್.ಜೈಶಂಕರ್ ಅವರ ಪ್ರಯತ್ನಗಳಿಗೆ ಧನ್ಯವಾದ. ಈ ನೀತಿ ಬದಲಾವಣೆಯಿಂದ ಭಾರತ ಸೇರಿದಂತೆ ವಿಶ್ವದ ಹಲವು ದೇಶಗಳಲ್ಲಿ ಲಸಿಕೆ ಉತ್ಪಾದನೆಯ ವೇಗ ಹೆಚ್ಚಾಗಲಿದೆ. ನಮ್ಮ ಲಸಿಕೆ ಉತ್ಪಾದನೆ ಸಾಮರ್ಥ್ಯ ಹೆಚ್ಚಾಗುವುದರೊಂದಿಗೆ ಈ ಮಹಾಪಿಡುಗಿನ ವಿರುದ್ಧದ ಹೋರಾಟಕ್ಕೆ ಹೊಸ ಬಲ ಬಂದಂತೆ ಆಗಿದೆ’ ಎಂದು ಅವರು ಹೇಳಿದ್ದಾರೆ.
ಅದಾರ್ ಪೂನಾವಾಲರ ಟ್ವೀಟ್ ಪೋಸ್ಟ್ ಆದ ತಕ್ಷಣ ಪ್ರತಿಕ್ರಿಯಿಸಿದ ಜೈಶಂಕರ್, ‘ಲಸಿಕೆ ಉತ್ಪಾದನಾ ವ್ಯವಸ್ಥೆಯನ್ನು ಸುರಕ್ಷಿತವಾಗಿ ಇರಿಸಿಕೊಳ್ಳುವುದು ಭಾರತದ ರಾಜತಾಂತ್ರಿಕರ ಆದ್ಯತೆಯಾಗಿದೆ’ ಎಂದು ಹೇಳಿದ್ದಾರೆ. ಲಸಿಕೆ ಉತ್ಪಾದನೆಯ ಮೇಲೆ ಕಳೆದ ಫೆಬ್ರುವರಿಯಲ್ಲಿ ಅಮೆರಿಕ ಸರ್ಕಾರವು ರಕ್ಷಣಾ ಉತ್ಪಾದನಾ ಕಾಯ್ದೆಯ ಅನ್ವಯ ನಿರ್ಬಂಧಗಳನ್ನು ಹೇರಿತ್ತು. ಫಿಜರ್ ಸೇರಿದಂತೆ ಹಲವು ಸ್ಥಳೀಯ ಲಸಿಕಾ ತಯಾರಿಕಾ ಕಂಪನಿಗಳು ಅಮೆರಿಕದ ಜನರಿಗೆ ಬೇಕಾಗುವಷ್ಟು ಲಸಿಕೆಗಳನ್ನು ಮೊದಲು ಉತ್ಪಾದಿಸಬೇಕೆಂಬುದು ಅಮೆರಿಕದ ನಿಲುವಾಗಿತ್ತು.
ಫಿಜರ್ ಮತ್ತು ಮಾಡೆರ್ನಾ ಕಂಪನಿಗಳ ಉತ್ಪಾದನಾ ಸಾಮರ್ಥ್ಯ ಹೆಚ್ಚಾಗಬೇಕೆಂದು ಶ್ವೇತಭವನ ಬಯಸುತ್ತಿದೆ. ಅಮೆರಿಕದ ಎಲ್ಲ ನಾಗರಿಕರಿಗೂ ಜುಲೈ 4ರ ಒಳಗೆ ಲಸಿಕೆ ಸಿಗುವಂತೆ ಮಾಡುವುದು ಅಮೆರಿಕದ ಸರ್ಕಾರದ ಉದ್ದೇಶ. ಬೈಡೆನ್ ಆಡಳಿತವು ಈಗ ದೃಢೀಕೃತ ಲಸಿಕೆಗಳ ಲಭ್ಯತೆಯ ಬಗ್ಗೆ ಖಾತ್ರಿಹೊಂದಿದೆ. ಹೀಗಾಗಿಯೇ ಆಸ್ಟ್ರಾಜೆನೆಕಾ, ನೊವಾವ್ಯಾಕ್ಸ್ ಮತ್ತು ಸನೊಫಿ ಲಸಿಕೆ ತಯಾರಿಕೆ ಕಂಪನಿಗಳ ಮೇಲಿದ್ದ ರಕ್ಷಣಾ ಉತ್ಪಾದನಾ ಕಾಯ್ದೆಯನ್ವಯ ವಿಧಿಸಿದ್ದ ನಿರ್ಬಂಧ ಹಿಂಪಡೆದಿದೆ ಎಂದು ಶ್ವೇತಭವನದ ಪ್ರಕಟಣೆ ತಿಳಿಸಿದೆ.
Thanks to the efforts of @POTUS, @WhiteHouse, & @DrSJaishankar, this policy change will hopefully increase the supply of raw materials globally and to India; boosting our vaccine production capacity and strengthening our united fight against this pandemic. https://t.co/bHADBwiUnm
— Adar Poonawalla (@adarpoonawalla) June 4, 2021
ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಶಂಕರ್ ಕಳೆದ ತಿಂಗಳು ಅಮೆರಿಕಕ್ಕೆ ಭೇಟಿ ನೀಡಿದ್ದರು. ಲಸಿಕೆ ಉತ್ಪಾದನೆಗೆ ಹೊಸ ವೇಗ ಸಿಗುವಂತೆ ಮಾಡಲು ಅಮೆರಿಕ ಸಹಕಾರದ ಖಾತ್ರಿ ಪಡೆದುಕೊಳ್ಳುವುದ ಅವರ ಉದ್ದೇಶವಾಗಿತ್ತು. ಅಮೆರಿಕದಲ್ಲಿರುವ ಹೆಚ್ಚುವರಿ ಲಸಿಕಾ ಸಂಗ್ರಹದಿಂದಲೂ ಭಾರತಕ್ಕೆ ಲಸಿಕೆ ಪೂರೈಸಲು ಅಮೆರಿಕ ಒಪ್ಪಿಕೊಂಡಿದೆ.
ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ನಿನ್ನೆಯಷ್ಟೇ (ಜೂನ್ 3) ಮಾತನಾಡಿದ್ದ ಅಮೆರಿಕ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ 2.5 ಕೋಟಿ ಡೋಸ್ ಲಸಿಕೆಗಳನ್ನು ಭಾರತ ಮತ್ತು ಇತರ ದೇಶಗಳಿಗೆ ಮುಂದಿನ ದಿನಗಳಲ್ಲಿ ಕಳುಹಿಸಲಾಗುವುದು ಎಂದು ಭರವಸೆ ನೀಡಿದ್ದರು. ಈ ತಿಂಗಳ ಅಂತ್ಯದ ಹೊತ್ತಿಗೆ ಅಮೆರಿಕ ಒಟ್ಟು 8 ಕೋಟಿ ಡೋಸ್ ಲಸಿಕೆಗಳನ್ನು ವಿಶ್ವದ ವಿವಿಧ ದೇಶಗಳಿಗೆ ರಫ್ತು ಮಾಡಲು ಉದ್ದೇಶಿಸಿದೆ.
(US Lifts Embargo on Coronavirs vaccine Adar Poonawalla Thanks Joe Biden and Jaishankar As US Lifts Vaccine Embargo)
ಇದನ್ನೂ ಓದಿ: ಬ್ರಿಟನ್ನಲ್ಲಿ 12-15 ವಯೋಮಾನದ ಮಕ್ಕಳಿಗೆ ಫೈಜರ್ ಕೊರೊನಾವೈರಸ್ ಲಸಿಕೆ ನೀಡಲು ಅನುಮೋದನೆ
ಇದನ್ನೂ ಓದಿ: ಲಸಿಕೆ ನೀಡಿಕೆಯಲ್ಲಿ ಅಮೆರಿಕಾವನ್ನು ಹಿಂದಿಕ್ಕಿದ ಭಾರತ; ಶೀಘ್ರವೇ ಮಕ್ಕಳಿಗೂ ಲಸಿಕೆ: ವಿ ಕೆ ಪೌಲ್
Published On - 8:34 pm, Fri, 4 June 21