ಕ್ಯಾನ್ಸರ್ನಿಂದ ಬಳಲುತ್ತಿದ್ದ ಬಾಲಕಿ ಮೇಲೆ ಅತ್ಯಾಚಾರ; ಚಿಕಿತ್ಸೆ ವೇಳೆ ಗೊತ್ತಾಯ್ತು ಗರ್ಭಿಣಿಯಾದ ಸತ್ಯ!
ಮಹಾರಾಷ್ಟ್ರದ ಥಾಣೆಯಲ್ಲಿ 13 ವರ್ಷದ ಕ್ಯಾನ್ಸರ್ ರೋಗಿಯ ಮೇಲೆ ಅತ್ಯಾಚಾರ ಎಸಗಿ, ಗರ್ಭಿಣಿಯನ್ನಾಗಿ ಮಾಡಿದ ಆರೋಪದ ಮೇಲೆ ವ್ಯಕ್ತಿಯನ್ನು ಬಂಧಿಸಲಾಗಿದೆ. 29 ವರ್ಷದ ವ್ಯಕ್ತಿಯನ್ನು ಬಿಹಾರದಲ್ಲಿ ಬಂಧಿಸಲಾಗಿದ್ದು, ಆತ ಈಗ ನ್ಯಾಯಾಂಗ ಬಂಧನದಲ್ಲಿದ್ದಾನೆ. ಕ್ಯಾನ್ಸರ್ ರೋಗಕ್ಕೆ ಕೀಮೋಥೆರಪಿ ಪಡೆಯುತ್ತಿದ್ದ ಆ ಬಾಲಕಿಯ ಸಹಾಯಕನಾಗಿ ಆಕೆಯ ಜೊತೆಗೆ ಆಸ್ಪತ್ರೆಗೆ ಹೋಗುತ್ತಿದ್ದ ವ್ಯಕ್ತಿಯಿಂದಲೇ ಈ ಕೃತ್ಯ ನಡೆದಿದೆ. ಆಕೆ ಗರ್ಭಿಣಿಯಾದಾಗ ಈ ಘಟನೆ ಬಹಿರಂಗವಾಗಿದೆ.

ಥಾಣೆ, ಏಪ್ರಿಲ್ 5: 13 ವರ್ಷದ ಕ್ಯಾನ್ಸರ್ ರೋಗಿಯ (Cancer Patient) ಮೇಲೆ ಅತ್ಯಾಚಾರ ನಡೆಸಿದ ಹೃದಯವಿದ್ರಾವಕ ಘಟನೆ ಮಹಾರಾಷ್ಟ್ರದ ಥಾಣೆ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ಆಕೆ ಗರ್ಭಿಣಿಯಾದಾಗ ಈ ಘಟನೆ ಬೆಳಕಿಗೆ ಬಂದಿದೆ. ಸಂತ್ರಸ್ತೆಯ ಕುಟುಂಬದ ದೂರಿನ ಆಧಾರದ ಮೇಲೆ, ಪೊಲೀಸರು ಆರೋಪಿಗಳ ವಿರುದ್ಧ ಪೋಕ್ಸೋ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. 29 ವರ್ಷದ ಆರೋಪಿಯನ್ನು ಗುರುವಾರ ಬಿಹಾರದಿಂದ ಬಂಧಿಸಲಾಗಿದೆ. ಆತ ಅತ್ಯಾಚಾರಕ್ಕೊಳಗಾದ ಬಾಲಕಿಯ ಹಳ್ಳಿಯವನು. 2 ತಿಂಗಳ ಹಿಂದೆ ಬದ್ಲಾಪುರದಲ್ಲಿ ಆಕೆ ಚಿಕಿತ್ಸೆ ಪಡೆಯಲೆಂದು ಆಕೆಗಾಗಿ ಬಾಡಿಗೆ ಮನೆ ವ್ಯವಸ್ಥೆ ಮಾಡಿದ್ದ.
ಕ್ಯಾನ್ಸರ್ ರೋಗಕ್ಕೆ ಕೀಮೋಥೆರಪಿ ಪಡೆಯುತ್ತಿದ್ದ ಆಕೆಯ ಚಿಕಿತ್ಸೆಯಲ್ಲಿ ಆತ ಸಹಾಯ ಮಾಡುತ್ತಿದ್ದ. ಈ ಸಮಯದಲ್ಲಿ ಆ ಬಾಲಕಿಯ ಅಸಹಾಯಕತೆಯ ಲಾಭವನ್ನು ಪಡೆದುಕೊಂಡ ಅವನು ಮನೆಯಲ್ಲಿ ಅವಳು ಒಬ್ಬಂಟಿಯಾಗಿರುವಾಗಲೆಲ್ಲ ಆಕೆಯ ಮೇಲೆ ಅತ್ಯಾಚಾರ ನಡೆಸುತ್ತಿದ್ದ. ಭಯದಿಂದಾಗಿ ಆಕೆ ಮೌನವಾಗಿರುತ್ತಿದ್ದಳು.
ಇದನ್ನೂ ಓದಿ: ಬಾಲಕಿ ಮೇಲೆ ಬ್ಯಾಡ್ಮಿಂಟನ್ ಕೋಚ್ ಅತ್ಯಾಚಾರ: ಫೋನ್ನಲ್ಲಿ ಹಲವು ಹುಡುಗಿಯರ ವಿಡಿಯೋ ಪತ್ತೆ
ಕೆಲವು ದಿನಗಳ ಹಿಂದೆ ಆಸ್ಪತ್ರೆಯಲ್ಲಿ ಕೀಮೊಥೆರಪಿಗೆ ತಪಾಸಣೆಯ ಸಮಯದಲ್ಲಿ, ಅವಳು ಗರ್ಭಿಣಿಯಾಗಿದ್ದಾಳೆಂದು ತಿಳಿದುಬಂದಿದೆ. ಇದರ ನಂತರ, ಕುಟುಂಬದವರು ವಿಚಾರಿಸಿದಾಗ ಅವಳು ಇಡೀ ಘಟನೆಯನ್ನು ವಿವರಿಸಿದಳು. ಘಟನೆಯ ಬಗ್ಗೆ ಮಾಹಿತಿ ಪಡೆದ ನಂತರ, ಕುಟುಂಬವು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿತು. ಅವರ ದೂರಿನ ಆಧಾರದ ಮೇಲೆ, ಪೊಲೀಸರು ಪ್ರಕರಣ ದಾಖಲಿಸಿದರು.
ಈ ವಿಷಯ ತಿಳಿದ ತಕ್ಷಣ ಆರೋಪಿ ಬಿಹಾರಕ್ಕೆ ಪರಾರಿಯಾಗಿದ್ದಾನೆ. ಪೊಲೀಸರು ಆತನನ್ನು ಪತ್ತೆಹಚ್ಚಿದ್ದಾರೆ. ಸಾಕ್ಷ್ಯಾಧಾರಗಳು ಮತ್ತು ತಾಂತ್ರಿಕ ವಿಶ್ಲೇಷಣೆಯ ಆಧಾರದ ಮೇಲೆ ಆರೋಪಿಯನ್ನು ಪತ್ತೆಹಚ್ಚಿ ಬಿಹಾರದಿಂದ ಬಂಧಿಸಲಾಗಿದೆ. ವಿಚಾರಣೆಯ ಸಮಯದಲ್ಲಿ ಆತ ತನ್ನ ಅಪರಾಧವನ್ನು ಒಪ್ಪಿಕೊಂಡಿದ್ದಾನೆ. ಈಗ ಆತನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ