Tamil Nadu Politics: ಶಶಿಕಲಾ ಮತ್ತು ಆಕೆಯ ಕುಟುಂಬಕ್ಕೆ ಎಐಎಡಿಎಂಕೆಯಲ್ಲಿ ಸ್ಥಳವಿಲ್ಲ ಎಂದ ಪಳನಿಸ್ವಾಮಿ
ಎಐಎಡಿಎಂಕೆಗೆ ಶಶಿಕಲಾ ಮರಳಿ ಬರಲಿದ್ದಾರೆ ಎಂಬ ವಿಶ್ಲೇಷಣೆಗಳ ಬಗ್ಗೆ ಇದೇ ಮೊದಲ ಬಾರಿಗೆ ಮೌನ ಮುರಿದಿರುವ ಪಳನಿಸ್ವಾಮಿ ಸಮಾಜದ ಕೆಲ ವರ್ಗಗಳು ಈ ವಿಷಯ ಕುರಿತು ಅನಗತ್ಯವಾಗಿ ಗೊಂದಲ ಮೂಡಿಸುತ್ತಿವೆ.
ಚೆನ್ನೈ: ಶಶಿಕಲಾ ಮತ್ತು ಆಕೆಯ ಕುಟುಂಬ ಸದಸ್ಯರಿಗೆ ಎಐಎಡಿಎಂಕೆ ಪಕ್ಷದಲ್ಲಿ ಸ್ಥಳವಿಲ್ಲ ತಮಿಳುನಾಡು ವಿಧಾನಸಭೆಯಲ್ಲಿ ಪ್ರತಿಪಕ್ಷದ ನಾಯಕನಾಗಿರುವ ಮಾಜಿ ಮುಖ್ಯಮಂತ್ರಿ ಇ.ಪಳನಿಸ್ವಾಮಿ ಹೇಳಿದ್ದಾರೆ. ಎಐಎಡಿಎಂಕೆಗೆ ಶಶಿಕಲಾ ಮರಳಿ ಬರಲಿದ್ದಾರೆ ಎಂಬ ವಿಶ್ಲೇಷಣೆಗಳ ಬಗ್ಗೆ ಇದೇ ಮೊದಲ ಬಾರಿಗೆ ಮೌನ ಮುರಿದಿರುವ ಪಳನಿಸ್ವಾಮಿ ಸಮಾಜದ ಕೆಲ ವರ್ಗಗಳು ಈ ವಿಷಯ ಕುರಿತು ಅನಗತ್ಯವಾಗಿ ಗೊಂದಲ ಮೂಡಿಸುತ್ತಿವೆ. ಪಕ್ಷದ ಕಾರ್ಯಕರ್ತರೊಂದಿಗೆ ಶಶಿಕಲಾ ಮತನಾಡಿದ್ದಾರೆ ಎನ್ನಲಾದ ಆಡಿಯೊ ಕ್ಲಿಪ್ಗಳು ಈಚೆಗೆ ಸೋರಿಕೆಯಾಗಿದ್ದವು. ಇದೀಗ ಎಐಎಡಿಎಂಕೆಯ ಉನ್ನತ ನಾಯಕರೊಬ್ಬರು ಈ ಮೂಲಕ ಪಕ್ಷದ ನಿಲುವನ್ನು ಸ್ಪಷ್ಟಪಡಿಸಿದ್ದಾರೆ.
ಪಕ್ಷದ ಮುಖ್ಯಕಚೇರಿಯಲ್ಲಿ ವರದಿಗಾರರೊಂದಿಗೆ ಮಾತನಾಡಿದ ಪಳನಿಸ್ವಾಮಿ, ಶಶಿಕಲಾ ಪಕ್ಷದಿಂದ ಹೊರಗಿದ್ದಾರೆ. ಅವರಿಗೂ ಅವರ ಸಂಬಂಧಿಕರಿಗೂ ಪಕ್ಷದಲ್ಲಿ ಸ್ಥಳವಿಲ್ಲ. ತಾವು ರಾಜಕಾರಣದಿಂದ ದೂರ ಇರುವುದಾಗಿ ಚುನಾವಣೆಗೂ ಮೊದಲೇ ಶಶಿಕಲಾ ಸ್ಪಷ್ಟಪಡಿಸಿದ್ದರು. ಎಎಂಎಂಕೆ ಕಾರ್ಯಕರ್ತರ ಜೊತೆಗೆ ಶಶಿಕಲಾ ಮಾತನಾಡಿರುವುದನ್ನು ಇದೀಗ ವೈರಲ್ ಮಾಡಲಾಗಿದೆ. ಇದನ್ನು ಆಧರಿಸಿ ಕೆಲವರು ಉದ್ದೇಶಪೂರ್ವಕವಾಗಿ ತಪ್ಪು ಮಾಹಿತಿ ಹರಡುತ್ತಾ, ಗೊಂದಲ ಸೃಷ್ಟಿಸುತ್ತಿದ್ದಾರೆ ಎಂದು ಪಳನಿಸ್ವಾಮಿ ಮಾಧ್ಯಮ ಪ್ರತಿನಿಧಿಗಳಿಗೆ ಸ್ಪಷ್ಟಪಡಿಸಿದರು.
ಎಐಎಡಿಎಂಕೆಯ ಎಲ್ಲ ನಾಯಕರೂ ಈ ವಿಚಾರದಲ್ಲಿ ಸ್ಪಷ್ಟ ನಿಲುವು ಹೊಂದಿದ್ದಾರೆ. ಆಕೆಗೆ ಮತ್ತು ಆಕೆಯ ಬಂಧುಗಳಿಗೆ ಪಕ್ಷದಲ್ಲಿ ಸ್ಥಾನವಿಲ್ಲ. ಎಐಎಡಿಎಂಕೆ ಏಕಾಂಗಿಯಾಗಿ ಚುನಾವಣೆಯಲ್ಲಿ ಹೋರಾಡಿ, ಸ್ಥಾನಗಳನ್ನು ಗೆಲ್ಲುವ ಮೂಲಕ ಜನರಿಗೂ ಈ ವಿಷಯ ಸ್ಪಷ್ಟಪಡಿಸಲಾಗಿದೆ ಎಂದು ಹೇಳಿದರು. ತಮ್ಮ ಹಾಗೂ ಓ.ಪನ್ನೀರಸೆಲ್ವಂ ನಡುವೆ ಯಾವುದೇ ಭಿನ್ನಮತವಿಲ್ಲ. ಪನ್ನೀರಸೆಲ್ವಂ ಅವರ ಮನೆಯ ಗೃಹಪ್ರವೇಶ ಸಮಾರಂಭ ಇದ್ದ ಕಾರಣ ಅವರು ಪಕ್ಷದ ಜಿಲ್ಲಾ ಘಟಕಗಳ ಸಭೆಯಲ್ಲಿ ಪಾಲ್ಗೊಂಡಿರಲಿಲ್ಲ ಎಂದು ಪಳನಿಸ್ವಾಮಿ ಸ್ಪಷ್ಟಪಡಿಸಿದರು.
ಇಬ್ಬರೂ ಪ್ರತ್ಯೇಕವಾಗಿ ಪತ್ರಿಕಾ ಹೇಳಿಕೆಗಳನ್ನು ಬಿಡುಗಡೆ ಮಾಡುತ್ತಿರುವುದರಿಂದ ಗೊಂದಲ ಮೂಡುತ್ತಿದೆ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ನಾನು ಹಿಂದಿನ ಎಐಎಡಿಎಂಕೆ ಸರ್ಕಾರದ ಮೇಲೆ ಆರೋಪಗಳು ಬಂದಾಗ ಸ್ಪಷ್ಟನೆ ನೀಡುತ್ತಿದ್ದೇನೆ. ಇತರ ಸಾಮಾನ್ಯ ವಿಚಾರಗಳ ಬಗ್ಗೆ ಪನ್ನೀರಸೆಲ್ವಂ ಪ್ರತಿಕ್ರಿಯಿಸುತ್ತಿದ್ದಾರೆ. ಅಮ್ಮಾ (ಜೆ.ಜಯಲಲಿತಾ) ಅವಧಿಯಲ್ಲಿಯೂ ಇಂಥದ್ದೇ ವ್ಯವಸ್ಥೆ ಇತ್ತು. ಆದರೆ ಈಗ ಮಾಧ್ಯಮಗಳು ಇವನ್ನು ದೊಡ್ಡ ವಿಷಯವಾಗಿ ಬಿಂಬಿಸುತ್ತಿವೆ ಎಂದರು.
(Tamil Nadu Politics No place for Sasikala and her family in AIADMK party says Palaniswami)
ಇದನ್ನೂ ಓದಿ: ರಾಜಕಾರಣಿಗಳೇ ಹುಷಾರು… ಅವತರಿಸಿದ್ದಾನೆ ನಕಲಿ ಪೋಲ್ ಸ್ಟ್ರಾಟೆಜಿಸ್ಟ್ ಪ್ರಶಾಂತ್ ಕಿಶೋರ್!
Published On - 10:17 pm, Fri, 4 June 21