ಸಂಕ್ರಾಂತಿಗೂ ಮುನ್ನವೇ ಸಂಪುಟ ವಿಸ್ತರಣೆಯಾಗುತ್ತಾ? ಇಂದು ದೆಹಲಿಗೆ ಹಾರಲಿದ್ದಾರೆ ಸಿಎಂ ಯಡಿಯೂರಪ್ಪ..
ಸಂಕ್ರಾಂತಿ ಮುನ್ನವೇ ಸಚಿವಾಕಾಂಕ್ಷಿಗಳಿಗೆ ಸಿಹಿ ಸುದ್ದಿ ಸಿಗುವ ಸಾಧ್ಯತೆ ಇದೆ. ಹೈಕಮಾಂಡ್ ಬುಲಾವ್ ಮೇರೆಗೆ ಯಡಿಯೂರಪ್ಪ ಇಂದು ದೆಹಲಿಗೆ ಆಗಮಿಸುತ್ತಿದ್ದಾರೆ. ಅಮಿತ್ ಶಾ, ಜೆ.ಪಿ ನಡ್ಡರನ್ನು ಯಡಿಯೂರಪ್ಪ ಭೇಟಿಯಾಗಿ ಸಚಿವ ಸಂಪುಟ ವಿಸ್ತರಣೆ ಬಗ್ಗೆ ಚರ್ಚೆ ನಡೆಸಲಿದ್ದಾರೆ.
ದೆಹಲಿ: ರಾಜ್ಯ ಸಚಿವ ಸಂಪುಟ ವಿಸ್ತರಣೆಗೆ ಕಾಲ ಕೂಡಿಬಂದಂತೆ ಕಾಣ್ತಿದೆ. ದಿಢೀರ್ ಬೆಳವಣಿಗೆ ಹಿನ್ನೆಲೆಯಲ್ಲಿ ಸಿಎಂ ಬಿ.ಎಸ್. ಯಡಿಯೂರಪ್ಪ ಇಂದು ಬೆಳಗ್ಗೆ 8.30ಕ್ಕೆ ದೆಹಲಿಗೆ ಪ್ರಯಾಣ ಬೆಳೆಸಲಿದ್ದಾರೆ. ಈ ನಿಟ್ಟಿನಲ್ಲಿ ಈಗಾಗಲೇ ಕಾವೇರಿ ನಿವಾಸದಿಂದ ಕೆಂಪೇಗೌಡ ಏರ್‌ಪೋರ್ಟ್‌ನತ್ತ ಪ್ರಯಾಣ ಬೆಳೆಸಿದ್ದಾರೆ. ಮುಖ್ಯಮಂತ್ರಿ ಬಿಎಸ್‌ವೈ ಜೊತೆ ಪುತ್ರ B.Y.ವಿಜಯೇಂದ್ರ ಕೂಡ ದೆಹಲಿಗೆ ಹೊರಟ್ಟಿದ್ದಾರೆ. ಈಗಾಗಲೇ ಸಚಿವಾಕಾಂಕ್ಷಿಗಳು ಸಂಪುಟ ವಿಸ್ತರಣೆಗೆ ಕಾದಿದ್ದು, ಸಂಕ್ರಾಂತಿಗೂ ಮೊದಲೇ ಅವರಿಗೆ ಸಿಹಿ ಸುದ್ದಿ ಸಿಗುವ ಸಾಧ್ಯತೆಯಿದೆ.
ಉಪಚುನಾವಣೆಗೆ ಅಭ್ಯರ್ಥಿಗಳ ಆಯ್ಕೆ ಬಗ್ಗೆ ಚರ್ಚಿಸುತ್ತೇವೆ ದೆಹಲಿಗೆ ತೆರಳುವ ಮುನ್ನ ಸಿಎಂ ಯಡಿಯೂರಪ್ಪ ಮಾತನಾಡಿದ್ದು, “ಬಿಜೆಪಿ ವರಿಷ್ಠರಿಗೆ ಗ್ರಾ.ಪಂ. ಚುನಾವಣೆಯಲ್ಲಿ ಗೆಲುವಿನ ಮಾಹಿತಿಯನ್ನು ನೀಡುತ್ತೇನೆ. ಇದರ ಜತೆ ಉಳಿದ ವಿಚಾರಗಳ ಬಗ್ಗೆ, ಸಂಪುಟ ವಿಸ್ತರಣೆ ಬಗ್ಗೆಯೂ ವರಿಷ್ಠರ ಜತೆ ಚರ್ಚಿಸುತ್ತೇನೆ. ಚರ್ಚೆ ಬಳಿಕ ಸಂಪುಟ ವಿಸ್ತರಣೆ ಸ್ಪಷ್ಟವಾಗಲಿದೆ” ಎಂದರು.
ಇಂದು ಬೆಳಗ್ಗೆ 11 ಗಂಟೆಗೆ ಸುಮಾರಿಗೆ ದೆಹಲಿ ತಲುಪಲಿರುವ ಯಡಿಯೂರಪ್ಪ ನೇರವಾಗಿ ಅಮಿತ್ ಶಾ ಭೇಟಿಯಾಗಲಿದ್ದಾರೆ. ದೆಹಲಿಯಲ್ಲಿರುವ ಅಮಿತ್ ಶಾ ನಿವಾಸದಲ್ಲಿಯೇ ಚರ್ಚೆ ನಡೆಯಲಿದೆ. ಮೂಲಗಳ ಪ್ರಕಾರ ಸಂಕ್ರಾಂತಿ ಬಳಿಕ ಸಂಪುಟ ವಿಸ್ತರಣೆ ಪ್ರಕ್ರಿಯೆಗೆ ಹಸಿರು ನಿಶಾನೆ ಸಿಗುವ ಸಾಧ್ಯತೆ ಇರುವ ಹಿನ್ನಲೆ ಸಿಎಂ ದೆಹಲಿಗೆ ತೆರಳುತ್ತಿದ್ದಾರೆ ಎನ್ನಲಾಗಿದೆ.
ಇನ್ನು ಮುಂದಿನ ವಾರದಲ್ಲಿ ಬೆಳಗಾವಿ ಲೋಕಸಭೆ ಮತ್ತು ಬಸವ ಕಲ್ಯಾಣ ವಿಧಾನಸಭೆ ಉಪಚುನಾವಣೆಗೆ ದಿನಾಂಕ ಘೋಷಣೆಯಾಗುವ ನಿರೀಕ್ಷೆಯಿದೆ. ಚುನಾವಣೆ ಘೋಷಣೆಗೂ ಮುನ್ನವೇ ಸಚಿವ ಸಂಪುಟ ವಿಸ್ತರಣೆಗೆ ಸಿಎಂ ಉದ್ದೇಶಿಸಿದ್ದಾರೆ ಹೀಗಾಗಿ ಸಿಎಂ ದೆಹಲಿ ಪ್ರವಾಸ ಮಹತ್ವ ಪಡೆದುಕೊಂಡಿದೆ.
ಗಂಗೇನಹಳ್ಳಿ ಡಿ ನೋಟಿಫಿಕೇಷನ್ ಪ್ರಕರಣದಲ್ಲಿ ಲೋಕಾಯುಕ್ತ ತನಿಖೆಗೆ ಹೈಕೋರ್ಟ್ ಸೂಚನೆ ನೀಡಿರುವುದು. ಜೊತೆಗೆ ಸಿಎಂ ಬಿಎಸ್‌ವೈಗೆ 25 ಸಾವಿರ ದಂಡ ವಿಧಿಸಿರುವ ಬಗ್ಗೆ ಕೂಡ ಹೈಕಮಾಂಡ್ಗೆ ಬಿಎಸ್ ಯಡಿಯೂರಪ್ಪ ವಿವರಣೆ ನೀಡುವ ಸಾಧ್ಯತೆ ಇದೆ.
ದೊಡ್ಡದಾಗಿದೆ ಸಚಿವಾಕಾಂಕ್ಷಿಗಳ ಲಿಸ್ಟ್! ಪಕ್ಷದಲ್ಲಿ ಈಗಾಗಲೇ ಸಚಿವಾಕಾಂಕ್ಷಿಗಳ ಪಟ್ಟಿ ಕೂಡ ದೊಡ್ಡದಾಗಿದೆ. ಮೂಲ ಬಿಜೆಪಿ ನಾಯಕರಾದ ಉಮೇಶ್ ಕತ್ತಿ, ಅರವಿಂದ್ ಲಿಂಬಾವಳಿ, ಸಿ.ಪಿ ಯೋಗೇಶ್ವರ್ಗೆ ಸಚಿವ ಸ್ಥಾನ ಸಿಗುವ ಸಾಧ್ಯತೆ ದಟ್ಟವಾಗಿದೆ. ಇನ್ನು ಬಿಜೆಪಿ ಸರ್ಕಾರ ರಚಿಸುವಲ್ಲಿ ಸಹಾಯ ಮಾಡಿದ ಎಂಟಿಬಿ ನಾಗರಾಜ್, ಆರ್ ಶಂಕರ್ ಸೇರಿದಂತೆ ಮುನಿರತ್ನಗೆ ಸಚಿವ ಸ್ಥಾನ ಕೊಡಿಸಲು ಬಿಎಸ್ ಯಡಿಯೂರಪ್ಪ ಕಸರತ್ತು ನಡೆಸಿದ್ದು, ಯಾರ್ಯಾರಿಗೆ ಮಂತ್ರಿ ಸ್ಥಾನ ಸಿಗಲಿದೆ ಎಂಬುದು ಕಾದು ನೋಡಬೇಕಿದೆ.
ಸಿಎಂ B.S.ಯಡಿಯೂರಪ್ಪಗೆ ಹೈಕಮಾಂಡ್ ಬುಲಾವ್: ಸಂಪುಟ ವಿಸ್ತರಣೆಗೆ ಕೂಡಿ ಬಂತಾ ಕಾಲ?