
ನವದೆಹಲಿ, ನವೆಂಬರ್ 10: ಬಾಂಗ್ಲಾದೇಶದ ರಾಜಧಾನಿ ಢಾಕಾದಲ್ಲಿರುವ ಕೊಳೆಗೇರಿಗಳ ವಿಡಿಯೋಗಳನ್ನು ಚಿತ್ರೀಕರಿಸಿ, ಅವುಗಳನ್ನು ಭಾರತದ ರಾಜಧಾನಿ ನವದೆಹಲಿಯ ದೃಶ್ಯಗಳೆಂದು ಬಿಂಬಿಸಿದ ಆರೋಪ ಚೀನೀ ವ್ಲಾಗರ್ಗಳ ವಿರುದ್ಧ ಕೇಳಿಬಂದಿದೆ. ಈ ಬಗ್ಗೆ ಭಾರತ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ಇಂತಹ ಸುಳ್ಳು ನಿರೂಪಣೆಗಳನ್ನು ಹರಡುವವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಸಂಬಂಧಪಟ್ಟ ಅಧಿಕಾರಿಗಳನ್ನು ಒತ್ತಾಯಿಸಿದೆ.
ಏನಿದು ವಿವಾದ?
ಬಾಂಗ್ಲಾದೇಶದ ಪ್ರೋಥಮ್ ಅಲೋ ಪತ್ರಿಕೆ ನಡೆಸಿದ ತನಿಖೆಯಲ್ಲಿ, ಕೆಲವು ಚೀನೀ ಪ್ರಜೆಗಳು ಢಾಕಾದ ವಿವಿಧ ಪ್ರದೇಶಗಳಲ್ಲಿ ವಿಡಿಯೋ ಚಿತ್ರೀಕರಿಸಿ, ಅವುಗಳನ್ನು ನವದೆಹಲಿಯ ದೃಶ್ಯಗಳೆಂದು ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರ ಮಾಡುತ್ತಿದ್ದಾರೆ ಎಂಬ ಆರೋಪ ಬೆಳಕಿಗೆ ಬಂದಿದೆ. ಢಾಕಾದ ಟೆಕ್ಪರಾ ಮತ್ತು ಉತ್ತರಾ ಪ್ರದೇಶಗಳ ಕಿರಿದಾದ ರಸ್ತೆಗಳು, ಕೊಳೆಗೇರಿಗಳು ಹಾಗೂ ಅನೈರ್ಮಲ್ಯದಿಂದ ಕೂಡಿರುವ ಸ್ಥಳಗಳನ್ನು ಚಿತ್ರೀಕರಿಸಿ, ಇವು ದೆಹಲಿಯ ಪ್ರದೇಶಗಳು ಎಂದು ಹೇಳಲಾಗುತ್ತಿದೆ ಎಂದು ವರದಿ ತಿಳಿಸಿದೆ. ಈ ವಿಡಿಯೋಗಳಲ್ಲಿ ಭಾರತದ ರಾಜಧಾನಿಯನ್ನು ಕೊಳಕು, ಹಿಂದುಳಿದ ಮತ್ತು ಕಳಪೆ ಕಾನೂನು ಸುವ್ಯವಸ್ಥೆ ಹೊಂದಿರುವ ನಗರವೆಂದು ಬಿಂಬಿಸುವ ಪ್ರಯತ್ನ ನಡೆದಿದೆ ಎಂಬ ಆರೋಪವೂ ಇದೆ.
ಭಾರತದ ವಿದೇಶಾಂಗ ಸಚಿವಾಲಯ ಹೇಳಿದ್ದೇನು?
ಈ ಬೆಳವಣಿಗೆಗೆ ಪ್ರತಿಕ್ರಿಯಿಸಿದ ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್, ಯಾವುದೇ ದೇಶದ ತಪ್ಪು ಚಿತ್ರಣವನ್ನು ಸೃಷ್ಟಿಸುವ ಇಂತಹ ಪ್ರಯತ್ನಗಳು ದುರದೃಷ್ಟಕರ ಎಂದು ಹೇಳಿದ್ದಾರೆ. ಢಾಕಾದ ಕೆಲವು ಪ್ರದೇಶಗಳನ್ನು ದೆಹಲಿ ಎಂದು ಬಿಂಬಿಸುವ ಮೂಲಕ ಸುಳ್ಳು ಮಾಹಿತಿಯನ್ನು ಹರಡಲಾಗುತ್ತಿದೆ. ಇಂತಹ ಕೃತ್ಯಗಳಲ್ಲಿ ಭಾಗಿಯಾಗಿರುವವರ ವಿಶ್ವಾಸಾರ್ಹತೆಯೇ ಪ್ರಶ್ನಾರ್ಹವಾಗುತ್ತದೆ. ಈ ಸಂಬಂಧ ಸೂಕ್ತ ಕ್ರಮ ಕೈಗೊಳ್ಳುವಂತೆ ಸಂಬಂಧಪಟ್ಟ ಅಧಿಕಾರಿಗಳನ್ನು ಒತ್ತಾಯಿಸಿದ್ದೇವೆ ಎಂದು ಅವರು ತಿಳಿಸಿದ್ದಾರೆ.
ಇದನ್ನೂ ಓದಿ: ಬಾಂಗ್ಲಾದೇಶಕ್ಕೆ ಮರಳಿದರೆ ಶೇಖ್ ಹಸೀನಾಗೆ ಮರಣದಂಡನೆ? ಪ್ರಾಸಿಕ್ಯೂಟರ್ ಹೇಳಿಕೆಯಿಂದ ಹೊಸ ವಿವಾದ
150ಕ್ಕೂ ಹೆಚ್ಚು ಚೀನೀ ಪ್ರಜೆಗಳು ಭಾಗಿಯಾಗಿದ್ದಾರಾ?
ಪ್ರೋಥಮ್ ಅಲೋ ತನಿಖೆಯ ಪ್ರಕಾರ, ಢಾಕಾದ ಉತ್ತರಾ ಮತ್ತು ಟೆಕ್ಪರಾ ಪ್ರದೇಶಗಳಲ್ಲಿ ಕನಿಷ್ಠ 150 ಚೀನೀ ಪ್ರಜೆಗಳು ವಿಡಿಯೋ ಚಿತ್ರೀಕರಣ ಮತ್ತು ಲೈವ್ ಪ್ರಸಾರದಲ್ಲಿ ತೊಡಗಿಸಿಕೊಂಡಿದ್ದಾರೆ ಎನ್ನಲಾಗಿದೆ. ಇವರು ಚೀನಾದ ಸಾಮಾಜಿಕ ಜಾಲತಾಣಗಳಾದ ಡೌಯಿನ್ ಮತ್ತು ವೀಚಾಟ್ ಮೂಲಕ ವಿಡಿಯೋಗಳನ್ನು ಪ್ರಸಾರ ಮಾಡುತ್ತಿದ್ದಾರೆ ಎಂದು ವರದಿಗಳು ತಿಳಿಸಿವೆ.
ಕೆಲವು ವ್ಲಾಗರ್ಗಳು ಎರಡು ಮೊಬೈಲ್ಗಳನ್ನು ಬಳಸುತ್ತಿದ್ದು, ಒಂದರಲ್ಲಿ ಲೈವ್ ಪ್ರಸಾರ ಮಾಡಿದರೆ ಮತ್ತೊಂದರಲ್ಲಿ ಮಾಹಿತಿ ನೋಡುತ್ತಿದ್ದರು ಎನ್ನಲಾಗಿದೆ. ಸ್ಥಳೀಯರ ಮನೆಗಳಿಗೆ ಪ್ರವೇಶಿಸಿ ಚಿತ್ರೀಕರಣ ನಡೆಸಿದ ಆರೋಪವೂ ಕೇಳಿಬಂದಿದೆ. ಇದರಿಂದ ಅಲ್ಲಿನ ನಿವಾಸಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ವಿಡಿಯೋಗಳ ಹಿಂದಿನ ಉದ್ದೇಶವೇನು?
ಈ ವಿಡಿಯೋಗಳ ಹಿಂದೆ ನಿಖರವಾಗಿ ಯಾರಿದ್ದಾರೆ ಮತ್ತು ಅವುಗಳನ್ನು ಯಾವ ಉದ್ದೇಶಕ್ಕಾಗಿ ಮಾಡಲಾಗುತ್ತಿದೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಕೆಲವು ಚೀನೀ ವ್ಲಾಗರ್ಗಳು ಉತ್ಪನ್ನಗಳ ಪ್ರಚಾರಕ್ಕಾಗಿ ಈ ವಿಡಿಯೋಗಳನ್ನು ಮಾಡುತ್ತಿರುವುದಾಗಿ ಹೇಳಿಕೊಂಡಿದ್ದಾರೆ. ಆದರೆ ಅದೇ ಸಮಯದಲ್ಲಿ, ದೆಹಲಿಯ ಹೆಸರಿನಲ್ಲಿ ಢಾಕಾದ ದೃಶ್ಯಗಳನ್ನು ತೋರಿಸುತ್ತಿರುವುದರಿಂದ ಇದು ಕೇವಲ ಪ್ರಚಾರದ ಉದ್ದೇಶವೇ ಅಥವಾ ಭಾರತದ ಬಗ್ಗೆ ತಪ್ಪು ಅಭಿಪ್ರಾಯ ಮೂಡಿಸುವ ಪ್ರಯತ್ನವೇ ಎಂಬ ಪ್ರಶ್ನೆ ಎದ್ದಿದೆ.
ಈ ಬೆಳವಣಿಗೆಯನ್ನು ಡಿಜಿಟಲ್ ವೇದಿಕೆಗಳ ಮೂಲಕ ತಪ್ಪು ಮಾಹಿತಿ ಹರಡುವ ಪ್ರಯತ್ನದ ದೃಷ್ಟಿಯಿಂದಲೂ ನೋಡಲಾಗುತ್ತಿದೆ. ಆದರೆ ಈ ವ್ಲಾಗರ್ಗಳು ಚೀನಾ ಸರ್ಕಾರದ ಸೂಚನೆಯಂತೆ ಕೆಲಸ ಮಾಡುತ್ತಿದ್ದಾರೆ ಅಥವಾ ಇದು ಸಂಘಟಿತ ಸರ್ಕಾರಿ ಅಭಿಯಾನವಾಗಿದೆ ಎಂಬುದಕ್ಕೆ ಸದ್ಯಕ್ಕೆ ಸ್ಪಷ್ಟ ಪುರಾವೆ ಬಹಿರಂಗವಾಗಿಲ್ಲ
ತಜ್ಞರು ಹೇಳುವುದೇನು?
ಜೆಎನ್ಯು ಚೀನಾ ಅಧ್ಯಯನ ವಿಭಾಗದ ಪ್ರೊಫೆಸರ್ ಶ್ರೀಕಾಂತ್ ಕೊಂಡಪಲ್ಲಿ ಅವರ ಅಭಿಪ್ರಾಯದಂತೆ, ಇಂತಹ ವಿಡಿಯೋಗಳು ದೇಶಗಳ ವಾಸ್ತವ ಪರಿಸ್ಥಿತಿಯನ್ನು ತೋರಿಸುವ ಬದಲು ಆಯ್ದ ದೃಶ್ಯಗಳ ಮೂಲಕ ನಕಾರಾತ್ಮಕ ಚಿತ್ರಣ ಸೃಷ್ಟಿಸುತ್ತವೆ. ಭಾರತ ಮತ್ತು ಚೀನಾದ ಆಡಳಿತ ವ್ಯವಸ್ಥೆ, ಆರ್ಥಿಕ ಬೆಳವಣಿಗೆ ಹಾಗೂ ಬಡತನ ನಿರ್ಮೂಲನೆಯ ವಿಧಾನಗಳ ನಡುವಿನ ಹೋಲಿಕೆಯೂ ಈ ಚರ್ಚೆಯ ಭಾಗವಾಗಿದೆ. ಒಂದು ದೇಶದ ಕೆಲವು ಹಿಂದುಳಿದ ಪ್ರದೇಶಗಳ ದೃಶ್ಯಗಳನ್ನು ಇಡೀ ದೇಶದ ಪರಿಸ್ಥಿತಿಯೆಂದು ಬಿಂಬಿಸುವುದು ತಪ್ಪು ಮಾಹಿತಿಗೆ ಕಾರಣವಾಗಬಹುದು.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ