
ಕೊಲ್ಕತ್ತಾ, ಜೂನ್ 9: ತೃಣಮೂಲ ಕಾಂಗ್ರೆಸ್ (TMC) ಶಾಸಕರ ‘ನಕಲಿ ಸಹಿ’ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹತ್ವದ ಬೆಳವಣಿಗೆಯೊಂದರಲ್ಲಿ ಅಪರಾಧ ತನಿಖಾ ಇಲಾಖೆಯ (CID) ತಂಡವೊಂದು ಇಂದು ಟಿಎಂಸಿ ಪಕ್ಷದ ಕೇಂದ್ರ ಕಚೇರಿಗೆ ತಲುಪಿದೆ. ಈ ಕಚೇರಿಯು ಟಿಎಂಸಿ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಅವರ ಕಾಳೀಘಾಟ್ ನಿವಾಸವೂ ಆಗಿದೆ. ಲಭ್ಯವಿರುವ ಮಾಹಿತಿಯ ಪ್ರಕಾರ, ರಾಜ್ಯ ತನಿಖಾ ಸಂಸ್ಥೆಯ ಅಧಿಕಾರಿಗಳು ಮಧ್ಯಾಹ್ನ 12 ಗಂಟೆ ಸುಮಾರಿಗೆ 30ಬಿ ಹರೀಶ್ ಚಟರ್ಜಿ ರಸ್ತೆಯ ನಿವಾಸಕ್ಕೆ ಆಗಮಿಸಿದ್ದಾರೆ. ಸಿಐಡಿ ತಂಡದೊಂದಿಗೆ ಕಾಳೀಘಾಟ್ ಪೊಲೀಸ್ ಠಾಣೆಯ ಸಿಬ್ಬಂದಿ ಹಾಗೂ ಮಹಿಳಾ ಪೊಲೀಸರ ದೊಡ್ಡ ಪಡೆಯೇ ಸ್ಥಳಕ್ಕೆ ಆಗಮಿಸಿತ್ತು. ಪಶ್ಚಿಮ ಬಂಗಾಳ ವಿಧಾನಸಭೆಯ ಸ್ಪೀಕರ್ ಅವರಿಗೆ ವಿರೋಧ ಪಕ್ಷದ ನಾಯಕರನ್ನು ನೇಮಿಸುವಂತೆ ಕೋರಿ ಸಲ್ಲಿಸಲಾಗಿದ್ದ ಪ್ರಸ್ತಾವನೆಯಲ್ಲಿ ಹಲವು ಟಿಎಂಸಿ ಶಾಸಕರ ಸಹಿಗಳನ್ನು ನಕಲು ಮಾಡಲಾದ ಆರೋಪದ ತನಿಖೆಯ ಭಾಗವಾಗಿ ಸಿಐಡಿ ಈ ಕ್ರಮ ಕೈಗೊಂಡಿದೆ.
ಸ್ಥಳದಲ್ಲಿದ್ದ ಸಿಐಡಿ ಅಧಿಕಾರಿಗಳ ಪ್ರಕಾರ, ಟಿಎಂಸಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿ ಅವರು ಈ ಹಿಂದೆ ನೀಡಿದ ನೋಟಿಸ್‌ಗೆ ಸಲ್ಲಿಸಿದ ಉತ್ತರದ ಆಧಾರದ ಮೇಲೆ ಈ ಶೋಧ ಕಾರ್ಯವನ್ನು ಕೈಗೊಳ್ಳಲಾಗಿದೆ. “ಶಾಸಕರ ಸಹಿಗಳನ್ನು 30 ಬಿ ಹರೀಶ್ ಚಟರ್ಜಿ ರಸ್ತೆಯಲ್ಲಿರುವ ಪಕ್ಷದ ಕೇಂದ್ರ ಕಚೇರಿಯಲ್ಲಿ ಸಂಗ್ರಹಿಸಲಾಗಿದೆ ಎಂದು ಅಭಿಷೇಕ್ ಬ್ಯಾನರ್ಜಿ ತಮ್ಮ ಪ್ರತಿಕ್ರಿಯೆಯಲ್ಲಿ ತಿಳಿಸಿದ್ದರು. ಆ ಹೇಳಿಕೆಯ ಆಧಾರದ ಮೇಲೆ ನಾವು ತನಿಖೆಗೆ ಇಲ್ಲಿಗೆ ಬಂದಿದ್ದೇವೆ” ಎಂದು ಸಿಐಡಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇದನ್ನೂ ಓದಿ: ಟಿಎಂಸಿ ಬಿಕ್ಕಟ್ಟಿನ ನಡುವೆ ಸೋನಿಯಾ ಗಾಂಧಿಯನ್ನು ಭೇಟಿಯಾದ ಮಮತಾ ಬ್ಯಾನರ್ಜಿ
VIDEO | West Bengal: CID team arrives at TMC MP Abhishek Banerjee’s office at 9 Camac Street in Kolkata.
(Full video available on PTI Videos – https://t.co/n147TvrpG7)#Kolkata #WestBengal pic.twitter.com/pVIwmMn9kd
— Press Trust of India (@PTI_News) June 9, 2026
ಆದರೆ, ತನಿಖಾ ತಂಡಕ್ಕೆ ಕಚೇರಿಯ ಆವರಣದೊಳಗೆ ಪ್ರವೇಶಿಸಲು ಅನುಮತಿ ನೀಡದ ಕಾರಣ ಕಚೇರಿ ನಿರ್ವಹಣಾ ಸಿಬ್ಬಂದಿ ಮತ್ತು ಅಧಿಕಾರಿಗಳ ನಡುವೆ ಕೆಲಕಾಲ ಮಾತಿನ ಚಕಮಕಿ ನಡೆಯಿತು. ಅಭಿಷೇಕ್ ಬ್ಯಾನರ್ಜಿ ಅವರ ಅನುಪಸ್ಥಿತಿಯಲ್ಲಿ ಶೋಧ ನಡೆಸುವುದಕ್ಕೆ ಟಿಎಂಸಿ ಆಕ್ಷೇಪ ವ್ಯಕ್ತಪಡಿಸಿತ್ತು.
VIDEO | Kolkata, West Bengal: CID concludes raids at the Trinamool Congress (TMC) central party office and party chief Mamata Banerjee’s Kalighat residence in connection with an ongoing probe into ‘forged MLA signatures’ case.
(Full video available on PTI Videos -… pic.twitter.com/4LgUwDXonb
— Press Trust of India (@PTI_News) June 9, 2026
ಹಿರಿಯ ಟಿಎಂಸಿ ಶಾಸಕ ಸೋವಂದೇಬ್ ಚಟ್ಟೋಪಾಧ್ಯಾಯ ಅವರನ್ನು ವಿರೋಧ ಪಕ್ಷದ ನಾಯಕರನ್ನಾಗಿ ಗುರುತಿಸುವಂತೆ ಕೋರಿ ಸ್ಪೀಕರ್‌ಗೆ ಕಳುಹಿಸಲಾದ ಪ್ರಸ್ತಾವನೆಯಲ್ಲಿ ಹಲವು ಶಾಸಕರ ಸಹಿಗಳನ್ನು ನಕಲು ಮಾಡಲಾಗಿದೆ ಎಂಬ ಆರೋಪದ ನಂತರ ಈ ವಿವಾದ ಭುಗಿಲೆದ್ದಿತ್ತು. ಈ ಆರೋಪಗಳು ಎಫ್‌ಐಆರ್ ದಾಖಲಾತಿ ಮತ್ತು ಸಿಐಡಿ ತನಿಖೆಗೆ ಕಾರಣವಾಗಿದ್ದವು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ