Ram Navami: ಈ ನಾಲ್ಕು ರಾಜ್ಯಗಳಲ್ಲಿ ರಾಮನವಮಿ ಮೆರವಣಿಗೆ ವೇಳೆ ಕೋಮು ಘರ್ಷಣೆ; ಗುಜರಾತ್​ನಲ್ಲಿ ವ್ಯಕ್ತಿಯೊಬ್ಬ ಸಾವು

ಪಶ್ಚಿಮ ಬಂಗಾಳದ ಹೌರಾಹ್​ ಎಂಬಲ್ಲಿ ರಾಮ ನವಮಿ ಮೆರವಣಿಗೆ ಮೇಲೆ ದಾಳಿ ನಡೆದಿದೆ. ಘಟನೆಗೆ ಸಂಬಂಧಪಟ್ಟು ಪ್ರಕರನ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಶುರು ಮಾಡಿದ್ದಾರೆ.

Ram Navami: ಈ ನಾಲ್ಕು ರಾಜ್ಯಗಳಲ್ಲಿ ರಾಮನವಮಿ ಮೆರವಣಿಗೆ ವೇಳೆ ಕೋಮು ಘರ್ಷಣೆ; ಗುಜರಾತ್​ನಲ್ಲಿ ವ್ಯಕ್ತಿಯೊಬ್ಬ ಸಾವು
ಸಾಂದರ್ಭಿಕ ಚಿತ್ರ
Follow us
TV9 Web
| Updated By: Lakshmi Hegde

Updated on:Apr 11, 2022 | 3:00 PM

ನಿನ್ನೆ ದೇಶಾದ್ಯಂತ ರಾಮನವಮಿ (Ram Navami)ಆಚರಣೆಯಿತ್ತು. ತನ್ನಿಮಿತ್ತ ಬಹುತೇಕ ರಾಜ್ಯಗಳಲ್ಲಿ ಶೋಭಾಯಾತ್ರೆ, ಮೆರವಣಿಗೆಗಳು ನಡೆದಿವೆ. ಒಟ್ಟು ನಾಲ್ಕು ರಾಜ್ಯಗಳಲ್ಲಿ ರಾಮನವಮಿ ಮೆರವಣಿಗೆ ಸಮಯದಲ್ಲಿ ಘರ್ಷಣೆ ಏರ್ಪಟ್ಟಿತ್ತು. ಗುಜರಾತ್​, ಜಾರ್ಖಂಡ, ಪಶ್ಚಿಮ ಬಂಗಾಳ ಮತ್ತು ಮಧ್ಯಪ್ರದೇಶಗಳಲ್ಲಿ ರಾಮನವಮಿ ಮೆರವಣಿ ಸಂದರ್ಭದಲ್ಲಿ ಕೋಮು ಸಂಘರ್ಷ ಉಂಟಾಗಿದ್ದು, ಗುಜರಾತ್​​ನಲ್ಲಿ ಒಬ್ಬರು ಮೃತಪಟ್ಟಿದ್ದಾಗಿಯೂ ವರದಿಯಾಗಿದೆ. ಎಲ್ಲೆಲ್ಲಿ ಘರ್ಷಣೆ ಉಂಟಾಗಿದೆಯೋ ಅಲ್ಲೆಲ್ಲ ಪೊಲೀಸ್ ಬಿಗಿ ಭದ್ರತೆ ಕಲ್ಪಿಸಲಾಗಿದ್ದು, ಕರ್ಫ್ಯೂ ಹೇರಲಾಗಿದೆ.

ಗುಜರಾತ್

ಗುಜರಾತ್​​ನ ಖಂಬತ್​ ಎಂಬಲ್ಲಿ ರಾಮನವಮಿ ಮೆರವಣಿಗೆ ವೇಲೆ ಘರ್ಷಣೆ ಏರ್ಪಟ್ಟು, ಈ ಘಟನೆಯಲ್ಲಿ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ. ಕೆಲವು ಅಂಗಡಿಗಳಿಗೆ ಬೆಂಕಿಯನ್ನೂ ಹಾಕಲಾಗಿದೆ. ಪರಿಸ್ಥಿತಿಯನ್ನು ನಿಭಾಯಿಸಲು ಪೊಲೀಸರು ಅಶ್ರುವಾಯು ಪ್ರಯೋಗವನ್ನೂ ಮಾಡಿದ್ದಾರೆ.  ಖಂಬತ್​​ನಲ್ಲಿ ರಾಮನವಮಿ ಮೆರವಣಿಗೆ ನಡೆಯುತ್ತಿದ್ದ ಸಂದರ್ಭದಲ್ಲಿ ಕೋಮು ಗಲಭೆ ಉಂಟಾಗಿದೆ. ಘರ್ಷಣೆ ನಡೆದ ಸ್ಥಳದಲ್ಲಿ ಅಪರಿಚಿತ ವ್ಯಕ್ತಿಯೊಬ್ಬರ ಮೃತದೇಹ ಪತ್ತೆಯಾಗಿದೆ. ಮೃತ ವ್ಯಕ್ತಿಗೆ ಅಂದಾಜು 65 ವರ್ಷ ವಯಸ್ಸಾಗಿದ್ದಿರಬಹುದು. ಮೊದಲು ಕಲ್ಲು ತೂರಾಟದಿಂದ ಶುರುವಾದ ಗಲಾಟೆ, ಬಳಿಕ ಹಿಂಸಾಚಾರಕ್ಕೆ ತಲುಪಿತ್ತು. ಘಟನೆಯನ್ನು ತನಿಖೆ ನಡೆಸಲಾಗುತ್ತಿದೆ ಎಂದು ಸ್ಥಳೀಯ ಎಸ್​ಪಿ ಅಜೀತ್​ ರಾಯನ್​ ತಿಳಿಸಿದ್ದಾರೆ.

ಇನ್ನೊಂದೆಡೆ ಹಿಮ್ಮತ್​ನಗರದಲ್ಲೂ ಕೂಡ ಹಿಂದು-ಮುಸ್ಲಿಂ ಸಮುದಾಯಗಳ ಜನರು ಹೊಡೆದಾಡಿಕೊಂಡಿದ್ದಾರೆ. ವಾಹನಗಳು, ಅಂಗಡಿಗಳು ಧ್ವಂಸಗೊಂಡಿವೆ. ಸಾರ್ವಜನಿಕರಿಗೂ ಕಲ್ಲಿನಿಂದ ಹೊಡೆದ ಘಟನೆ ನಡೆದಿದೆ. ಕೆಲವೇ ಹೊತ್ತಲ್ಲಿ ಅಲ್ಲಿ ಪರಿಸ್ಥಿತಿ ನಿಯಂತ್ರಿಸಲಾಯಿತು ಎಂದು ಪೊಲೀಸ್ ಅಧಿಕಾರಿ ವಿಶಾಲ್ ವಘೇಲಾ ಮಾಹಿತಿ ನೀಡಿದ್ದಾರೆ.

ಮಧ್ಯಪ್ರದೇಶ

ಇಲ್ಲಿನ ಖಾರ್ಗೋನ್​ ಎಂಬಲ್ಲಿ ರಾಮ ನವಮಿ ಶೋಭಾಯಾತ್ರೆ ನಡೆಯುತ್ತಿತ್ತು. ಈ ವೇಳೆ ಮೆರವಣಿಗೆ ಮುಸ್ಲಿಂ ಪ್ರಾಬಲ್ಯವಿರುವ ಸ್ಥಳಕ್ಕೆ ಬರುತ್ತಿದ್ದಂತೆ ಅದರ ಮೇಲೆ ಕಲ್ಲು ತೂರಾಟ ನಡೆಯಿತು. ಅಲ್ಲಿಂದ ಶುರುವಾದ ಗಲಾಟೆ ವಾಹನ, ಹಲವು ಮನೆಗಳಿಗೆ ಬೆಂಕಿಯಿಡಲ್ಲುವವರೆಗೆ ಬಂತು ನಿಂತಿತು. ಈ ಘಟನೆಯಲ್ಲಿ ಮೂವರು ಪೊಲೀಸ್ ಅಧಿಕಾರಿಗಳೂ ಕೂಡ ಗಾಯಗೊಂಡಿದ್ದಾರೆ. ಖಾರ್ಗೋನ್​​ನಲ್ಲಿ ಸದ್ಯ ಕರ್ಫ್ಯೂ ಹೇರಲಾಗಿದೆ. ವೈದ್ಯಕೀಯ ತುರ್ತು ಪರಿಸ್ಥಿತಿ ಹೊರತು ಮನೆಯಿಂದ ಹೊರಗೆ ಬಾರದಂತೆ ಸಾರ್ವಜನಿಕರಿಗೆ ಸೂಚನೆ ನೀಡಲಾಗಿದೆ.

ಪಶ್ಚಿಮ ಬಂಗಾಳ

ಪಶ್ಚಿಮ ಬಂಗಾಳದ ಹೌರಾಹ್​ ಎಂಬಲ್ಲಿ ರಾಮ ನವಮಿ ಮೆರವಣಿಗೆ ಮೇಲೆ ದಾಳಿ ನಡೆದಿದೆ. ಘಟನೆಗೆ ಸಂಬಂಧಪಟ್ಟು ಪ್ರಕರನ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಶುರು ಮಾಡಿದ್ದಾರೆ. ಸ್ಥಳದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜಿಸಲಾಗಿದೆ.  ಇಲ್ಲಿ ರಾಮನವಮಿ ಮೆರವಣಿಗೆ ಮೇಲೆ ದಾಳಿ ನಡೆಸಿದ್ದು ಪೊಲೀಸರು ಎಂದು ಬಿಜೆಪಿ ನಾಯಕರು ಆರೋಪಿಸಿದ್ದಾರೆ. ಈ ಮಧ್ಯೆ ಘಟನೆಯ ಬಗ್ಗೆ ಯಾವುದೇ ರೀತಿಯ ಪೋಸ್ಟ್​ಗಳನ್ನೂ ಸೋಷಿಯಲ್ ಮೀಡಿಯಾಗಳಲ್ಲಿ ಪೋಸ್ಟ್ ಮಾಡದಂತೆ ಪೊಲೀಸರು ಸಾರ್ವಜನಿಕರಿಗೆ ಸೂಚನೆ ನೀಡಿದ್ದಾರೆ.

ಜಾರ್ಖಂಡ

ಇಲ್ಲಿನ ಬೊಕಾರೋದಲ್ಲಿ ನಿನ್ನೆ ರಾಮನವಮಿ ಮೆರವಣಿಗೆ ನಡೆದಿತ್ತು. ಅದರಲ್ಲಿ ಪಾಲ್ಗೊಳ್ಳಲು ಒಂದಷ್ಟು ಯುವಕರು ಬೈಕ್​​ನಲ್ಲಿ ಹೋಗುತ್ತಿದ್ದರು. ಆಗ ಗುಂಪೊಂದು ಅವರ ಮೇಲೆ ದಾಳಿ ನಡೆಸಿದೆ, ಕಲ್ಲು ತೂರಾಟ ಮಾಡಿದೆ ಎಂದು ಹೇಳಲಾಗಿದೆ. ಬಳಿಕ ಎರಡೂ ಗುಂಪಿನವರನ್ನೂ ಸಮಾಧಾನ ಮಾಡಲಾಯಿತು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಇನ್ನೊಂದೆಡೆ ಲೊಹರ್ಡಗಾ ಎಂಬಲ್ಲಿ ಕೂಡ ಘರ್ಷಣೆ ನಡೆದಿದೆ. ಇಲ್ಲಿ 10 ಮೋಟಾರ್ ಬೈಕ್​ಗಳು, ಪಿಕ್​ ಅಪ್ ವಾಹನಗಳಿಗೆ ಬೆಂಕಿ ಹಚ್ಚಲಾಗಿದೆ. ನಾಲ್ವರು ಗಾಯಗೊಂಡಿದ್ದಾರೆ. ಇದೂ ಸಹ ಕೋಮು ಸಂಘರ್ಷ ಎಂದೇ ಹೇಳಲಾಗಿದೆ. ಸದ್ಯ ಈ ನಾಲ್ಕು ರಾಜ್ಯಗಳಲ್ಲಿ ಎಲ್ಲೆಲ್ಲಿ ಗಲಭೆ ನಡೆದಿದೆಯೋ ಅಲ್ಲೆಲ್ಲ ಪೊಲೀಸ್ ಬಿಗಿ ಬಂದೋಬಸ್ತ್ ಕಲ್ಪಿಸಲಾಗಿದೆ.

ಇದನ್ನೂ ಓದಿ: ಮಂಗಳಾದೇವಿ ಜಾತ್ರೆಯಲ್ಲಿ ಪ್ರಾಣಿಬಲಿ ತಡೆಯಲು ದಯಾನಂದ ಸ್ವಾಮೀಜಿ ಆಗ್ರಹ

Published On - 2:58 pm, Mon, 11 April 22