Narendra Modi: ಯೋಗದೊಂದಿಗೆ ಸಂಯೋಗದಿಂದ ಫಿಸಿಯೋಥೆರಪಿಯ ಶಕ್ತಿ ಹೆಚ್ಚಿದೆ; ಪ್ರಧಾನಿ ಮೋದಿ
ಯೋಗದೊಂದಿಗೆ ಸಂಯೋಗದಿಂದ ಫಿಸಿಯೋಥೆರಪಿಯ ಶಕ್ತಿ ಹೆಚ್ಚಿದೆ. ಟರ್ಕಿ ಭೂಕಂಪದಂಥ ಪರಿಸ್ಥಿತಿ ಎದುರಾದಾಗ ಫಿಸಿಯೋಥೆರಪಿಸ್ಟ್ಗಳ ವಿಡಿಯೋ ಕನ್ಸಲ್ಟಿಂಗ್ನಿಂದ ಪ್ರಯೋಜನವಾಗಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ನವದೆಹಲಿ: ಯೋಗದೊಂದಿಗೆ (Yoga) ಸಂಯೋಗದಿಂದ ಫಿಸಿಯೋಥೆರಪಿಯ ಶಕ್ತಿ ಹೆಚ್ಚಿದೆ. ಟರ್ಕಿ ಭೂಕಂಪದಂಥ ಪರಿಸ್ಥಿತಿ ಎದುರಾದಾಗ ಫಿಸಿಯೋಥೆರಪಿಸ್ಟ್ಗಳ (physiotherapists) ವಿಡಿಯೋ ಕನ್ಸಲ್ಟಿಂಗ್ನಿಂದ ಪ್ರಯೋಜನವಾಗಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಹೇಳಿದರು. ಭಾರತೀಯ ಫಿಸಿಯೋಥೆರಪಿಸ್ಟ್ಗಳ ಸಂಘದ (IAP) 60ನೇ ರಾಷ್ಟ್ರೀಯ ಸಮಾವೇಶ ಉದ್ದೇಶಿಸಿ ಅವರು ಮಾತನಾಡಿದರು. ವೃತ್ತಿಪರರು ವಿಡಿಯೋ ಕನ್ಸಲ್ಟಿಂಗ್ ಮತ್ತು ಟೆಲಿ-ಮೆಡಿಸಿನ್ (ದೂರವಾಣಿ ಮೂಲಕ ವೈದ್ಯಕೀಯ ಸಲಹೆ ನೀಡುವ ಪ್ರಕ್ರಿಯೆ) ಮಾರ್ಗಗಳನ್ನು ಅಭಿವೃದ್ಧಿಪಡಿಸಿಕೊಳ್ಳಬೇಕು. ಟರ್ಕಿ ಭೂಕಂಪದಂಥ ಸಂದರ್ಭಗಳಲ್ಲಿ ಇದರಿಂದ ಪ್ರಯೋಜನವಾಗಲಿದೆ. ಭಾರತದ ಫಿಸಿಯೋಥೆರಪಿಸ್ಟ್ಗಳು ದೂರವಾಣಿಗಳ ಸಹಾಯದಿಂದ ಅವರಿಗೆ ನೆರವಾಗಬಹುದು. ನಿಮ್ಮಂಥವರ ನೇತೃತ್ವದಲ್ಲಿ ಭಾರತವು ಫೀಟ್ ಮತ್ತು ಸೂಪರ್ ಹಿಟ್ ಆಗಿರಲಿದೆ ಎಂಬ ಬಗ್ಗೆ ನನಗೆ ನಂಬಿಕೆ ಇದೆ ಎಂದು ಮೋದಿ ಹೇಳಿದರು.
ಸಾಂತ್ವನ, ಭರವಸೆ, ಚೇತರಿಕೆಯಲ್ಲಿ ಫಿಸಿಯೋಥೆರಪಿಸ್ಟ್ ಪಾತ್ರ ಬಹು ಮುಖ್ಯವಾದದ್ದು. ಫಿಸಿಯೋಥೆರಪಿಸ್ಟ್ಗಳು ಕೇವಲ ಭೌತಿಕ ಗಾಯಕ್ಕಷ್ಟೇ ಚಿಕಿತ್ಸೆ ನೀಡುವುದಿಲ್ಲ. ಚಿಕಿತ್ಸೆಯ ಜತೆಗೆ ರೋಗಿಗಳಲ್ಲಿ ಧೈರ್ಯವನ್ನೂ ತುಂಬುತ್ತಾರೆ ಎಂದು ಪ್ರಧಾನಿ ಹೇಳಿದರು. ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಂದರ್ಭದಲ್ಲಿ ಫಿಸಿಯೋಥೆರಪಿಸ್ಟ್ಗಳಿಗೆ ಬಹು ನಿರೀಕ್ಷಿತ ಮನ್ನಣೆ ದೊರೆತಿದೆ. ಆರೋಗ್ಯ ಕ್ಷೇತ್ರದ ವೃತ್ತಿಪರರ ರಾಷ್ಟ್ರೀಯ ಆಯೋಗ ಕಾಯ್ದೆ ಮೂಲಕ ಫಿಸಿಯೋಥೆರಪಿಸ್ಟ್ಗಳಿಗೂ ಸರ್ಕಾರ ಮನ್ನಣೆ ನೀಡಿದೆ. ಕಾಯ್ದೆಯ ಪರಿಣಾಮ ಫಿಸಿಯೋಥೆರಪಿಸ್ಟ್ಗಳಿಗೆ ಭಾರತದಾದ್ಯಂತ ಎಲ್ಲಿ ಬೇಕಾದರೂ ಮತ್ತು ವಿದೇಶಗಳಲ್ಲಿಯೂ ಕಾರ್ಯನಿರ್ವಹಿಸುವುದು ಸುಲಭವಾಗಲಿದೆ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: PM Narendra Modi: ದಶಪಥ ಹೆದ್ದಾರಿ ಅದ್ಬುತ ದೃಶ್ಯ: ಸಿಎಂ ಬೊಮ್ಮಾಯಿ ಟ್ವೀಟ್ಗೆ ಮೋದಿ ಪ್ರತಿಕ್ರಿಯೆ
ಸರ್ಕಾರವು ಫಿಸಿಯೋಥೆರಪಿಸ್ಟ್ಗಳನ್ನು ಆಹಯುಷ್ಮಾನ್ ಭಾರತ್ ಡಿಜಿಟಲ್ ಮಿಷನ್ ನೆಟ್ವರ್ಕ್ಗೂ ಸೇರ್ಪಡೆ ಮಾಡಿದೆ. ಇದರಿಂದ ಫಿಸಿಯೋಥೆರಪಿಸ್ಟ್ಗಳಿಗೆ ರೋಗಿಗಳ ಜತೆ ಸಂಪರ್ಕ ಸಾಧಿಸುವುದು ಸುಲಭಸಾಧ್ಯವಾಗಿದೆ. ಫಿಟ್ ಇಂಡಿಯಾ ಚಳವಳಿ, ಖೇಲೋ ಇಂಡಿಯಾದಂಥ ಚಳವಳಿಗಳಿಂದ ಫಿಸಿಯೋಥೆರಪಿಸ್ಟ್ಗಳ ವ್ಯಾಪ್ತಿ ವಿಸ್ತಾರಗೊಂಡಿದೆ ಎಂದು ಮೋದಿ ಹೇಳಿದರು.
ಸರಿಯಾದ ಭಂಗಿ, ಅಭ್ಯಾಸಗಳು ಮತ್ತು ವ್ಯಾಯಾಮಗಳ ಬಗ್ಗೆ ಜನರಿಗೆ ಶಿಕ್ಷಣ ನೀಡುವ ಕಾರ್ಯವನ್ನು ಮಾಡಬೇಕು ಎಂದು ಫಿಸಿಯೋಥೆರಪಿಸ್ಟ್ಗಳ ಬಳಿ ಮೋದಿ ವಿನಂತಿ ಮಾಡಿದರು. ಲೇಖನಗಳು, ಉಪನ್ಯಾಸಗಳು ಮತ್ತು ವಿಡಿಯೋಗಳ ಮೂಲಕ ಜನರಲ್ಲಿ ಫಿಟ್‌ನೆಸ್ ಬಗ್ಗೆ ಜಾಗೃತಿ ಮೂಡಿಸಬೇಕು ಎಂದು ಅವರು ಹೇಳಿದರು.
ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ