Breaking News ಪಂಜಾಬ್: ವಿಶ್ವಾಸ ಮತಯಾಚನೆಗಾಗಿ ವಿಶೇಷ ಅಧಿವೇಶನ ನಡೆಸುವ ಆಪ್​​ ಬೇಡಿಕೆ ತಿರಸ್ಕರಿಸಿದ ಗವರ್ನರ್

ವಿಶ್ವಾಸಮತ ಯಾಚನೆಗೆ ವಿಶೇಷ ಅಧಿವೇಶನ ನಡೆಸಬೇಕೆಂಬ ಆಮ್ ಆದ್ಮಿ ಪಕ್ಷದ ಸರ್ಕಾರದ ಬೇಡಿಕೆಗೆ ನೋ ಎಂದ ಪಂಜಾಬ್ ಗವರ್ನರ್.

Breaking News ಪಂಜಾಬ್: ವಿಶ್ವಾಸ ಮತಯಾಚನೆಗಾಗಿ ವಿಶೇಷ ಅಧಿವೇಶನ ನಡೆಸುವ ಆಪ್​​ ಬೇಡಿಕೆ ತಿರಸ್ಕರಿಸಿದ ಗವರ್ನರ್
ಪಂಜಾಬ್ ಸಿಎಂ- ಪಂಜಾಬ್ ಗವರ್ನರ್
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on:Sep 21, 2022 | 7:51 PM

ಪಂಜಾಬ್ (Punjab) ರಾಜ್ಯಪಾಲ ಬನ್ವಾರಿಲಾಲ್ ಪುರೋಹಿತ್ ಅವರು ವಿಶ್ವಾಸಮತ ಯಾಚನೆಗಾಗಿ ವಿಧಾನಸಭೆಯ ವಿಶೇಷ ಅಧಿವೇಶನ ನಡೆಸಬೇಕೆಂಬ ಆಮ್ ಆದ್ಮಿ ಪಕ್ಷದ (AAP) ಸರ್ಕಾರದ ಬೇಡಿಕೆಯನ್ನು ತಿರಸ್ಕರಿಸಿದ್ದಾರೆ. ಸೆಪ್ಟೆಂಬರ್ 22 ರಂದು ಪಂಜಾಬ್ ವಿಧಾನಸಭೆಯ ವಿಶೇಷ ಅಧಿವೇಶನ ಕರೆಯುವ ಆದೇಶವನ್ನು ರಾಜ್ಯಪಾಲರು ಹಿಂಪಡೆದಿದ್ದಾರೆ. ಇಂದು ಹೊರಡಿಸಿದ ಹೊಸ ಆದೇಶದಲ್ಲಿ ಪಂಜಾಬ್ ಸರ್ಕಾರವು ಕರೆದಿರುವ ವಿಶ್ವಾಸ ನಿರ್ಣಯವನ್ನು ಪರಿಗಣಿಸಲು ವಿಧಾನಸಭೆಯನ್ನು ಕರೆಯುವ ಬಗ್ಗೆ ನಿರ್ದಿಷ್ಟ ನಿಯಮಗಳ ಅನುಪಸ್ಥಿತಿಯಲ್ಲಿ ಹಿಂದಿನ ಆದೇಶವನ್ನು ಹಿಂಪಡೆಯಲಾಗಿದೆ ಎಂದು  ಪುರೋಹಿತ್ ಹೇಳಿದ್ದಾರೆ. ಪಂಜಾಬ್‌ನಲ್ಲಿ ಸರ್ಕಾರವನ್ನು ಬೀಳಿಸಲು ಬಿಜೆಪಿ ಪ್ರಯತ್ನ ಮಾಡುತ್ತಿದೆ ಎಂದು ಆಪ್ ಆರೋಪಿಸಿದೆ. ಎಎಪಿ ನಾಯಕತ್ವವು ವಿಧಾನಸಭೆಯಲ್ಲಿ ವಿಶ್ವಾಸ ನಿರ್ಣಯದ ಮೂಲಕ ಬಹುಮತ ಸಾಬೀತು ಪಡಿಸಲು ಮುಂದಾಗಿದೆ.

“ರಾಜ್ಯ ಸರ್ಕಾರದ ಪರವಾಗಿ ಕೇವಲ ‘ವಿಶ್ವಾಸ ನಿರ್ಣಯ’ವನ್ನು ಮಂಡಿಸಲು ವಿಶೇಷ ಅಧಿವೇಶನವನ್ನು ಕರೆಯಲು ಯಾವುದೇ ಕಾನೂನು ಅವಕಾಶವಿಲ್ಲದ ಕಾರಣ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ಸರ್ಕಾರದ ಪ್ರಧಾನ ಕಾರ್ಯದರ್ಶಿಗಳ ಕಚೇರಿ ಹೊರಡಿಸಿದ ಪತ್ರದಲ್ಲಿ ತಿಳಿಸಲಾಗಿದೆ.

ಪಂಜಾಬ್‌ನಲ್ಲಿ ಬಿಜೆಪಿ ತನ್ನ ಶಾಸಕರನ್ನು ಬೇಟೆಯಾಡಲು ಪ್ರಯತ್ನಿಸುತ್ತಿದೆ ಎಂದು ಆಮ್ ಆದ್ಮಿ ಪಕ್ಷವು ಆರೋಪಿಸುತ್ತಿದೆ.ಹಾಗಾಗಿ ಆಪ್ ಸರ್ಕಾರ ಬಹುಮತ ಸಾಬೀತು ಪಡಿಸುವುದಕ್ಕಾಗಿ ವಿಶೇಷ ವಿಧಾನಸಭಾ ಅಧಿವೇಶನವನ್ನು ಕರೆದಿದೆ. ಪುರೋಹಿತ್ ಅವರು ಸೆಪ್ಟೆಂಬರ್ 20 ರಂದು ಅಧಿವೇಶನಕ್ಕೆ ಅನುಮತಿ ನೀಡಿದ್ದರು.

ಪ್ರತಿಪಕ್ಷ ನಾಯಕರಾದ ಪರತಾಪ್ ಸಿಂಗ್ ಬಾಜ್ವಾ, ಸುಖಪಾಲ್ ಸಿಂಗ್ ಖೈರಾ ಮತ್ತು ಅಶ್ವನಿ ಶರ್ಮಾ ಅವರಿಂದ ರಾಜ್ಯಪಾಲರು ಅಧಿವೇಶನದ ವಿರುದ್ಧ ಪ್ರಾತಿನಿಧ್ಯವನ್ನು ಸ್ವೀಕರಿಸಿದ್ದಾರೆ ಎಂದು ಬುಧವಾರ ಹೊರಡಿಸಿದ ಪತ್ರದಲ್ಲಿ ತಿಳಿಸಲಾಗಿದೆ.

ಈ ಬಗ್ಗೆ ಪರಿಶೀಲನೆ ನಡೆಸಿ ಭಾರತದ ಹೆಚ್ಚುವರಿ ಸಾಲಿಸಿಟರ್ ಜನರಲ್ ಸತ್ಯಪಾಲ್ ಜೈನ್ ಅವರಲ್ಲಿ ಕಾನೂನು ಅಭಿಪ್ರಾಯ ಕೇಳಲಾಗಿದೆ. ಪಂಜಾಬ್ ವಿಧಾನ ಸಭೆಯ ಕಾರ್ಯವಿಧಾನ ಮತ್ತು ವ್ಯವಹಾರದ ನಡವಳಿಕೆಯ ನಿಯಮಗಳಲ್ಲಿ ಕೇವಲ ವಿಶ್ವಾಸ ಮತಯಾಚನೆ ಪರಿಗಣಿಸಲು ವಿಧಾನಸಭೆ ಅಧಿವೇಶನ ಕರೆಯುವ ಬಗ್ಗೆ ಯಾವುದೇ ನಿರ್ದಿಷ್ಟ ನಿಬಂಧನೆ ಇಲ್ಲ ಎಂದು ಅವರು ತಮ್ಮ ಕಾನೂನು ಅಭಿಪ್ರಾಯವನ್ನು ನೀಡಿದ್ದಾರೆ ಎಂದು ಪತ್ರದಲ್ಲಿ ತಿಳಿಸಲಾಗಿದೆ.

Published On - 7:16 pm, Wed, 21 September 22