ದೆಹಲಿ: ಕಾಂಗ್ರೆಸ್ ಹಿರಿಯ ನಾಯಕ ಜೈರಾಮ್ ರಮೇಶ್ ಅವರು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಪುತ್ರ ವಿವೇಕ್ ದೋವಲ್ ಬಳಿ ಮಾನಹಾನಿ ಪ್ರಕರಣದ ಬಗ್ಗೆ ಕ್ಷಮಾಪಣೆ ಕೇಳಿದ್ದಾರೆ. ಈ ಮೂಲಕ ಜೈರಾಮ್ ರಮೇಶ್ ವಿರುದ್ಧದ ಮಾನನಷ್ಟ ಮೊಕದ್ದಮೆಯನ್ನು ದೆಹಲಿ ಕೋರ್ಟ್ ಇತ್ಯರ್ಥಗೊಳಿಸಿದೆ.
ಕಳೆದ ವರ್ಷ, ಜೈರಾಮ್ ರಮೇಶ್ ಹಾಗೂ ಕ್ಯಾರವಾನ್ ಮ್ಯಾಗಜಿನ್ ವಿರುದ್ಧ ವಿವೇಕ್ ದೋವಲ್ ಮಾನನಷ್ಟ ಮೊಕದ್ದಮೆ ಹೂಡಿದ್ದರು. ಈ ಬಗ್ಗೆ ಕ್ಷಮೆ ಕೇಳಿರುವ ಜೈರಾಮ್ ರಮೇಶ್, ಅಂದು ಚುನಾವಣಾ ಸನ್ನಿವೇಶದ ಬಿಸಿಯಲ್ಲಿ ಹಾಗೆ ಮಾತಾಡಿದ್ದೆ. ಆ ಕ್ಷಣದಲ್ಲಿ ವಿವೇಕ್ ದೋವಲ್ ವಿರುದ್ಧ ಆರೋಪಗಳನ್ನು ಮಾಡಿದ್ದೆ. ಅವುಗಳನ್ನು ಪರಿಶೀಲಿಸಬೇಕಿತ್ತು. ಅದಕ್ಕಾಗಿ ಈಗ ಕ್ಷಮೆ ಕೇಳುತ್ತಿದ್ದೇನೆ ಎಂದು ಹೇಳಿದ್ದಾರೆ. ಜೈರಾಮ್ ರಮೇಶ್ ಕ್ಷಮಾಪಣೆಯನ್ನು ಸ್ವೀಕರಿಸಿರುವ ವಿವೇಕ್ ದೋವಲ್, ಕ್ಯಾರವಾನ್ ನಿಯತಕಾಲಿಕೆ ವಿರುದ್ಧದ ಪ್ರಕರಣ ಮುಂದುವರೆಸುವುದಾಗಿ ಹೇಳಿದ್ದಾರೆ.
2019ರ ಜನವರಿಯಲ್ಲಿ ಕ್ಯಾರವಾನ್ ನಿಯತಕಾಲಿಕೆ ಪ್ರಕಟಿಸಿದ್ದ ಲೇಖನದಲ್ಲಿ ವಿವೇಕ್ ದೋವಲ್ ವಿರುದ್ಧ ಸುಳ್ಳು ಆರೋಪಗಳನ್ನು ಮಾಡಲಾಗಿತ್ತು. ಅವುಗಳನ್ನು ಜೈರಾಮ್ ರಮೇಶ್ ತಮ್ಮ ಪತ್ರಿಕಾಗೋಷ್ಠಿ ಸಂದರ್ಭ ಉಲ್ಲೇಖಿಸಿ ಮಾತನಾಡಿದ್ದರು. ಈ ಕಾರಣದಿಂದ ಅಜಿತ್ ದೋವಲ್ ಪುತ್ರ, 2019ರ ಫೆಬ್ರವರಿಯಲ್ಲಿ ಜೈರಾಮ್ ರಮೇಶ್ ಮತ್ತು ಕ್ಯಾರವಾನ್ ನಿಯತಕಾಲಿಕೆಯ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ್ದರು.