
ನವದೆಹಲಿ, ನವೆಂಬರ್ 28: ಕಾಂಗ್ರೆಸ್ ಸಂಸದೀಯ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಭಾರತೀಯ ಪೌರತ್ವ ಪಡೆಯುವ 3 ವರ್ಷಗಳ ಮೊದಲೇ, ಅಂದರೆ 1980ರ ಮತದಾರರ ಪಟ್ಟಿಯಲ್ಲಿ ಅವರ ಹೆಸರು ಸೇರ್ಪಡೆಯಾಗಿತ್ತು ಎಂಬ ಆರೋಪದ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ಇಂದು ನ್ಯಾಯಾಲಯಕ್ಕೆ 2 ವರದಿಗಳನ್ನು ಸಲ್ಲಿಸಿದ್ದಾರೆ. ಸೋನಿಯಾ ಗಾಂಧಿ ಪೌರತ್ವ ಪಡೆಯುವ ಮೊದಲೇ ಮತದಾರರ ಪಟ್ಟಿಯಲ್ಲಿ ಅವರ ಹೆಸರು ಸೇರಿಸಲಾಗಿತ್ತು ಎಂಬ ಆರೋಪವನ್ನು ಪರಿಶೀಲಿಸಲು ಮೂಲ ನೋಂದಣಿ ದಾಖಲೆಗಳ ಹುಡುಕಾಟ ಅತ್ಯಗತ್ಯವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ರೋಸ್ ಅವೆನ್ಯೂ ನ್ಯಾಯಾಲಯದ ಹೆಚ್ಚುವರಿ ಮುಖ್ಯ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ವಿನೋದ್ ಜೋಶಿ ಅವರ ಮುಂದೆ ದೆಹಲಿ ಪೊಲೀಸರು 2 ವರದಿಗಳನ್ನು ಸಲ್ಲಿಸಿದ್ದಾರೆ. ನವೆಂಬರ್ 27ರ ಮೊದಲ ವರದಿಯಲ್ಲಿ ಈ ದೂರು ಐಪಿ ಎಸ್ಟೇಟ್ ಪೊಲೀಸ್ ಠಾಣೆಯ ವ್ಯಾಪ್ತಿಗೆ ಬರುವುದಿಲ್ಲವಾದ್ದರಿಂದ ನವದೆಹಲಿ ಪೊಲೀಸ್ ಜಿಲ್ಲೆಗೆ ಮತ್ತು ತದನಂತರ ತುಘಲಕ್ ರಸ್ತೆ ಪೊಲೀಸ್ ಠಾಣೆಗೆ ವರ್ಗಾಯಿಸಲಾಗಿದೆ ಎಂದು ತಿಳಿಸಲಾಗಿತ್ತು. ಮ್ಯಾಜಿಸ್ಟ್ರೇಟ್ ಹೆಚ್ಚಿನ ವಿವರಗಳನ್ನು ಕೇಳಿದ ಬಳಿಕ ತುಘಲಕ್ ರಸ್ತೆ ಪೊಲೀಸ್ ಠಾಣೆಯ ಅಧಿಕಾರಿಗಳು ಎರಡನೇ ವರದಿ ಸಲ್ಲಿಸಿದ್ದಾರೆ.
ಇದನ್ನೂ ಓದಿ: ‘ನಿನ್ನನ್ನೂ ಕೊಂದುಬಿಡುತ್ತಾರೆ!’; ಪ್ರಧಾನಿಯಾಗದಂತೆ ರಾಜೀವ್ ಗಾಂಧಿ ಬಳಿ ಬೇಡಿಕೊಂಡಿದ್ದ ಸೋನಿಯಾ ಗಾಂಧಿ
1980 ಮತ್ತು 1983ರ ಮತದಾರರ ಪಟ್ಟಿಯಲ್ಲಿ ಸೋನಿಯಾ ಗಾಂಧಿ ಅವರ ಹೆಸರು ಇರುವುದನ್ನು ಸಂಬಂಧಪಟ್ಟ ಚುನಾವಣಾ ನೋಂದಣಾಧಿಕಾರಿ ಹಾಗೂ ನವದೆಹಲಿ ಜಿಲ್ಲಾಧಿಕಾರಿ ಕಚೇರಿ ದೃಢಪಡಿಸಿದೆ ಎಂದು ಪೊಲೀಸರು ವರದಿಯಲ್ಲಿ ತಿಳಿಸಿದ್ದಾರೆ. ಹಾಗೆಯೇ, ಏಪ್ರಿಲ್ 30, 1983ರಂದು ಅವರಿಗೆ ಭಾರತೀಯ ಪೌರತ್ವ ಪ್ರಮಾಣಪತ್ರ ನೀಡಲಾಗಿದೆ ಎಂಬುದನ್ನು ಕೇಂದ್ರ ಗೃಹ ಸಚಿವಾಲಯದ ವಿದೇಶಿಯರ ವಿಭಾಗ ಖಚಿತಪಡಿಸಿದೆ.
1980 ಮತ್ತು 1983ರ ಮತದಾರರ ಪಟ್ಟಿಯಲ್ಲಿ ಸೋನಿಯಾ ಗಾಂಧಿ ಅವರ ಹೆಸರು ಇರುವುದನ್ನು ನವದೆಹಲಿ ಜಿಲ್ಲಾಧಿಕಾರಿ ಕಚೇರಿ ಹಾಗೂ ಚುನಾವಣಾ ನೋಂದಣಾಧಿಕಾರಿ ದೃಢಪಡಿಸಿದ್ದಾರೆ. ಆದರೆ, ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆಗೆ ಸಂಬಂಧಿಸಿದ ಫಾರ್ಮ್ 6 ಮತ್ತು ಮೂಲ ಅರ್ಜಿ ದಾಖಲೆಗಳನ್ನು ಇನ್ನೂ ಪತ್ತೆಹಚ್ಚಬೇಕಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: ವಿವಾದಕ್ಕೆ ಕಾರಣವಾಯ್ತು 201ನೇ ಪುಟ; ಸೋನಿಯಾ ಗಾಂಧಿ ಆತ್ಮಚರಿತ್ರೆ ನಿಷೇಧಕ್ಕೆ ಶಿವಸೇನೆ ಆಗ್ರಹ
ಮುಂದಿನ ವಿಚಾರಣೆ ಡಿಸೆಂಬರ್ 14ಕ್ಕೆ:
ಹೆಚ್ಚಿನ ದಾಖಲೆಗಳ ಪರಿಶೀಲನೆ ಮತ್ತು ತನಿಖೆ ನಡೆಸಲು ಪೊಲೀಸರು ಕಾಲಾವಕಾಶ ಕೋರಿದ್ದು, ಪ್ರಕರಣದ ಮುಂದಿನ ವಿಚಾರಣೆಯನ್ನು ನ್ಯಾಯಾಲಯವು ಡಿಸೆಂಬರ್ 14ಕ್ಕೆ ಮುಂದೂಡಿದೆ.
ಪ್ರಕರಣದ ಹಿನ್ನೆಲೆ:
ವಕೀಲ ವಿಕಾಸ್ ತ್ರಿಪಾಠಿ 2025ರ ಆಗಸ್ಟ್‌ನಲ್ಲಿ ಸಲ್ಲಿಸಿದ್ದ ದೂರಿಗೆ ಸಂಬಂಧಿಸಿದಂತೆ ಈ ವಿಚಾರಣೆ ನಡೆಯುತ್ತಿದೆ. 1980ರಲ್ಲಿ ಭಾರತೀಯ ಪೌರತ್ವ ಇಲ್ಲದಿದ್ದರೂ ಮತದಾರರ ಪಟ್ಟಿಯಲ್ಲಿ ಹೆಸರು ಹೇಗೆ ಬಂತು ಎಂಬುದರ ಕುರಿತು ತನಿಖೆ ನಡೆಸಬೇಕೆಂದು ದೂರುದಾರರು ಒತ್ತಾಯಿಸಿದ್ದಾರೆ. ಈ ಹಿಂದೆ ನ್ಯಾಯಾಲಯದಲ್ಲಿ ಪ್ರತಿಕ್ರಿಯೆ ಸಲ್ಲಿಸಿದ್ದ ಸೋನಿಯಾ ಗಾಂಧಿ, ಯಾವುದೇ ಮೂಲ ದಾಖಲೆಗಳಿಲ್ಲದೆ ಕೇವಲ ಊಹಾಪೋಹಗಳು ಮತ್ತು ಮಾಧ್ಯಮ ವರದಿಗಳ ಆಧಾರದ ಮೇಲೆ ಈ ದೂರು ಸಲ್ಲಿಸಲಾಗಿದೆ ಎಂದು ಆಕ್ಷೇಪಿಸಿದ್ದರು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ