ಸ್ಪೀಕರ್ ಓಂ ಬಿರ್ಲಾ ವಿರುದ್ಧ ಕಾಂಗ್ರೆಸ್ ಅವಿಶ್ವಾಸ ಗೊತ್ತುವಳಿ ನೋಟಿಸ್, ಸಹಿ ಹಾಕಲ್ಲ ಎಂದ ಟಿಎಂಸಿ ಶಾಸಕರು

ಕಾಂಗ್ರೆಸ್ ಪಕ್ಷವು ಲೋಕಸಭಾ ಸ್ಪೀಕರ್ ಓಂ ಬಿರ್ಲಾ ವಿರುದ್ಧ ಅವಿಶ್ವಾಸ ಗೊತ್ತುವಳಿ ನೋಟಿಸ್ ಸಲ್ಲಿಸಿದೆ. ಸ್ಪೀಕರ್ ಏಕಪಕ್ಷೀಯವಾಗಿ ಸದನದ ವ್ಯವಹಾರ ನಡೆಸುತ್ತಿದ್ದಾರೆ, ವಿರೋಧ ಪಕ್ಷಗಳಿಗೆ ಮಾತನಾಡಲು ಅವಕಾಶ ನೀಡುತ್ತಿಲ್ಲ ಎಂಬ ಆರೋಪಗಳಿವೆ. ಆದರೆ, ಟಿಎಂಸಿ ಈ ನೋಟಿಸ್‌ಗೆ ಸಹಿ ಹಾಕಿಲ್ಲ, ಬೇಡಿಕೆಗಳನ್ನು ಲಿಖಿತವಾಗಿ ಸಲ್ಲಿಸುವಂತೆ ಕಾಂಗ್ರೆಸ್‌ಗೆ ಸಲಹೆ ನೀಡಿದೆ. ಈ ಹಿಂದೆಯೂ ಸ್ಪೀಕರ್‌ಗಳ ವಿರುದ್ಧ ಇಂತಹ ನಿರ್ಣಯಗಳು ಮಂಡನೆಯಾಗಿವೆ.

ಸ್ಪೀಕರ್ ಓಂ ಬಿರ್ಲಾ ವಿರುದ್ಧ ಕಾಂಗ್ರೆಸ್ ಅವಿಶ್ವಾಸ ಗೊತ್ತುವಳಿ ನೋಟಿಸ್, ಸಹಿ ಹಾಕಲ್ಲ ಎಂದ ಟಿಎಂಸಿ ಶಾಸಕರು
ಓಂಬಿರ್ಲಾ
Image Credit source: The Federal

Updated on: Feb 10, 2026 | 3:13 PM

ನವದೆಹಲಿ, ಫೆಬ್ರವರಿ 10: ಕಾಂಗ್ರೆಸ್(Congress) ಪಕ್ಷವು ಇತರೆ ವಿರೋಧ ಪಕ್ಷಗಳೊಂದಿಗೆ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ವಿರುದ್ಧದ ಅವಿಶ್ವಾಸ ಗೊತ್ತುವಳಿಯ ನೋಟಿಸ್​ ಅನ್ನು ಲೋಕಸಭಾ ಪ್ರಧಾನ ಕಾರ್ಯದರ್ಶಿ ಉತ್ಪಲ್ ಕುಮಾರ್ ಅವರಿಗೆ ಸಲ್ಲಿಸಿದೆ. ಈ ಗೊತ್ತುವಳಿಗಳಿಗೆ ಯಾವುದೇ ಟಿಎಂಸಿ ನಾಯಕರು ಸಹಿ ಹಾಕಿಲ್ಲ. ಲೋಕಸಭೆ ಸ್ಪೀಕರ್ ವಿರುದ್ಧ ಕಾಂಗ್ರೆಸ್ ಪಕ್ಷವು ನಿಯಮ 94ಸಿ ಅಡಿಯಲ್ಲಿ ಅವಿಶ್ವಾಸ ಗೊತ್ತುವಳಿ ನೋಟಿಸ್ ಸಲ್ಲಿಸಿದೆ.

ನೋಟಿಸ್ ಅನ್ನು ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಸ್ಪೀಕರ್ ಲೋಕಸಭೆಯ ಪ್ರಧಾನ ಕಾರ್ಯದರ್ಶಿಗೆ ನಿರ್ದೇಶನ ನೀಡಿದ್ದಾರೆ ಎಂದು ಲೋಕಸಭಾ ಸಚಿವಾಲಯದ ಮುಳಗಳು ತಿಳಿಸಿವೆ. ಮೂಲಗಳ ಪ್ರಕಾರ, ಸ್ಪೀಕರ್ ಓಂ ಬಿರ್ಲಾ ವಿರುದ್ಧ ಕಾಂಗ್ರೆಸ್ ಮಂಡಿಸಿದ ಅವಿಶ್ವಾಸ ನಿರ್ಣಯದಲ್ಲಿ ಭಾರತೀಯ ಸಂವಿಧಾನದ 94(ಸಿ) ವಿಧಿಯ ನಿಬಂಧನೆಗಳ ಅಡಿಯಲ್ಲಿ ಓಂ ಬಿರ್ಲಾ ಅವರನ್ನು ಲೋಕಸಭಾ ಸ್ಪೀಕರ್ ಹುದ್ದೆಯಿಂದ ತೆಗೆದುಹಾಕುವ ಪ್ರಸ್ತಾವನೆಯ ಸೂಚನೆ ನೀಡಲಾಗಿದೆ.

ಏಕೆಂದರೆ ಅವರು ಲೋಕಸಭೆಯ ವ್ಯವಹಾರವನ್ನು ಏಕಪಕ್ಷೀಯವಾಗಿ ನಡೆಸುತ್ತಿದ್ದಾರೆ ಎನ್ನುವ ದೂರುಗಳು ಕೇಳಿಬಂದಿವೆ.
ಹಲವು ಸಂದರ್ಭಗಳಲ್ಲಿ ವಿರೋಧ ಪಕ್ಷಗಳ ನಾಯಕರಿಗೆ ಮಾತನಾಡಲು ಅನುಮತಿ ನಿರಾಕರಿಸಲಾಗಿದೆ, ಇದು ಸಂಸತ್ತಿನಲ್ಲಿ ಅವರ ಮೂಲಭೂತ ಪ್ರಜಾಸತ್ತಾತ್ಮಕ ಹಕ್ಕು ಎಂದು ಹೇಳಲಾಗಿದೆ.

ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರು ಇಂದು ಇಂಡಿ ನಾಯಕರೊಂದಿಗೆ ಸಭೆ ನಡೆಸಿದರು. ಸಭೆಯ ನಂತರ ಟಿಎಂಸಿ ಸಂಸದ ಅಭಿಷೇಕ್ ಬ್ಯಾನರ್ಜಿ ಮಾತನಾಡಿ, ಕಾಂಗ್ರೆಸ್ ಪಕ್ಷವು ಮೊದಲು ತನ್ನ ನಾಲ್ಕು ಬೇಡಿಕೆಗಳನ್ನು ಲಿಖಿತವಾಗಿ ಸ್ಪೀಕರ್​ಗೆ ಸಲ್ಲಿಸಿ, ಅವುಗಳನ್ನು ಚರ್ಚಿಸಲು ಮೂರು ದಿನಗಳ ಕಾಲಾವಕಾಶ ನೀಡಿ, ನಂತರ ಅವರ ಬೇಡಿಕೆಗಳು ಇನ್ನೂ ಈಡೇರದಿದ್ದರೆ ಅವಿಶ್ವಾಸ ನಿರ್ಣಯ ಮಂಡಿಸುವಂತೆ ಸೂಚಿಸಿದ್ದೇನೆ ಎಂದು ಹೇಳಿದ್ದಾರೆ. ಈ ಕಾರಣಕ್ಕಾಗಿ ಟಿಎಂಸಿ ಸಹಿ ಹಾಕಿಲ್ಲ.

ಮತ್ತಷ್ಟು ಓದಿ: ಮೋದಿ ಕುರ್ಚಿ ಸುತ್ತುವರೆದಿದ್ದವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಸ್ಪೀಕರ್​ಗೆ ಪತ್ರ ಬರೆದ ಬಿಜೆಪಿಯ ಮಹಿಳಾ ಸಂಸದರು

ಈ ಹಿಂದೆ 1954 1966 ಹಾಗೂ 1987ರಲ್ಲಿ ಲೋಕಸಭಾ ಸ್ಪೀಕರ್ ವಿರುದ್ಧ ಅವಿಶ್ವಾಸ ನಿರ್ಣಯಗಳನ್ನು ಮಂಡಿಸಲಾಗಿತ್ತು. ಡಿಸೆಂಬರ್ 1954ರಲ್ಲಿ ಗಣೇಶ್ ವಾಸುದೇವ್ ಮಾವಲಂಕರ್ ವಿರುದ್ಧ ಅವಿಶ್ವಾಸ ನಿರ್ಣಯವನ್ನು ಮಂಡಿಸಲಾಯಿತು. ನಂತರದ ದಿನಗಳಲ್ಲಿ 1966ರ ನವೆಂಬರ್​ನಲ್ಲಿ ಹುಕಮ್​​ ಸಿಂಗ್ ವಿರುದ್ಧ ಮತ್ತು 1987ರ ಏಪ್ರಿಲ್​ನಲ್ಲಿ ಬಲರಾಮ್ ಜಾಖರ್ ವಿರುದ್ಧ ಅವಿಶ್ವಾಸ ನಿರ್ಣಯಗಳನ್ನು ಮಂಡಿಸಲಾಯಿತು. ಆದರೆ ಅವರಲ್ಲಿ ಯಾರೂ ತಮ್ಮ ಸ್ಥಾನವನ್ನು ಕಳೆದುಕೊಳ್ಳಲಿಲ್ಲ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ