ರಾಷ್ಟ್ರಪತ್ನಿ ಹೇಳಿಕೆ: ರಾಷ್ಟ್ರಪತಿ ದ್ರೌಪದಿ ಮುರ್ಮುಗೆ ಪತ್ರ ಬರೆದು ಕ್ಷಮೆ ಕೇಳಿದ ಅಧೀರ್ರಂಜನ್ ಚೌಧರಿ
ಸುದ್ದಿ ಮಾಧ್ಯಮವೊಂದಕ್ಕೆ ನೀಡಿದ ಹೇಳಿಕೆಯಲ್ಲಿ ಚೌಧರಿ ರಾಷ್ಟ್ರಪತಿ ದ್ರೌಪದಿ ಮುರ್ಮ ಅವರನ್ನು ರಾಷ್ಟ್ರಪತ್ನಿ ಎಂದು ಹೇಳಿದ್ದರು. ಕಾಂಗ್ರೆಸ್ ನಾಯಕರ ಹೇಳಿಕೆಯನ್ನು ಬಿಜೆಪಿ ತೀವ್ರವಾಗಿ ಖಂಡಿಸಿದ್ದು ಅವರು ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿತ್ತು
ದೆಹಲಿ: ಕಾಂಗ್ರೆಸ್ (Congress) ನಾಯಕ ಅಧೀರ್ ರಂಜನ್ ಚೌಧರಿ (Adhir Ranjan Chowdhury )ಕ್ಷಮೆ ಕೇಳಿದ್ದಾರೆ. ಸುದ್ದಿ ಮಾಧ್ಯಮವೊಂದಕ್ಕೆ ನೀಡಿದ ಹೇಳಿಕೆಯಲ್ಲಿ ಚೌಧರಿ ರಾಷ್ಟ್ರಪತಿ ದ್ರೌಪದಿ ಮುರ್ಮ (Droupadi Murmu) ಅವರನ್ನು ರಾಷ್ಟ್ರಪತ್ನಿ ಎಂದು ಹೇಳಿದ್ದರು. ಕಾಂಗ್ರೆಸ್ ನಾಯಕರ ಹೇಳಿಕೆಯನ್ನು ಬಿಜೆಪಿ ತೀವ್ರವಾಗಿ ಖಂಡಿಸಿದ್ದು ಅವರು ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿತ್ತು. ನೀವು ಹೊಂದಿರುವ ಸ್ಥಾನವನ್ನು ವಿವರಿಸಲು ನಾನು ತಪ್ಪಾದ ಪದ ಬಳಕೆ ಮಾಡಿದ್ದು, ಆ ಪ್ರಮಾದಕ್ಕೆ ನಾನು ಖೇದ ವ್ಯಕ್ತಪಡಿಸುತ್ತೇನೆ. ಅದು ಬಾಯ್ತಪ್ಪಿನಿಂದ ಆಗಿದೆ. ನಾನು ಆ ಬಗ್ಗೆ ನಿಮ್ಮಲ್ಲಿ ಕ್ಷಮೆ ಕೇಳುತ್ತಿದ್ದು, ನೀವು ನನ್ನನ್ನು ಮನ್ನಿಸಬೇಕು ಎಂದು ಮನವಿ ಮಾಡುತ್ತೇನೆ ಎಂದು ಚೌಧರಿ ತಮ್ಮ ಪತ್ರದಲ್ಲಿ ಹೇಳಿದ್ದಾರೆ. ಚೌಧರಿ ಅವರ ಹೇಳಿಕೆ ಖಂಡಿಸಿದ್ದ ಬಿಜೆಪಿ ಕಾಂಗ್ರೆಸ್ ಮುಖ್ಯಸ್ಥೆ ಸೋನಿಯಾ ಗಾಧಿ ಕೂಡಾ ಕ್ಷಮೆಯಾಚಿಸಬೇಕೆಂದು ಒತ್ತಾಯಿಸಿತ್ತು. ಕಾಂಗ್ರೆಸ್ ಪ್ರತಿಭಟನೆ ನಡೆಸುತ್ತಿದ್ದಾಗ ಮಾಧ್ಯಮವೊಂದರಲ್ಲಿ ಮಾತನಾಡಿದ ಲೋಕಸಭಾ ಸಂಸದ, ಕಾಂಗ್ರೆಸ್ ನಾಯಕ ಮುರ್ಮು ಅವರನ್ನು ರಾಷ್ಟ್ರಪತ್ನಿ ಎಂದು ಹೇಳಿದ್ದರು.
ಚೌಧರಿ ಅವರು ಬಾಯ್ತಪ್ಪಿ ಈ ಮಾತನ್ನು ಆಡಿದ್ದಲ್ಲ ಎಂದು ಬಿಜೆಪಿ ಹೇಳಿತ್ತು. ಇದು ಬಾಯ್ತಪ್ಪಿನಿಂದ ಆದದಲ್ಲ. ನೀವು ವಿಡಿಯೊ ತುಣುಕನ್ನು ಸೂಕ್ಷ್ಮವಾಗಿ ಗಮನಿಸಿದರೆ, ಅವರು ದ್ರೌಪದಿ ಮುರ್ಮು ಅವರನ್ನು ರಾಷ್ಟ್ರಪತಿ ಎಂದು ಎರಡು ಬಾರಿ ಹೇಳಿದ್ದು ಆಮೇಲೆ ರಾಷ್ಟ್ರಪತ್ನಿ ಎಂದಿದ್ದಾರೆ. ಇಂಥವುಗಳನ್ನೆಲ್ಲಾ ಲಘುವಾಗಿ ಪರಿಗಣಿಸಬಾರದು ಎಂದು ಕಾನೂನು ಸಚಿವ ಕಿರಣ್ ರಿಜಿಜು ಹೇಳಿದ್ದರು.
ತಾನು ಬಂಗಾಳಿ, ನನಗೆ ಹಿಂದಿ ಸರಾಗವಾಗಿ ಬರುವುದಿಲ್ಲ. ಭಾಷೆಯ ಸಮಸ್ಯೆಯಿಂದ ಬಾಯ್ತಪ್ಪಿ ನಾನು ಹಾಗೆ ಹೇಳಿದ್ದೇನೆ.ಅದನ್ನೇ ಬಿಜೆಪಿ ದೊಡ್ಡದು ಮಾಡಿದೆ ಎಂದು ಚೌಧರಿ ಹೇಳಿದ್ದಾರೆ. ಬುಧವಾರ ಆ ಹೇಳಿಕೆ ವಿವಾದಕ್ಕೀಡಾದಾಗ, ನಾನು ಬಿಜೆಪಿ ಕ್ಷಮೆ ಕೇಳಲ್ಲ. ರಾಷ್ಟ್ರಪತಿಯವರಿಗೆ ನೋವಾಗಿದ್ದರೆ ನಾನು ರಾಷ್ಟ್ರಪತಿ ಮುರ್ಮು ಅವರನ್ನು ಭೇಟಿ ಮಾಡಿ ಅವರಲ್ಲಿ ನೇರವಾಗಿ ನೂರು ಬಾರಿ ಕ್ಷಮೆ ಕೇಳುತ್ತೇನೆ ಎಂದಿದ್ದರು.
Published On - 7:19 pm, Fri, 29 July 22