Covid 19 Vaccination Anthem: ಕೊವಿಡ್ 19 ಲಸಿಕೆ ಗೀತೆ ಬಿಡುಗಡೆ ಮಾಡಿದ ಕೇಂದ್ರ ಸರ್ಕಾರ; ಕೈಲಾಶ್ ಖೇರ್ ಗಾಯನ
India's Covid 19 Vaccination Anthem: ಕೊರೊನಾ ಲಸಿಕೆ ಗೀತೆ ಬಗ್ಗೆ ಮಾತನಾಡಿದ ಗಾಯಕ ಕೈಲಾಶ್ ಖೇರ್, ಸಂಗೀತವೆಂದರೆ ಮನರಂಜನೆಯ ಮೂಲ ಮಾತ್ರವಲ್ಲ. ಅದರಲ್ಲಿಇನ್ನೊಬ್ಬರಿಗೆ ಸ್ಫೂರ್ತಿಯಾಗುವ ಸ್ವಭಾವವೂ ಇರುತ್ತದೆ ಎಂದು ಹೇಳಿದರು.
ದೇಶಾದ್ಯಂತ ಕೊವಿಡ್ 19 ಲಸಿಕೆ (Covid 19 Vaccine) ಅಭಿಯಾನ ಭರದಿಂದ ಸಾಗುತ್ತಿದೆ. ಹಾಗೇ ಇನ್ನೇನು ಶೀಘ್ರದಲ್ಲೇ 100 ಕೋಟಿಯ ದಾಖಲೆ ತಲುಪಲಿದೆ. ಇದೊಂದು ಮೈಲಿಗಲ್ಲು ತಲುಪಲಿರುವ ಹೊತ್ತಲ್ಲೇ ಕೊವಿಡ್ 19 ಲಸಿಕಾ ಗೀತೆ (Covid 19 Vaccine Anthem )ಯೊಂದು ರಚನೆಗೊಂಡಿದೆ. ಪದ್ಮಶ್ರೀ ಪುರಸ್ಕೃತ ಗಾಯಕ ಕೈಲಾಶ್ ಖೇರ್ ಹಾಡಿರುವ ಈ ಆಡಿಯೋ, ವಿಷ್ಯುವಲ್ (ಧ್ವನಿ ಮತ್ತು ದೃಶ್ಯ) ಲಸಿಕೆ ಗೀತೆಯನ್ನು ಕೇಂದ್ರ ಸರ್ಕಾರ ಇಂದು ದೆಹಲಿಯ ಶಾಸ್ತ್ರಿ ಭವನ್ದಲ್ಲಿ ಬಿಡುಗಡೆ ಮಾಡಿದ್ದು, ಸಚಿವ ಹರ್ದೀಪ್ ಸಿಂಗ್ ಪುರಿ ತಮ್ಮ ಟ್ವಿಟರ್ ಅಕೌಂಟ್ನಲ್ಲಿ ಶೇರ್ ಮಾಡಿಕೊಂಡಿದ್ದಾರೆ.
ಈ ಕೊವಿಡ್ 19 ಲಸಿಕಾ ಗೀತೆ ಬಿಡುಗಡೆ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವರಾದ ಹರ್ದೀಪ್ ಸಿಂಗ್ ಪುರಿ, ಮನ್ಸುಖ್ ಮಾಂಡವಿಯಾ ಮತ್ತಿತರ ಕೇಂದ್ರ ಮಟ್ಟದ ಅಧಿಕಾರಿಗಳು ಇದ್ದರು. ಈ ಹಾಡನ್ನು ತೈಲ ಮತ್ತು ಅನಿಲ ಸಾರ್ವಜನಿಕ ವಲಯದ ಸಂಸ್ಥೆಗಳು (Oil And Gas PSUs) ನಿರ್ಮಾಣ ಮಾಡಿವೆ. ಇನ್ನು ಗಾಯನ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಹರ್ದೀಪ್ ಪುರಿ, ಮುಂದಿನ ವಾರ ಭಾರತ 100 ಕೋಟಿ ಕೊವಿಡ್ 19 ಲಸಿಕೆ ಗುರಿಯನ್ನು ಮುಟ್ಟಲಿದೆ. ಕೊವಿಡ್ 19 ಲಸಿಕೆ ಬಗ್ಗೆ ಋಣಾತ್ಮಕ ಅಭಿಪ್ರಾಯ ಹುಟ್ಟುಹಾಕಲು ಪ್ರಯತ್ನ ಪಟ್ಟವರು ವಿಫಲರಾಗಿದ್ದಾರೆ. ದೇಶದಲ್ಲೀಗ ಕೊವಿಡ್ 19 ಲಸಿಕೆ ಅಭಿಯಾನ ಚಳವಳಿಯಾಗಿ ಮಾರ್ಪಟ್ಟಿದ್ದು ತುಂಬ ತೃಪ್ತಿ ತಂದಿದೆ ಎಂದು ತಿಳಿಸಿದರು. ಹಾಗೇ, ಹಾಡುಗಾರರು ಜನರ ಕಲ್ಪನೆಯನ್ನು ಹಿಡಿದಿಡುವ ಶಕ್ತಿ ಹೊಂದಿರುತ್ತಾರೆ. ಈ ಹಾಡಿನ ಮೂಲಕ ಕೈಲಾಶ್ ಖೇರ್ ಕೊವಿಡ್ 19 ಲಸಿಕೆ ಬಗ್ಗೆ ಇರುವ ಮಿಥ್ಯೆಗಳನ್ನು ಹೋಗಲಾಡಿಸಿ, ಜನರಲ್ಲಿ ಜಾಗೃತಿ ಮೂಡಿಸಿದ್ದಾರೆ ಎಂದು ತಿಳಿಸಿದರು.
A song that slays vaccine hesitancy!
टीके से बचा है देश टीके से टीके से बचेगा देश टीके से
Joined my colleagues Dr @mansukhmandviya Ji & Sh @Rameswar_Teli Ji to release India’s Vaccination Anthem #BharatKaTikakaran sung by Sh @Kailashkher Ji.#SabkaSaathSabkaPrayas pic.twitter.com/K18brCngXK
— Hardeep Singh Puri (@HardeepSPuri) October 16, 2021
ಕೊರೊನಾ ಲಸಿಕೆ ಗೀತೆ ಬಗ್ಗೆ ಮಾತನಾಡಿದ ಗಾಯಕ ಕೈಲಾಶ್ ಖೇರ್, ಸಂಗೀತವೆಂದರೆ ಕೇವಲ ಮನರಂಜನೆಯ ಮೂಲ ಮಾತ್ರವಲ್ಲ. ಅದರಲ್ಲಿಇನ್ನೊಬ್ಬರಿಗೆ ಸ್ಫೂರ್ತಿಯಾಗುವ ಸ್ವಭಾವವೂ ಇರುತ್ತದೆ. ಭಾರತ ತನ್ನ ಸಾಮರ್ಥ್ಯ, ಸಾಧನೆಯಿಂದಾಗಿ ಇಂದು ಜಗತ್ತಿನಾದ್ಯಂತ ಗುರುತಿಸಿಕೊಂಡಿದೆ. ಆದರೂ ಇಲ್ಲಿ ಕೆಲವು ವಿಚಾರಗಳ ಬಗ್ಗೆ ಒಂದಷ್ಟು ತಪ್ಪುಗ್ರಹಿಕೆಗಳು ಇದ್ದು ಅದನ್ನು ಪರಿಹರಿಸಬೇಕಾದ ಅಗತ್ಯವಿದೆ ಎಂದು ಹೇಳಿದರು. ಹೀಗೆ ಸ್ಫೂರ್ತಿ ದಾಯಕವಾದ ಹಾಡುಗಳಿಂದ ಜನರಿಗೆ ನೈತಿಕ ಬೆಂಬಲ ನೀಡಬಹುದು ಮತ್ತು ಜಾಗೃತಿಯನ್ನೂ ಮೂಡಿಸಬಹುದು. ಇದೀಗ ಕೊರೊನಾ ವ್ಯಾಕ್ಸಿನ್ ಬಗೆಗಿನ ಮಿಥ್ಯೆಯನ್ನು ಹೋಗಲಾಡಿಸಿ, ಲಸಿಕಾ ಅಭಿಯಾನವನ್ನು ಇನ್ನಷ್ಟು ಉತ್ತೇಜನಗೊಳಿಸಲು ಖಂಡಿತ ಈ ಗೀತೆ ಸಹಾಯಕವಾಗುತ್ತದೆ ಎಂದು ಹೇಳಿದ್ದಾರೆ.
ಕಲಬುರಗಿ: ಭೂಮಿ ಕಂಪಿಸಿದ ಗ್ರಾಮಗಳಿಗೆ NGRI ತಂಡ ಭೇಟಿ; ಜನರಿಗೆ ಶೆಡ್ ಮತ್ತು ಕಾಳಜಿ ಕೇಂದ್ರ ಓಪನ್
Published On - 11:08 pm, Sat, 16 October 21