ಕೊರೊನಾ ಲಸಿಕೆ ಬರ್ತಿದ್ದಂಗೆ ಕಾಲರ್ ಟ್ಯೂನ್ ಬದಲಾಯ್ತು!
ಕೊರೊನಾ ಲಸಿಕೆ ಶೀಘ್ರದಲ್ಲೇ ಲಭ್ಯವಾಗಲಿದೆ ಎಂಬ ಮಾಹಿತಿ ಹೊರಬಿದ್ದಾಗ ಲಸಿಕೆ ಸಿಗುತ್ತದೆ ಎಂದು ಖುಷಿಪಟ್ಟವರಂತೆಯೇ, ಲಸಿಕೆ ಬಂದ ಮೇಲಾದರೂ ಕಾಲರ್ ಟ್ಯೂನ್ನಿಂದ ಮುಕ್ತಿ ಸಿಗಬಹುದು ಎಂದು ಭಾವಿಸಿದವರಿದ್ದಾರೆ. ಆದರೆ ಅವರೆಲ್ಲರ ಊಹೆ ಸುಳ್ಳಾಗಿದ್ದು, ಈಗ ಲಸಿಕೆಯ ಜೊತೆಗೆ ಹೊಸ ಕಾಲರ್ ಟ್ಯೂನ್ ಬಂದುಬಿಟ್ಟಿದೆ!
ದೇಶದಲ್ಲಿ ಕೊರೊನಾ ಬಂದಮೇಲೆ ಏನೇನೆಲ್ಲಾ ಬದಲಾಯ್ತು.. ಮುಖಕ್ಕೆ ಮಾಸ್ಕ್ ಬಂತು, ಕೈಗೆ ಪದೇ ಪದೇ ಸ್ಯಾನಿಟೈಸರ್ ಹಚ್ಚಿಕೊಳ್ಳೋದು ಶುರುವಾಯ್ತು, ಪಕ್ಕದಲ್ಲಿದ್ದವರು ಕೆಮ್ಮಿದ್ರೂ, ಸೀನಿದ್ರೂ ಅನುಮಾನಪಡುವಂತಾಯ್ತು.. ಹೀಗೆ ನಿತ್ಯ ಜೀವನದಲ್ಲಿ ಲೆಕ್ಕವಿಲ್ಲದಷ್ಟು ಬದಲಾವಣೆಗಳಿಗೆ ನಾವು ಒಗ್ಗಿಕೊಂಡುಬಿಟ್ಟೆವು. ಆದರೆ, ಈ ಎಲ್ಲಾ ಬದಲಾವಣೆಗಳಿಗಿಂತಲೂ ಜನರನ್ನು ಅತಿ ಹೆಚ್ಚು ಕಾಡಿದ್ದು, ತಾಳ್ಮೆ ಪರಿಶೀಲಿಸಿದ್ದು ಕೊರೊನಾ ಕಾಲರ್ ಟ್ಯೂನ್!
ಕೊರೊನಾ ವೈರಸ್ ಬಗ್ಗೆ ಎಚ್ಚರಿಕೆ ಮೂಡಿಸುವ ಸಲುವಾಗಿ ಆರಂಭವಾದ ಕಾಲರ್ ಟ್ಯೂನ್ ಒಂದೆರೆಡು ತಿಂಗಳು ಕಳೆಯುವಷ್ಟರಲ್ಲೇ ಜನರ ಕೆಂಗಣ್ಣಿಗೆ ಗುರಿಯಾಗಿತ್ತು. ಅದು ಮುಗಿಯುವ ತನಕ ಕಾಲ್ ಕನೆಕ್ಟ್ ಆಗೋದೂ ಇಲ್ಲ, ಏನಾದರೂ ತುರ್ತು ಕೆಲಸ ಇದ್ದಾಗಲೇ ಬಂದು ಕಾಡುತ್ತೆ ಎಂದು ಬೈದುಕೊಂಡವರಿಗೆ ಲೆಕ್ಕವಿಲ್ಲ. ಇನ್ನೂ ಒಂದು ಹೆಜ್ಜೆ ಮುಂದೆಹೋಗಿ ಕೊರೊನಾ ಕಾಲರ್ ಟ್ಯೂನ್ ತೆಗೆಸುವಂತೆ ನ್ಯಾಯಾಲಯಕ್ಕೆ ಮನವಿ ಮಾಡಿದವರೂ ಇದ್ದಾರೆ.
ಕೊರೊನಾ ಲಸಿಕೆ ಶೀಘ್ರದಲ್ಲೇ ಲಭ್ಯವಾಗಲಿದೆ ಎಂಬ ಮಾಹಿತಿ ಹೊರಬಿದ್ದಾಗ ಲಸಿಕೆ ಸಿಗುತ್ತದೆ ಎಂದು ಖುಷಿಪಟ್ಟವರಂತೆಯೇ, ಲಸಿಕೆ ಬಂದ ಮೇಲಾದರೂ ಕಾಲರ್ ಟ್ಯೂನ್ನಿಂದ ಮುಕ್ತಿ ಸಿಗಬಹುದು ಎಂದು ಭಾವಿಸಿದವರಿದ್ದಾರೆ. ಆದರೆ ಅವರೆಲ್ಲರ ಊಹೆ ಸುಳ್ಳಾಗಿದ್ದು, ಈಗ ಲಸಿಕೆಯ ಜೊತೆಗೆ ಹೊಸ ಕಾಲರ್ ಟ್ಯೂನ್ ಬಂದುಬಿಟ್ಟಿದೆ!
ಕೊರೊನಾ ವೈರಸ್ ಅಂದರೆ ಕೊವಿಡ್ 19 ವಿರುದ್ಧ ಇಡೀ ದೇಶವೇ ಹೋರಾಡುತ್ತಿದೆ.. ಎಂಬ ಎಚ್ಚರಿಕೆ ಸಂದೇಶ ನೀಡುತ್ತಿದ್ದ ಕಾಲರ್ ಟ್ಯೂನ್ ಇದೀಗ ಕೊರೊನಾ ಲಸಿಕೆಯನ್ನು ಯಾವುದೇ ಹಿಂಜರಿಕೆಯಿಲ್ಲದೇ ತೆಗೆದುಕೊಳ್ಳಿ, ಲಸಿಕೆಯ ಮೇಲೆ ವಿಶ್ವಾಸವಿಡಿ ಎಂಬ ಮನವಿಯಾಗಿ ಬದಲಾಗಿದೆ.
ಕೆಮ್ಮಿನೊಂದಿಗೆ ಆರಂಭವಾಗುತ್ತಿದ್ದ ಮತ್ತು ಹಿರಿಯ ಬಾಲಿವುಡ್ ನಟ ಅಮಿತಾಭ್ ಬಚ್ಚನ್ ಧ್ವನಿಯಲ್ಲಿ ಮೂಡಿಬರುತ್ತಿದ್ದ ಕಾಲರ್ ಟ್ಯೂನ್ ಸಹ ಸ್ಥಗಿತವಾಗಿದ್ದು, ಹೊಸಾ ಕಾಲರ್ ಟ್ಯೂನ್ನಲ್ಲಿ ಲಸಿಕೆಯ ಬಗ್ಗೆ ಜಾಗೃತಿ ಮತ್ತು ಹೆಚ್ಚಿನ ಮಾಹಿತಿಯನ್ನು ಎಲ್ಲಿ ಪಡೆಯಬೇಕು ಎಂಬೆಲ್ಲಾ ವಿವರಗಳನ್ನು ನೀಡಲಾಗುತ್ತಿದೆ.
ಭಾರತದಲ್ಲಿ ತಯಾರಾದ ಲಸಿಕೆಗಳ ಮೇಲೆ ವಿಶ್ವಾಸವಿಡಿ. ಅವು ಪರಿಣಾಮಕಾರಿಯಾಗಿದ್ದು, ನಿಮ್ಮನ್ನು ರೋಗದಿಂದ ರಕ್ಷಿಸಲಿವೆ ಎಂದು ಮಾಹಿತಿ ನೀಡಲಾಗುತ್ತಿದೆ. ಅದರೊಂದಿಗೆ ಮಾಸ್ಕ್, ಸ್ಯಾನಿಟೈಸರ್ ಬಳಕೆ ಹಾಗೂ ಸಾಮಾಜಿಕ ಅಂತರ ಪಾಲಿಸುವ ಕುರಿತೂ ಸಂದೇಶ ಸಾರಲಾಗುತ್ತಿರುವ ಕಾಲರ್ ಟ್ಯೂನ್ ಬಹುತೇಕ ಎಲ್ಲಾ ಪ್ರಾದೇಶಿಕ ಭಾಷೆಗಳಲ್ಲಿಯೂ ಆರಂಭವಾಗಿದೆ.
ರಾಜ್ಯದಲ್ಲಿ ಕೊರೊನಾ ಅಟ್ಟಹಾಸ ಮೆಟ್ಟಿ ನಿಲ್ಲಲು ಶುರುವಾಯ್ತು ಲಸಿಕೆ ಪರ್ವ, ಯಾವ ಜಿಲ್ಲೆಯಲ್ಲಿ ಎಲ್ಲೆಲ್ಲಿ?