Coronavirus Case in India: ದೇಶದಲ್ಲಿ ಕೊವಿಡ್​ನಿಂದ ಒಂದೇ ದಿನ 312 ಸಾವು, 62,714 ಹೊಸ ಪ್ರಕರಣ ಪತ್ತೆ

Covid-19 Cases: ಕಳೆದ 24ಗಂಟೆಗಳಲ್ಲಿ 6 ರಾಜ್ಯಗಳಲ್ಲಿ ಸಾವಿನ ಸಂಖ್ಯೆ ಜಾಸ್ತಿಯಾಗಿದ್ದು, ಇದು ದೇಶದಲ್ಲಿ ಸಂಭವಿಸಿದ ಸಾವಿನ ಸಂಖ್ಯೆಯ ಶೇ.83ರಷ್ಟಿದೆ. ಮಹಾರಾಷ್ಟ್ರ, ಪಂಜಾಬ್, ಕೇರಳ, ಛತ್ತೀಸ್​ಗಢ, ದೆಹಲಿ ಮತ್ತು ಮಧ್ಯಪ್ರದೇಶದಲ್ಲಿ ಅತೀ ಹೆಚ್ಚು ಸಾವು ಸಂಭವಿಸಿದೆ.

Coronavirus Case in India: ದೇಶದಲ್ಲಿ ಕೊವಿಡ್​ನಿಂದ ಒಂದೇ ದಿನ 312 ಸಾವು, 62,714 ಹೊಸ ಪ್ರಕರಣ ಪತ್ತೆ
ಪ್ರಾತಿನಿಧಿಕ ಚಿತ್ರ
Follow us
ರಶ್ಮಿ ಕಲ್ಲಕಟ್ಟ
|

Updated on:Mar 28, 2021 | 2:55 PM

ದೆಹಲಿ: ದೇಶದಲ್ಲಿ ಕೊರೊನಾ ಸೋಂಕು ಪ್ರಕರಣಗಳು ದಿನೇ ದಿನೇ ಹೆಚ್ಚಾಗುತ್ತಿದ್ದು ಕಳೆದ 24ಗಂಟೆಗಳಲ್ಲಿ 312 ಮಂದಿ ಸಾವಿಗೀಡಾಗಿದ್ದಾರೆ. ಈ ವರ್ಷ ಇದೇ ಮೊದಲ ಬಾರಿ ಒಂದೇ ದಿನ 300ಕ್ಕಿಂತ ಹೆಚ್ಚು ಸಾವು ಪ್ರಕರಣ ವರದಿಯಾಗಿದೆ. 2020 ಡಿಸೆಂಬರ್ 25ರಂದು ದೇಶದಲ್ಲಿ 336 ಮಂದಿ ಸಾವಿಗೀಡಾಗಿದ್ದರು. ಕೊರೊನಾ ಸೋಂಕು ಪ್ರಕರಣಗಳು ಹೆಚ್ಚಾಗುತ್ತಿದ್ದರೂ ಸಾವಿನ ಪ್ರಕರಣಗಳು ಕಡಿಮೆಯಾಗಿರುತ್ತಿತ್ತು. ಆದರೆ ಇತ್ತೀಚೆಗೆ ಸಾವು ಪ್ರಕರಣಗಳು ಜಾಸ್ತಿಯಾಗುತ್ತಿರುವುದರಿಂದ ಕೊರೊನಾ ಎರಡನೇ ಅಲೆ ದೇಶದಲ್ಲಿದೆ ಎಂಬುದಕ್ಕೆ ಇದು ಸಾಕ್ಷಿಯಾಗಿದೆ.

ಕಳೆದ 24ಗಂಟೆಗಳಲ್ಲಿ 6 ರಾಜ್ಯಗಳಲ್ಲಿ ಸಾವಿನ ಸಂಖ್ಯೆ ಜಾಸ್ತಿಯಾಗಿದ್ದು, ಇದು ದೇಶದಲ್ಲಿ ಸಂಭವಿಸಿದ ಸಾವಿನ ಸಂಖ್ಯೆಯ ಶೇಕಡಾ 83ರಷ್ಟಿದೆ. ಮಹಾರಾಷ್ಟ್ರ, ಪಂಜಾಬ್, ಕೇರಳ, ಛತ್ತೀಸ್​ಗಢ, ದೆಹಲಿ ಮತ್ತು ಮಧ್ಯಪ್ರದೇಶದಲ್ಲಿ ಅತೀ ಹೆಚ್ಚು ಸಾವು ಸಂಭವಿಸಿದೆ. ದೆಹಲಿಯಲ್ಲಿ ಶನಿವಾರ 1,558 ಹೊಸ ಪ್ರಕರಣಗಳು ಪತ್ತೆಯಾಗಿದ್ದು, 10 ಮಂದಿ ಸಾವಿಗೀಡಾಗಿದ್ದಾರೆ. ಜನವರಿ 23ರಂದು ದೆಹಲಿಯಲ್ಲಿ 10 ಸಾವು ಮತ್ತು 197 ಹೊಸ ಪ್ರಕರಣಗಳು ಪತ್ತೆಯಾಗಿತ್ತು.

ಮಹಾರಾಷ್ಟ್ರದಲ್ಲಿ 166 ಮಂದಿ ಸಾವಿಗೀಡಾಗಿದ್ದಾರೆ. ಅದೇ ವೇಳೆ ಪಂಜಾಬ್​ನಲ್ಲಿ 45, ಕೇರಳದಲ್ಲಿ 14, ಛತ್ತೀಸ್​ಗಢದಲ್ಲಿ 13, ದೆಹಲಿ ಮತ್ತು ಮಧ್ಯಪ್ರದೇಶದಲ್ಲಿ 10 ಮಂದಿ ಸಾವಿಗೀಡಾಗಿದ್ದಾರೆ.

ರಾಜಸ್ಥಾನ, ಆಂಧ್ರಪ್ರದೇಶ,ಅಸ್ಸಾಂ, ಲಕ್ಷದ್ವೀಪ್, ಲಡಾಖ್, ದಾದ್ರಾ ಮತ್ತು ನಾಗರ್ ಹವೇಲಿ, ದಾಮನ್- ದಿಯು, ಮಣಿಪುರ, ಮೇಘಾಲಯ, ಮಿಜೊರಾಂ, ಸಿಕ್ಕಿಂ, ತ್ರಿಪುರಾ, ಅಂಡಮಾನ್ ಮತ್ತು ನಿಕೊಬಾರ್ ದ್ವೀಪ, ನಾಗಾಲ್ಯಾಂಡ್ ಮತ್ತು ಅರುಣಾಚಲ ಪ್ರದೇಶದಲ್ಲಿ ಕಳೆದ 24 ಗಂಟೆಗಳಲ್ಲಿ ಯಾವುದೇ ಸಾವು ಪ್ರಕರಣ ವರದಿ ಆಗಿಲ್ಲ .

ಮಾರ್ಚ್ ತಿಂಗಳಲ್ಲಿ ಏರಿಕೆಯಾಗಿದೆ ಕೊರೊನಾ ಸೋಂಕು ಮಾರ್ಚ್ ತಿಂಗಳಲ್ಲಿ ದೇಶದಲ್ಲಿ ಕೊರೊನಾ ಸೋಂಕು ಪ್ರಕರಣಗಳು ದಿಢೀರ್ ಏರಿಕೆ ಕಂಡಿದೆ. ಕಳೆದ 24 ಗಂಟೆಗಳಲ್ಲಿ 62,714 ಹೊಸ ಪ್ರಕರಣಗಳು ಪತ್ತೆಯಾಗಿದೆ. ಕೇಂದ್ರ ಆರೋಗ್ಯ ಸಚಿವಾಲಯದ ಮಾಹಿತಿ ಪ್ರಕಾರ 2020 ಅಕ್ಟೋಬರ್ ತಿಂಗಳಲ್ಲಿ 62,000ಕ್ಕಿಂತ ಹೆಚ್ಚು ಪ್ರಕರಣಗಳು ವರದಿಯಾಗಿದೆ.

ಹೆಚ್ಚುತ್ತಿದೆ ಸಕ್ರಿಯ ಪ್ರಕರಣಗಳ ಸಂಖ್ಯೆ ದೇಶದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 33,663 ಏರಿಕೆಯಾಗಿದ್ದು ಒಟ್ಟು ಪ್ರಕರಣಗಳ ಸಂಖ್ಯೆ 4,86,310 ಕ್ಕೆ ತಲುಪಿದೆ. 1.13 ಕೋಟಿ ಮಂದಿ ಚೇತರಿಸಿಕೊಂಡಿದ್ದಾರೆ. ಅಂಕಿ ಅಂಶಗಳ ಪ್ರಕಾರ ದೇಶದಲ್ಲಿ ಚೇತರಿಕೆ ಪ್ರಮಾಣ ಶೇಕಡಾ 94.58ಕ್ಕೆ ಇಳಿದಿದ್ದು, ಸಾವಿನ ಪ್ರಮಾಣ ಶೇಕಡಾ 1.35ಆಗಿದೆ.

ಮಹಾರಾಷ್ಟ್ರದಲ್ಲಿ ಸೋಂಕು ಪ್ರಕರಣ ಏರಿಕೆಯಾಗುತ್ತಿದ್ದು, ಸೋಂಕು ನಿಯಂತ್ರಣಕ್ಕೆ ರಾತ್ರಿ ಕರ್ಫ್ಯೂ ಹೇರಲಾಗಿದೆ. ಕಳೆದ 24ಗಂಟೆಗಳಲ್ಲಿ ಮಹಾರಾಷ್ಟ್ರದಲ್ಲಿ 36,000 ಪ್ರಕರಣಗಳ ವರದಿಯಾಗಿದೆ. ಮಹಾರಾಷ್ಟ್ರದಲ್ಲಿ ರಾಜಕೀಯ, ಧಾರ್ಮಿಕ ಕಾರ್ಯಕ್ರಮಗಳಲ್ಲಿ ಜನರು ಒಗ್ಗೂಡುವುದಕ್ಕೆ ನಿಷೇಧ ಹೇರಲಾಗಿದೆ. ರೆಸ್ಟೊರೆಂಟ್, ಉದ್ಯಾನವನ, ಮಾಲ್​ಗಳು ರಾತ್ರಿ 8ಗಂಟೆಯಿಂದ ಬೆಳಗ್ಗೆ 7 ಗಂಟೆವರೆಗೆ ಮುಚ್ಚಲು ಸರ್ಕಾರ ಆದೇಶಿಸಿದೆ. ರಾತ್ರಿ 8ಗಂಟೆಯಿಂದ ಬೆಳಗ್ಗೆ 7ಗಂಟೆವೆರೆಗೆ ಬೀಚ್, ಥಿಯೇಟರ್​ಗಳಿಗೆ ಜನರು ಹೋಗುವುದನ್ನು ನಿಷೇಧಿಸಲಾಗಿದೆ.

ಇಲ್ಲಿಯವರೆಗೆ 6ಕೋಟಿಗಿಂತಲೂ ಹೆಚ್ಚು ಜನರಿಗೆ ಲಸಿಕೆ ನೀಡಲಾಗಿದ್ದು , ಕಳೆದ 24 ಗಂಟೆಗಳಲ್ಲಿ 2.5 ಲಕ್ಷ ಡೋಸ್ ಲಸಿಕೆ ವಿತರಣೆ ಆಗಿದೆ. ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ICMR) ಪ್ರಕಾರ ಮಾರ್ಚ್ 27ರವರೆಗೆ 24,09,50,842 ಮಾದರಿಗಳನ್ನು ಪರೀಕ್ಷೆಗೊಳಪಡಿಸಿದ್ದು, ಮಾರ್ಚ್ 27ರಂದು 11,81,289 ಮಾದರಿಗಳನ್ನು ಪರೀಕ್ಷಿಸಲಾಗಿದೆ.

ಇದನ್ನೂ ಓದಿ: Coronavirus India: ದೇಶದಲ್ಲಿ 59 ಸಾವಿರ ದಾಟಿದ ಕೊವಿಡ್ ಹೊಸ ಪ್ರಕರಣಗಳ ಸಂಖ್ಯೆ, ಮಹಾರಾಷ್ಟ್ರದಲ್ಲಿ ದಾಖಲೆ ಏರಿಕೆ

Published On - 2:52 pm, Sun, 28 March 21