Coronavirus in Punjab: ‘ಆರೋಗ್ಯವಂತ’ ಪಂಜಾಬ್ನಲ್ಲಿ ಕೊರೊನಾ ರೋಗಿಗಳ ಸಾವು ಅಧಿಕ; ಆತಂಕದಲ್ಲಿ ವೈದ್ಯ ಲೋಕ
ಹೀಗಾಗಿ ಪಂಜಾಬ್ ರಾಜ್ಯದ ಜನರು ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಉತ್ತಮ ಆಹಾರ ಪದ್ದತಿಯನ್ನು ಆಳವಡಿಸಿಕೊಳ್ಳಬೇಕು. ವ್ಯಾಯಾಮ ಮಾಡಬೇಕು. ಕೊಬ್ಬಿನಾಂಶದ ಆಹಾರ ತ್ಯಜಿಸಬೇಕು. ನಾಲಿಗೆ ರುಚಿಗೆ ಸೇವಿಸಿದ ಸಕ್ಕರೆ ಅಂಶವೇ ಜನರ ಜೀವ ಬಲಿ ಪಡೆಯುತ್ತೆ ಎನ್ನುವುದನ್ನು ಮರೆಯಬಾರದು. ನಾಲಿಗೆ ಸಿಹಿಯೇ ಜೀವಕ್ಕೆ ಕಹಿ ಆಗಬಾರದು.
ಪಂಜಾಬ್ ರಾಜ್ಯಕ್ಕೆ ನಮ್ಮ ದೇಶದಲ್ಲಿ ವಿಶೇಷವಾದ ಸ್ಥಾನವಿದೆ. ಪಂಜಾಬ್ ಸಾಕಷ್ಟು ವೈಶಿಷ್ಟ್ಯತೆಯನ್ನ ಹೊಂದಿರುವ ರಾಜ್ಯ. ಆದರೆ, ಈಗ ದೇಶದಲ್ಲಿ ಕೊರೊನಾ ರೋಗಿಗಳ ಪೈಕಿ ಹೆಚ್ಚಿನ ಶೇಕಡಾವಾರು ರೋಗಿಗಳು ಸಾವನ್ನಪ್ಪಿರುವ ರಾಜ್ಯಗಳ ಪಟ್ಟಿಯಲ್ಲಿ ಪಂಜಾಬ್ ಮೊದಲ ಸ್ಥಾನದಲ್ಲಿದೆ. ಇದು ಆತಂಕಕ್ಕೆ ಕಾರಣವಾಗಿದೆ. ಪಂಜಾಬ್ ರಾಜ್ಯದಲ್ಲಿ ಬೇರೆ ರಾಜ್ಯಗಳಿಗಿಂತ ಹೆಚ್ಚಿನ ಕೊರೊನಾ ಸಾವು ಸಂಭವಿಸಲು ಏನು ಕಾರಣ ಎನ್ನುವ ಬಗ್ಗೆ ಚರ್ಚೆ ನಡೆಯುತ್ತಿದೆ.
ದೇಶದಲ್ಲಿ ಕೊರೊನಾ ಸಾವಿನ ಪ್ರಮಾಣ ಶೇ.1.3, ಪಂಜಾಬ್ ನಲ್ಲಿ ಶೇ.2.6!! ಪಂಜಾಬ್ ರಾಜ್ಯ ಅಂದ್ರೆ ಗಡಿ ರಾಜ್ಯ. ಪಾಕಿಸ್ತಾನದೊಂದಿಗೆ ಗಡಿ ಹಂಚಿಕೊಂಡಿರುವ ರಾಜ್ಯವೇ ಪಂಜಾಬ್. ಜೊತೆಗೆ ಪಂಚನದಿಗಳ ನಾಡು. ದೇಶದ ಭತ್ತದ ಕಣಜ. ಸಿಖ್ಖರ ಪವಿತ್ರ ಗೋಲ್ಡನ್ ಟೆಂಪಲ್ ಇರುವ ರಾಜ್ಯ ಪಂಜಾಬ್. 80-90 ರ ದಶಕದಲ್ಲಿ ಖಲಿಸ್ತಾನ ಪ್ರತೇಕತಾವಾದಿ ಚಳವಳಿಯಿಂದ ಹಿಂಸಾಚಾರದ ಮೂಲಕ ಸುದ್ದಿಯಾಗುತ್ತಿದ್ದ ರಾಜ್ಯ. ಜೊತೆಗೆ ದೇಶ ರಕ್ಷಣೆಗೆ ವೀರಯೋಧರನ್ನ ಹೆಚ್ಚಿನ ಸಂಖ್ಯೆಯಲ್ಲಿ ನೀಡಿದ್ದು ಇದೇ ಪಂಜಾಬ್.
ಆದರೆ, ಈಗ ಇದೇ ಪಂಜಾಬ್ ರಾಜ್ಯದಲ್ಲಿ ಇಡೀ ದೇಶದ ಸರಾಸರಿಗಿಂತ ಹೆಚ್ಚಿನ ಸರಾಸರಿಯಲ್ಲಿ ಕೊರೊನಾ ರೋಗಿಗಳು ಸಾವನ್ನಪ್ಪಿದ್ದಾರೆ. ಬೇರೆ ರಾಜ್ಯಗಳಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಕೊರೊನಾ ರೋಗಿಗಳು ಸಾವನ್ನಪ್ಪಿರುವುದು ಆತಂಕಕ್ಕೆ ಕಾರಣವಾಗಿದೆ. ಇದರ ಬಗ್ಗೆ ವೈದ್ಯಕೀಯ ಲೋಕದಲ್ಲೂ ಚರ್ಚೆ ನಡೆಯುತ್ತಿದೆ. ಭಾರತದಲ್ಲಿ ಕೊರೊನಾ ರೋಗಿಗಳ ಪೈಕಿ ಶೇ.1.3 ರಷ್ಟು ರೋಗಿಗಳು ಸಾವನ್ನಪ್ಪಿದ್ದಾರೆ. ಆದರೇ, ಪಂಜಾಬ್ ರಾಜ್ಯದಲ್ಲಿ ಮಾತ್ರ ರಾಷ್ಟ್ರೀಯ ಸರಾಸರಿಗಿಂತ ಎರಡು ಪಟ್ಟು ರೋಗಿಗಳು ಕೊರೊನಾದಿಂದ ಸಾವನ್ನಪ್ಪಿದ್ದಾರೆ.
ರಾಷ್ಟ್ರೀಯ ಸರಾಸರಿಗಿಂತ ಪಂಜಾಬ್ ನಲ್ಲಿ 2 ಪಟ್ಟು ಹೆಚ್ಚಿನ ಸಾವು! ಬೇರೆ ರಾಜ್ಯದ ಜನತೆಗೂ ಇದು ಪಾಠವಾಗಬೇಕು.. ಪಂಜಾಬ್ ರಾಜ್ಯದಲ್ಲಿ ಕೊರೊನಾ ಪಾಸಿಟಿವ್ ರೋಗಿಗಳ ಪೈಕಿ ಶೇ.2.7 ರಷ್ಟು ರೋಗಿಗಳು ಸಾವನ್ನಪ್ಪಿದ್ದಾರೆ. ಬೇರೆ ರಾಜ್ಯಗಳಲ್ಲಿ ರಾಷ್ಟ್ರೀಯ ಸರಾಸರಿಗಿಂತ ಕಡಿಮೆ ರೋಗಿಗಳು ಸಾವನ್ನಪ್ಪಿದ್ದಾರೆ. ಕರ್ನಾಟಕದಲ್ಲಿ ಕೊರೊನಾ ರೋಗಿಗಳ ಪೈಕಿ ಶೇ.1.2 ರಷ್ಟು ರೋಗಿಗಳು ಸಾವನ್ನಪ್ಪಿದ್ದರೇ, ಮಹಾರಾಷ್ಟ್ರದಲ್ಲಿ ಶೇ.1.9 ರಷ್ಟು ರೋಗಿಗಳು ಸಾವನ್ನಪ್ಪಿದ್ದಾರೆ. ದೆಹಲಿಯಲ್ಲಿ ಶೇ.1.7 ರಷ್ಟು ರೋಗಿಗಳು ಸಾವನ್ನಪ್ಪಿದ್ದರೇ, ಗುಜರಾತ್ ನಲ್ಲಿ ಶೇ.1.2 ರಷ್ಟು ರೋಗಿಗಳು ಸಾವನ್ನಪ್ಪಿದ್ದಾರೆ. ಉತ್ತರ ಪ್ರದೇಶದಲ್ಲಿ ಶೇ.1.3 ರಷ್ಟು ರೋಗಿಗಳು ಸಾವನ್ನಪ್ಪಿದ್ದಾರೆ.
ಪಂಜಾಬ್ ರಾಜ್ಯದಲ್ಲಿ ಆರೋಗ್ಯ ಮೂಲಸೌಕರ್ಯ ಉತ್ತಮವಾಗಿದೆ. ಕೊರೊನಾದ ಎರಡನೇ ಅಲೆಯಲ್ಲಿ ಮೆಡಿಕಲ್ ಆಕ್ಸಿಜನ್ ಕೊರತೆ ಆಗಿಲ್ಲ. ಔಷಧಿಗಳ ಕೊರತೆಯಾಗಿಲ್ಲ. ಆದರೂ, ರಾಷ್ಟ್ರೀಯ ಸರಾಸರಿಗಿಂತ ಎರಡು ಪಟ್ಟು ಹೆಚ್ಚಿನ ಸಾವು ಸಂಭವಿಸಿರುವುದು ಏಕೆ ಎಂಬ ಪ್ರಶ್ನೆ ಎಲ್ಲರನ್ನೂ ಕಾಡುತ್ತಿದೆ.
ಪಂಜಾಬ್ ರಾಜ್ಯದಲ್ಲಿ ಹೀಗೆ ರಾಷ್ಟ್ರೀಯ ಸರಾಸರಿಗಿಂತ ಹೆಚ್ಚಿನ ಕೊರೊನಾ ಸಾವು ಸಂಭವಿಸಲು ಮುಖ್ಯವಾಗಿ ಆರೋಗ್ಯ ತಜ್ಞರು ಹೇಳುವ ಪ್ರಕಾರ, ಜನರ ಜೀವನ ಶೈಲಿ, ಆಹಾರ ಶೈಲಿ, ನಿರ್ಲಕ್ಷ್ಯ ಮನೋಭಾವವೇ ಕಾರಣ. ಪಂಜಾಬ್ ರಾಜ್ಯದಲ್ಲಿ ಪಟಿಯಾಲ, ಲೂಧಿಯಾನ, ಫರೀದ್ ಕೋಟ್, ಅಮೃತಸರ ಜಿಲ್ಲೆಗಳಲ್ಲಿ ಹೆಚ್ಚಿನ ಕೊರೊನಾ ಸಾವು ಸಂಭವಿಸಿವೆ. ಈ ಜಿಲ್ಲೆಗಳಲ್ಲಿ ಸಾವನ್ನಪ್ಪಿದವರ ಪೈಕಿ ಶೇ.60 ರಷ್ಟು ಜನರು ಒಬೆಸಿಟಿ, ಡಯಾಬೀಟೀಸ್, ಹೈಪರ್ ಟೆನ್ಷನ್ ನಿಂದ ಬಳಲುತ್ತಿದ್ದರು. ಜೊತೆಗೆ ಹೃದಯದ ಸಮಸ್ಯೆ, ಕಿಡ್ನಿ ಸಮಸ್ಯೆ, ಆಲ್ಕೋಹಾಲ್ ಸೇವನೆಯಿಂದ ಲಿವರ್ ಸಮಸ್ಯೆ ಸೇರಿದಂತೆ ಇನ್ನೂ ಕೆಲ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದರು ಎನ್ನುವುದು ಪತ್ತೆಯಾಗಿದೆ.
(ಲೇಖನ: ಎಸ್. ಚಂದ್ರಮೋಹನ್, ಹಿರಿಯ ವರದಿಗಾರ, ಟಿವಿ9)
ಈ ವರ್ಷದ ಜನವರಿಯಿಂದ ಮೇ 21 ರವರೆಗೆ ಪಂಜಾಬ್ ರಾಜ್ಯದಲ್ಲಿ ಕೊರೊನಾ ಸಾವಿನ ಪ್ರಮಾಣ ಶೇ.2.6 ರಷ್ಟಿದೆ. ಈ ಅವಧಿಯಲ್ಲಿ 8,963 ಮಂದಿ ಕೊರೊನಾದಿಂದ ಸಾವನ್ನಪ್ಪಿದ್ದಾರೆ.
ಪಂಜಾಬ್ ರಾಜ್ಯದಲ್ಲಿ ಕಳೆದ ವರ್ಷದಿಂದ ಇಲ್ಲಿಯವರೆಗೂ(ಜೂನ್ 16) 5,89,153 ಮಂದಿ ಕೊರೊನಾ ಸೋಂಕಿತರಾಗಿದ್ದಾರೆ. ಇವರ ಪೈಕಿ 15,650 ಮಂದಿ ಸಾವನ್ನಪ್ಪಿದ್ದಾರೆ. ಅಂದರೇ, ಪಂಜಾಬ್ ರಾಜ್ಯದಲ್ಲಿ ಕೊರೊನಾ ಸೋಂಕಿತರ ಪೈಕಿ ಸಾವಿನ ಪ್ರಮಾಣ ಶೇ.2.7 ರಷ್ಟಿದೆ. ದೇಶದ ಬೇರಾವ ರಾಜ್ಯದಲ್ಲೂ ಇಷ್ಟೊಂದು ಹೆಚ್ಚಿನ ಶೇಕಡಾವಾರು ಸಾವು ಸಂಭವಿಸಿಲ್ಲ. ಉತ್ತರಾಖಂಡ್ ರಾಜ್ಯದಲ್ಲಿ ಕೊರೊನಾ ಸೋಂಕಿತರ ಪೈಕಿ ಶೇ.2.1 ರಷ್ಟು ರೋಗಿಗಳು ಸಾವನ್ನಪ್ಪಿದ್ದಾರೆ. ಉತ್ತರಾಖಂಡ್ ರಾಜ್ಯದ 3,37,449 ಕೊರೊನಾ ರೋಗಿಗಳ ಪೈಕಿ 6,985 ಮಂದಿ ಕೊರೊನಾ ರೋಗಿಗಳು ಸಾವನ್ನಪ್ಪಿದ್ದಾರೆ.
ಪಂಜಾಬ್ ರಾಜ್ಯದ ಪಟಿಯಾಲದಲ್ಲಿ ಈ ವರ್ಷದ ಜನವರಿಯಿಂದ ಮೇ, 21 ರವರೆಗೆ 1,019 ರೋಗಿಗಳು ಸಾವನ್ನಪ್ಪಿದ್ದಾರೆ. ಇದು ಪಂಜಾಬ್‌ನ ಕೊರೊನಾ ಸಾವುಗಳ ಪೈಕಿ ಶೇ.11 ರಷ್ಟು. ಪಟಿಯಾಲ ಮೆಡಿಕಲ್ ಕಾಲೇಜಿನಲ್ಲಿ 865 ಮಂದಿ ಸಾವನ್ನಪ್ಪಿದ್ದಾರೆ. ಇವರ ಪೈಕಿ 501ಮಂದಿ ಡಯಾಬೀಟೀಸ್, ಒಬೆಸಿಟಿ, ಹೈಪರ್ ಟೆನ್ಷನ್ ಆರೋಗ್ಯ ಸಮಸ್ಯೆ ಹೊಂದಿದ್ದವರು.
ಇದೇ ರೀತಿ ಲೂಧಿಯಾನದಲ್ಲಿ ಈ ವರ್ಷ 625 ಮಂದಿ ಸಾವನ್ನಪ್ಪಿದ್ದಾರೆ. ಇವರ ಪೈಕಿ 327 ಮಂದಿಯಲ್ಲಿ ಮೂರು ರೀತಿಯ ಆರೋಗ್ಯ ಸಮಸ್ಯೆಗಳಿದ್ದವು. ಇನ್ನೂ ಫರೀದ್ ಕೋಟ್ ಜಿಲ್ಲೆಯಲ್ಲಿ 284 ಮಂದಿ ಸಾವನ್ನಪ್ಪಿದ್ದಾರೆ. ಇವರ ಪೈಕಿ 190 ಮಂದಿ ಡಯಾಬೀಟೀಸ್, ಒಬೆಸಿಟಿ, ಹೈಪರ್ ಟೆನ್ಷನ್ ಆರೋಗ್ಯ ಸಮಸ್ಯೆ ಇದ್ದವು. ಅಮೃತಸರ್ ಜಿಲ್ಲೆಯಲ್ಲಿ 502 ಜನರು ಕೊರೊನಾದಿಂದ ಸಾವನ್ನಪ್ಪಿದ್ದು, 274 ಮಂದಿಯಲ್ಲಿ ಡಯಾಬೀಟೀಸ್, ಒಬೆಸಿಟಿ, ಹೈಪರ್ ಟೆನ್ಷನ್ ಆರೋಗ್ಯ ಸಮಸ್ಯೆ ಇದ್ದವು.
ವೈದ್ಯರು ಹೇಳುವ ಪ್ರಕಾರ, ಪಂಜಾಬ್ ರಾಜ್ಯದ ಜನರು, ಕೊಬ್ಬಿನಂಶ ಇರುವ ಆಹಾರವನ್ನು ಹೆಚ್ಚಾಗಿ ಸೇವಿಸುತ್ತಾರೆ. ಜೊತೆಗೆ ಉಪ್ಪು, ಸಕ್ಕರೆಯನ್ನು ಹೆಚ್ಚಾಗಿ ಸೇವಿಸುತ್ತಾರೆ. ಇದರಿಂದಾಗಿ ಜನರಲ್ಲಿ ಒಬೆಸಿಟಿ, ಡಯಾಬೀಟೀಸ್, ಹೈಪರ್ ಟೈನ್ಷನ್ ನಂಥ ಆರೋಗ್ಯ ಸಮಸ್ಯೆಗಳು ಶುರುವಾಗಿವೆ. 2019ರಲ್ಲಿ ಸ್ನಾತಕೋತ್ತರ ವೈದ್ಯಕೀಯ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆಯ ಅಧ್ಯಯನ ಪ್ರಕಾರ, ಪಂಜಾಬ್ ರಾಜ್ಯದಲ್ಲಿ 10 ಜನರ ಪೈಕಿ ನಾಲ್ವರು ಹೈಪರ್ ಟೆನ್ಷನ್ ನಿಂದ ಬಳಲುತ್ತಿದ್ದಾರೆ.
ಇದರಿಂದಾಗಿ ದೇಶದಲ್ಲಿ ಅತಿ ಹೆಚ್ಚು ಹೈಪರ್ ಟೆನ್ಷನ್ ರೋಗಿಗಳು ಇರುವ ರಾಜ್ಯಗಳಲ್ಲಿ ಪಂಜಾಬ್ ರಾಜ್ಯ ಪ್ರಮುಖವಾದುದು. ಜೊತೆಗೆ ಪಂಜಾಬ್ ಜನಸಂಖ್ಯೆಯ ಶೇ.40 ರಷ್ಟು ಜನರು ಒಬೆಸಿಟಿಯಿಂದ ಅಥವಾ ಹೆಚ್ಚಿನ ತೂಕದಿಂದ ಬಳಲುತ್ತಿದ್ದಾರೆ. ಇನ್ನೂ ಪಂಜಾಬ್ ನಲ್ಲಿ ಶೇ.5 ರಷ್ಟು ಜನರು ಡಯಾಬೀಟೀಸ್ ನಿಂದ ಬಳಲುತ್ತಿದ್ದಾರೆ. ಇದು ಕೂಡ ರಾಷ್ಟ್ರೀಯ ಸರಾಸರಿಗಿಂತ ಹೆಚ್ಚು.
ಪಂಜಾಬ್ ರಾಜ್ಯದಲ್ಲಿ ಹೆಚ್ಚಿನ ಕೊರೊನಾ ಸಾವು ಸಂಭವಿಸಲು ಜನರು ತಡವಾಗಿ ಆಸ್ಪತ್ರೆಗೆ ದಾಖಲಾಗಿದ್ದು ಕಾರಣ. ಜೊತೆಗೆ ಕೊರೊನಾ ಲಸಿಕೆ ಪಡೆಯಲು ಹಿಂದೇಟು ಹಾಕಿದ್ದರು. ಚಿಕಿತ್ಸೆಗಾಗಿ ಮಧ್ಯವರ್ತಿಗಳ ಅವಲಂಬನೆ, ಸಮಯಕ್ಕೆ ಸರಿಯಾಗಿ ಕೊರೊನಾ ಟೆಸ್ಟಿಂಗ್ ಮಾಡಿಸಿಕೊಳ್ಳದೇ ಇರೋದು, ಕೊರೊನಾ ವೈರಸ್ ಹಣ ಮಾಡಲು ಮಾಡಿರುವ ಷಡ್ಯಂತ್ರ ಎಂಬ ಧೋರಣೆಯಿಂದ ಹೆಚ್ಚಿನ ಜನರು ಸಾವನ್ನಪ್ಪಿದ್ದಾರೆ. ಜೊತೆಗೆ ಪಂಜಾಬ್ ನಲ್ಲಿ ಪ್ರಾಮಾಣಿಕವಾಗಿ ಕೊರೊನಾ ಸಾವುಗಳನ್ನು ವರದಿ ಮಾಡಲಾಗಿದೆ ಎಂದು ಅಧಿಕಾರಿಗಳು ಹೇಳ್ತಾರೆ. ಇದರಿಂದಾಗಿಯೂ ಕೂಡ ಕೊರೊನಾದ ಶೇಕಡಾವಾರು ಪ್ರಮಾಣ ಶೇ.2.7 ರಷ್ಟಿದೆ ಅಂತಾರೆ ಅಧಿಕಾರಿಗಳು.
ಪಂಜಾಬ್ ನ ಆರೋಗ್ಯ ಇಲಾಖೆಯ ಸಲಹೆಗಾರರಾದ ಡಾ.ಕೆ.ಕೆ.ತಲವಾರ್ ಹೇಳುವ ಪ್ರಕಾರ, ಪಂಜಾಬ್ ನಲ್ಲಿ ಕೊರೊನಾದಿಂದ ಹೆಚ್ಚಿನ ಶೇಕಡಾವಾರು ಸಾವು ಸಂಭವಿಸಿರುವುದು ಸತ್ಯ ಆದರೆ ಇದಕ್ಕೆ ಹೈ ರಿಸ್ಕ್ ಜನಸಂಖ್ಯೆ ಇರೋದು ಕಾರಣ. ಪಂಜಾಬ್ ಜನರಲ್ಲಿ ಒಬೆಸಿಟಿ, ಡಯಾಬೀಟೀಸ್, ಹೈಪರ್ ಟೆನ್ಷನ್ ಆರೋಗ್ಯ ಸಮಸ್ಯೆಗಳಿವೆ. ಜನರ ಆಹಾರ ಪದ್ದತಿ, ಜೀವನಶೈಲಿ, ವ್ಯಾಯಾಮ ಮಾಡದೇ ಇರುವುದು, ಇವೆಲ್ಲವೂ ಗೊತ್ತಿರುವ ಸತ್ಯಗಳು. ಇವುಗಳಿಂದಾಗಿಯೇ ಪಂಜಾಬ್ ನಲ್ಲಿ ಹೆಚ್ಚಿನ ಶೇಕಡಾವಾರು ಕೊರೊನಾ ಸಾವು ಸಂಭವಿಸಿದ ಎಂದು ಕೆ.ಕೆ.ತಲವಾರ್ ಹೇಳಿದ್ದಾರೆ.
ಇನ್ನೂ ದಯಾನಂದ ಮೆಡಿಕಲ್ ಕಾಲೇಜಿನ ಕಾರ್ಡಿಯಾಲಜಿಸ್ಟ್ ಆಗಿರುವ ಡಾ.ಬಿಸ್ವಾ ಮೋಹನ್ ಹೇಳುವ ಪ್ರಕಾರ, ಆಸ್ಪತ್ರೆಗೆ ಬರುವ ಬಹುತೇಕ ರೋಗಿಗಳಲ್ಲಿ ಒಬೆಸಿಟಿ ಜೊತೆಗೆ ಅನಿಯಂತ್ರಿತ ಡಯಾಬೀಟೀಸ್ ಇರುತ್ತೆ. ಇದರಿಂದಾಗಿ ಕೊರೊನಾದಿಂದ ಗುಣಮುಖವಾಗಲು ಅಡ್ಡಿಯಾಗುತ್ತಿದೆ. ಜನರು ಸಕ್ಕರೆ ಅಂಶ ಸೇವನೆ ಕಡಿಮೆ ಮಾಡಲು ಬಯಸಲ್ಲ. ಬೆಣ್ಣೆ, ತುಪ್ಪ, ಎಣ್ಣೆಯ ಆಹಾರವನ್ನು ಅಗತ್ಯಕ್ಕಿಂತ ಹೆಚ್ಚಾಗಿ ಸೇವಿಸುತ್ತಾರೆ. ಇದರಿಂದಾಗಿ ಆರೋಗ್ಯದ ಸಮಸ್ಯೆಗಳು ಎದುರಾಗುತ್ತಾವೆ ಎಂದು ಬಿಸ್ವಾ ಮೋಹನ್ ಹೇಳಿದ್ದಾರೆ. ಹೈ ರಿಸ್ಕ್ ರೋಗಿಗಳಿಗೆ ಕೊರೊನಾ ಸೋಂಕು ತಗುಲಿದಾಗ, ಗುಣಮುಖ ಆಗುವ ಸಾಧ್ಯತೆ ಕಡಿಮೆ ಎಂದು ಬಿಸ್ವಾ ಮೋಹನ್ ಹೇಳಿದ್ದಾರೆ.
ಹೀಗಾಗಿ ಪಂಜಾಬ್ ರಾಜ್ಯದ ಜನರು ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಉತ್ತಮ ಆಹಾರ ಪದ್ದತಿಯನ್ನು ಆಳವಡಿಸಿಕೊಳ್ಳಬೇಕು. ವ್ಯಾಯಾಮ ಮಾಡಬೇಕು. ಕೊಬ್ಬಿನಾಂಶದ ಆಹಾರ ತ್ಯಜಿಸಬೇಕು. ನಾಲಿಗೆ ರುಚಿಗೆ ಸೇವಿಸಿದ ಸಕ್ಕರೆ ಅಂಶವೇ ಜನರ ಜೀವ ಬಲಿ ಪಡೆಯುತ್ತೆ ಎನ್ನುವುದನ್ನು ಮರೆಯಬಾರದು. ನಾಲಿಗೆ ಸಿಹಿಯೇ ಜೀವಕ್ಕೆ ಕಹಿ ಆಗಬಾರದು.
(coronavirus patient deaths more in punjab medical fraternity in distress)
Published On - 3:49 pm, Sat, 19 June 21