ಟಿಎಂಸಿಯಲ್ಲೇ ಇದ್ದಿದ್ದರೆ ನನ್ನ ಕೊಲ್ಲುತ್ತಿದ್ದರು; ಮಮತಾ ಬ್ಯಾನರ್ಜಿ ವಿರುದ್ಧ ಸುಖೇಂದು ಶೇಖರ್ ರಾಯ್ ಗಂಭೀರ ಆರೋಪ

ಟಿಎಂಸಿ ಹಿರಿಯ ನಾಯಕ ಹಾಗೂ ಮಾಜಿ ರಾಜ್ಯಸಭಾ ಸಂಸದ ಸುಖೇಂದು ಶೇಖರ್ ರಾಯ್ ಅವರು ಪಕ್ಷದಿಂದ ಹೊರನಡೆದ ಕೆಲವೇ ದಿನಗಳಲ್ಲಿ ಮಮತಾ ಬ್ಯಾನರ್ಜಿ ನೇತೃತ್ವದ ಆಡಳಿತಾರೂಢ ಪಕ್ಷದ ವಿರುದ್ಧ ಗಂಭೀರ ಮತ್ತು ಆಘಾತಕಾರಿ ಆರೋಪಗಳನ್ನು ಮಾಡಿದ್ದಾರೆ. ಅತ್ಯಾಚಾರಿಗಳು, ಕೊಲೆಗಡುಕರು, ರೌಡಿಶೀಟರ್​​ಗಳು ಇರುವ ಪಕ್ಷದಲ್ಲಿ ನನಗೆ ಜೀವ ಭಯವಿತ್ತು. ನಾನೇನಾದರೂ ಟಿಎಂಸಿ ಪಕ್ಷದಲ್ಲಿಯೇ ಇದ್ದಿದ್ದರೆ ನನ್ನನ್ನು ಕೊಲ್ಲಲಾಗುತ್ತಿತ್ತು ಎಂದು ಹೇಳುವ ಮೂಲಕ ಪಶ್ಚಿಮ ಬಂಗಾಳದ ರಾಜಕೀಯ ವಲಯದಲ್ಲಿ ಅವರು ಭಾರಿ ವಿವಾದ ಎಬ್ಬಿಸಿದ್ದಾರೆ.

ಟಿಎಂಸಿಯಲ್ಲೇ ಇದ್ದಿದ್ದರೆ ನನ್ನ ಕೊಲ್ಲುತ್ತಿದ್ದರು; ಮಮತಾ ಬ್ಯಾನರ್ಜಿ ವಿರುದ್ಧ ಸುಖೇಂದು ಶೇಖರ್ ರಾಯ್ ಗಂಭೀರ ಆರೋಪ
Sukhendu Sekhar Roy
Image Credit source: ANI

Updated on: Jun 09, 2026 | 3:29 PM

ಕೊಲ್ಕತ್ತಾ, ಜೂನ್ 9: ಪಶ್ಚಿಮ ಬಂಗಾಳದ ರಾಜಕಾರಣದಲ್ಲಿ ಟಿಎಂಸಿ ಮಾಜಿ ನಾಯಕ ಸುಖೇಂದು ಶೇಖರ್ ರಾಯ್ ಅವರ ಹೇಳಿಕೆ ಭಾರಿ ಸಂಚಲನ ಮೂಡಿಸಿದೆ. ತೃಣಮೂಲ ಕಾಂಗ್ರೆಸ್ (TMC) ಪಕ್ಷದ ಮಾಜಿ ಹಿರಿಯ ನಾಯಕ ಸುಖೇಂದು ಶೇಖರ್ ರಾಯ್ ಅವರ ಸ್ಫೋಟಕ ಹೇಳಿಕೆ ಭಾರೀ ಚರ್ಚೆಗೆ ಕಾರಣವಾಗಿದೆ. “ನಾನು ಟಿಎಂಸಿಯಲ್ಲೇ ಇದ್ದಿದ್ದರೆ ಸುಪಾರಿ ಕಿಲ್ಲರ್​​ಗಳು ನನ್ನನ್ನು ಕೊಲ್ಲುವ ಸಾಧ್ಯತೆಯಿತ್ತು!” ಎಂದು ಟಿಎಂಸಿ ತೊರೆದ ಕೆಲವೇ ದಿನಗಳಲ್ಲಿ ಮಮತಾ ಬ್ಯಾನರ್ಜಿ ಪಕ್ಷದ ವಿರುದ್ಧ ಸುಖೇಂದು ಶೇಖರ್ ರಾಯ್ ಆರೋಪ ಮಾಡಿದ್ದಾರೆ.

ದೀರ್ಘಕಾಲ ಟಿಎಂಸಿ ಪಕ್ಷದ ಪ್ರಮುಖ ಧ್ವನಿಯಾಗಿದ್ದ ಸುಖೇಂದು ಶೇಖರ್ ರಾಯ್ ಅವರು ಇತ್ತೀಚೆಗೆ ಪಕ್ಷಕ್ಕೆ ಮತ್ತು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಇದೀಗ ಮಾಧ್ಯಮಗಳ ಮುಂದೆ ಮುಕ್ತವಾಗಿ ಮಾತನಾಡಿರುವ ಅವರು, ಪಕ್ಷದ ಒಳಗಿನ ಕೆಲವು ಶಕ್ತಿಗಳಿಂದ ತಮಗೆ ಜೀವಭಯವಿತ್ತು ಎಂದು ಬಹಿರಂಗಪಡಿಸಿದ್ದಾರೆ. “ನಾನು ಪಕ್ಷದ ಕೆಲವು ನಿರ್ಧಾರಗಳು ಮತ್ತು ಭ್ರಷ್ಟಾಚಾರದ ವಿರುದ್ಧ ಧ್ವನಿ ಎತ್ತಲು ಆರಂಭಿಸಿದಾಗಿನಿಂದ ನನ್ನನ್ನು ಟಾರ್ಗೆಟ್ ಮಾಡಲಾಗಿತ್ತು. ನಾನು ಪಕ್ಷದಲ್ಲೇ ಮುಂದುವರಿದಿದ್ದರೆ ನನ್ನನ್ನು ಕೊಲ್ಲುವ ಸಾಧ್ಯತೆಯಿತ್ತು. ನನ್ನ ಸುರಕ್ಷತೆಗಾಗಿ ಮತ್ತು ಆತ್ಮಸಾಕ್ಷಿಯ ಕರೆಗೆ ಓಗೊಟ್ಟು ನಾನು ಪಕ್ಷದಿಂದ ಹೊರಬರಬೇಕಾಯಿತು” ಎಂದು ಅವರು ಸ್ಫೋಟಕ ಹೇಳಿಕೆ ನೀಡಿದ್ದಾರೆ.

ಇದನ್ನೂ ಓದಿ: ಮಮತಾ ಬ್ಯಾನರ್ಜಿಗೆ ದೊಡ್ಡ ಶಾಕ್; 20 ಟಿಎಂಸಿ ಸಂಸದರಿಂದ ಸ್ಪೀಕರ್‌ಗೆ ಪತ್ರ, ಎನ್​ಡಿಎ ಸೇರ್ಪಡೆ ಸಾಧ್ಯತೆ

ಟಿಎಂಸಿ ಪಕ್ಷದಲ್ಲಿ ಪ್ರಜಾಪ್ರಭುತ್ವವೇ ಉಳಿದಿಲ್ಲ, ಹಿರಿಯ ನಾಯಕರ ಆಲೋಚನೆಗಳಿಗೆ ಮತ್ತು ಸಲಹೆಗಳಿಗೆ ಯಾವುದೇ ಬೆಲೆ ಇಲ್ಲದಂತಾಗಿದೆ. ಕೇವಲ ಕೆಲವು ವ್ಯಕ್ತಿಗಳ ಹಿತಾಸಕ್ತಿಗಾಗಿ ಇಡೀ ಪಕ್ಷ ಕೆಲಸ ಮಾಡುತ್ತಿದೆ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.


ಕೊಲ್ಕತ್ತಾದ ಆರ್‌ಜಿ ಕರ್ ವೈದ್ಯಕೀಯ ಕಾಲೇಜು ಆಸ್ಪತ್ರೆಯ ಅತ್ಯಾಚಾರ ಮತ್ತು ಕೊಲೆ ಪ್ರಕರಣ ನಡೆದಾಗ, ಸುಖೇಂದು ಶೇಖರ್ ರಾಯ್ ಕೊಲ್ಕತ್ತಾ ಪೊಲೀಸ್ ಕಮಿಷನರ್ ಅವರನ್ನು ವಿಚಾರಣೆಗೆ ಒಳಪಡಿಸಬೇಕು ಎಂದು ಬಹಿರಂಗವಾಗಿ ಒತ್ತಾಯಿಸಿದ್ದರು. ಇದು ಪಕ್ಷದ ನಾಯಕತ್ವದ ಆಕ್ರೋಶಕ್ಕೆ ಕಾರಣವಾಗಿತ್ತು. ಇದೇ ಆರ್​ಜಿ ಕರ್ ಪ್ರಕರಣದಲ್ಲಿ ಟಿಎಂಸಿ ತೋರಿದ ನಿರ್ಲಕ್ಷ್ಯ ಧೋರಣೆಯೂ ಸುಖೇಂದು ಅವರ ರಾಜೀನಾಮೆಗೆ ಮುಖ್ಯ ಕಾರಣ.

ಇದನ್ನೂ ಓದಿ: ಬಂಗಾಳದಲ್ಲಿ ಮಮತಾ ಬ್ಯಾನರ್ಜಿಗೆ ಶಾಕ್; ಟಿಎಂಸಿಯಿಂದ ಉಚ್ಚಾಟಿತರಾಗಿದ್ದ ರಿತಬ್ರತಾ ಬ್ಯಾನರ್ಜಿ ಈಗ ಪ್ರತಿಪಕ್ಷ ನಾಯಕ!

ಸುಖೇಂದು ಶೇಖರ್ ರಾಯ್ ಅವರ ಈ ಗಂಭೀರ ಆರೋಪಗಳನ್ನು ತೃಣಮೂಲ ಕಾಂಗ್ರೆಸ್ ತಳ್ಳಿಹಾಕಿದೆ. ಅವರಿಗೆ ವಯಸ್ಸಾಗಿರುವುದರಿಂದ ಮತ್ತು ವೈಯಕ್ತಿಕ ಹತಾಶೆಯಿಂದ ಇಂತಹ ಸುಳ್ಳು ಆರೋಪಗಳನ್ನು ಮಾಡುತ್ತಿದ್ದಾರೆ ಎಂದು ಟಿಎಂಸಿ ವಕ್ತಾರರು ಹೇಳಿದ್ದಾರೆ. ಇದೇ ವೇಳೆ, ಪಶ್ಚಿಮ ಬಂಗಾಳದ ವಿರೋಧ ಪಕ್ಷವಾದ ಬಿಜೆಪಿ ಸುಖೇಂದು ಅವರ ಹೇಳಿಕೆಯನ್ನು ಅಸ್ತ್ರವಾಗಿ ಬಳಸಿಕೊಂಡಿದೆ. “ಟಿಎಂಸಿ ಪಕ್ಷವು ಸಮಾಜವಿರೋಧಿಗಳು ಮತ್ತು ಅಪರಾಧಿಗಳ ಅಡ್ಡಯಾಗಿದೆ ಎಂಬುದಕ್ಕೆ ಅವರದೇ ಪಕ್ಷದ ಹಿರಿಯ ನಾಯಕರ ಹೇಳಿಕೆಯೇ ಸಾಕ್ಷಿ” ಎಂದು ಬಿಜೆಪಿ ನಾಯಕರು ಟೀಕಿಸಿದ್ದಾರೆ.

 

ಸುಖೇಂದು ರಾಯ್ ಅವರು ಮಾಡಿರುವ ‘ಜೀವಭಯ’ದ ಹೇಳಿಕೆಯ ಬೆನ್ನಲ್ಲೇ ಅವರಿಗೆ ಕೇಂದ್ರ ಸಚಿವಾಲಯದಿಂದ ಸೂಕ್ತ ಭದ್ರತೆ ಒದಗಿಸಬೇಕು ಎಂಬ ಒತ್ತಾಯ ಕೇಳಿಬರುತ್ತಿದೆ. ಬಂಗಾಳದ ರಾಜಕಾರಣದ ಅತ್ಯಂತ ಪ್ರಭಾವಿ ಹಾಗೂ ಹಿರಿಯ ರಾಜಕಾರಣಿಯೊಬ್ಬರು ಆಡಳಿತ ಪಕ್ಷದ ವಿರುದ್ಧವೇ ಈ ಮಟ್ಟದ ಸ್ಫೋಟಕ ಹೇಳಿಕೆ ನೀಡಿರುವುದು ಮುಂಬರುವ ಚುನಾವಣೆಗಳ ದೃಷ್ಟಿಯಿಂದ ತೃಣಮೂಲ ಕಾಂಗ್ರೆಸ್‌ಗೆ ಭಾರಿ ಮುಖಭಂಗ ಉಂಟುಮಾಡಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Published On - 3:28 pm, Tue, 9 June 26

ಸುಷ್ಮಾ ಚಕ್ರೆ

ಮೂಲತಃ ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದವಳು. ಬೆಂಗಳೂರಿನಲ್ಲಿ ವಾಸ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದೇನೆ. 10 ವರ್ಷಗಳಿಂದ ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡ, ಟಿವಿ9 ಡಿಜಿಟಲ್ ವಿಭಾಗದಲ್ಲಿ ಕೆಲಸ ಮಾಡಿದ ಅನುಭವವಿದೆ. ಸಾಹಿತ್ಯ, ಸಂಗೀತ, ಸಿನಿಮಾ, ಬರವಣಿಗೆಯಲ್ಲಿ ಆಸಕ್ತಿ.

Read More
Follow Us