Covid-19: ಚೀನಾ ಸೇರಿ 5 ದೇಶಗಳ ಅಂತಾರಾಷ್ಟ್ರೀಯ ಪ್ರಯಾಣಿಕರಿಗೆ ಆರ್ಟಿಪಿಸಿಆರ್ ಪರೀಕ್ಷೆ ಕಡ್ಡಾಯ
RT-PCR Test; ವಿದೇಶದಿಂದ ಬರುವ ಪ್ರಯಾಣಿಕರಲ್ಲಿ ಜ್ವರದ ಲಕ್ಷಣ ಇದ್ದರೆ ಅಂತಹ ಪ್ರಯಾಣಿಕರನ್ನು ಕ್ವಾರಂಟೈನ್ ಮಾಡಲು ಸೂಚನೆ ನೀಡಲಾಗಿದೆ. ವಿಮಾನ ನಿಲ್ದಾಣಗಳಲ್ಲಿ ಪ್ರಯಾಣಿಕರು ಮಾಸ್ಕ್ ಧರಿಸುವುದನ್ನು ಕಡ್ಡಾಯಗೊಳಿಸಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ.
ನವದೆಹಲಿ: ಕೆಲವು ದೇಶಗಳಲ್ಲಿ ಕೋವಿಡ್-19 (Covid-19) ಸಾಂಕ್ರಾಮಿಕ ಮತ್ತೆ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿರುವ ಕಾರಣ ಎಚ್ಚರಿಕೆಯ ಹೆಜ್ಜೆ ಇಟ್ಟಿರುವ ಕೇಂದ್ರ ಸರ್ಕಾರ ಚೀನಾ ಸೇರಿದಂತೆ 5 ದೇಶಗಳಿಂದ ಬರುವ ಪ್ರಯಾಣಿಕರಿಗೆ ಆರ್ಟಿಪಿಸಿಆರ್ ಪರೀಕ್ಷೆ (RT-PCR Test) ಕಡ್ಡಾಯಗೊಳಿಸಿದೆ. ಈ ವಿಚಾರವಾಗಿ ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವೀಯ (Mansukh Mandaviya) ಮಾಹಿತಿ ನೀಡಿದ್ದಾರೆ. ಚೀನಾ, ಹಾಂಕಾಂಗ್, ಜಪಾನ್, ದಕ್ಷಿಣ ಕೊರಿಯಾ, ಥಾಯ್ಲೆಂಡ್ಗಳಿಂದ ಬರುವ ಅಂತಾರಾಷ್ಟ್ರೀಯ ಪ್ರಯಾಣಿಕರಿಗೆ ಆರ್ಟಿಪಿಸಿಆರ್ ಪರೀಕ್ಷೆ ಕಡ್ಡಾಯಗೊಳಿಸಲಾಗಿದೆ. ಸೋಂಕು ಹೆಚ್ಚಿರುವ ಇತರ ದೇಶಗಳಿಂದ ಬರುವವರನ್ನೂ ಪರೀಕ್ಷೆಗೆ ಒಳಪಡಿಸಲು ಸೂಚಿಸಲಾಗಿದೆ ಎಂದು ಮಾಂಡವೀಯ ತಿಳಿಸಿದ್ದಾರೆ.
ವಿದೇಶದಿಂದ ಬರುವ ಪ್ರಯಾಣಿಕರಲ್ಲಿ ಜ್ವರದ ಲಕ್ಷಣ ಇದ್ದರೆ ಅಂತಹ ಪ್ರಯಾಣಿಕರನ್ನು ಕ್ವಾರಂಟೈನ್ ಮಾಡಲು ಸೂಚನೆ ನೀಡಲಾಗಿದೆ. ವಿಮಾನ ನಿಲ್ದಾಣಗಳಲ್ಲಿ ಪ್ರಯಾಣಿಕರು ಮಾಸ್ಕ್ ಧರಿಸುವುದನ್ನು ಕಡ್ಡಾಯಗೊಳಿಸಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ. ಕೋವಿಡ್ ಪ್ರಕರಣಗಳು ಹೆಚ್ಚಿರುವ ಈ ದೇಶಗಳಿಂದ ಬರುವ ಅಂತಾರಾಷ್ಟ್ರೀಯ ಪ್ರಯಾಣಿಕರು ‘ಏರ್ ಸುವಿಧಾ’ದಲ್ಲಿ ಸದ್ಯದ ಆರೋಗ್ಯ ಸ್ಥಿತಿಯ ಬಗ್ಗೆ ಕಡ್ಡಾಯವಾಗಿ ಮಾಹಿತಿ ನೀಡಬೇಕು ಎಂದೂ ಅವರು ಹೇಳಿದ್ದಾರೆ.
ಇದನ್ನೂ ಓದಿ: China Covid ಈ ವಾರ ಒಂದೇ ದಿನ ಚೀನಾದಲ್ಲಿ ಸುಮಾರು 3.7 ಕೋಟಿ ಜನರಿಗೆ ಕೋವಿಡ್?
ಚೀನಾ ಸೇರಿದಂತೆ ಹಲವು ದೇಶಗಳಲ್ಲಿ ಕೊರೊನಾ ಸೋಂಕು ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವ ನಿಟ್ಟಿನಲ್ಲಿ ಮನ್ಸುಖ್ ಮಾಂಡವೀಯ ಎಲ್ಲಾ ರಾಜ್ಯಗಳ ಆರೋಗ್ಯ ಸಚಿವರ ಜತೆ ಶುಕ್ರವಾರ ಸಭೆ ನಡೆಸಿದ್ದರು. ಚೀನಾದಲ್ಲಿ ಕೊರೊನಾ ಸೋಂಕು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ, ದೇಶದಲ್ಲೂ ಕಟ್ಟುನಿಟ್ಟಿನ ಕ್ರಮಕ್ಕೆ ಸರ್ಕಾರ ಮುಂದಾಗಿದೆ. ವಿದೇಶದಿಂದ ಬರುವವರಿಗೆ ಕಡ್ಡಾಯವಾಗಿ ಆರ್ಟಿ-ಪಿಸಿಆರ್ ಪರೀಕ್ಷೆ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ಸಭೆಯಲ್ಲಿ ತಿಳಿಸಿದ್ದರು.
ಬೆಂಗಳೂರು ಸೇರಿ ವಿವಿಧ ವಿಮಾನ ನಿಲ್ದಾಣಗಳಲ್ಲಿ ಕೋವಿಡ್ ಪರೀಕ್ಷೆ
ದೆಹಲಿ, ಚೆನ್ನೈ, ಬೆಂಗಳೂರು ಸೇರಿದಂತೆ ದೇಶದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳಲ್ಲಿ ಪ್ರಯಾಣಿಕರನ್ನು ರ‍್ಯಾಂಡಮ್ ಆಗಿ ಕೋವಿಡ್ ಪರೀಕ್ಷೆಗೆ ಒಳಪಡಿಸಲು ಆರಂಭಿಸಲಾಗಿದೆ. ಹೊಸ ಮಾರ್ಗಸೂಚಿಯ ಪ್ರಕಾರ, ವಿದೇಶಗಳಿಂದ ಬರುವ ಪ್ರಯಾಣಿಕರ ಶೇಕಡಾ 2ರಷ್ಟು ಮಂದಿಯನ್ನು ರ‍್ಯಾಂಡಮ್ ಆಗಿ ಕೋವಿಡ್ ಪರೀಕ್ಷೆಗೆ ಒಳಪಡಿಸಬೇಕಿದೆ. ಈ ಕುರಿತು ಕ್ರಮ ಕೈಗೊಳ್ಳಲಾಗಿದೆ ಎಂದು ದೆಹಲಿ, ಹೈದರಾಬಾದ್, ಬೆಂಗಳೂರು, ಚೆನ್ನೈ, ಅಹಮದಾಬಾದ್, ಪುಣೆ, ಇಂದೋರ್ ಹಾಗೂ ಗೋವಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳ ಅಧಿಕಾರಿಗಳು ತಿಳಿಸಿದ್ದಾರೆ.
ದೇಶದಲ್ಲಿರುವ 29 ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳ ಮೂಲಕ ಡಿಸೆಂಬರ್ 23ರಂದು 87,966 ಪ್ರಯಾಣಿಕರು ವಿದೇಶಗಳಿಂದ ಬಂದಿದ್ದಾರೆ ಎಂದು ನಾಗರಿಕ ವಿಮಾನಯಾನ ಸಚಿವಾಲಯ ತಿಳಿಸಿದೆ.
ದೇಶದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 1:18 pm, Sat, 24 December 22