ಮುಂಬೈನಲ್ಲಿ ಕೊರೊನಾ ಮತ್ತೆ ವಿಪರೀತ; ಪಾಸಿಟಿವಿಟಿ ರೇಟ್​ ಶೇ.24.3ಕ್ಕೆ ಏರಿಕೆ, ಸಾವಿನ ಸಂಖ್ಯೆಯಲ್ಲೂ ಹೆಚ್ಚಳ

ಪ್ರಸ್ತುತ, ದಿನವೊಂದಕ್ಕೆ 400 ಮೆಟ್ರಿಕ್​ ಟನ್​ಗಳಷ್ಟು ವೈದ್ಯಕೀಯ ಆಕ್ಸಿಜನ್ ಬಳಕೆಯಾಗುತ್ತಿದೆ. ಅದು 700 ಮೆಟ್ರಿಕ್​ ಟನ್​​ಗೆ ಏರಿಕೆಯಾದರೆ, ರಾಜ್ಯದಲ್ಲಿ ಮತ್ತಷ್ಟು ಕಠಿಣ ನಿರ್ಬಂಧ ಅನಿವಾರ್ಯ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಕಚೇರಿ ಹೇಳಿದೆ. 

ಮುಂಬೈನಲ್ಲಿ ಕೊರೊನಾ ಮತ್ತೆ ವಿಪರೀತ; ಪಾಸಿಟಿವಿಟಿ ರೇಟ್​ ಶೇ.24.3ಕ್ಕೆ ಏರಿಕೆ, ಸಾವಿನ ಸಂಖ್ಯೆಯಲ್ಲೂ ಹೆಚ್ಚಳ
ಸಾಂಕೇತಿಕ ಚಿತ್ರ

ಮುಂಬೈನಲ್ಲಿ ಕಳೆದ ನಾಲ್ಕು ದಿನಗಳಿಂದಲೂ ದಿನದಲ್ಲಿ ಪತ್ತೆಯಾಗುವ ಕೊರೊನಾ ಸೋಂಕಿನ ಸಂಖ್ಯೆ ಕಡಿಮೆಯಾಗಿ, ಸ್ವಲ್ಪ ನಿರಾಳತೆ ಸೃಷ್ಟಿಸಿತ್ತು. ಆದರೆ ಬುಧವಾರ ಒಂದೇ ದಿನ  16,420 ಕೊರೊನಾ ಸೋಂಕಿನ ಪ್ರಕರಣಗಳು ದಾಖಲಾಗಿವೆ.  ದೈನಂದಿನ ಪಾಸಿಟಿವಿಟಿ ದರ ಕೂಡ ಹೆಚ್ಚಾಗಿದೆ. ಮಂಗಳವಾರ 18.6 ಪರ್ಸೆಂಟ್​ ಇದ್ದ ಪಾಸಿಟಿವಿಟಿ ರೇಟ್​​ ಬುಧವಾರ 24.3 ಕ್ಕೆ ಏರಿಕೆಯಾಗಿದೆ. ಮಹಾರಾಷ್ಟ್ರದಲ್ಲಿ ಕೂಡ ಬುಧವಾರ 46,723 ಕೇಸ್​ಗಳು ದಾಖಲಾಗಿವೆ. ಮಂಗಳವಾರ 34,424 ಕೊರೊನಾ ಕೇಸ್​ಗಳು ದಾಖಲಾಗಿದ್ದವು. ಮಂಗಳವಾರ 22 ಮಂದಿ ಸತ್ತಿದ್ದರೆ, ಬುಧವಾರ 32 ಜನರು ಕೊರೊನಾದಿಂದ ಸತ್ತಿದ್ದಾರೆ. ಸೋಮವಾರ 8 ಮಂದಿ ಮೃತಪಟ್ಟಿದ್ದರು.

ಇನ್ನು ಜನರು ಕೊರೊನಾ ಮುನ್ನೆಚ್ಚರಿಕೆ ಕ್ರಮ ಅನುಸರಿಸುವಲ್ಲಿ ನಿರ್ಲಕ್ಷ್ಯ ತೋರುತ್ತಿರುವುದರ ವಿರುದ್ಧ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಖಡಕ್​ ಎಚ್ಚರಿಕೆ ನೀಡಿದ್ದಾರೆ. ಹೀಗೆ ಮುಂದುವರಿದರೆ ಜನವರಿ ಕೊನೇ ವಾರ ಅಥವಾ ಫೆಬ್ರವರಿ ಮೊದಲ ವಾರದ ಹೊತ್ತಿಗೆ ರಾಜ್ಯದಲ್ಲಿ ಕೊರೊನಾ ಸೋಂಕಿನ ಪ್ರಕರಣಗಳ ಸಂಖ್ಯೆ ಇನ್ನಷ್ಟು ಮಿತಿಮೀರುತ್ತದೆ. ಅಷ್ಟೇ ಅಲ್ಲ, ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆಯೂ ಅತ್ಯಂತ ಹೆಚ್ಚಾಗುತ್ತದೆ ಎಂದು ಹೇಳಿದ್ದಾರೆ. ರಾಜ್ಯದಲ್ಲಿ ವೈದ್ಯಕೀಯ ಆಮ್ಲಜನಕದ ಬಳಕೆ ನಿಧಾನವಾಗಿ ಅಧಿಕವಾಗುತ್ತಿದೆ. ಪ್ರಸ್ತುತ, ದಿನವೊಂದಕ್ಕೆ 400 ಮೆಟ್ರಿಕ್​ ಟನ್​ಗಳಷ್ಟು ವೈದ್ಯಕೀಯ ಆಕ್ಸಿಜನ್ ಬಳಕೆಯಾಗುತ್ತಿದೆ. ಅದು 700 ಮೆಟ್ರಿಕ್​ ಟನ್​​ಗೆ ಏರಿಕೆಯಾದರೆ, ರಾಜ್ಯದಲ್ಲಿ ಮತ್ತಷ್ಟು ಕಠಿಣ ನಿರ್ಬಂಧ ಅನಿವಾರ್ಯ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಕಚೇರಿ ಹೇಳಿದೆ.

ಜನವರಿ 7ರಂದು ಮುಂಬೈನಲ್ಲಿ 20,971 ಕೊರೊನಾ ಸೋಂಕಿನ ಕೇಸ್​ಗಳು ದಾಖಲಾಗಿದ್ದವು. ಅದು ಜನವರಿ 8ರಂದು 20,318ಕ್ಕೆ ಇಳಿಯಿತು. ನಂತರ ಜ.9ರಂದು 19,474ಕ್ಕೆ, ಜನವರಿ 10ರಂದು 13,648ಕ್ಕೆ ಇಳಿಕೆಯಾಯಿತು. ಅದೇ ಮಂಗಳವಾರ ಮತ್ತಷ್ಟು ಇಳಿಕೆ ಕಂಡು 11,647 ಪ್ರಕರಣಗಳು ದಾಖಲಾಗಿದ್ದವು. ಇನ್ನೇನು ಕೊರೊನಾ ಕಡಿಮೆಯಾಗುತ್ತಿದೆ ಎಂದುಕೊಳ್ಳುತ್ತಿರುವಾಗ ಬುಧವಾರ ಒಂದೇ ಸಲಕ್ಕೆ ಮತ್ತೆ 16,420 ಕೇಸ್​ಗಳು ದಾಖಲಾಗಿವೆ. ಈ ಮೂಲಕ 24 ಗಂಟೆಯಲ್ಲಿ ಶೇ.40ರಷ್ಟು ಹೆಚ್ಚಳವಾಗಿದೆ. ಸದ್ಯ ಮಹಾರಾಷ್ಟ್ರದಲ್ಲಿ 2.25 ಲಕ್ಷ ಸಕ್ರಿಯ ಪ್ರಕರಣಗಳು ಇವೆ. ಸುಮಾರು 2 ಲಕ್ಷ ಮಂದಿಯಲ್ಲಿ ಸೌಮ್ಯ ಲಕ್ಷಣಗಳು ಅಥವಾ ಲಕ್ಷಣಗಳೇ ಇಲ್ಲದಿರುವಿಕೆ ಕಂಡುಬಂದಿದೆ. ಅವರೆಲ್ಲ ಹೋಂ ಕ್ವಾರಂಟೈನ್​​ನಲ್ಲಿದ್ದಾರೆ. ಶೇ.2.8ರಷ್ಟು ರೋಗಿಗಳಿಗೆ ಗಂಭೀರ ಸ್ವರೂಪದ ಸೋಂಕಿದೆ. ಕೇವಲ ಶೇ.1ರಷ್ಟು ಕೊರೊನಾ ರೋಗಿಗಳು ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, 0.23 ಮಂದಿ ವೆಂಟಿಲೇಟರ್ ಸಪೋರ್ಟ್​​ನಲ್ಲಿದ್ದಾರೆ ಎಂದು ಆರೋಗ್ಯ ಸಚಿವ ರಾಜೇಶ್ ಟೋಪೆ ತಿಳಿಸಿದ್ದಾರೆ.

ಇದನ್ನೂ ಓದಿ: ನಂದಕಿಶೋರ್​, ಧರ್ಮ ಕೀರ್ತಿರಾಜ್​ ಫ್ರೆಂಡ್​ಶಿಪ್​ ಮೆಲುಕು; ಗೆಳೆಯನ ಚಿತ್ರಕ್ಕೆ ‘ಪೊಗರು’ ಡೈರೆಕ್ಟರ್​ ಸಾಥ್​

Published On - 8:58 am, Thu, 13 January 22

Click on your DTH Provider to Add TV9 Kannada