ಭಾರತದಲ್ಲಿ ಕೊವಿಡ್ 19 ಮೂರನೇ ಅಲೆ ಜನವರಿ 23ರ ಹೊತ್ತಿಗೆ ಉತ್ತುಂಗಕ್ಕೆ ಏರಲಿದೆ. ಆದರೆ ಒಂದು ದಿನದಲ್ಲಿ ಪತ್ತೆಯಾಗುವ ಕೊವಿಡ್ 19 ಸೋಂಕಿತರ ಸಂಖ್ಯೆ 4 ಲಕ್ಷದ ಗಡಿ ದಾಟಲಾರದು ಎಂದು ವಿಜ್ಞಾನಿಗಳು ಹೇಳಿದ್ದಾರೆ. ಭಾರತದಲ್ಲಿ ಸದ್ಯದ ಕೊವಿಡ್ 19 ಸ್ಥಿತಿಗತಿ, ಪಾಸಿಟಿವಿಟಿ ರೇಟ್ ಇತ್ಯಾದಿ ಅಧ್ಯಯನ ಮಾಡಿದ ಬಳಿಕ ವರದಿ ನೀಡಿದ ಅವರು, ದೆಹಲಿ, ಮುಂಬೈಗಳಲ್ಲಿ ಜನವರಿ ಎರಡನೇ ವಾರದಲ್ಲಿಯೇ ಕೊರೊನಾ ಉತ್ತುಂಗಕ್ಕೆ ಏರಿತ್ತು. ಕೊವಿಡ್ 19 ಸಾಂಕ್ರಾಮಿಕ ಶುರುವಾದಾಗಿನಿಂದಲೂ ಸಂಖ್ಯೆ ಪತ್ತೆಮಾಡಲು ಬಳಕೆಯಾಗುತ್ತಿರುವ ಸೂತ್ರ ಮಾದರಿ ಟ್ರ್ಯಾಕರ್ ಒಕ್ಕೂಟದಲ್ಲಿ ಸಂಶೋಧಕರಾಗಿರುವ ಐಐಟಿ ಪ್ರಾಧ್ಯಾಪಕ ಮಣೀಂದರ್ ಅಗರ್ವಾಲ್, ಕೊವಿಡ್ 19 ಪಥ ದೇಶಾದ್ಯಂತ ಬದಲಾಗುತ್ತಿದೆ. ರೋಗನಿರೋಧಕ ಶಕ್ತಿ ಕಡಿಮೆ ಆದವರಲ್ಲಿ ಒಮಿಕ್ರಾನ್ ಸೋಂಕು ಕಾಣಿಸುತ್ತಿದೆ ಎಂದಿದ್ದಾರೆ.
ಇನ್ನು ರಾಜ್ಯಾವಾರು ಕೊವಿಡ್ 19 ಕೇಸ್ಗಳ ಬಗ್ಗೆ ಮಾಹಿತಿ ನೀಡಿದ ಅವರು, ಯಾವ್ಯಾವ ರಾಜ್ಯಗಳು ಯಾವಾಗ ಕೊವಿಡ್ 19 ಮೂರನೇ ಅಲೆಯ ಉತ್ತುಂಗಕ್ಕೆ ತಲುಪಿವೆ ಎಂಬುದನ್ನು ತಿಳಿಸಿದ್ದಾರೆ. ಅದರಂತೆ ಮುಂಬೈನಲ್ಲಿ ಜನವರಿ 12ರಂದು ಅತ್ಯಂತ ಹೆಚ್ಚು ಪ್ರಮಾಣದ ಸೋಂಕು ದಾಖಲಾಗಿತ್ತು. ದೆಹಲಿ ಜನವರಿ 16ರಂದು, ಕೋಲ್ಕತ್ತ ಜನವರಿ 13, ಮಹಾರಾಷ್ಟ್ರ, ಗುಜರಾತ್, ಉತ್ತರಪ್ರದೇಶಗಳು ಇಂದು (19)ರಂದು ಉತ್ತುಂಗವನ್ನು ತಲುಪಲಿದೆ. ಹಾಗೇ, ಬೆಂಗಳೂರಿನಲ್ಲಿ ಜನವರಿ 22ರಂದು ಅತ್ಯಂತ ಹೆಚ್ಚು ಕೇಸ್ಗಳು ದಾಖಲಾಗಲಿವೆ ಎಂದೂ ಮಾಹಿತಿ ನೀಡಿದ್ದಾರೆ. ಕೊರೊನಾ ಪ್ರಸರಣ ವೇಗ ಹೆಚ್ಚುತ್ತಿರುವ ನಡುವೆಯೂ ಆಸ್ಪತ್ರೆಗೆ ದಾಖಲಾಗುವವರ ಪ್ರಮಾಣ ತುಂಬ ಕಡಿಮೆ ಇದೆ. ಉತ್ತರಪ್ರದೇಶದಲ್ಲಂತೂ ಶೇ.1ಕ್ಕಿಂತ ಕಡಿಮೆ ಜನರು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಅಗರ್ವಾಲ್ ಮಾಹಿತಿ ನೀಡಿದರು.
ಈ ಬಗ್ಗೆ ಟ್ವೀಟ್ ಮಾಡಿರುವ ಮಣೀಂದರ್ ಅಗರ್ವಾಲ್, ಜನವರಿ 11ನೇ ತಾರೀಖಿನವರಿಗಿನ ಅಂಕಿ-ಅಂಶಗಳನ್ನು ಒಳಗೊಂಡ ಕೊವಿಡ್ 19 ಪಥವನ್ನು ಗಮನಿಸಿದಾಗ, ಜನವರಿ 23ರ ಸುಮಾರಿಗೆ ದಿನಕ್ಕೆ ಸುಮಾರು 7.2 ಲಕ್ಷ ಕೇಸ್ಗಳು ದಾಖಲಾಗಬಹುದು ಎಂದು ಅಂದಾಜಿಸಲಾಗಿತ್ತು. ಆದರೆ ಸದ್ಯದ ಪಥ ಗಮನಿಸಿದಾಗ ಏಳು ಲಕ್ಷವಲ್ಲ, ಜ.23ರ ಹೊತ್ತಿಗೆ ಭಾರತದಲ್ಲಿ ದಿನದ ಸೋಂಕಿತರ ಸಂಖ್ಯೆ 4 ಲಕ್ಷವೂ ದಾಟುವುದಿಲ್ಲ ಎಂಬುದು ಸ್ಪಷ್ಟವಾಗಿದೆ ಎಂದು ಹೇಳಿದ್ದಾರೆ. ಹೀಗಾಗಿ ಇದೊಂದು ಸಮಾಧಾನಕರ ಸಂಗತಿ.
Finally India. Trajectory with data up to 11th indicates the peak on 23th Jan with nearly 7.2 lakh cases per day. Actual trajectory is already deviating significantly, and actual peak is unlikely to cross 4 lakh cases/day. pic.twitter.com/2aUdatnuhY
— Manindra Agrawal (@agrawalmanindra) January 16, 2022
ಭಾರತದಲ್ಲಿ ಮಂಗಳವಾರ 2.38 ಕೊರೊನಾ ಕೇಸ್ಗಳೂ ದಾಖಲಾಗಿವೆ. ಹಾಗೇ, ರಾಷ್ಟ್ರರಾಜಧಾನಿ ದೆಹಲಿಯಲ್ಲಿ ಕಳೆದ ನಾಲ್ಕೈದು ದಿನಗಳಿಂದಲೂ ದಿನದಲ್ಲಿ ಪತ್ತೆಯಾಗುವ ಕೊರೊನಾ ಸೋಂಕಿನ ಕೇಸ್ಗಳಲ್ಲಿ ಇಳಿಮುಖವಾಗುತ್ತಿದೆ. ಮಂಗಳವಾರ ದೆಹಲಿಯಲ್ಲಿ 11,684, ಸೋಮವಾರ 12, 527 ಕೇಸ್ಗಳು ದಾಖಲಾಗಿದ್ದವು. ಆದರೆ ಕರ್ನಾಟಕದಲ್ಲಿ ನಿನ್ನೆ 41ಸಾವಿರಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ.
ಇದನ್ನೂ ಓದಿ: ಕೌತುಕ ಮೂಡಿಸಿದ ‘19.20.21’ ಕನ್ನಡ ಸಿನಿಮಾ; ಮಂಸೋರೆ ಹೊಸ ಚಿತ್ರ ಅನೌನ್ಸ್