ದೇಶಿ ರೂಪಾಂತರಿ.. ಭಾರತದಲ್ಲೇ ಎರಡೆರಡು ಬಾರಿ ರೂಪಾಂತರವಾಗಿದೆ ಕೊರೊನಾ ವೈರಾಣು! ಹೊಸ ಅಧ್ಯಯನದಿಂದ ಬಯಲಾಯ್ತು ಮಾಹಿತಿ
ಭಾರತದಲ್ಲಿಯೇ ರೂಪಾಂತರಗೊಂಡಿರುವ ಈ ವೈರಾಣುವನ್ನು ವಿಜ್ಞಾನಿಗಳು ಸರಳವಾಗಿ ದೇಶಿ ರೂಪಾಂತರಗೊಂಡ ವೈರಸ್ ಎಂದು ಕರೆದಿದ್ದಾರೆ. ಎರಡನೇ ಅಲೆ ವೇಳೆ ಮಹಾರಾಷ್ಟ್ರದಲ್ಲಿ ವರದಿಯಾದ ಪ್ರಕರಣಗಳ ಪೈಕಿ ಈ ದೇಶಿ ರೂಪಾಂತರಿ ವೈರಾಣು ಶೇ.61ರಷ್ಟು ಮಾದರಿಗಳಲ್ಲಿ ಪತ್ತೆಯಾಗಿದೆ.
ದೆಹಲಿ: ಭಾರತದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಏರುಗತಿಯಲ್ಲಿ ಸಾಗುತ್ತಿರುವ ಬೆನ್ನಲ್ಲೇ ಹೊಸ ಅಧ್ಯಯನವೊಂದು ನಡೆದಿದ್ದು, ಭಾರತದಲ್ಲಿ ಕೊರೊನಾ ವೈರಸ್ ರೂಪಾಂತರಗೊಂಡಿರುವುದು ಪತ್ತೆಯಾಗಿದೆ. ಬ್ರಿಟನ್, ಸೌತ್ ಆಫ್ರಿಕಾ ಮೂಲದ ರೂಪಾಂತರಿ ವೈರಾಣುಗಳಿಗೆ ನಾಮಕರಣ ಮಾಡಿದಂತೆಯೇ ಇದೀಗ ದೇಶಿ ಮೂಲದ ರೂಪಾಂತರಿಗೂ ಹೆಸರು ಇಡಲಾಗಿದ್ದು ಇದನ್ನು B.1.617 ಎಂದು ಕರೆಯಲಾಗಿದೆ. ನ್ಯಾಷನಲ್ ಸೆಂಟರ್ ಫಾರ್ ಡಿಸೀಸ್ ಕಂಟ್ರೋಲ್ ಅಧ್ಯಯನದ ಪ್ರಕಾರ ಭಾರತದಲ್ಲಿ ಕೊರೊನಾ ವೈರಾಣು ಎರಡೆರಡು ಬಾರಿ ರೂಪಾಂತರಗೊಂಡಿರುವುದು ತಿಳಿದು ಬಂದಿದೆ.
ಭಾರತದಲ್ಲಿಯೇ ರೂಪಾಂತರಗೊಂಡಿರುವ ಈ ವೈರಾಣುವನ್ನು ವಿಜ್ಞಾನಿಗಳು ಸರಳವಾಗಿ ದೇಶಿ ರೂಪಾಂತರಗೊಂಡ ವೈರಸ್ ಎಂದು ಕರೆದಿದ್ದಾರೆ. ಎರಡನೇ ಅಲೆ ವೇಳೆ ಮಹಾರಾಷ್ಟ್ರದಲ್ಲಿ ವರದಿಯಾದ ಪ್ರಕರಣಗಳ ಪೈಕಿ ಈ ದೇಶಿ ರೂಪಾಂತರಿ ವೈರಾಣು ಶೇ.61ರಷ್ಟು ಮಾದರಿಗಳಲ್ಲಿ ಪತ್ತೆಯಾಗಿದೆ. ಒಟ್ಟಾರೆಯಾಗಿ ಶೇ.70ರಷ್ಟು ಮಾದರಿಗಳ ರೂಪಾಂತರದ ಮೂಲ ಇದೇ ವೈರಾಣು ಎನ್ನಲಾಗುತ್ತಿದೆ. ಬಹುಮುಖ್ಯವಾಗಿ ದೇಶಿ ರೂಪಾಂತರಿಯಿಂದಲೇ ಭಾರತದಲ್ಲಿ ಕೊರೊನಾ ಸೋಂಕಿತರ ಪ್ರಮಾಣ ಹೆಚ್ಚುತ್ತಿದೆ ಎನ್ನುವ ಶಂಕೆ ಬಲವಾಗಿ ವ್ಯಕ್ತವಾಗಿದ್ದು, ಈಗಾಗಲೇ ಸುಮಾರು ಎಂಟು ದೇಶಗಳಲ್ಲಿ B.1.617 ಮಾದರಿಯ ವೈರಾಣು ಕಂಡು ಬಂದಿದೆ.
ಆರಂಭಿಕ ಹಂತದಲ್ಲಿ ಭಾರತದೊಳಗೆ ರೂಪಾಂತರಗೊಂಡ ವೈರಾಣುಗಳಾಗಿ E484Q ಮತ್ತು L425R ಎಂಬ ಎರಡು ಮಾದರಿ ಕಾಣಿಸಿಕೊಂಡಿದ್ದವು. ಇದೀಗ ಪತ್ತೆಯಾದ ಮಾದರಿ ಇವೆರಡರ ಮಿಶ್ರಣದಂತಿದ್ದು ಇದನ್ನು B.1.617 ಎನ್ನಲಾಗಿದೆ. ಈ ಅಧ್ಯಯನದ ಸಂದರ್ಭದಲ್ಲಿ ವಿಜ್ಞಾನಿಗಳಿಗೆ ಇನ್ನೊಂದು ಸಂದೇಹ ಮೂಡಿದ್ದು, ದೇಶಿ ರೂಪಾಂತರಗೊಂಡ ವೈರಾಣು ಈಗಾಗಲೇ ಲಭ್ಯವಿರುವ ಕೊರೊನಾ ಲಸಿಕೆಯಿಂದ ತಪ್ಪಿಸಿಕೊಳ್ಳುತ್ತಿದೆಯಾ? ಎಂದು ತಿಳಿಯಲು ಮುಂದಾಗಿದ್ದಾರೆ. ಈ ಅಧ್ಯಯನಕ್ಕೆ ಸಂಬಂಧಿಸಿದ ವರದಿ ಮುಂದಿನ ಎರಡು ವಾರಗಳೊಳಗೆ ಕೈ ಸೇರುವ ಸಾಧ್ಯತೆ ಇದೆ.
ಇದನ್ನೂ ಓದಿ: ಕೊರೊನಾ 2ನೇ ಅಲೆ: ಮಕ್ಕಳು ಮತ್ತು ಯುವಕರಲ್ಲಿ ಹೆಚ್ಚುತ್ತಿದೆ ಸೋಂಕು; ಪರಿಸ್ಥಿತಿ ಕೈ ಮೀರುವ ಸೂಚನೆ ಎಂದ ತಜ್ಞರು
‘ಹೆಚ್ಚಿನ ಸೋಂಕಿತರು ದೈಹಿಕ ಚಟುವಟಿಕೆಗಳಿಂದ ದೂರ; ಸೋಮಾರಿಗಳಲ್ಲಿ ಕೊರೊನಾ ತಗುಲುವ ಸಾಧ್ಯತೆ ಹೆಚ್ಚು’
(Covid 19 Double mutant virus found in India the variant is known as B.1.617 says new study)