ಭಾರತಕ್ಕೂ ಬರಲಿದೆ ಕೊರೊನಾ ಸೋಂಕು ನಿರೋಧಕ ಲಸಿಕೆ
ಸೆರಮ್ ಇನ್ಸ್ ಟಿಟ್ಯೂಟ್ ಆಫ್ ಇಂಡಿಯಾ, ಭಾರತ್ ಬಯೋಟೆಕ್ ಕಂಪನಿಗಳು ಲಸಿಕೆಯ ತುರ್ತು ಬಳಕೆಗೆ ಅರ್ಜಿ ಸಲ್ಲಿಸಿವೆ.
ದೆಹಲಿ: ಈಗಾಗಲೇ ದೇಶದಾದ್ಯಂತ ಕೊರೊನಾ ಲಸಿಕೆಯ ಬಳಕೆಗೆ ಸಂಬಂಧಪಟ್ಟಂತೆ ಹಲವು ಪ್ರಯೋಗಗಳು ನಡೆದಿದ್ದು, ಬ್ರಿಟನ್ನಂತಹ ರಾಷ್ಟ್ರಗಳಲ್ಲಿ ಮೊದಲ ಹಂತದ ಲಸಿಕೆಯ ಬಳಕೆ ಪ್ರಾರಂಭವಾಗಿದೆ.
ಇನ್ನು ಕೆಲವೇ ವಾರದಲ್ಲಿ ಭಾರತ ಕೂಡ ಲಸಿಕೆ ಬಳಕೆಗೆ ಒಪ್ಪಿಗೆ ನೀಡಲಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ. ಈಗಾಗಲೇ ಮೂರು ಕಂಪನಿಗಳ ಲಸಿಕೆಯನ್ನು ರೆಗ್ಯುಲೇಟರಿ ಒಪ್ಪಿಗೆಯ ಪರಿಗಣನೆಗೆ ತೆಗೆದುಕೊಂಡಿದ್ದು, ಮೂರು ಕಂಪನಿಗೂ ಒಪ್ಪಿಗೆ ನೀಡಬಹುದು, ಇಲ್ಲವೇ ಯಾವುದಾದರೊಂದು ಕಂಪನಿಯ ಲಸಿಕೆ ಬಳಕೆಗೆ ಒಪ್ಪಿಗೆ ನೀಡುವ ಭರವಸೆಯನ್ನು ಕೇಂದ್ರ ಸರ್ಕಾರ ನೀಡಿದೆ.
ಸೆರಮ್ ಇನ್ಸ್ ಟಿಟ್ಯೂಟ್ ಆಫ್ ಇಂಡಿಯಾ, ಭಾರತ್ ಬಯೋಟೆಕ್ ಕಂಪನಿಗಳು ಲಸಿಕೆಯ ತುರ್ತು ಬಳಕೆಗೆ ಅರ್ಜಿ ಸಲ್ಲಿಸಿವೆ. ಸದ್ಯ ಪ್ರಧಾನಿ ನರೇಂದ್ರ ಮೋದಿ ಎಲ್ಲಾ ಲಸಿಕೆ ಉತ್ಪಾದಕರೊಂದಿಗೆ ಚರ್ಚಿಸಿದ್ದು, ಆರು ಕಂಪನಿಗಳ ಲಸಿಕೆಗಳು ಪ್ರಯೋಗದ ಹಂತದಲ್ಲಿವೆ ಎಂದು ತಿಳಿಸಲಾಗಿದೆ.
ವಿಜ್ಞಾನಿಗಳಿಂದ ಗ್ರೀನ್ ಸಿಗ್ನಲ್ ಸಿಗುತ್ತಿದ್ದಂತೆ ದೊಡ್ಡಮಟ್ಟದಲ್ಲಿ ಲಸಿಕೆ ಉತ್ಪಾದನೆ ಮಾಡಲಾಗುತ್ತದೆ ಮತ್ತು ಉತ್ಪಾದನೆ ಹೆಚ್ಚಿಸಲು ಎಲ್ಲಾ ಸಿದ್ಧತೆ ಮಾಡಿಕೊಳ್ಳಲಾಗಿದೆ. ಕಡಿಮೆ ಅವಧಿಯಲ್ಲಿ ಎಲ್ಲರಿಗೂ ಲಸಿಕೆ ನೀಡಲು ಯೋಜನೆ ರೂಪಿಸಲಾಗಿದೆ ಎಂದು ದೇಶದಲ್ಲಿ ಕೊರೊನಾ ಸ್ಥಿತಿಗತಿ, ಲಸಿಕೆಯ ಬಗ್ಗೆ ಕೇಂದ್ರ ಸರ್ಕಾರದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ನೀತಿ ಆಯೋಗದ ಸದಸ್ಯ ಡಾಕ್ಟರ್ ವಿ.ಕೆ.ಪೌಲ್ ಮತ್ತು ಕೇಂದ್ರದ ಆರೋಗ್ಯ ಇಲಾಖೆಯ ಕಾರ್ಯದರ್ಶಿ ರಾಜೇಶ್ ಭೂಷಣ್ ಜಂಟಿ ಹೇಳಿಕೆ ನೀಡಿದ್ದಾರೆ.
ಕೊರೊನಾಗೆ ತಿಲಾಂಜಲಿ! ಇನ್ನು 9 ತಿಂಗಳಲ್ಲಿ ಭಾರತದಲ್ಲೂ ಸಿಗಲಿದೆ ಕೊರೊನಾ ಲಸಿಕೆ