ನೋಯ್ಡಾ: ಕೊರೊನಾ ಸೋಂಕಿನ ವಿರುದ್ಧ ಹೋರಾಡಲು ವೈದ್ಯ ಲೋಕ ಮತ್ತು ವಿಜ್ಞಾನ ಸಂಶೋಧಕರು ಹಗಲೂ ರಾತ್ರಿ ಹೆಣಗಾಡುತ್ತಿದ್ದಾರೆ. ಹೇಗಾದರೂ ಮಾಡಿ ಈ ಮಹಾಮಾರಿಯನ್ನು ಕಟ್ಟಿಹಾಕಲು ಸರ್ವಪ್ರಯತ್ನ ಮಾಡುತ್ತಿದ್ದಾರೆ. ಈ ಪ್ರಯತ್ನದಲ್ಲಿರುವಾಗಲೇ ಮಹಾಮಾರಿ ಬೇರೆ ಬೇರೆ ಅವತಾರಗಳಲ್ಲಿ ಕಾಣಿಸಿಕೊಳ್ಳುತ್ತಿದೆ. ಈ ಮಧ್ಯೆ ಕೊರೊನಾ ವೈರಸ್ನ ಡಬಲ್ ಮ್ಯುಟೆಂಟ್ ತಳಿಯೊಂದು (B.1.617 variant) ಧುತ್ತನೆ ಜನರನ್ನು ಕಾಡತೊಡಗಿದೆ. ಆದರೆ ಇದರ ವಿರುದ್ಧ ಸಮರ್ಥವಾಗಿ ಹೋರಾಡಲು ಕೊವಿಶೀಲ್ಡ್ ಲಸಿಕೆಯು ಅತ್ಯಂತ ಪ್ರಯೋಜನಕಾರಿಯಾಗಿದೆ ಎಂದು ಸೆಂಟರ್ ಫಾರ್ ಸೆಲ್ಯುಲಾರ್ ಅಂಡ್ ಮಾಲಿಕ್ಯುಲಾರ್ ಬಯಾಲಜಿ ನಿರ್ದೇಶಕ (CCMB, Director) ರಾಕೇಶ್ ಮಿಶ್ರಾ ತಿಳಿಸಿದ್ದಾರೆ.
ಕೊರೊನಾ ವೈರಸ್ನ ಡಬಲ್ ಮ್ಯುಟೆಂಟ್ ತಳಿಯ (double mutant strain) ವಿರುದ್ಧ ಹೋರಾಡಲು ಕೊವಿಶೀಲ್ಡ್ ಲಸಿಕೆಯು ರಕ್ಷಣೆ ನೀಡುತ್ತದೆ ಎಂಬುದು ಪ್ರಾಥಮಿಕ ಫಲಿತಾಂಶಗಳಿಂದ ತಿಳಿದುಬಂದಿದೆ. ಕೌನ್ಸಿಲ್ ಫಾರ್ ಸೈಂಟಿಫಿಕ್ ಇಂಡಸ್ಟ್ರಿಯಲ್ ರೀಸರ್ಚ್ ಇನ್ಸ್ಟಿಟ್ಯೂಟ್ ಅಂಗಸಂಸ್ಥೆಯಾದ CCMB ಈ ಅಧ್ಯಯನವನ್ನು ಕೈಗೊಂಡಿತ್ತು ಎಂದು ನಿರ್ದೇಶಕ ರಾಕೇಶ್ ಮಿಶ್ರಾ ಹೇಳಿದ್ದಾರೆ.
ಇದು ಆರಂಭಿಕ ಅಧ್ಯಯನ ಆದರೂ ಇದರ ಫಲಿತಾಂಶವು ಉತ್ತೇಜನಕಾರಿಯಾಗಿದೆ. ಇನ್ವಿಟ್ರೋ ನಾಳದಲ್ಲಿ ಕೈಗೊಂಡಿದ್ದ ಅಧ್ಯಯನದ ಪ್ರಕಾರ ಕೊವಲೆಸೆಂಟ್ ಸೆರಾ (ಮೊದಲ ಸೋಂಕು) ಮತ್ತು ಕೊವಿಶೀಲ್ಡ್ ಲಸಿಕೆಯು ಪ್ರಯೋಗಿಸಿದ ಸೆರಾ ಎರಡೂ B.1.617 variant ಕೊರೊನಾ ಅವತಾರಿಯ ವಿರುದ್ಧ ಸಂರಕ್ಷಣೆ ನೀಡುತ್ತದೆ ಎಂದು ನಿರ್ದೇಶಕ ರಾಕೇಶ್ ಮಿಶ್ರಾ ಟ್ವೀಟ್ ಮಾಡಿ ತಿಳಿಸಿದ್ದಾರೆ. ಆಘಾತಕಾರಿ ಅಂದರೆ ಈ ಹೊಸ B.1.617 ಡಬಲ್ ಮ್ಯೂಟೆಂಟ್ ತಳಿಯು ಸೋಂಕು ಹರಡುವ ಪ್ರಮಾಣವನ್ನು ಹೆಚ್ಚಿಸುತ್ತದೆ. ಮತ್ತೂ ಆತಂಕಕಾರಿ ಅಂದ್ರೆ ಇದು ಯಾವುದೇ ವ್ಯಾಕ್ಸಿನ್ನಿಂದ ದಕ್ಕಬಹುದಾದ ರಕ್ಷಣೆಯನ್ನು ಸುಲಭವಾಗಿ ನೀಗಿಕೊಂಡು, ವ್ಯಾಪಕವಾಗಿ/ಕ್ಷಿಪ್ರವಾಗಿ ಹರಡುತ್ತಿದೆ ಎಂದು ಅಧ್ಯಯನದಿಂದ ತಿಳಿದುಬಂದಿದೆ.
B.1.617 ತಳಿಯು E484Q ಮತ್ತು L452R ಎಂಬ ಎರಡು ಪ್ರತ್ಯೇಕ ಸೋಂಕು ತಳಿಗಳ ಸಂಯೋಜನೆಯಿಂದ ಉದ್ಭವಗೊಂಡ ಅವತಾರಿಯಾಗಿದೆ. ಹಾಗಾಗಿಯೇ ಇದನ್ನು ಡಬಲ್ ಮ್ಯೂಟೆಂಟ್ ತಳಿ ಎಂದು ಹೆಸರಿಸಲಾಗಿದೆ. ಮಹಾರಾಷ್ಟ್ರ,ಪಂಜಾಬ್ ಮತ್ತು ದೆಹಲಿ ಭಾಗಗಳಲ್ಲಿ ಈ ಡಬಲ್ ಮ್ಯೂಟೆಂಟ್ ತಳಿ ಜನರನ್ನು ಕಾಡತೊಡಗಿದೆ. ಇನ್ನು, ಕೊವಿಶೀಲ್ಡ್ ಲಸಿಕೆಯು ಆಕ್ಸ್ಫರ್ಡ್-ಆಸ್ಟ್ರಾಜೆನಿಕಾ ಕೊವಿಡ್ 19 ವ್ಯಾಕ್ಸಿನ್ ಆಗಿದೆ. ಈ ಲಸಿಕೆಯನ್ನು ಸೆರಂ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ಕಂಪನಿಯು (SII) ತಯಾರಿಸಿದೆ.
Very preliminary but encouraging result: #Covishield protects against #B1617. Early results using in vitro neutralization assay show that both convalescent (prior infection) sera and Covishield vaccinated sera offer protection against the B.1.617 variant, aka #DoubleMutant. pic.twitter.com/eOVAlktVug
— Rakesh K Mishra (@3RakeshMishra) April 22, 2021
ಇದನ್ನೂ ಓದಿ:
ಕೊರೊನಾ ದೃಢಪಟ್ಟರೆ ಆತಂಕ ಪಡಬೇಡಿ, ಜನರು ಪ್ರಾಣಾಯಾಮ ಮಾಡಬೇಕು -ಡಾ. ಕೆ.ಸುಧಾಕರ್