ಗೋಡಂಬಿ ಫ್ಯಾಕ್ಟರಿ ಸಿಬ್ಬಂದಿ ಕೊಲೆ ಪ್ರಕರಣ; ನಾಪತ್ತೆಯಾಗಿದ್ದ ಡಿಎಂಕೆ ಸಂಸದ ಕೋರ್ಟ್ನಲ್ಲಿ ಶರಣು
DMK MP Ramesh: ತಮಿಳುನಾಡಿನ ಪನ್ರುತಿಯಲ್ಲಿ ಗೋಡಂಬಿ ಸಂಸ್ಕರಣಾ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ ಕೆ. ಗೋವಿಂದರಸು ಹತ್ಯೆ ಪ್ರಕರಣದ ಪ್ರಮುಖ ಆರೋಪಿಯಾಗಿದ್ದ ಡಿಎಂಕೆ ಸಂಸದ ರಮೇಶ್ ನಾಪತ್ತೆಯಾಗಿದ್ದರು. ಅವರು ಇಂದು ಬೆಳಗ್ಗೆ ನ್ಯಾಯಾಧೀಶರ ಮುಂದೆ ಶರಣಾಗಿದ್ದಾರೆ.

ಚೆನ್ನೈ: ತನ್ನ ಗೋಡಂಬಿ ಕಾರ್ಖಾನೆಯಲ್ಲಿ ನಡೆದ ಸಿಬ್ಬಂದಿಯ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾರ್ಖಾನೆಯ ಮಾಲೀಕ ಹಾಗೂ ಡಿಎಂಕೆ ಸಂಸದ ಟಿಆರ್ವಿ ರಮೇಶ್ ಇಂದು ಬೆಳಗ್ಗೆ ಜಿಲ್ಲಾ ನ್ಯಾಯಾಲಯಕ್ಕೆ ಶರಣಾಗಿದ್ದಾರೆ. ಈ ಕೊಲೆ ನಡೆದ ದಿನದಿಂದ ತಮಿಳುನಾಡಿನ ಡಿಎಂಕೆ ಸಂಸದ ಟಿಆರ್ವಿ ರಮೇಶ್ ನಾಪತ್ತೆಯಾಗಿದ್ದರು. ತಮಿಳುನಾಡಿನ ಪನ್ರುತಿಯಲ್ಲಿ ಗೋಡಂಬಿ ಸಂಸ್ಕರಣಾ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ ಕೆ. ಗೋವಿಂದರಸು ಹತ್ಯೆಗೆ ಸಂಬಂಧಿಸಿದಂತೆ ಪ್ರಮುಖ ಆರೋಪಿಯಾಗಿದ್ದ ಸಂಸದ ರಮೇಶ್ ಅವರನ್ನು ಸಿಬಿ-ಸಿಐಡಿ ಪೊಲೀಸರು ಹುಡುಕುತ್ತಿದ್ದರು. ಶನಿವಾರದಿಂದ ನಾಪತ್ತೆಯಾಗಿದ್ದ ಸಂಸದ ರಮೇಶ್ ಇಂದು ಬೆಳಗ್ಗೆ ನ್ಯಾಯಾಧೀಶರ ಮುಂದೆ ಹಾಜರಾಗಿದ್ದಾರೆ.
ಪೊಲೀಸ್ ಮೂಲಗಳ ಪ್ರಕಾರ, ಸಿಬ್ಬಂದಿಗಳ ತಂಡ ಡಿಎಂಕೆ ಸಂಸದರ ನಿವಾಸಕ್ಕೆ ಕರೆ ಮಾಡಿತ್ತು. ಆದರೆ ಅವರು ಮನೆಯಲ್ಲಿರಲಿಲ್ಲ. ಕೊಲೆಗೆ ಸಂಬಂಧಿಸಿದಂತೆ ಪೊಲೀಸರು ಐದು ಜನರನ್ನು ಬಂಧಿಸಿದ್ದಾರೆ. ಈ ಕಾರ್ಖಾನೆಯ ಉದ್ಯೋಗಿಗಳಾದ ನಟರಾಜನ್, ಕಂದವೇಲ್, ಅಲ್ಲಪಿಚೈ, ವಿನೋದ್ ಮತ್ತು ಸುಂದರರಾಜನ್ ಅವರನ್ನು ನ್ಯಾಯಾಂಗ ಬಂಧನಕ್ಕಾಗಿ ಸ್ಥಳೀಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ಮೊದಲು ಸ್ಥಳೀಯ ಪೊಲೀಸರು ಈ ಪ್ರಕರಣದ ತನಿಖೆ ನಡೆಸಿದ್ದು, ನಂತರ ಈ ಪ್ರಕರಣವನ್ನು ಸ್ಥಳೀಯ ಪೊಲೀಸರಿಂದ ಸಿಬಿ-ಸಿಐಡಿಗೆ ವರ್ಗಾಯಿಸಲಾಗಿತ್ತು.
ಇಂದು ಕೋರ್ಟ್ನಲ್ಲಿ ಶರಣಾಗಿರುವ ಸಂಸದ ರಮೇಶ್, ನನ್ನ ವಿರುದ್ಧ ಮಾಡಲಾಗಿರುವ ಎಲ್ಲ ಆರೋಪಗಳೂ ಸುಳ್ಳು ಎಂದು ನಾನು ಸಾಬೀತು ಮಾಡುತ್ತೇನೆ. ನನ್ನ ಕಾರಣಕ್ಕೆ ನಮ್ಮ ಡಿಎಂಕೆ ಸರ್ಕಾರದ ವಿರುದ್ಧ ಯಾರೂ ಟೀಕೆ ಮಾಡಬಾರದು, ನಾನೇ ಅಪರಾಧಿ ಎಂಬ ತೀರ್ಮಾನಕ್ಕೆ ಬರಬಾರದು ಎಂಬ ಕಾರಣಕ್ಕೆ ನಾನು ಇಂದು ಶರಣಾಗಿದ್ದೇನೆ. ಇದರ ಅರ್ಥ ನಾನು ತಪ್ಪು ಮಾಡಿದ್ದೇನೆ ಎಂದಲ್ಲ. ಕೆಲವು ಪಕ್ಷಗಳ ನಾಯಕರು ಈ ಘಟನೆಯನ್ನು ಮುಂದಿಟ್ಟುಕೊಂಡು ಡಿಎಂಕೆ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿರುವುದು ನನಗೆ ಬೇಸರ ತರಿಸಿದೆ ಎಂದು ಹೇಳಿದ್ದಾರೆ.
Cuddalore DMK MP TRVS Ramesh, who was booked for murder in connection with the death of a worker in his cashew nut factory, has surrendered before a court in Panruti.
The MP was on the run and CBCID was on the lookout for him. pic.twitter.com/rC8B74Qnlr
— Shilpa (@Shilpa1308) October 11, 2021
ಸಂಸದ ರಮೇಶ್ ಅವರ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ 60 ವರ್ಷದ ಗೋವಿಂದರಸು ಅವರ ಕೊಲೆ ಸೆಪ್ಟೆಂಬರ್ 20ರಂದು ನಡೆದಿತ್ತು. ಅವರು ಕಾರ್ಖಾನೆಯಿಂದ ಸುಮಾರು 8 ಕೆಜಿ ಗೋಡಂಬಿಯನ್ನು ಕದ್ದಿದ್ದಾರೆ ಎಂದು ಫ್ಯಾಕ್ಟರಿಯ ಸಿಬ್ಬಂದಿ ಆರೋಪಿಸಿದ್ದರು. ನಂತರ ಗೋವಿಂದರಸು ಅವರ ಮೇಲೆ ಹಲ್ಲೆ ನಡೆಸಲಾಗಿತ್ತು. ತೀವ್ರವಾಗಿ ಗಾಯಗೊಂಡಿದ್ದ ಅವರನ್ನು ಅಲ್ಲಿನ ಸಿಬ್ಬಂದಿ ಪೊಲೀಸ್ ಠಾಣೆಗೆ ಕರೆತಂದಿದ್ದರು. ಆದರೆ, ಅವರನ್ನು ಕುಡಲೇ ಆಸ್ಪತ್ರೆಗೆ ಸೇರಿಸಬೇಕು. ನಂತರ ವಿಚಾರಣೆ ಮಾಡುವುದಾಗಿ ಪೊಲೀಸರು ಹೇಳಿದರೂ ಆತನನ್ನು ಮತ್ತೆ ಗೋಡಂಬಿ ಫ್ಯಾಕ್ಟರಿಗೆ ಕರೆದುಕೊಂಡು ಹೋಗಿದ್ದ ಸಿಬ್ಬಂದಿ ಆತನಿಗೆ ಚಿಕಿತ್ಸೆ ಕೊಡಿಸಿರಲಿಲ್ಲ. ಕೊನೆಗೆ ಅವರ ಮೃತದೇಹ ಕಾರ್ಖಾನೆಯಲ್ಲಿ ಪತ್ತೆಯಾಗಿತ್ತು.
ಈ ಬಗ್ಗೆ ಗೋವಿಂದರಸು ಅವರ ಮಗ ಪೊಲೀಸರಿಗೆ ದೂರು ನೀಡಿದ್ದು, ನನ್ನ ತಂದೆಯನ್ನು ಕೊಲೆ ಮಾಡಲಾಗಿದೆ ಎಂದು ಆರೋಪಿಸಿದ್ದರು. ಗೋವಿಂದರಸು ಅವರನ್ನು ಆಸ್ಪತ್ರೆಗೆ ಸೇರಿಸದೆ ಫ್ಯಾಕ್ಟರಿಗೆ ಕರೆದುಕೊಂಡು ಹೋಗಿ ಹಿಂಸೆ ನೀಡಿದ್ದ ಸಂಸದ ರಮೇಶ್ ಅವರ ಆಪ್ತರನ್ನು ಹಾಗೂ ಅಲ್ಲಿನ ಸಿಬ್ಬಂದಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಗೋವಿಂದರಸು ಅವರ ಮೃತದೇಹದ ಮೇಲೆ ಗಾಯಗಳಾಗಿತ್ತು, ಅವರ ಕಣ್ಣು ಊದಿಕೊಂಡಿತ್ತು. ಬಟ್ಟೆಯ ಮೇಲೆ ರಕ್ತದ ಕಲೆಗಳಿದ್ದವು.
ಇದನ್ನೂ ಓದಿ: ಡಿಎಂಕೆ ಸರ್ಕಾರಕ್ಕೆ ಗಣೇಶನ ಹಬ್ಬದ ಗಿಫ್ಟ್ ಕೊಟ್ಟ ಕೇಂದ್ರ; ಗುಪ್ತಚರ ಇಲಾಖೆ ಮಾಜಿ ಮುಖ್ಯಸ್ಥ ತಮಿಳುನಾಡಿಗೆ ಹೊಸ ಗವರ್ನರ್
Published On - 2:02 pm, Mon, 11 October 21