ಅತಿಸಾರದಿಂದಾಗಿ ಆಸ್ಪತ್ರೆಯ ನೆಲದ ಮೇಲೆ ಆಕಸ್ಮಿಕವಾಗಿ ಮಲ ವಿಸರ್ಜನೆ ಮಾಡಿದ ವ್ಯಕ್ತಿ, ಆತನ ತಾಯಿ ಕೈಯಿಂದಲೇ ನೆಲ ಸ್ವಚ್ಛಗೊಳಿಸಿದ ಸಿಬ್ಬಂದಿ

ದಾಮೋಹ್ ಜಿಲ್ಲಾ ಆಸ್ಪತ್ರೆಯಲ್ಲಿ ಅಮಾನವೀಯ ಘಟನೆ ನಡೆದಿದೆ. ತೀವ್ರ ಅತಿಸಾರದಿಂದ ಬಳಲುತ್ತಿದ್ದ ರೋಗಿಯೊಬ್ಬರು ಆಕಸ್ಮಿಕವಾಗಿ ನೆಲದ ಮೇಲೆ ಮಲ ವಿಸರ್ಜನೆ ಮಾಡಿದ್ದಾರೆ. ಆಗ ಸ್ವಚ್ಛತಾ ಸಿಬ್ಬಂದಿಯನ್ನು ಕರೆಯುವ ಬದಲು, ಆಸ್ಪತ್ರೆ ಸಿಬ್ಬಂದಿ ರೋಗಿಯ ತಾಯಿಯಿಂದಲೇ ಅದನ್ನು ಸ್ವಚ್ಛಗೊಳಿಸಿದ್ದಾರೆ. ಈ ವಿಡಿಯೋ ವೈರಲ್ ಆಗಿದ್ದು, ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಘಟನೆಯ ಬಗ್ಗೆ ಆಂತರಿಕ ವಿಚಾರಣೆಗೆ ಆದೇಶಿಸಲಾಗಿದೆ.

ಅತಿಸಾರದಿಂದಾಗಿ ಆಸ್ಪತ್ರೆಯ ನೆಲದ ಮೇಲೆ ಆಕಸ್ಮಿಕವಾಗಿ ಮಲ ವಿಸರ್ಜನೆ ಮಾಡಿದ ವ್ಯಕ್ತಿ, ಆತನ ತಾಯಿ ಕೈಯಿಂದಲೇ ನೆಲ ಸ್ವಚ್ಛಗೊಳಿಸಿದ ಸಿಬ್ಬಂದಿ
ಮಹಿಳೆ
Image Credit source: Screenshot X Account Abhishek Sharma

Updated on: Oct 13, 2026 | 12:39 PM

ದಾಮೋಹ್, ಅಕ್ಟೋಬರ್ 13: ಅತಿಸಾರದಿಂದಾಗಿ ಆಸ್ಪತ್ರೆಗೆ ದಾಖಲಾಗಿದ್ದ ರೋಗಿ ಹಾಗೂ ತಾಯಿಯನ್ನು ಅಮಾನವೀಯವಾಗಿ ನಡೆಸಿಕೊಂಡಿರುವ ಘಟನೆ ಮಧ್ಯಪ್ರದೇಶದ ಜಿಲ್ಲಾಸ್ಪತ್ರೆಯಲ್ಲಿ ನಡೆದಿದೆ. ವಿಪರೀತ ಅತಿಸಾರದಿಂದ ನರಳುತ್ತಿದ್ದ ವ್ಯಕ್ತಿ ಆಕಸ್ಮಿಕವಾಗಿ ಆಸ್ಪತ್ರೆಯ ನೆಲದ ಮೇಲೆ ಮಲ ವಿಸರ್ಜನೆ ಮಾಡಿದ್ದಾರೆ. ಆದರೆ ಸ್ವಚ್ಛತಾ ಸಿಬ್ಬಂದಿಯ ಕರೆಯುವ ಬದಲು ರೋಗಿಯ ತಾಯಿಯ ಬಳಿಯೇ ನೆಲವನ್ನು ಒರೆಸುವಂತೆ ಒತ್ತಡ ಹೇರಿರುವ ಘಟನೆ ಕೇಳಿಬಂದಿದೆ. ಇದಕ್ಕೆ ಸಂಬಂಧಿಸಿದ ವಿಡಿಯೋ ವೈರಲ್ ಆಗಿದೆ.

ಆಸ್ಪತ್ರೆಯ ಕಾರಿಡಾರ್‌ನಲ್ಲಿ ಮಲ-ಮೂತ್ರವನ್ನು ಒರೆಸುತ್ತಿರುವ ಮನಕಲಕುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸಾರ್ವಜನಿಕ ವಲಯದಲ್ಲಿ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ. ತೇಜ್‌ಗಢ ಸಮೀಪದ ಸಿಮರಿಯಾ ಗ್ರಾಮದ ನಿವಾಸಿ ಹಲ್ಕಿ ಬಾಹು ಎಂಬ ಮಹಿಳೆ, ತೀವ್ರ ಭೇದಿಯಿಂದ ಅಸ್ವಸ್ಥಗೊಂಡಿದ್ದ ತನ್ನ ಮಗನನ್ನು ತುರ್ತು ಚಿಕಿತ್ಸೆಗಾಗಿ ರಾತ್ರಿ ದಾಮೋಹ್ ಜಿಲ್ಲಾ ಆಸ್ಪತ್ರೆಗೆ ಕರೆತಂದಿದ್ದರು.

ನಿಯಂತ್ರಣ ತಪ್ಪಿದ ರೋಗಿ: ಚಿಕಿತ್ಸೆಯ ಸಮಯದಲ್ಲಿ ರೋಗಿಯ ಕರುಳಿನ ನಿಯಂತ್ರಣ ತಪ್ಪಿ ಆಸ್ಪತ್ರೆಯ ನೆಲದ ಮೇಲೆ ಮಲ ವಿಸರ್ಜನೆಯಾಗಿದೆ. ಇಂತಹ ಪರಿಸ್ಥಿತಿಗಳಲ್ಲಿ ಆಸ್ಪತ್ರೆಯ ನೈರ್ಮಲ್ಯ ಸಿಬ್ಬಂದಿ ಕ್ರಿಮಿನಾಶಕ ಬಳಸಿ ಸ್ವಚ್ಛತೆ ಮಾಡುವುದು ನಿಯಮ. ಆದರೆ ಅಲ್ಲಿ ಕರ್ತವ್ಯದಲ್ಲಿದ್ದ ನರ್ಸ್ ಅಥವಾ ಮಹಿಳಾ ಸಿಬ್ಬಂದಿ ಆ ತಾಯಿಗೆ ಗದರಿ ಆ ಕೊಳೆಯನ್ನು ತಕ್ಷಣವೇ ತಾನೇ ಸ್ವಚ್ಛಗೊಳಿಸುವಂತೆ ಒತ್ತಾಯಿಸಿದ್ದಾರೆ.

ಪೋಸ್ಟ್

ವೈರಲ್ ಆದ ಕ್ಲಿಪ್‌ನಲ್ಲಿ ಮಹಿಳೆ ಬಟ್ಟೆಯಿಂದ ಕಾರಿಡಾರ್ ನೆಲವನ್ನು ಸ್ವಚ್ಛಗೊಳಿಸುತ್ತಿರುವುದನ್ನು ಕಾಣಬಹುದು. ಸ್ಥಳದಲ್ಲಿದ್ದ ಕೆಲವರು ನೀವು ಈ ಕೆಲಸವನ್ನು ಏಕೆ ಮಾಡುತ್ತಿದ್ದೀರಿ? ಎಂದು ಪ್ರಶ್ನಿಸಿದಾಗ, ಕಣ್ಣೀರು ಹಾಕುತ್ತಲೇ, ಒಳಗಿರುವ ಮೇಡಂ ನನ್ನ ಮಗ ಮಾಡಿದ ಗಲೀಜನ್ನು ನಾನೇ ಸ್ವಚ್ಛ ಮಾಡಬೇಕು, ಇಲ್ಲದಿದ್ದರೆ ಚಿಕಿತ್ಸೆ ನೀಡಲ್ಲ ಎಂದರು, ಹಾಗಾಗಿ ಮಾಡುತ್ತಿದ್ದೇನೆ ಎಂದು ಆಕೆ ಉತ್ತರಿಸಿದ್ದಾರೆ.

ಮತ್ತಷ್ಟು ಓದಿ: ರಾಮನಗರ ಜಿಲ್ಲಾಸ್ಪತ್ರೆಯಲ್ಲಿ ವೈದ್ಯನ ಲಂಚಾವತಾರ: ಹಣ ಕೊಡದಿದ್ದರೆ ರೋಗಿಗಳಿಗಿಲ್ಲ ಚಿಕಿತ್ಸೆ!

ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಹರಿದಾಡುತ್ತಿದ್ದಂತೆ ನೆಟ್ಟಿಗರು ಮಧ್ಯಪ್ರದೇಶ ಆರೋಗ್ಯ ಇಲಾಖೆ ಹಾಗೂ ಮುಖ್ಯಮಂತ್ರಿಯನ್ನು ಟ್ಯಾಗ್ ಮಾಡಿ, ಇಂತಹ ಹೃದಯಹೀನ ವೈದ್ಯರು ಮತ್ತು ಸಿಬ್ಬಂದಿಯನ್ನು ತಕ್ಷಣ ಸೇವೆಯಿಂದ ವಜಾಗೊಳಿಸಬೇಕು ಎಂದು ಒತ್ತಾಯಿಸಿದ್ದಾರೆ. ಆಸ್ಪತ್ರೆಗಳಲ್ಲಿ ಸೋಂಕು ಹರಡದಂತೆ ತಡೆಯಲು ಬಯೋ-ಮೆಡಿಕಲ್ ತ್ಯಾಜ್ಯ ಹಾಗೂ ಮಾನವ ವಿಸರ್ಜನೆಗಳನ್ನು ಪಿಪಿಇ ಕಿಟ್ ಮತ್ತು ಸೂಕ್ತ ಉಪಕರಣಗಳೊಂದಿಗೆ ಸುರಕ್ಷಿತವಾಗಿ ಸ್ವಚ್ಛಗೊಳಿಸಬೇಕು. ಆದರೆ ರೋಗಿಯ ಅಸಹಾಯಕ ತಾಯಿಯ ಕೈಯಿಂದಲೇ ಯಾವುದೇ ಗ್ಲೌಸ್ ಇಲ್ಲದೆ ಕೊಳೆಯನ್ನು ಮುಟ್ಟಿಸಿದ್ದು ಆಕೆಯ ಆರೋಗ್ಯಕ್ಕೂ ಅಪಾಯ ತಂದೊಡ್ಡಿದೆ.

ಆಸ್ಪತ್ರೆ ಆಡಳಿತದ ಮುಂದಿನ ಹೆಜ್ಜೆ
ಘಟನೆ ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ಕೋಲಾಹಲ ಸೃಷ್ಟಿಸುತ್ತಿದ್ದಂತೆ, ಜಿಲ್ಲಾ ಮುಖ್ಯ ವೈದ್ಯಾಧಿಕಾರಿಗಳು (CMHO) ಈ ಬಗ್ಗೆ ಆಂತರಿಕ ವಿಚಾರಣೆಗೆ ಆದೇಶಿಸಿದ್ದಾರೆ ಎಂದು ವರದಿಯಾಗಿದೆ. ಆ ರಾತ್ರಿ ಕರ್ತವ್ಯದಲ್ಲಿದ್ದ ಶುಶ್ರೂಷಕಿ ಮತ್ತು ಸ್ವಚ್ಛತಾ ಮೇಲ್ವಿಚಾರಕರ ವಿರುದ್ಧ ಶಿಸ್ತು ಕ್ರಮ ಜರುಗಿಸುವ ಸಾಧ್ಯತೆಯಿದೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

 

ನಯನಾ ರಾಜೀವ್

ನಯನಾ ರಾಜೀವ್ ಮೂಲತಃ ಶಿವಮೊಗ್ಗ ಜಿಲ್ಲೆಯ ಸಾಗರದ ಬಾಳೆಗೆರೆಯವರು, ಹಿಂದಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಮಾಧ್ಯಮ ಕ್ಷೇತ್ರದಲ್ಲಿ 10ಕ್ಕೂ ಹೆಚ್ಚು ವರ್ಷ ಕೆಲಸ ಮಾಡಿದ ಅನುಭವವಿದೆ. ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದಾರೆ. ಒನ್​ ಇಂಡಿಯಾ ಕನ್ನಡ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದಾರೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಮೂರು ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್ ಮತ್ತು ಸಂಗೀತ.

Read More
Loading...
Unable to load recommendations.
Follow Us