
ನವದೆಹಲಿ, ಆಗಸ್ಟ್ 19: ಒಂಟಿತನ ಕಳೆಯಲು ಆನ್‌ಲೈನ್ ಡೇಟಿಂಗ್ ಆ್ಯಪ್(Dating App) ಮೊರೆಹೋದ 67 ವರ್ಷದ ಹಿರಿಯ ನಾಗರಿಕರೊಬ್ಬರು ಯುವತಿಯರ ಖೆಡ್ಡಾಗೆ ಬಿದ್ದು ಲಕ್ಷಾಂತರ ರೂಪಾಯಿ ಹಣ ಕಳೆದುಕೊಂಡಿರುವ ಘಟನೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಬೆಳಕಿಗೆ ಬಂದಿದೆ. ನಕಲಿ ಡೇಟಿಂಗ್ ಪ್ರೊಫೈಲ್ ಮೂಲಕ ಆಕರ್ಷಿಸಿ, ಡಿನ್ನರ್‌ಗೆ ಕರೆದೊಯ್ದು ಮೊಬೈಲ್ ಕದ್ದು 1.30 ಲಕ್ಷ ಯುಪಿಐ (UPI) ವರ್ಗಾವಣೆ ಮಾಡಿಕೊಂಡಿದ್ದ ಇಬ್ಬರು ಯುವತಿಯರನ್ನು ದೆಹಲಿಯ ಸೈಬರ್ ಕ್ರೈಂ ಪೊಲೀಸರು ಬಂಧಿಸಿದ್ದಾರೆ.
ಪ್ರೀತಿಯ ನಾಟಕವಾಡಿ 1.30 ಲಕ್ಷ ರೂ. ದೋಚಿದ ಯುವತಿಯರು
ನಕಲಿ ಪ್ರೊಫೈಲ್ ಬಲೆ: 26 ವರ್ಷದ ಜ್ಯೋತ್ಸ್ನಾ ಡೇಟಿಂಗ್ ಆ್ಯಪ್‌ನಲ್ಲಿ ಸುಳ್ಳು ಮಾಹಿತಿ ಹಾಗೂ ಆಕರ್ಷಕ ಫೋಟೋ ಹಾಕಿ 67 ವರ್ಷದ ಹಿರಿಯ ನಾಗರಿಕರನ್ನು ಪರಿಚಯ ಮಾಡಿಕೊಂಡಿದ್ದಳು. ನಂತರ ತನ್ನ 21 ವರ್ಷದ ಮಾನ್ಸಿಯನ್ನು ಈ ಸಂಚಿಗೆ ಸೇರಿಸಿಕೊಂಡಿದ್ದಳು.
ಜುಲೈ 24 ರಂದು ದಕ್ಷಿಣ ದೆಹಲಿಯ ಡಿಫೆನ್ಸ್ ಕಾಲೋನಿಯ ರೆಸ್ಟೋರೆಂಟ್ ಒಂದರಲ್ಲಿ ಆ ವೃದ್ಧರನ್ನು ಡಿನ್ನರ್‌ಗೆ ಆಹ್ವಾನಿಸಲಾಗಿತ್ತು. ಊಟ ಮುಗಿಯುವಷ್ಟರಲ್ಲಿ ಆತನ ಗಮನ ಬೇರೆಡೆ ಸೆಳೆದು ಮೊಬೈಲ್ ಫೋನ್ ಕದಿಯಲಾಗಿತ್ತು. ಫೋನ್‌ನಲ್ಲಿದ್ದ ಬ್ಯಾಂಕಿಂಗ್ ಆ್ಯಪ್ ಬಳಸಿ ಹಂತ ಹಂತವಾಗಿ 1.30 ಲಕ್ಷ ರೂ. ಹಣವನ್ನು ತಮ್ಮ ಖಾತೆಗಳಿಗೆ ವರ್ಗಾಯಿಸಿಕೊಂಡು ಇಬ್ಬರೂ ಪರಾರಿಯಾಗಿದ್ದರು.
ಸಿಸಿಟಿವಿ ದೃಶ್ಯಾವಳಿ, ಕೆವೈಸಿ (KYC) ಹಾಗೂ ಯುಪಿಐ ಬ್ಯಾಂಕ್ ವಹಿವಾಟಿನ ಜಾಡು ಹಿಡಿದು ನೈಋತ್ಯ ಸೈಬರ್ ಠಾಣೆ ಪೊಲೀಸರು ಇಬ್ಬರೂ ಆರೋಪಿಗಳನ್ನು ಬಂಧಿಸಿ ಮೊಬೈಲ್ ವಶಪಡಿಸಿಕೊಂಡಿದ್ದಾರೆ. ಇದೇ ರೀತಿಯ ಮತ್ತೊಂದು ಪ್ರಕರಣದಲ್ಲಿ, 23 ವರ್ಷದ ಯುವಕನೊಬ್ಬ ಡೇಟಿಂಗ್ ಆ್ಯಪ್ ಮೂಲಕ ಪರಿಚಯವಾದ ಯುವತಿಯೊಂದಿಗೆ ಮೊದಲ ಭೇಟಿಗೆ ಹೋಗಿ ಬರೋಬ್ಬರಿ 20,500 ಬಿಲ್ ಪಾವತಿಸಿ ಕಣ್ಣೀರು ಹಾಕಿದ ಘಟನೆ ರೆಡ್ಡಿಟ್‌ನಲ್ಲಿ ವೈರಲ್ ಆಗಿದೆ.
ಮತ್ತಷ್ಟು ಓದಿ: ಮದುವೆ, ಆನ್‌ಲೈನ್ ಟ್ರೇಡಿಂಗ್ ಹೆಸರಲ್ಲಿ 18 ಲಕ್ಷ ಪಂಗನಾಮ ಹಾಕಿದ ಮಹಿಳೆ: ಹಣ ಕೊಟ್ಟು ಕೆಟ್ಟ ಎಂಜಿನಿಯರ್ನಿಂದ ದೂರು ದಾಖಲು
ಯುವತಿಯು ಆತನನ್ನು ಸಾಮಾನ್ಯ ಕೆಫೆ ಬದಲಿಗೆ ದುಬಾರಿ ಪಬ್‌ಗೆ ಕರೆದೊಯ್ದು13,000 ಮೌಲ್ಯದ ಶಾಂಪೇನ್ ಮತ್ತು6,000 ರೂ. ಮೌಲ್ಯದ ಹುಕ್ಕಾ ಆರ್ಡರ್ ಮಾಡಿದ್ದಳು. ತನ್ನ ಅರ್ಧ ತಿಂಗಳ ಸಂಬಳವನ್ನು ಬಿಲ್ ರೂಪದಲ್ಲಿ ಕಳೆದುಕೊಂಡ ಆ ಯುವಕ, ಆನ್‌ಲೈನ್‌ನಲ್ಲಿ ಡೇಟಿಂಗ್ ಮಾಫಿಯಾ ಬಗ್ಗೆ ಎಚ್ಚರಿಕೆ ನೀಡಿದ್ದಾನೆ.
ಮಹಾನಗರಗಳಲ್ಲಿ ಒಂಟಿತನವನ್ನು ಕಳೆಯಲು ಸಾಮಾಜಿಕ ಜಾಲತಾಣ ಅಥವಾ ಡೇಟಿಂಗ್ ಆ್ಯಪ್ ಬಳಸುವ ಹಿರಿಯ ನಾಗರಿಕರನ್ನೇ ಗುರಿಯಾಗಿಸಿಕೊಂಡು ಸೈಬರ್ ಗ್ಯಾಂಗ್‌ಗಳು ಕಾರ್ಯಾಚರಿಸುತ್ತಿವೆ. ಯುವತಿಯರನ್ನು ಮುಂದಿಟ್ಟುಕೊಂಡು ದುಬಾರಿ ರೆಸ್ಟೋರೆಂಟ್‌ಗಳಿಗೆ ಗ್ರಾಹಕರನ್ನು ಕರೆತಂದು ಕಮಿಷನ್ ಪಡೆಯುವ ಸಂಘಟಿತ ‘ಡೇಟಿಂಗ್ ಕೆಫೆ ಸ್ಕ್ಯಾಮ್’ ಜಾಲಗಳು ದೆಹಲಿ, ಮುಂಬೈ, ಬೆಂಗಳೂರಿನಂತಹ ನಗರಗಳಲ್ಲಿ ಹೆಚ್ಚುತ್ತಿವೆ.
ಅಪರಿಚಿತ ಆನ್‌ಲೈನ್ ಪ್ರೊಫೈಲ್‌ಗಳೊಂದಿಗೆ ವೈಯಕ್ತಿಕ ಮಾಹಿತಿ, ಮೊಬೈಲ್ ಪಾಸ್‌ವರ್ಡ್ ಅಥವಾ ಯುಪಿಐ ಪಿನ್ ಹಂಚಿಕೊಳ್ಳಬಾರದು ಮತ್ತು ಮೊದಲ ಭೇಟಿಯನ್ನು ಸಾರ್ವಜನಿಕ, ಪರಿಚಿತ ಸ್ಥಳಗಳಲ್ಲೇ ನಿಗದಿಪಡಿಸಬೇಕು ಎಂದು ಸೈಬರ್ ತಜ್ಞರು ಎಚ್ಚರಿಸಿದ್ದಾರೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 1:53 pm, Wed, 19 August 26