ದೆಹಲಿ ಅಬಕಾರಿ ನೀತಿ ಪ್ರಕರಣ: ತಿಹಾರ್ ಜೈಲಿನಲ್ಲಿ ಮನೀಶ್ ಸಿಸೋಡಿಯಾರನ್ನು ಮತ್ತೆ ಪ್ರಶ್ನಿಸಿದ ಇಡಿ
ಗುರುವಾರ ಇಡಿ ಮುಂದೆ ಹಾಜರಾಗಬೇಕಿದ್ದ ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ಅವರ ಪುತ್ರಿ ಕೆ ಕವಿತಾ ಅವರು ಮಾರ್ಚ್ 11 ರಂದು ಏಜೆನ್ಸಿಯ ಮುಂದೆ ಹಾಜರಾಗುವುದಾಗಿ ಹೇಳಿದ್ದಾರೆ. ಈ ಬೆಳವಣಿಗೆಯ ಬಗ್ಗೆ ತಿಳಿದಿರುವ ಜನರು ಇಡಿ ಕವಿತಾ ಅವರ ಮನವಿಯನ್ನು ಸ್ವೀಕರಿಸಿದೆ ಎಂದು ಹೇಳಿದ್ದಾರೆ.
ಕೆಲವು ಮದ್ಯ ಉದ್ಯಮಿಗಳಿಗೆ ಮತ್ತು ರಾಜಕಾರಣಿಗಳಿಗೆ ಸಹಾಯ ಮಾಡುವುದಕ್ಕಾಗಿ ಆಮ್ ಆದ್ಮಿ ಪಕ್ಷಕ್ಕೆ (Aam Aadmi Party) ₹ 100 ಕೋಟಿ ಲಂಚ ಸಂದಾಯವಾಗಿದೆ ಎಂಬ ಆರೋಪ ಜತೆಗೆ ದೆಹಲಿ ಅಬಕಾರಿ ನೀತಿ ಅಕ್ರಮಗಳಲ್ಲಿ ಅವರ ಪಾತ್ರ ಮತ್ತು ಸಂಬಂಧಗಳ ಬಗ್ಗೆ ಜಾರಿ ನಿರ್ದೇಶನಾಲಯ (Enforcement Directorate) ಗುರುವಾರ ದೆಹಲಿಯ ಮಾಜಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ (Manish Sisodia) ಅವರನ್ನು ತಿಹಾರ್ ಜೈಲಿನಲ್ಲಿ ಎರಡನೇ ಬಾರಿಗೆ ಪ್ರಶ್ನಿಸಿದೆ. ಸಾಕ್ಷ್ಯ ನಾಶ (ಆಗಾಗ್ಗೆ ಫೋನ್‌ಗಳನ್ನು ಬದಲಾಯಿಸುವ ಮೂಲಕ), ಸಗಟು ವ್ಯಾಪಾರಿಗಳ ಲಾಭಾಂಶವನ್ನು 5% ರಿಂದ ದಿಢೀರನೆ 12% ಗೆ ಬದಲಾಯಿಸುವುದು, ಎಎಪಿ ನಾಯಕರ ಪರವಾಗಿ ವಿಜಯ್ ನಾಯರ್‌ಗೆ ಆಪಾದಿತ ಸೌತ್ ಗ್ರೂಪ್ ಪಾವತಿಸಿದ ಕಿಕ್‌ಬ್ಯಾಕ್ ಮತ್ತು ನೀತಿ ಸಂಬಂಧಿತ ಸಚಿವರ ಗುಂಪು (GoM) ವರದಿಯನ್ನು ಬದಲಾಯಿಸುವ ನಿರ್ಧಾರದ ಬಗ್ಗೆ ಸಿಸೋಡಿಯಾ ಅವರನ್ನು ಪ್ರಶ್ನಿಸಲಾಗಿದೆ ಎಂದು ಈ ಬಗ್ಗೆ ತಿಳಿದಿರುವ ಜನರು ಹೇಳಿರುವುದಾಗಿ ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ. ಸಿಸೋಡಿಯಾ ವಿಚಾರಣೆ ಶುಕ್ರವಾರವೂ ಮುಂದುವರಿಯಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
“ನಾವು ಪ್ರಸ್ತುತ ದೊಡ್ಡ ಪಿತೂರಿ ಮತ್ತು ಹಣದ ಹಾದಿಯ ಮೇಲೆ ಕೇಂದ್ರೀಕರಿಸುತ್ತಿದ್ದೇವೆ” ಎಂದು ಹೆಸರು ಹೇಳಲು ಇಚ್ಛಿಸದ ಅಧಿಕಾರಿಯೊಬ್ಬರು ಹೇಳಿದರು.
ಫೆಬ್ರವರಿ 26 ರಂದು ಸಿಸೋಡಿಯಾ ಅವರನ್ನು ಸಿಬಿಐ ಬಂಧಿಸಿತ್ತು. ದೆಹಲಿ ನ್ಯಾಯಾಲಯ ಸೋಮವಾರ ಅವರನ್ನು ಮಾರ್ಚ್ 20 ರವರೆಗೆ ನ್ಯಾಯಾಂಗ ಬಂಧನಕ್ಕೆ ಕಳುಹಿಸಿದೆ. ಏತನ್ಮಧ್ಯೆ, ಗುರುವಾರ ಇಡಿ ಮುಂದೆ ಹಾಜರಾಗಬೇಕಿದ್ದ ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ಅವರ ಪುತ್ರಿ ಕೆ ಕವಿತಾ ಅವರು ಮಾರ್ಚ್ 11 ರಂದು ಏಜೆನ್ಸಿಯ ಮುಂದೆ ಹಾಜರಾಗುವುದಾಗಿ ಹೇಳಿದ್ದಾರೆ. ಈ ಬೆಳವಣಿಗೆಯ ಬಗ್ಗೆ ತಿಳಿದಿರುವ ಜನರು ಇಡಿ ಕವಿತಾ ಅವರ ಮನವಿಯನ್ನು ಸ್ವೀಕರಿಸಿದೆ ಎಂದು ಹೇಳಿದ್ದಾರೆ.
ಭಾರತ್ ರಾಷ್ಟ್ರ ಸಮಿತಿ (ಬಿಆರ್‌ಎಸ್) ಶಾಸಕಿ ಕವಿತಾ ಗುರುವಾರ ದೆಹಲಿಗೆ ಬಂದಿಳಿದಿದ್ದಾರೆ.
“ನಾನು ಮಾರ್ಚ್ 11, 2023 ರಂದು ನವದೆಹಲಿಯಲ್ಲಿ ಇಡಿ ಮುಂದೆ ಹಾಜರಾಗುತ್ತೇನೆ” ಎಂದು ಕವಿತಾ ಬುಧವಾರ ಟ್ವೀಟ್ ಮಾಡಿದ್ದಾರೆ. ಈ ವಾರದ ಆರಂಭದಲ್ಲಿ, ಅವರು ತನಿಖಾ ಸಂಸ್ಥೆಯೊಂದಿಗೆ ಸಂಪೂರ್ಣವಾಗಿ ಸಹಕರಿಸುವುದಾಗಿ ಹೇಳಿದರು ಆದರೆ ಮಹಿಳಾ ಮೀಸಲಾತಿ ಮಸೂದೆಯನ್ನು ಬೆಂಬಲಿಸಿ ಮಾರ್ಚ್ 10 ರಂದು ದೆಹಲಿಯಲ್ಲಿ ತಮ್ಮ ಉದ್ದೇಶಿತ ಧರಣಿಯನ್ನು ಗಮನದಲ್ಲಿಟ್ಟುಕೊಂಡು ಹಾಜರಾಗುವ ದಿನಾಂಕದ ಬಗ್ಗೆ ಕಾನೂನು ಅಭಿಪ್ರಾಯವನ್ನು ಪಡೆಯುವುದಾಗಿ ಹೇಳಿದರು.
ತಮ್ಮ ಅಪ್ಪ, ಮುಖ್ಯಮಂತ್ರಿ ಕೆ ಚಂದ್ರಶೇಖರ ರಾವ್ ಅವರ ಹೋರಾಟದ ವಿರುದ್ಧ ಬೆದರಿಸುವ ಈ ತಂತ್ರಗಳು ಮತ್ತು ಬಿಆರ್‌ಎಸ್ ಅವರನ್ನು ತಡೆಯುವುದಿಲ್ಲ ಎಂದು ಕವಿತಾ ಹೇಳಿದ್ದಾರೆ.
ಅಬಕಾರಿ ನೀತಿ ಪ್ರಕರಣದಲ್ಲಿ ಭಾಗಿಯಾಗಿರುವ ಆಪಾದಿತ ‘ಸೌತ್ ಗ್ರೂಪ್’ನಲ್ಲಿ ಕವಿತಾ ಅವರ ಹಿತಾಸಕ್ತಿಗಳನ್ನು ಪ್ರತಿನಿಧಿಸಿದ್ದಾರೆ ಎಂದು ಆರೋಪಿಸಲಾಗಿರುವ ಅರುಣ್ ರಾಮಚಂದ್ರ ಪಿಳ್ಳೈ ಅವರನ್ನು ಇಡಿ ವಿಚಾರಿಸುವ ನಿರೀಕ್ಷೆ ಇದೆ.
ಕವಿತಾ ಅವರ ಬೇನಾಮಿ ಹೂಡಿಕೆಗಳನ್ನು ಪಿಳ್ಳೈ ಪ್ರತಿನಿಧಿಸಿದ್ದಾರೆ ಎಂದು ಫೆಡರಲ್ ಏಜೆನ್ಸಿ ಹೇಳಿಕೊಂಡಿದೆ. ಅವರು ಕಾರ್ಟೆಲ್ ರಚನೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು ಮತ್ತು ಸೌತ್ ಗ್ರೂಪ್‌ನಿಂದ ಎಎಪಿಗೆ ₹ 100 ಕೋಟಿಗಳಷ್ಟು ಕಿಕ್‌ಬ್ಯಾಕ್‌ನಲ್ಲಿ ಪಾಲುದಾರರಾಗಿದ್ದರು. ಸೌತ್ ಗ್ರೂಪ್‌ನಲ್ಲಿ ವೈಎಸ್‌ಆರ್ ಕಾಂಗ್ರೆಸ್ ಸಂಸದ ಮಾಗುಂಟ ಶ್ರೀನಿವಾಸುಲು ರೆಡ್ಡಿ, ಅವರ ಪುತ್ರ ರಾಘವ್ ಮಾಗುಂಟ, ಶರತ್ ರೆಡ್ಡಿ (ಅರಬಿಂದೋ ಗ್ರೂಪ್‌ನ ಪ್ರವರ್ತಕ), ಮತ್ತು ಕೆ ಕವಿತಾ (ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ಅವರ ಪುತ್ರಿ) ಮತ್ತು ದೆಹಲಿ ಮೂಲದ ಉದ್ಯಮಿ ಸಮೀರ್ ಮಹೇಂದ್ರು ಇದ್ದಾರೆ. ವಿಜಯ್ ನಾಯರ್ ಮತ್ತು ಇತರ ಮದ್ಯದ ಉದ್ಯಮಿಗಳೊಂದಿಗಿನ ಸಭೆಗಳಲ್ಲಿ ಅಭಿಷೇಕ್ ಬೋಯಿನ್ಪಲ್ಲಿ, ಅರುಣ್ ಪಿಳ್ಳೈ ಮತ್ತು ಬುಚ್ಚಿಬಾಬು ಪ್ರತಿನಿಧಿಸಿದ್ದರು.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ