15 ವರ್ಷಕ್ಕಿಂತ ಹಳೆಯದಾದ 43 ಲಕ್ಷ ಪೆಟ್ರೋಲ್ ವಾಹನಗಳ ನೋಂದಣಿಯನ್ನು ಶೀಘ್ರದಲ್ಲೇ ರದ್ದುಗೊಳಿಸಲಿದೆ ದೆಹಲಿ ಸರ್ಕಾರ

ಸುಪ್ರೀಂಕೋರ್ಟ್ ಮತ್ತು ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯ (NGT) ಆದೇಶದ ನಂತರ, ಸಾರಿಗೆ ಇಲಾಖೆ ಡಿಸೆಂಬರ್ 14 ರಂದು ಆದೇಶ ಹೊರಡಿಸಿದ್ದು, ಜನವರಿ 1 ರಿಂದ ಎಲ್ಲಾ ಹೆಚ್ಚಿನ ಡೀಸೆಲ್ ವಾಹನಗಳ ನೋಂದಣಿ ರದ್ದುಗೊಳಿಸಲಾಗುವುದು ಎಂದು ಹೇಳಿತ್ತು.

15 ವರ್ಷಕ್ಕಿಂತ ಹಳೆಯದಾದ 43 ಲಕ್ಷ ಪೆಟ್ರೋಲ್ ವಾಹನಗಳ ನೋಂದಣಿಯನ್ನು ಶೀಘ್ರದಲ್ಲೇ ರದ್ದುಗೊಳಿಸಲಿದೆ ದೆಹಲಿ ಸರ್ಕಾರ
ಪ್ರಾತಿನಿಧಿಕ ಚಿತ್ರ
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on: Jan 03, 2022 | 12:57 PM

ದೆಹಲಿ: ದೆಹಲಿ ಸರ್ಕಾರವು (Delhi government) ಜನವರಿ 1 ರಂದು 10 ವರ್ಷಕ್ಕಿಂತ ಹಳೆಯದಾದ ಸುಮಾರು 1 ಲಕ್ಷ ಡೀಸೆಲ್ ವಾಹನಗಳ (diesel vehicles)ನೋಂದಣಿ ರದ್ದುಗೊಳಿಸಿದೆ. ಈ ವಾಹನಗಳ ಮಾಲೀಕರು ಈಗ ಇತರ ರಾಜ್ಯಗಳಲ್ಲಿ ಮರು-ನೋಂದಣಿಗಾಗಿ ನಿರಾಕ್ಷೇಪಣಾ ಪ್ರಮಾಣಪತ್ರಗಳಿಗೆ (NOC) ಅರ್ಜಿ ಸಲ್ಲಿಸಬೇಕಾಗುತ್ತದೆ. ಇಲ್ಲವೇ ತಮ್ಮ ವಾಹನಗಳನ್ನು ಅಧಿಕೃತ ಸ್ಕ್ರ್ಯಾಪ್‌ಯಾರ್ಡ್‌ಗಳಲ್ಲಿ ಗುಜರಿಗೆ ಹಾಕಬೇಕು ಅಥವಾ ಅವುಗಳನ್ನು ಇ-ವಾಹನಗಳಾಗಿ (e-vehicles) ಪರಿವರ್ತಿಸಬೇಕಾಗಿದೆ. 15 ವರ್ಷಕ್ಕಿಂತ ಹಳೆಯದಾದ ಪೆಟ್ರೋಲ್ ವಾಹನಗಳ ಮಾಲೀಕರಿಗೆ ಎಚ್ಚರಿಕೆ ನೀಡಿದ ಸಾರಿಗೆ ಇಲಾಖೆಯ ಅಧಿಕಾರಿಗಳು ಮುಂದಿನ ದಿನಗಳಲ್ಲಿ ಇವುಗಳ ನೋಂದಣಿಯನ್ನು ರದ್ದುಗೊಳಿಸಲಾಗುವುದು ಎಂದು ಹೇಳಿದೆ. 11 ಲಕ್ಷ ಕಾರುಗಳು ಮತ್ತು 32 ಲಕ್ಷ ದ್ವಿಚಕ್ರ ವಾಹನಗಳು ಸೇರಿದಂತೆ ಸುಮಾರು 43 ಲಕ್ಷಕ್ಕಿಂತಲೂ ಹೆಚ್ಚು ಪೆಟ್ರೋಲ್ ವಾಹನಗಳಿವೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಅಧಿಕಾರಿಗಳ ಪ್ರಕಾರ, ಸಾರಿಗೆ ಇಲಾಖೆಯು ಶನಿವಾರ 10 ವರ್ಷ ಪೂರೈಸಿದ ಒಟ್ಟು 1,01,247 ಡೀಸೆಲ್ ವಾಹನಗಳ ನೋಂದಣಿ ರದ್ದುಗೊಳಿಸಿದೆ. ಇವುಗಳಲ್ಲಿ 87,000 ಕಾರುಗಳಿವೆ.

ಉಳಿದವು 2006 ರಿಂದ 2011 ರ ನಡುವೆ ನೋಂದಾಯಿಸಲಾದ ಸರಕು ಸಾಗಣೆ ವಾಹನ, ಬಸ್‌ಗಳು, ವಾಣಿಜ್ಯ ಟ್ರ್ಯಾಕ್ಟರ್‌ಗಳಾಗಿವೆ.  ಇಲಾಖೆಯು ಅಂತಹ ವಾಹನಗಳ ಮಾಲೀಕರಿಗೆ ರಸ್ತೆಗಳಲ್ಲಿ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಓಡಿಸದಂತೆ ಅಥವಾ ನಿಲ್ಲಿಸದಂತೆ ಕಟ್ಟುನಿಟ್ಟಾಗಿ ಎಚ್ಚರಿಸಿದೆ, ಇಲ್ಲದಿದ್ದರೆ ವಾಹನಗಳನ್ನು ಜಾರಿ ತಂಡವು ವಶಪಡಿಸಿಕೊಂಡು ಗುಜರಿಗೆ ಹಾಕುತ್ತದೆ.

ಸುಪ್ರೀಂಕೋರ್ಟ್ ಮತ್ತು ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯ (NGT) ಆದೇಶದ ನಂತರ, ಸಾರಿಗೆ ಇಲಾಖೆ ಡಿಸೆಂಬರ್ 14 ರಂದು ಆದೇಶ ಹೊರಡಿಸಿದ್ದು, ಜನವರಿ 1 ರಿಂದ ಎಲ್ಲಾ ಹೆಚ್ಚಿನ ಡೀಸೆಲ್ ವಾಹನಗಳ ನೋಂದಣಿ ರದ್ದುಗೊಳಿಸಲಾಗುವುದು ಎಂದು ಹೇಳಿತ್ತು.

ಎನ್​​ಜಿಟಿ ಆದೇಶವನ್ನು ಅನುಸರಿಸಿ, ಇಲಾಖೆಯು 1,01,247 ಡೀಸೆಲ್ ವಾಹನಗಳ ನೋಂದಣಿ ರದ್ದುಗೊಳಿಸಿದೆ. ಈಗ, ಮಾಲೀಕರು ತಮ್ಮ ವಾಹನವನ್ನು ಗುಜರಿಗೆ ಹಾಕಬಹುದು ಮತ್ತು ಉತ್ತಮ ಬೆಲೆಯನ್ನು ಪಡೆಯಬಹುದು. ಮುಂದಿನ ಖರೀದಿಯಲ್ಲಿ ಶೇ25 ವರೆಗೆ ರಸ್ತೆ ತೆರಿಗೆ ವಿನಾಯಿತಿ ಪಡೆಯಬಹುದು ಅಥವಾ ಇತರ ರಾಜ್ಯಗಳಲ್ಲಿ ಮಾರಾಟ ಮಾಡಲು ಅಥವಾ ನೋಂದಾಯಿಸಲು ನಿರಾಕ್ಷೇಪಣಾ ಪ್ರಮಾಣಪತ್ರಗಳಿಗೆ (NOC) ಅರ್ಜಿ ಸಲ್ಲಿಸಬಹುದು.

ನಿರಾಕ್ಷೇಪಣಾ ಪ್ರಮಾಣಪತ್ರ ಪಡೆಯುವ ಕಾರ್ಯವಿಧಾನವು ಸಾರಿಗೆ ಇಲಾಖೆಯ ವೆಬ್‌ಸೈಟ್ ಮತ್ತು ದೆಹಲಿ ಸರ್ಕಾರದ ಪೋರ್ಟಲ್‌ನಲ್ಲಿ ಲಭ್ಯವಿದೆ. ಇದಲ್ಲದೆ, ಸಾರಿಗೆ ಇಲಾಖೆಯಿಂದ ಅನುಮೋದಿಸಲಾದ ಎಂಪನೆಲ್ಡ್ ಏಜೆನ್ಸಿಗಳ ಮೂಲಕ ಮಾಲೀಕರು ತಮ್ಮ ವಾಹನವನ್ನು ಎಲೆಕ್ಟ್ರಿಕ್ ಮೋಡ್‌ಗೆ ಪರಿವರ್ತಿಸಬಹುದು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಇದನ್ನೂ ಓದಿ: ದೆಹಲಿಯಲ್ಲಿ ಒಮಿಕ್ರಾನ್ ಪ್ರಕರಣ ಏರಿಕೆ; ಆಸ್ಪತ್ರೆಗೆ ದಾಖಲು ತುಂಬಾ ಕಡಿಮೆ ಇರುವುದರಿಂದ ಭಯಪಡುವ ಅಗತ್ಯವಿಲ್ಲ ಎಂದ ಅರವಿಂದ ಕೇಜ್ರಿವಾಲ್