H1N1 Cases: ದೆಹಲಿಯಲ್ಲಿ 2,300 ದಾಟಿದ ಹಂದಿ ಜ್ವರ ಪ್ರಕರಣಗಳು: ಭಯಪಡಬೇಡಿ, ಇದು ಹೊಸ ತಳಿಯಲ್ಲ ಎಂದ ಐಸಿಎಂಆರ್

ದೆಹಲಿಯಲ್ಲಿ H1N1 ಹಂದಿ ಜ್ವರ ಪ್ರಕರಣಗಳು 2,300 ದಾಟಿವೆ. ಆದರೆ, ಇದು ಹೊಸ ತಳಿಯಲ್ಲ ಎಂದು ICMR ಸ್ಪಷ್ಟಪಡಿಸಿದೆ. ಮಳೆಗಾಲದಲ್ಲಿ ಸಾಮಾನ್ಯವಾದ ಈ ಜ್ವರದಿಂದ ಆತಂಕಪಡುವ ಅಗತ್ಯವಿಲ್ಲ. ಪರಿಸ್ಥಿತಿ ನಿಯಂತ್ರಣದಲ್ಲಿದ್ದು, ಆಸ್ಪತ್ರೆಗಳಲ್ಲಿ ಸಾಕಷ್ಟು ಸೌಲಭ್ಯಗಳಿವೆ. ಸೌಮ್ಯ ಲಕ್ಷಣಗಳಿದ್ದರೆ ಮನೆಯಲ್ಲಿ ವಿಶ್ರಾಂತಿ ಮತ್ತು ದ್ರವಾಹಾರ ಸೇವಿಸಿ ಗುಣಮುಖರಾಗಬಹುದು.

H1N1 Cases: ದೆಹಲಿಯಲ್ಲಿ 2,300 ದಾಟಿದ ಹಂದಿ ಜ್ವರ ಪ್ರಕರಣಗಳು: ಭಯಪಡಬೇಡಿ, ಇದು ಹೊಸ ತಳಿಯಲ್ಲ ಎಂದ ಐಸಿಎಂಆರ್
ಐಸಿಎಂಆರ್​ ಮಹಾನಿರ್ದೇಶಕ ರಾಜೀವ್

Updated on: Aug 26, 2026 | 9:52 AM

ನವದೆಹಲಿ, ಆಗಸ್ಟ್ 26: ದೇಶದ ರಾಜಧಾನಿ ದೆಹಲಿಯಲ್ಲಿ ಹಂದಿ ಜ್ವರ (H1N1 Swine Flu) ಪ್ರಕರಣಗಳು ಗಣನೀಯವಾಗಿ ಏರಿಕೆಯಾಗಿದ್ದು, ಒಟ್ಟು ಪ್ರಕರಣಗಳ ಸಂಖ್ಯೆ 2,308 ಕ್ಕೆ ತಲುಪಿದೆ. ಇದರೊಂದಿಗೆ ಇನ್ಫ್ಲುಯೆನ್ಸ-ಬಿ ಮತ್ತು ಕೋವಿಡ್ ಸೋಂಕುಗಳೂ ಕೂಡ ಪತ್ತೆಯಾಗುತ್ತಿದ್ದು, ದೆಹಲಿ ಆರೋಗ್ಯ ಇಲಾಖೆ ಹಾಗೂ ಕೇಂದ್ರ ಆರೋಗ್ಯ ಸಚಿವಾಲಯವು ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿವೆ.

ಆದಾಗ್ಯೂ, ದೇಶದಲ್ಲಿ ಯಾವುದೇ ಹೊಸ ಅಥವಾ ಮಾರಕ ವೈರಸ್ ರೂಪಾಂತರ ಪತ್ತೆಯಾಗಿಲ್ಲ. ಇದು ಮಳೆಗಾಲ ಮತ್ತು ಚಳಿಗಾಲದ ಆರಂಭದಲ್ಲಿ ಸಾಮಾನ್ಯವಾಗಿ ಕಂಡುಬರುವ ಸಾಮಾನ್ಯ ಜ್ವರ ಆಗಿರುವುದರಿಂದ ನಾಗರಿಕರು ಯಾವುದೇ ಕಾರಣಕ್ಕೂ ಆತಂಕಪಡುವ ಅಗತ್ಯವಿಲ್ಲ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ICMR) ಹಾಗೂ ವಿಶ್ವ ಆರೋಗ್ಯ ಸಂಸ್ಥೆಯ (WHO) ತಜ್ಞರು ಸ್ಪಷ್ಟಪಡಿಸಿದ್ದಾರೆ.

ಪರಿಸ್ಥಿತಿ ನಿಯಂತ್ರಣದಲ್ಲಿದೆ: ದೆಹಲಿ ಆರೋಗ್ಯ ಸಚಿವ ಡಾ. ಪಂಕಜ್ ಸಿಂಗ್ ಅವರು ಎನ್‌ಡಿಎಂಸಿ, ಎಂಸಿಡಿ ಹಾಗೂ ಸೇನಾ ಕಂಟೋನ್ಮೆಂಟ್ ಅಧಿಕಾರಿಗಳೊಂದಿಗೆ ಉನ್ನತ ಮಟ್ಟದ ಸಭೆ ನಡೆಸಿದ್ದಾರೆ.

ಆಸ್ಪತ್ರೆಗಳಲ್ಲಿ ಸಾಕಷ್ಟು ಸೌಲಭ್ಯ: ರಾಜಧಾನಿಯ ಆಸ್ಪತ್ರೆಗಳಲ್ಲಿ ಸಾಕಷ್ಟು ಬೆಡ್‌ಗಳು, ಪ್ರತ್ಯೇಕ ಐಸೋಲೇಶನ್ ವಾರ್ಡ್‌ಗಳು, ವೈದ್ಯರು ಮತ್ತು ಅಗತ್ಯ ಔಷಧಿಗಳ ದಾಸ್ತಾನು ಲಭ್ಯವಿದೆ.

ಗಂಭೀರ ಸ್ಥಿತಿಯಲ್ಲಿ ಯಾರೂ ಇಲ್ಲ: ವರದಿಯಾದ ಸುಮಾರು 3 ಸಾವಿರ ರೋಗಿಗಳಲ್ಲಿ (H1N1 ಮತ್ತು ಇನ್ಫ್ಲುಯೆನ್ಸ ಬಿ ಸೇರಿದಂತೆ) ಬಹುತೇಕರು ಸಾಮಾನ್ಯ ಚಿಕಿತ್ಸೆಯೊಂದಿಗೆ ಚೇತರಿಸಿಕೊಂಡು ಮನೆಗೆ ಮರಳುತ್ತಿದ್ದಾರೆ. ಯಾವುದೇ ರೋಗಿ ಐಸಿಯು ಅಥವಾ ವೆಂಟಿಲೇಟರ್‌ನಲ್ಲಿಲ್ಲ ಹಾಗೂ ಯಾವುದೇ ಸಾವು ಸಂಭವಿಸಿಲ್ಲ ಎಂದು ಸಚಿವರು ಸ್ಪಷ್ಟಪಡಿಸಿದ್ದಾರೆ.

ಮತ್ತಷ್ಟು ಓದಿ:

H1N1 ಫ್ಲೂ ಆತಂಕ: ಆರೋಗ್ಯ ಇಲಾಖೆಯಿಂದ ಪೋಷಕರು, ಶಾಲೆಗಳಿಗೆ ಶೀಘ್ರ ಹೊಸ ಮಾರ್ಗಸೂಚಿ

 

ಹೊಸ ವೈರಸ್ ಅಲ್ಲ

ಐಸಿಎಂಆರ್​ ಮಹಾನಿರ್ದೇಶಕ ರಾಜೀವ್ ಮಾತನಾಡಿ, ಕೋವಿಡ್ ನಂತರ ದೇಶದಾದ್ಯಂತ 73 ಕ್ಕೂ ಹೆಚ್ಚು ಉನ್ನತ ಪ್ರಯೋಗಾಲಯಗಳ ಮೂಲಕ ವೈರಸ್​ಗಳ ಮೇಲೆ ನಿಗಾ ಇಡಲಾಗುತ್ತಿದೆ. ಪ್ರಸ್ತುತ ಹರಡುತ್ತಿರುವ H1N1 ವೈರಸ್ ಹಿಂದಿನ ವರ್ಷಗಳ ತಳಿಗೆ ಹೋಲಿಕೆಯಾಗುತ್ತಿದ್ದು, ಯಾವುದೇ ಅಸಾಮಾನ್ಯ ಆನುವಂಶಿಕ ಬದಲಾವಣೆ ಹೊಂದಿಲ್ಲ.

ಪೋಸ್ಟ್​

ಡಾ. ಸೌಮ್ಯಾ ಸ್ವಾಮಿನಾಥನ್ ಮಾತನಾಡಿ, ಭಾರತದಲ್ಲಿ ಮುಂಗಾರು ಸಮಯದಲ್ಲಿ ಇನ್ಫ್ಲುಯೆನ್ಸ ಸೋಂಕುಗಳು ಹೆಚ್ಚುವುದು ಸಾಮಾನ್ಯ ಪ್ರಕ್ರಿಯೆ. ದೆಹಲಿ, ಬೆಂಗಳೂರು ಮುಂತಾದ ಮೆಟ್ರೋ ನಗರಗಳಲ್ಲಿ ರೋಗನಿರ್ಣಯ ಪರೀಕ್ಷೆಗಳು ಹೆಚ್ಚಾಗಿರುವುದರಿಂದ ಪ್ರಕರಣಗಳ ಸಂಖ್ಯೆ ಹೆಚ್ಚಾಗಿ ಕಾಣಿಸುತ್ತಿದೆ ಅಷ್ಟೇ.

ರೋಗಲಕ್ಷಣಗಳು

-ಏಕಾಏಕಿ ಬರುವ ತೀವ್ರ ಜ್ವರ ಮತ್ತು ಶೀತ

-ತೀವ್ರ ಗಂಟಲು ನೋವು, ಒಣ ಕೆಮ್ಮು ಮತ್ತು ಸೀನುವಿಕೆ

-ವಿಪರೀತ ತಲೆನೋವು, ಮೈ-ಕೈ ಸ್ನಾಯುಗಳ ನೋವು ಮತ್ತು ಸುಸ್ತು,ಆಯಾಸ

-ಮೂಗು ಕಟ್ಟುವುದು ಅಥವಾ ಮೂಗಿನಲ್ಲಿ ನೀರು ಸುರಿಯುವುದು

ವಿಶ್ರಾಂತಿ ಮತ್ತು ದ್ರವಾಹಾರ: ಸೋಂಕು ಸಾಮಾನ್ಯವಾಗಿ 4 ರಿಂದ 7 ದಿನಗಳಲ್ಲಿ ತಾನಾಗಿಯೇ ಗುಣಮುಖವಾಗುತ್ತದೆ. ರೋಗಿಗಳು 2-3 ದಿನಗಳ ಕಾಲ ಸಂಪೂರ್ಣ ವಿಶ್ರಾಂತಿ ಪಡೆಯಬೇಕು, ಬಿಸಿ ನೀರು, ಸೂಪ್ ಮತ್ತು ಸಾಕಷ್ಟು ದ್ರವ ಪದಾರ್ಥಗಳನ್ನು ಸೇವಿಸಬೇಕು.

ಪೋಸ್ಟ್​

ಇದು ವೈರಲ್ ಸೋಂಕಾಗಿರುವುದರಿಂದ ವೈದ್ಯರ ಸಲಹೆಯಿಲ್ಲದೆ ಆ್ಯಂಟಿಬಯೋಟಿಕ್ ಮಾತ್ರೆಗಳನ್ನು ತೆಗೆದುಕೊಳ್ಳಬಾರದು. 65 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರು, 5 ವರ್ಷದೊಳಗಿನ ಪುಟ್ಟ ಮಕ್ಕಳು, ಗರ್ಭಿಣಿಯರು ಹಾಗೂ ಕ್ಯಾನ್ಸರ್ ಕೀಮೋಥೆರಪಿ ಅಥವಾ ರೋಗನಿರೋಧಕ ಶಕ್ತಿ ಕಡಿಮೆ ಇರುವವರು ತೀವ್ರ ಎಚ್ಚರಿಕೆ ವಹಿಸಬೇಕು.

ತುರ್ತು ವೈದ್ಯಕೀಯ ಚಿಕಿತ್ಸೆ ಯಾವಾಗ ಅಗತ್ಯ?: ಉಸಿರಾಟದ ತೊಂದರೆ, ಉಸಿರಾಡುವಾಗ ಎದೆನೋವು, ಅತಿಯಾದ ಆಲಸ್ಯ ಅಥವಾ ಆಕ್ಸಿಜನ್ ಮಟ್ಟ ಕುಸಿದರೆ ತಕ್ಷಣ ಆಸ್ಪತ್ರೆಗೆ ದಾಖಲಾಗಬೇಕು.

ಮುನ್ನೆಚ್ಚರಿಕೆ ನಿಯಮಗಳು: ಜನದಟ್ಟಣೆಯ ಸ್ಥಳಗಳಲ್ಲಿ ಮಾಸ್ಕ್ ಧರಿಸುವುದು, ಕೈಗಳನ್ನು ಸಾಬೂನಿನಿಂದ ಆಗಾಗ ತೊಳೆದುಕೊಳ್ಳುವುದು ಮತ್ತು ಸೋಂಕಿತ ವ್ಯಕ್ತಿಗಳಿಂದ ಕನಿಷ್ಠ 2 ಮೀಟರ್ ಅಂತರ ಕಾಯ್ದುಕೊಳ್ಳುವುದು ಸೂಕ್ತ. ಅಪಾಯದಲ್ಲಿರುವ ವರ್ಗದವರು ವೈದ್ಯರ ಸಲಹೆಯಂತೆ ಇನ್ಫ್ಲುಯೆನ್ಸ ಲಸಿಕೆ (Flu Vaccine) ಪಡೆಯಬಹುದು.

ವಿ.ಸೂ:ಇದು ಟಿವಿ9ನ ಅಧಿಕೃತ ಮಾಹಿತಿಯಾಗಿರುವುದಿಲ್ಲ, ಜ್ವರ ಅಥವಾ ಯಾವುದೇ ಸೋಂಕಿನ ಲಕ್ಷಣಗಳು ಕಂಡುಬಂದಲ್ಲಿ ವೈದ್ಯರನ್ನು ಸಂಪರ್ಕಿಸಿ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

 

Loading...
Unable to load recommendations.
Follow Us