₹105 ಕೋಟಿ ತೆರಿಗೆ ವಸೂಲಾತಿ ವಿರುದ್ಧ ಕಾಂಗ್ರೆಸ್‌ನ ಮನವಿ ವಜಾಗೊಳಿಸಿದ ದೆಹಲಿ ಹೈಕೋರ್ಟ್
ಪಕ್ಷದಿಂದ ₹ 100 ಕೋಟಿಗೂ ಹೆಚ್ಚು ಬಾಕಿ ತೆರಿಗೆ ವಸೂಲಿ ಮಾಡಲು ನ್ಯಾಯಮಂಡಳಿಗೆ ಅನುಮತಿ ನೀಡಿದ ದೆಹಲಿ ಹೈಕೋರ್ಟ್ ಆದೇಶವನ್ನು ರದ್ದುಗೊಳಿಸುವಂತೆ ಕಾಂಗ್ರೆಸ್ ಸುಪ್ರೀಂಕೋರ್ಟ್‌ಗೆ ಮೊರೆ ಹೋಗಲಿದೆ ಎಂದು ಮೂಲಗಳು ತಿಳಿಸಿವೆ. ಐಟಿಎಟಿ ವಿಚಾರಣೆಗೂ ಮುನ್ನ ಆದಾಯ ತೆರಿಗೆ ಇಲಾಖೆಯು 2018-19ನೇ ಹಣಕಾಸು ವರ್ಷದ ತೆರಿಗೆಯನ್ನು ಪಾವತಿಸುವಂತೆ ಕಾಂಗ್ರೆಸ್‌ಗೆ ಫೆಬ್ರವರಿ 13ರಂದು ನೋಟಿಸ್ ಕಳುಹಿಸಿತ್ತು.
ದೆಹಲಿ ಮಾರ್ಚ್ 13: ಕಾಂಗ್ರೆಸ್ (Congress) ಪಕ್ಷದಿಂದ ₹ 105 ಕೋಟಿ ಬಾಕಿ ತೆರಿಗೆ ವಸೂಲಾತಿಗಾಗಿ ಆದಾಯ ತೆರಿಗೆ ಇಲಾಖೆಯ ಬೇಡಿಕೆ ನೋಟಿಸ್‌ಗೆ ತಡೆಯಾಜ್ಞೆ ಕೋರಿ ಕಾಂಗ್ರೆಸ್ ಸಲ್ಲಿಸಿದ್ದ ಮನವಿಯನ್ನು ದೆಹಲಿ ಹೈಕೋರ್ಟ್ (Delhi High court) ಬುಧವಾರ ವಜಾಗೊಳಿಸಿದೆ. ಬಾಕಿ ಇರುವ ತೆರಿಗೆ ವಸೂಲಾತಿಗೆ ನೀಡಲಾಗಿದ್ದ ಬೇಡಿಕೆ ನೋಟಿಸ್‌ಗೆ ತಡೆ ನೀಡಲು ನಿರಾಕರಿಸಿ ಮಾರ್ಚ್‌ನಲ್ಲಿ ಆದಾಯ ತೆರಿಗೆ ಮೇಲ್ಮನವಿ ನ್ಯಾಯಮಂಡಳಿ (Income Tax Appellate Tribunal) ನೀಡಿದ್ದ ಆದೇಶವನ್ನು ಪ್ರಶ್ನಿಸಿ ಕಾಂಗ್ರೆಸ್ ಹೈಕೋರ್ಟ್ ಮೆಟ್ಟಿಲೇರಿತ್ತು. “ಅದರ ಪ್ರಕಾರ ನಾವು ತಡೆಹಿಡಿಯಲಾದ ಆದೇಶದಲ್ಲಿ ಮಧ್ಯಪ್ರವೇಶಿಸಲು ಯಾವುದೇ ಆಧಾರವಿಲ್ಲ” ಎಂದು ನ್ಯಾಯಮೂರ್ತಿ ಯಶವಂತ್ ವರ್ಮಾ ನೇತೃತ್ವದ ಹೈಕೋರ್ಟ್ ಪೀಠ ಹೇಳಿದೆ.
ಮಾರ್ಚ್ 8 ರಂದು ಐಟಿಎಟಿ ತನ್ನ ವಿರುದ್ಧ ವಸೂಲಾತಿ ಪ್ರಕ್ರಿಯೆಗಳನ್ನು ಪ್ರಾರಂಭಿಸುವ ಐಟಿ ಇಲಾಖೆಯ ಫೆಬ್ರವರಿ 13 ರ ನೋಟಿಸ್‌ಗೆ ತಡೆಯಾಜ್ಞೆ ಕೋರಿ ಪಕ್ಷದ ಅರ್ಜಿಯನ್ನು ವಜಾಗೊಳಿಸಿದ ನಂತರ ಕಾಂಗ್ರೆಸ್ ಹೈಕೋರ್ಟ್‌ಗೆ ಮೊರೆ ಹೋಗಿತ್ತು. 2018-19ರ ಮೌಲ್ಯಮಾಪನ ವರ್ಷಕ್ಕೆ ₹199 ಕೋಟಿಗಿಂತ ಹೆಚ್ಚಿನ ಆದಾಯವನ್ನು ಅಂದಾಜಿಸಿದಾಗ ಮೌಲ್ಯಮಾಪನ ಅಧಿಕಾರಿಯು ₹100 ಕೋಟಿಗೂ ಹೆಚ್ಚು ತೆರಿಗೆ ಪಾವತಿಸಬೇಕು ಎಂದು ಹೇಳಿದ್ದರು.
ಫೆಬ್ರವರಿಯಲ್ಲಿ ಆದಾಯ ತೆರಿಗೆ ಇಲಾಖೆಯು 2018-19ನೇ ಸಾಲಿಗೆ ₹210 ಕೋಟಿ ಆದಾಯ ತೆರಿಗೆ ಬೇಡಿಕೆಯ ಮೇರೆಗೆ ಪಕ್ಷದ ನಾಲ್ಕು ಪ್ರಮುಖ ಬ್ಯಾಂಕ್ ಖಾತೆಗಳನ್ನು ವಶಪಡಿಸಿಕೊಂಡಿದೆ. ಆದಾಯ ತೆರಿಗೆ ಇಲಾಖೆಯ ಕ್ರಮಕ್ಕೆ ತಡೆ ಕೋರಿ ಪಕ್ಷವು ನ್ಯಾಯಮಂಡಳಿಯನ್ನು ಸಂಪರ್ಕಿಸಿದ್ದು, ಖಾತೆಗಳನ್ನು ಸ್ಥಗಿತಗೊಳಿಸಿದರೆ ಪಕ್ಷವು ಬಿಲ್‌ಗಳು ಮತ್ತು ಸಂಬಳವನ್ನು ಪಾವತಿಸಲು ಸಾಧ್ಯವಾಗುವುದಿಲ್ಲ ಎಂದು ಹೇಳಿತ್ತು. ಪ್ರಕರಣದ ವಿಚಾರಣೆ ಮತ್ತು ತೀರ್ಪು ಬಾಕಿ ಉಳಿದಿದ್ದು, ಆದಾಯ ತೆರಿಗೆ ಇಲಾಖೆಯು ಕಾಂಗ್ರೆಸ್, ಐವೈಸಿ ಮತ್ತು ಎನ್‌ಎಸ್‌ಯುಐ ಖಾತೆಗಳಿಂದ ₹ 65 ಕೋಟಿಗಿಂತ ಹೆಚ್ಚಿನ ಹಣವನ್ನು ಸರ್ಕಾರಕ್ಕೆ ವರ್ಗಾಯಿಸಲು ಬ್ಯಾಂಕ್‌ಗಳನ್ನು ಒತ್ತಾಯಿಸಿದೆ ಎಂದು ಕಾಂಗ್ರೆಸ್ ಖಜಾಂಚಿ ಅಜಯ್ ಮಾಕೆನ್ ಫೆಬ್ರವರಿ 21 ರಂದು ಆರೋಪಿಸಿದ್ದರು.
ತೆರಿಗೆ ಅಧಿಕಾರಿಗಳು ಹೇಳುವ ಪ್ರಕಾರ ಪ್ರಕರಣವು ಕಾಂಗ್ರೆಸ್‌ನ ಮೌಲ್ಯಮಾಪನ ವರ್ಷಕ್ಕೆ (AY) 2018-19 ರ ತೆರಿಗೆ ಬಾಕಿಗಳಿಗೆ ಸಂಬಂಧಿಸಿದೆ. ತೆರಿಗೆ ಇಲಾಖೆಗೆ ಬರಬೇಕಾಗಿದ್ದ ಆರಂಭಿಕ ಮೊತ್ತ ರೂ103 ಕೋಟಿಯಾಗಿದ್ದು, ಬಡ್ಡಿಯ ಲೆಕ್ಕದಲ್ಲಿ ₹32 ಕೋಟಿ ಇದಕ್ಕೆ ಸೇರ್ಪಡೆಯಾಗಿದೆ. ಪಾವತಿಸಬೇಕಾದ ತೆರಿಗೆಯನ್ನು ಜುಲೈ 6, 2021 ರಂದು ₹105 ಕೋಟಿಗೆ ಮರು ಮೌಲ್ಯಮಾಪನ ಮಾಡಲಾಗಿದೆ.
ಇದರ ನಂತರ, ಕಾಂಗ್ರೆಸ್ ಕಮಿಷನರ್ ಅವರಿಗೆ ಮೇಲ್ಮನವಿಗಳನ್ನು ಸಲ್ಲಿಸಿತು. ಆದರೆ ಮನವಿ ಪ್ರಕ್ರಿಯೆಗಾಗಿ ತೆರಿಗೆಯ 20% ಅನ್ನು ಪಾವತಿಸಲಿಲ್ಲ. ಕೇವಲ ₹78 ಲಕ್ಷ ಪಾವತಿಸಿದ್ದು, ಆಯುಕ್ತರು ಮನವಿಯನ್ನು ವಜಾಗೊಳಿಸಿದ್ದಾರೆ. ಮೇ 2023 ರಲ್ಲಿ ಕಾಂಗ್ರೆಸ್ ಮತ್ತೆ ಮೇಲ್ಮನವಿ ಸಲ್ಲಿಸಿದ್ದು ಅಕ್ಟೋಬರ್‌ನಲ್ಲಿ ₹ 1.72 ಕೋಟಿ ಪಾವತಿಸಿತ್ತು.
ಸುಪ್ರೀಂ ಮೆಟ್ಟಿಲೇರಲು ನಿರ್ಧರಿಸಿದ ಕಾಂಗ್ರೆಸ್
ಪಕ್ಷದಿಂದ ₹ 100 ಕೋಟಿಗೂ ಹೆಚ್ಚು ಬಾಕಿ ತೆರಿಗೆ ವಸೂಲಿ ಮಾಡಲು ನ್ಯಾಯಮಂಡಳಿಗೆ ಅನುಮತಿ ನೀಡಿದ ದೆಹಲಿ ಹೈಕೋರ್ಟ್ ಆದೇಶವನ್ನು ರದ್ದುಗೊಳಿಸುವಂತೆ ಕಾಂಗ್ರೆಸ್ ಸುಪ್ರೀಂಕೋರ್ಟ್‌ಗೆ ಮೊರೆ ಹೋಗಲಿದೆ ಎಂದು ಮೂಲಗಳು ತಿಳಿಸಿವೆ. ಆದಾಯ ತೆರಿಗೆ ಮೇಲ್ಮನವಿ ನ್ಯಾಯಮಂಡಳಿ (ಐಟಿಎಟಿ) ಮಾರ್ಚ್ 8 ರಂದು ತೆರಿಗೆ ಪಾವತಿಸಲು ಕಾಂಗ್ರೆಸ್ ಪಕ್ಷಕ್ಕೆ ಹೇಳಿದ್ದ ನಂತರ ನಂತರ ಪಕ್ಷವು ಹೈಕೋರ್ಟ್ ಮೊರೆ ಹೋಗಿತ್ತು.
ಐಟಿಎಟಿಯ ಆದೇಶದಲ್ಲಿ ಮಧ್ಯಪ್ರವೇಶಿಸಲು ಯಾವುದೇ ಕಾರಣವಿಲ್ಲ ಎಂದು ನ್ಯಾಯಮೂರ್ತಿಗಳಾದ ಯಶವಂತ್ ವರ್ಮಾ ಮತ್ತು ಪುರುಷೇಂದ್ರ ಕುಮಾರ್ ಕೌರವ್ ಅವರ ಹೈಕೋರ್ಟ್ ಪೀಠ ಹೇಳಿದೆ.
ಇದನ್ನೂ ಓದಿ: Padmakar Valvi: ಕಾಂಗ್ರೆಸ್‌ನ ಹಿರಿಯ ನಾಯಕ ಪದ್ಮಾಕರ್ ವಾಲ್ವಿ ಬಿಜೆಪಿಗೆ ಸೇರ್ಪಡೆ
ಐಟಿಎಟಿ ವಿಚಾರಣೆಗೂ ಮುನ್ನ ಆದಾಯ ತೆರಿಗೆ ಇಲಾಖೆಯು 2018-19ನೇ ಹಣಕಾಸು ವರ್ಷದ ತೆರಿಗೆಯನ್ನು ಪಾವತಿಸುವಂತೆ ಕಾಂಗ್ರೆಸ್‌ಗೆ ಫೆಬ್ರವರಿ 13ರಂದು ನೋಟಿಸ್ ಕಳುಹಿಸಿತ್ತು. ತೆರಿಗೆ ಅಧಿಕಾರಿಗಳು ₹ 199 ಕೋಟಿಗೂ ಹೆಚ್ಚು ಆದಾಯವನ್ನು ಅಂದಾಜಿಸಿದ್ದಾರೆ. ಮೂಲ ತೆರಿಗೆ ಬೇಡಿಕೆ ₹ 102 ಕೋಟಿ ಇದ್ದು, ಬಡ್ಡಿ ಸೇರಿ ₹ 135.06 ಕೋಟಿಗೆ ಏರಿಕೆಯಾಗಿದೆ ಎಂದು ತೆರಿಗೆ ಇಲಾಖೆಯ ವಕೀಲರು ಹೈಕೋರ್ಟ್‌ಗೆ ತಿಳಿಸಿದರು. ಇಲ್ಲಿಯವರೆಗೆ ₹ 65.94 ಕೋಟಿ ವಸೂಲಿ ಮಾಡಲಾಗಿದೆ ಎಂದು ತೆರಿಗೆ ಇಲಾಖೆ ತಿಳಿಸಿದೆ ಎಂದು ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ.
ಲೋಕಸಭೆ ಚುನಾವಣೆಗೆ ಮುನ್ನ ಈ ಆದೇಶ ಬಂದಿರುವುದರಿಂದ ತೆರಿಗೆ ನ್ಯಾಯಮಂಡಳಿ ತನ್ನ ಹಣವನ್ನು ಸ್ಥಗಿತಗೊಳಿಸಿದ ಆದೇಶವು ಪ್ರಜಾಪ್ರಭುತ್ವದ ಮೇಲಿನ ದಾಳಿ ಎಂದು ಕಾಂಗ್ರೆಸ್ ಆರೋಪಿಸಿದೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ