ಪಟಾಕಿ ನಿಷೇಧ ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಯ ವಿಚಾರಣೆಗೆ ದೆಹಲಿ ಹೈಕೋರ್ಟ್ ನಿರಾಕರಣೆ
ಜನವರಿ 1, 2023 ರವರೆಗೆ ನಗರದಲ್ಲಿ ಪಟಾಕಿ ತಯಾರಿಕೆ, ಮಾರಾಟ ಮತ್ತು ಸಿಡಿಸುವುದನ್ನು ಸಂಪೂರ್ಣ ನಿಷೇಧಿಸಿ ದೆಹಲಿ ಮಾಲಿನ್ಯ ನಿಯಂತ್ರಣ ಮಂಡಳಿಯು ಸೆಪ್ಟೆಂಬರ್‌ನಲ್ಲಿ ಹೊರಡಿಸಿದ ಆದೇಶವನ್ನು...
ದೆಹಲಿಯಲ್ಲಿ (Delhi) ಪಟಾಕಿ (Fire Crackers) ಮಾರಾಟ ಮತ್ತು ಖರೀದಿಯ ಮೇಲಿನ ನಿಷೇಧವನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಯ ವಿಚಾರಣೆಯನ್ನು ದೆಹಲಿ ಹೈಕೋರ್ಟ್ (Delhi High Court) ಗುರುವಾರ ನಿರಾಕರಿಸಿದೆ. ಹಸಿರು ಪಟಾಕಿ ತಯಾರಿಸುವ ಪಟಾಕಿ ತಯಾರಿಕಾ ಕಂಪನಿ ಈ ಅರ್ಜಿ ಸಲ್ಲಿಸಿತ್ತು. ನ್ಯಾಯಮೂರ್ತಿ ಯಶವಂತ್ ವರ್ಮಾ ಅವರ ಹೈಕೋರ್ಟ್ ಪೀಠವು ಈ ಪ್ರಕರಣದ ವಿಚಾರಣೆ ನಡೆಸುತ್ತಿದ್ದು, “ಈ ಅರ್ಜಿಯನ್ನು ಪರಿಗಣಿಸಲು ಒಲವು ಹೊಂದಿಲ್ಲ” ಎಂದು ಹೇಳಿದೆ. ಜನವರಿ 1, 2023 ರವರೆಗೆ ನಗರದಲ್ಲಿ ಪಟಾಕಿ ತಯಾರಿಕೆ, ಮಾರಾಟ ಮತ್ತು ಸಿಡಿಸುವುದನ್ನು ಸಂಪೂರ್ಣ ನಿಷೇಧಿಸಿ ದೆಹಲಿ ಮಾಲಿನ್ಯ ನಿಯಂತ್ರಣ ಮಂಡಳಿಯು ಸೆಪ್ಟೆಂಬರ್‌ನಲ್ಲಿ ಹೊರಡಿಸಿದ ಆದೇಶವನ್ನು ಪ್ರಶ್ನಿಸಲು ಅರ್ಜಿಯಲ್ಲಿ ಕೋರಲಾಗಿದೆ. ಕಳೆದ ಎರಡು ವರ್ಷಗಳಿಂದ ಇದೇ ರೀತಿಯನ್ನು ಅನುಸರಿಸಲಾಗುತ್ತಿದೆ. ಆದರೆ, ಇದೇ ವಿಷಯದ ಕುರಿತು ಸುಪ್ರೀಂ ಕೋರ್ಟ್‌ನಲ್ಲಿ ಇದೇ ರೀತಿಯ ಅರ್ಜಿ ವಿಚಾರಣೆಗೆ ಬಾಕಿ ಇರುವ ಕಾರಣ ಅರ್ಜಿಯನ್ನು ಪುರಸ್ಕರಿಸಲು ಸಾಧ್ಯವಿಲ್ಲ ಎಂದು ಹೈಕೋರ್ಟ್ ಹೇಳಿದೆ.
ಏತನ್ಮಧ್ಯೆ, ದೆಹಲಿಯಲ್ಲಿ ಪಟಾಕಿಗಳನ್ನು ತಯಾರಿಸುವುದು, ಸಂಗ್ರಹಿಸುವುದು, ಮಾರಾಟ ಮಾಡಿದರೆ 5,000 ರೂಪಾಯಿಗಳವರೆಗೆ ದಂಡ ಮತ್ತು ಸ್ಫೋಟಕ ಕಾಯ್ದೆಯ ಸೆಕ್ಷನ್ 9 ಬಿ ಅಡಿಯಲ್ಲಿ ಮೂರು ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗುತ್ತದೆ ಎಂದು ಪರಿಸರ ಸಚಿವ ಗೋಪಾಲ್ ರೈ ಬುಧವಾರ ಹೇಳಿದ್ದಾರೆ. ದೆಹಲಿಯಲ್ಲಿ ದೀಪಾವಳಿಯಂದು ಪಟಾಕಿ ಸಿಡಿಸಿದರೆ ಆರು ತಿಂಗಳವರೆಗೆ ಜೈಲು ಶಿಕ್ಷೆ ಮತ್ತು 200 ರೂಪಾಯಿ ದಂಡ ವಿಧಿಸಲಾಗುವುದು ಎಂದು ರೈ ಹೇಳಿದ್ದಾರೆ.