ಕೋವಿಡ್ ಲಸಿಕೆ ಮತ್ತು ಅಲೋಪಥಿ ಔಷಧಿಗಳ ಅಪಪ್ರಚಾರ ನಿಲ್ಲಿಸುವಂತೆ ಬಾಬಾ ರಾಮದೇವ್ ಗೆ ದೆಹಲಿ ಹೈಕೋರ್ಟ್ ತಾಕೀತು

ಪ್ರಕರಣ ಇತ್ಯರ್ಥಗೊಳ್ಳುವವರೆಗೆ ಕೊರೊನಿಲ್ ಬಗ್ಗೆ ಯಾವುದೇ ಹೇಳಿಕೆ ನೀಡಬಾರದೆಂದು ನ್ಯಾಯಾಲಯ ರಾಮದೇವ್ ಅವರಿಗೆ ಸೂಚನೆ ನೀಡಿತು. ಆದರೆ, ಅವರ ವಕೀಲ ಆ ಬಗ್ಗೆ ಯಾವುದೇ ಭರವಸೆಯನ್ನು ನ್ಯಾಯಾಲಯಕ್ಕೆ ನೀಡಲಿಲ್ಲ.

ಕೋವಿಡ್ ಲಸಿಕೆ ಮತ್ತು ಅಲೋಪಥಿ ಔಷಧಿಗಳ ಅಪಪ್ರಚಾರ ನಿಲ್ಲಿಸುವಂತೆ ಬಾಬಾ ರಾಮದೇವ್ ಗೆ ದೆಹಲಿ ಹೈಕೋರ್ಟ್ ತಾಕೀತು
ದೆಹಲಿ ಹೈಕೋರ್ಟ್
TV9kannada Web Team

| Edited By: Arun Belly

Aug 18, 2022 | 12:38 PM

ನವದೆಹಲಿ: ತಮ್ಮ ಸಂಸ್ಥೆಯ ಉತ್ಪಾದನೆ ಕೊರೊನಿಲ್ (Coronil) ಸಮರ್ಥಿಸಿಕೊಳ್ಳುವ ಭರದಲ್ಲಿ ಕೋವಿಡ್-19 ಲಸಿಕೆಗಳು ಮತ್ತು ಅಲೋಪೆಥಿ ಔಷಧಗಳ (Allopathy medicines) ವಿಚಾರವಾಗಿ ಸಾರ್ವಜನಿಕರಿಗೆ ಆಧಾರರಹಿತ ತಪ್ಪು ಮಾಹಿತಿ ನೀಡುವುದನ್ನು ನಿಲ್ಲಿಸುವಂತೆ ದೆಹಲಿ ಹೈಕೋರ್ಟ್ ಯೋಗ ಗುರು ಬಾಬಾ ರಾಮದೇವ್ (Baba Ramdev) ಅವರಿಗೆ ತಾಕೀತು ಮಾಡಿದೆ.

‘ನೀವು ಶಿಷ್ಯರನ್ನು ಹೊಂದಿರುವುದು ಮತ್ತು ದೇಶದಾದ್ಯಂತ ನಿಮಗೆ ಅನುಯಾಯಿಗಳಿರುವುದು ಸ್ವಾಗತಾರ್ಹವೇ, ಆದರೆ ಅಧಿಕೃತವಾದ ಮಾಹಿತಿಗಿಂತ ಹೆಚ್ಚಿನದನ್ನು ಸಾರ್ವಜನಕರಿಗೆ ಹೇಳಿ ಅವರನ್ನು ತಪ್ಪು ದಾರಿಗೆಳೆಯಬೇಡಿ. ಆಯುರ್ವೇದ ಹೊಂದಿರುವ ಕೀರ್ತಿ ಮತ್ತು ಒಳ್ಳೆಯ ಹೆಸರನ್ನು ಉಳಿಸುವುದಷ್ಟೇ ನನ್ನ ಕಾಳಜಿಯಾಗಿದೆ. ಹಾಗೆಯೇ ಅಲೋಪೆಥಿ ಬಗ್ಗೆ ಯಾವುದೇ ತಪ್ಪು ಮಾಹಿತಿ ರವಾನೆಯಾಗಬಾರದೆನ್ನುವುದು ನನ್ನ ಖಚಿತ ಅಭಿಮತವಾಗಿದೆ,’ ಎಂದು ನ್ಯಾಯಮೂರ್ತಿ ಅನೂಪ್ ಭಂಭಾನಿ ಹೇಳಿದರು.

ರಾಮದೇವ್ ಅವರು ಕೋವಿಡ್ ಲಸಿಕೆಗಳ ಬಗ್ಗೆ ಆಧಾರರಹಿತ ಮಾಹಿತಿಯನ್ನು ನೀಡಿ ಜನರನ್ನು ತಪ್ಪು ದಾರಿಗೆಳೆಯುತ್ತಿದ್ದಾರೆ ಎಂದು ಆರೋಪಿಸಿ ನಾನಾ ವೈದ್ಯ ಸಂಘಗಳು ದೆಹಲಿ ಹೈಕೋರ್ಟ್ ನಲ್ಲಿ ಹೂಡಿದ ದಾವೆಯ ವಿಚಾರಣೆ ನಡೆಸುವಾಗ ನ್ಯಾಯಮೂರ್ತಿಗಳು ಮೇಲಿನಂತೆ ಅಭಿಪ್ರಾಯ ವ್ಯಕ್ತಪಡಿಸಿದರು. ದೂರುದಾರರ ಪರವಾಗಿ ವಾದಿಸಿದ ಹಿರಿಯ ವಕೀಲ ಅಖಿಲ್ ಸಿಬಲ್ ಅವರು ಯೋಗ ಗುರುಗಳ ಹಲವಾರು ಹೇಳಿಕೆಗಳನ್ನು ನ್ಯಾಯಾಲಯದ ಗಮನಕ್ಕೆ ತಂದರು.

ಮುಂದುವರಿದು ವಾದಿಸಿದ ಸಿಬಲ್ ಕೊರೋನಿಲ್ ಗೆ ನೀಡಿರುವ ಪರವಾನಗಿಯಲ್ಲ್ಲಿ ಎಲ್ಲೂ ಕೊವಿಡ್-19 ಅಂತ ಉಲ್ಲೇಖವಾಗಿಲ್ಲ ಎಂದು ಹೇಳಿದರು. ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಬಗ್ಗೆ ಮಾತ್ರ ಅದರಲ್ಲಿ ಉಲ್ಲೇಖಿಸಲಾಗಿದೆ ಎಂದು ಅವರು ವಾದಿಸಿದರು.

ಪ್ರಕರಣ ಇತ್ಯರ್ಥಗೊಳ್ಳುವವರೆಗೆ ಕೊರೊನಿಲ್ ಬಗ್ಗೆ ಯಾವುದೇ ಹೇಳಿಕೆ ನೀಡಬಾರದೆಂದು ನ್ಯಾಯಾಲಯ ರಾಮದೇವ್ ಅವರಿಗೆ ಸೂಚನೆ ನೀಡಿತು. ಆದರೆ, ಅವರ ವಕೀಲ ಆ ಬಗ್ಗೆ ಯಾವುದೇ ಭರವಸೆಯನ್ನು ನ್ಯಾಯಾಲಯಕ್ಕೆ ನೀಡಲಿಲ್ಲ.

ಎರಡು ಮೂರು ಬಾರಿ ಕೋವಿಡ್ ಲಸಿಕೆ ತೆಗೆದುಕೊಂಡರೂ ಯುಎಸ್ ಅಧ್ಯಕ್ಷ ಜೋ ಬೈಡೆನ್ ಅವರಿಗೆ ಸೋಂಕು ತಗುಲಿದೆ, ಇದು ‘ವೈದ್ಯಕೀಯ ವಿಜ್ಞಾನದ ವೈಫಲ್ಯ’ ಅಂತ ರಾಮದೇವ್ ನೀಡಿರುವ ಹೇಳಿಕೆಯನ್ನು ಸಹ ಕೋರ್ಟ್ ಪ್ರಶ್ನಿಸಿತು.

‘ಮೊಟ್ಟ ಮೊದಲ ಸಂಗತಿಯೆಂದರೆ ನಾನು ಆಯುರ್ವೇದ ಶಾಸ್ತ್ರದ ಖ್ಯಾತಿಯ ಬಗ್ಗೆ ಕಾಳಜಿಯುಳ್ಳವನಾಗಿದ್ದೇನೆ ಮತ್ತು ಅದಕ್ಕೆಲ್ಲಿ ಅಪಖ್ಯಾತಿ ತಗುಲಿಕೊಳ್ಳುತ್ತೋ ಅಂತ ಚಿಂತಿತನಾಗಿದ್ದೇನೆ. ಎರಡನೆಯ ವಿಚಾರವೆಂದರೆ ಜನರ ಹೆಸರುಗಳನ್ನು ನೀವು ಉಲ್ಲೇಖಿಸುತ್ತಿರುವುದು, ಇದು ನಮ್ಮ ದೇಶದ ಅಂತರರಾಷ್ಟ್ರೀಯ ಸಂಬಂಧಗಳ ಮೇಲೆ ಪರಿಣಾಮ ಬೀರುತ್ತದೆ…’ ಎಂದು ಹೇಳಿದ ಭಂಭಾನಿ ಅವರು, ‘ನಾನು ಲಸಿಕೆ ಹಾಕಿಸಿಕೊಳ್ಳಲಾರೆ ಅಂತ ಹೇಳುವುದು ಸರಿಯೆನಿಸಬಹುದು ಆದರೆ, ಲಸಿಕೆಯನ್ನು ಮರೆತುಬಿಡಿ ಅದು ನಿಷ್ಪ್ರಯೋಜಕ, ನಮ್ಮ ಔಷಧಿಯನ್ನು ತೆಗೆದುಕೊಳ್ಳಿ ಅಂತ ಹೇಳುವುದು ಸರ್ವಥಾ ಸರಿಯಲ್ಲ,’ ಎಂದರು.

ಈ ವಿವಾದವನ್ನು ಬಿಜೆಪಿ ವರ್ಸಸ್ ಕಾಂಗ್ರೆಸ್ ಅಂತ ಪರಿವರ್ತಿಸಲಾಗಿದೆ ಎಂದು ರಾಮದೇವ್ ಅವರ ವಕೀಲ ಮಾಡಿದ ನಿವೇದನೆಗೆ ನ್ಯಾಯಾಲಯವು, ‘ನ್ಯಾಯಾಲದಲ್ಲಿ ರಾಜಕೀಯಕ್ಕೆ ಯಾವುದೇ ಅವಕಾಶವಿಲ್ಲ,’ ಎಂದು ಖಾರವಾಗಿ ಹೇಳಿದರು.

ಸದರಿ ಪ್ರಕರಣದ ವಿಚಾರಣೆಯನ್ನು ನ್ಯಾಯಾಲಯ ಆಗಸ್ಟ್ 23 ಕ್ಕೆ ಮುಂದೂಡಿತು.

ತಾಜಾ ಸುದ್ದಿ

Follow us on

Most Read Stories

Click on your DTH Provider to Add TV9 Kannada