ಮಾಜಿ ಸೇನಾ ಮುಖ್ಯಸ್ಥ ಎಂ.ಎಂ ನರವಾಣೆ ಅವರ ಅಪ್ರಕಟಿತ ಪುಸ್ತಕದ ಪ್ರಸಾರದ ಕುರಿತು ಕೇಸ್ ದಾಖಲು

ವಿಪಕ್ಷ ನಾಯಕ ರಾಹುಲ್ ಗಾಂಧಿ ಮತ್ತು ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರದ ನಡುವಿನ ಗಲಭೆಯ ಕೇಂದ್ರಬಿಂದುವಾಗಿರುವ ಮಾಜಿ ಸೇನಾ ಮುಖ್ಯಸ್ಥ ಜನರಲ್ ಎಂ.ಎಂ. ನರವಾಣೆ ಅವರ ಅಪ್ರಕಟಿತ ಆತ್ಮಚರಿತ್ರೆಯನ್ನು ಪಿಡಿಎಫ್ ರೂಪದಲ್ಲಿ ಎಲ್ಲೆಡೆ ಹಂಚುತ್ತಿರುವ ಬಗ್ಗೆ ದೆಹಲಿ ಪೊಲೀಸರು ತನಿಖೆಯನ್ನು ಪ್ರಾರಂಭಿಸಿದ್ದಾರೆ. 'ಫೋರ್ ಸ್ಟಾರ್ಸ್ ಆಫ್ ಡೆಸ್ಟಿನಿ' ಪುಸ್ತಕದ ಸಾಫ್ಟ್​ ಕಾಪಿಯನ್ನು ಆನ್​ಲೈನ್​ನಲ್ಲಿ ಪ್ರಸಾರ ಮಾಡಲಾಗುತ್ತಿದೆ ಎಂಬುದು ಗಮನಕ್ಕೆ ಬಂದ ಬಳಿಕ ದೆಹಲಿ ಪೊಲೀಸ್ ಕೇಸ್ ದಾಖಲಿಸಿದ್ದಾರೆ.

ಮಾಜಿ ಸೇನಾ ಮುಖ್ಯಸ್ಥ ಎಂ.ಎಂ ನರವಾಣೆ ಅವರ ಅಪ್ರಕಟಿತ ಪುಸ್ತಕದ ಪ್ರಸಾರದ ಕುರಿತು ಕೇಸ್ ದಾಖಲು
Mm Naravane

Updated on: Feb 09, 2026 | 9:05 PM

ನವದೆಹಲಿ, ಫೆಬ್ರವರಿ 9: ಈ ಬಾರಿಯ ಸಂಸತ್ ಬಜೆಟ್ ಅಧಿವೇಶನದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ಭಾರತದ ಮಾಜಿ ಸೇನಾ ಮುಖ್ಯಸ್ಥ ಎಂ.ಎಂ. ನರವಾಣೆ ಅವರ ಅಪ್ರಕಟಿತ ಪುಸ್ತಕದ ಸಂಗತಿಗಳನ್ನು ಚರ್ಚಿಸಲು ಅನುಮತಿ ಕೋರಿದ್ದರು. ಅದಕ್ಕೆ ಅನುಮತಿ ಸಿಗದೇ ಇದ್ದಿದ್ದು ಭಾರೀ ವಿವಾದಕ್ಕೆ ಕಾರಣವಾಗಿದೆ. ಇದೀಗ ಎಂ.ಎಂ. ನರವಾಣೆ ಅವರ ಆ ಅಪ್ರಕಟಿತ ಆತ್ಮಚರಿತ್ರೆಯನ್ನು ಪಿಡಿಎಫ್​ ರೂಪದಲ್ಲಿ ಆನ್​ಲೈನ್​ನಲ್ಲಿ ಎಲ್ಲೆಡೆ ಹಂಚಲಾಗುತ್ತಿದೆ ಎಂಬ ಕುರಿತು ದೆಹಲಿ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ

ಮಾಜಿ ಸೇನಾ ಮುಖ್ಯಸ್ಥ ಎಂ.ಎಂ. ನರವಾಣೆ ಅವರ ‘ಫೋರ್ ಸ್ಟಾರ್ಸ್ ಆಫ್ ಡೆಸ್ಟಿನಿ’ ಪುಸ್ತಕದ ಪೂರ್ವ-ಮುದ್ರಿತ ಪ್ರತಿಯನ್ನು ಪ್ರಸಾರ ಮಾಡಲಾಗುತ್ತಿದೆ ಎಂದು ಹೇಳುವ ವಿವಿಧ ಸಾಮಾಜಿಕ ಮಾಧ್ಯಮ ವೇದಿಕೆಗಳು ಮತ್ತು ಡಿಜಿಟಲ್ ಸುದ್ದಿ ವೇದಿಕೆಗಳಲ್ಲಿ ಹರಡುತ್ತಿರುವ ಮಾಹಿತಿಯನ್ನು ಗಮನಿಸಿದ ದೆಹಲಿ ಪೊಲೀಸರು ಎಫ್​ಐಆರ್ ದಾಖಲಿಸಿದ್ದಾರೆ. ಈ ಪುಸ್ತಕದ ಪ್ರಕಟಣೆಗೆ ಅಗತ್ಯವಾದ ಅನುಮತಿಯನ್ನು ಸಂಬಂಧಿತ ಅಧಿಕಾರಿಗಳಿಂದ ಇನ್ನೂ ಪಡೆಯಬೇಕಾಗಿದೆ ಎಂದು ಕೂಡ ಆನ್‌ಲೈನ್‌ನಲ್ಲಿ ಉಲ್ಲೇಖಿಸಲಾಗಿದೆ.

ಇದನ್ನೂ ಓದಿ: ಪ್ರಕಟವಾಗದ ಪುಸ್ತಕದಲ್ಲಿರುವ ವಿಷಯ ಉಲ್ಲೇಖಿಸಲು ಹೋಗಿ ಸದನದ ಬಾಯಿಗೆ ಆಹಾರವಾದ್ರಾ ರಾಹುಲ್ ಗಾಂಧಿ

ಮೆಸರ್ಸ್ ಪೆಂಗ್ವಿನ್ ರಾಂಡಮ್ ಹೌಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಸಿದ್ಧಪಡಿಸಿದ ‘ಫೋರ್ ಸ್ಟಾರ್ಸ್ ಆಫ್ ಡೆಸ್ಟಿನಿ’ ಶೀರ್ಷಿಕೆಯ ಪುಸ್ತಕದ ಪಿಡಿಎಫ್ ಆವೃತ್ತಿಯು ಕೆಲವು ವೆಬ್‌ಸೈಟ್‌ಗಳಲ್ಲಿ ಲಭ್ಯವಿದೆ ಎಂದು ಪೊಲೀಸರು ಪತ್ತೆಹಚ್ಚಿದ್ದಾರೆ. ಕೆಲವು ಆನ್‌ಲೈನ್ ಮಾರ್ಕೆಟಿಂಗ್ ಪ್ಲಾಟ್‌ಫಾರ್ಮ್‌ಗಳು ಈಗಾಗಲೇ ಸಿದ್ಧಪಡಿಸಿದ ಪುಸ್ತಕದ ಮುಖಪುಟವನ್ನು ಮಾರಾಟಕ್ಕೆ ಬಂದಿರುವಂತೆ ಪ್ರದರ್ಶಿಸಿವೆ. ಇದು ಕಾನೂನು ಉಲ್ಲಂಘನೆಯಾಗಿದೆ.

ಇನ್ನೂ ಅನುಮೋದನೆ ಪಡೆಯದ ಪ್ರಕಟಣೆಯನ್ನು ಒಳಗೊಂಡ ಈ ಸೋರಿಕೆ ಅಥವಾ ಉಲ್ಲಂಘನೆಯ ಬಗ್ಗೆ ವಿವರವಾದ ಮತ್ತು ಸಂಪೂರ್ಣ ತನಿಖೆಯನ್ನು ಖಚಿತಪಡಿಸಿಕೊಳ್ಳಲು ದೆಹಲಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ತನಿಖೆ ಈಗ ನಡೆಯುತ್ತಿದೆ ಮತ್ತು ವಿಷಯವು ಸಾರ್ವಜನಿಕ ವಲಯಕ್ಕೆ ಹೇಗೆ ತಲುಪಿತು ಎಂಬುದನ್ನು ಗುರುತಿಸಲು ಎಲ್ಲಾ ಕೋನಗಳನ್ನು ಪರಿಶೀಲಿಸಲಾಗುವುದು ಎಂದು ಅಧಿಕಾರಿಗಳು ದೃಢಪಡಿಸಿದ್ದಾರೆ.

ಇದನ್ನೂ ಓದಿ: ದೇಶದ್ರೋಹಿ ಸ್ನೇಹಿತ; ಕೇಂದ್ರ ಸಚಿವ ರವನೀತ್ ಬಿಟ್ಟುಗೆ ರಾಹುಲ್ ಗಾಂಧಿ ಲೇವಡಿ, ಸಂಸತ್ ಹೊರಗೆ ವಾಗ್ವಾದ

ಫೆಬ್ರವರಿ 4ರಂದು ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಮಾಜಿ ಸೇನಾ ಮುಖ್ಯಸ್ಥ ಎಂಎಂ ನರವಾಣೆ ಅವರ ಇನ್ನೂ ಬಿಡುಗಡೆಯಾಗದ ಆತ್ಮಚರಿತ್ರೆಯನ್ನು ಉಲ್ಲೇಖಿಸಿ, 2020ರಲ್ಲಿ ಭಾರತ-ಚೀನಾ ಸಂಘರ್ಷದ ಸಮಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಜವಾಬ್ದಾರಿಯನ್ನು ಬಿಟ್ಟುಕೊಟ್ಟರು ಮತ್ತು ಜನರಲ್‌ಗೆ ಅದರ ಹೊಣೆಯನ್ನು ವರ್ಗಾಯಿಸಿದರು ಎಂದು ಹೇಳಿದ್ದರು. ಸಂಸತ್ ಭವನದ ಆವರಣದಲ್ಲಿ ಸುದ್ದಿಗಾರರನ್ನುದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ ಆ ಆತ್ಮಚರಿತ್ರೆಯನ್ನು ಎತ್ತಿ ಹಿಡಿದು ಮೋದಿ ಸರ್ಕಾರ ಬೇರೆ ರೀತಿಯಲ್ಲಿ ಹೇಳಿಕೊಂಡರೂ ಈ ‘ಪುಸ್ತಕ’ ಅಸ್ತಿತ್ವದಲ್ಲಿದೆ ಎಂದು ಭಾರತದ ಯುವಕರು ತಿಳಿದುಕೊಳ್ಳಬೇಕೆಂದು ನಾನು ಬಯಸುತ್ತೇನೆ ಎಂದು ಹೇಳಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ