ದೆಹಲಿ ವೋಟರ್ ಲಿಸ್ಟ್‌ನಿಂದ ಕೇಜ್ರಿವಾಲ್ ಕುಟುಂಬವೇ ಔಟ್: ಮತದಾರರ ಪರಿಷ್ಕರಣೆ ಸುತ್ತ ಎಎಪಿ-ಚುನಾವಣಾ ಆಯೋಗ ಸಮರ

ದೆಹಲಿ ಮತದಾರರ ಪಟ್ಟಿ ಪರಿಷ್ಕರಣೆ ರಾಜಕೀಯ ವಿವಾದಕ್ಕೆ ಕಾರಣವಾಗಿದೆ. ಕೇಜ್ರಿವಾಲ್ ಕುಟುಂಬದ ಹೆಸರುಗಳು ಕರಡು ಪಟ್ಟಿಯಿಂದ ನಾಪತ್ತೆಯಾಗಿವೆ ಎಂದು ಎಎಪಿ ಆರೋಪಿಸಿದೆ. ಇದಕ್ಕೆ ಚುನಾವಣಾ ಆಯೋಗ, ಹೆಸರು ಕೈಬಿಟ್ಟಿಲ್ಲ, ಆದರೆ ಹಿಂದಿನ ಪಟ್ಟಿಗೆ ಮ್ಯಾಪಿಂಗ್ ಸಮಸ್ಯೆಯಿಂದ ಕೇಜ್ರಿವಾಲ್ ಸೇರಿದಂತೆ 31 ಲಕ್ಷಕ್ಕೂ ಹೆಚ್ಚು ಮತದಾರರಿಗೆ ನೋಟಿಸ್ ನೀಡಲಾಗಿದೆ ಎಂದು ಸ್ಪಷ್ಟಪಡಿಸಿದೆ. ಸೆಪ್ಟೆಂಬರ್ 30ರೊಳಗೆ ನಮೂನೆ 6 ಸಲ್ಲಿಸಿ ಹೆಸರು ಸೇರಿಸಲು ಅವಕಾಶವಿದೆ. ನವೆಂಬರ್ 4ಕ್ಕೆ ಅಂತಿಮ ಪಟ್ಟಿ ಪ್ರಕಟವಾಗಲಿದೆ.

ದೆಹಲಿ ವೋಟರ್ ಲಿಸ್ಟ್‌ನಿಂದ ಕೇಜ್ರಿವಾಲ್ ಕುಟುಂಬವೇ ಔಟ್: ಮತದಾರರ ಪರಿಷ್ಕರಣೆ ಸುತ್ತ ಎಎಪಿ-ಚುನಾವಣಾ ಆಯೋಗ ಸಮರ
ಅರವಿಂದ್ ಕೇಜ್ರಿವಾಲ್
Image Credit source: PTI

Updated on: Sep 20, 2026 | 8:55 AM

ನವದೆಹಲಿ, ಸೆಪ್ಟೆಂಬರ್ 20: ದೆಹಲಿ ವಿಧಾನಸಭಾ ಚುನಾವಣೆಗೆ ಮುನ್ನ ಚುನಾವಣಾ ಆಯೋಗ ನಡೆಸುತ್ತಿರುವ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯು ಭಾರೀ ರಾಜಕೀಯ ವಾಕ್ಸಮರಕ್ಕೆ ವೇದಿಕೆಯಾಗಿದೆ. ದೆಹಲಿಯ ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹಾಗೂ ಅವರ ಕುಟುಂಬ ಸದಸ್ಯರ ಹೆಸರುಗಳು ಕರಡು ಮತದಾರರ ಪಟ್ಟಿಯಿಂದ ಕಾಣೆಯಾಗಿವೆ ಎಂದು ಆಮ್ ಆದ್ಮಿ ಪಕ್ಷ (AAP) ಗಂಭೀರ ಆರೋಪ ಮಾಡಿದೆ. ಈ ಬಗ್ಗೆ ಸ್ಪಷ್ಟನೆ ನೀಡಿರುವ ಚುನಾವಣಾ ಆಯೋಗ, ಹೆಸರುಗಳನ್ನು ಸಂಪೂರ್ಣ ಕೈಬಿಟ್ಟಿಲ್ಲ, ಬದಲಾಗಿ ಹಿಂದಿನ ಪಟ್ಟಿಗೆ ಮ್ಯಾಪಿಂಗ್ ಆಗದ ಕಾರಣ ನಿಯಮಾನುಸಾರ ನೋಟಿಸ್ ಜಾರಿ ಮಾಡಲಾಗಿದೆ ಎಂದಿದ್ದು, ದೆಹಲಿಯಾದ್ಯಂತ ಬರೋಬ್ಬರಿ 31 ಲಕ್ಷಕ್ಕೂ ಹೆಚ್ಚು ಮತದಾರರಿಗೆ ಇಂತಹ ನೋಟಿಸ್ ನೀಡಲಾಗಿದೆ ಎಂದು ತಿಳಿಸಿದೆ.

ಕೇಜ್ರಿವಾಲ್ ಕುಟುಂಬಕ್ಕೆ ನೋಟಿಸ್: ನವದೆಹಲಿ ಕ್ಷೇತ್ರದ ಮತದಾರರಾಗಿರುವ ಅರವಿಂದ್ ಕೇಜ್ರಿವಾಲ್, ಅವರ ಪತ್ನಿ ಸುನೀತಾ ಕೇಜ್ರಿವಾಲ್, ಪೋಷಕರಾದ ಗೋವಿಂದ್ ರಾಮ್ ಕೇಜ್ರಿವಾಲ್, ಗೀತಾ ದೇವಿ ಹಾಗೂ ಮಗ ಪುಲ್ಕಿತ್ ಹೆಸರುಗಳಿಗೆ ಸಂಬಂಧಿಸಿದಂತೆ ಹಿಂದಿನ ದಾಖಲೆಗಳು ಲಿಂಕ್ ಆಗದ ಕಾರಣ ನೋಟಿಸ್ ಪಟ್ಟಿಯಲ್ಲಿ ಅವರ ಹೆಸರುಗಳು ಸೇರಿವೆ. “ಮೂರು ಬಾರಿಯ ಮುಖ್ಯಮಂತ್ರಿಯ ಕುಟುಂಬವೇ ಮತಪಟ್ಟಿಯಿಂದ ನಾಪತ್ತೆಯಾಗುವುದು ಹೇಗೆ ಸಾಧ್ಯ?” ಎಂದು ಎಎಪಿ ಪ್ರಶ್ನಿಸಿದೆ.

ಮುಖ್ಯಮಂತ್ರಿ ರೇಖಾ ಗುಪ್ತಾಗೂ ನೋಟಿಸ್: ಶಾಲಿಮಾರ್ ಬಾಗ್ ಕ್ಷೇತ್ರದ ಮತದಾರರಾಗಿರುವ ಮುಖ್ಯಮಂತ್ರಿ ರೇಖಾ ಗುಪ್ತಾ ಅವರಿಗೂ ನೋಟಿಸ್ ನೀಡಲಾಗಿತ್ತು. ದಾಖಲೆಗಳಲ್ಲಿ ಅವರ ಹಾಗೂ ಅವರ ಪೋಷಕರ ನಡುವಿನ ವಯಸ್ಸಿನ ಅಂತರ 15 ವರ್ಷಕ್ಕಿಂತ ಕಡಿಮೆ ತೋರಿಸುತ್ತಿದ್ದ ಕಾರಣ ಈ ವ್ಯತ್ಯಾಸ ಸೃಷ್ಟಿಯಾಗಿತ್ತು. ಆದರೆ ಈಗಾಗಲೇ ದಾಖಲೆಗಳನ್ನು ಪರಿಶೀಲಿಸಿ ಅವರನ್ನು ಅಂತಿಮ ಪಟ್ಟಿಗೆ ಸೇರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮತ್ತಷ್ಟು ಓದಿ: ಟಿಎಂಸಿಯ ಮೂಲ ಹೆಸರು ಮತ್ತು ಚಿಹ್ನೆ ಫ್ರೀಜ್: ಮಮತಾ ಬಣಕ್ಕೆ ಫುಟ್ಬಾಲ್, ಬಂಡಾಯ ಬಣಕ್ಕೆ ಲಕೋಟೆ ಗುರುತು

47.5 ಲಕ್ಷ ಹೆಸರುಗಳ ರದ್ದು: ಒಟ್ಟು 97.5 ಲಕ್ಷ ಮತದಾರರನ್ನು ಒಳಗೊಂಡಿರುವ ಪ್ರಸ್ತುತ ಕರಡು ಪಟ್ಟಿಯಲ್ಲಿ, ಶಾಶ್ವತವಾಗಿ ಸ್ಥಳಾಂತರಗೊಂಡವರು, ಮರಣ ಹೊಂದಿದವರು ಅಥವಾ ಎರಡೆರಡು ಕಡೆ ಹೆಸರು ಹೊಂದಿದ್ದ ಸುಮಾರು 47.5 ಲಕ್ಷ (ಒಟ್ಟು ಮತದಾರರ ಸುಮಾರು ಮೂರನೇ ಒಂದು ಭಾಗ) ಮತದಾರರ ಹೆಸರುಗಳನ್ನು ಈಗಾಗಲೇ ಕೈಬಿಡಲಾಗಿದೆ.

31.6 ಲಕ್ಷ ಜನರಿಗೆ ಇಸಿಐ ನೋಟಿಸ್: ಕೊನೆಯ ಪರಿಷ್ಕರಣೆ ಪಟ್ಟಿಯೊಂದಿಗೆ ಮ್ಯಾಪ್ ಆಗದ ಮತ್ತು ಹೆಸರು, ಜನ್ಮದಿನಾಂಕದಲ್ಲಿ ಸಣ್ಣಪುಟ್ಟ ವ್ಯತ್ಯಾಸಗಳಿರುವ 31,63,930 ಮತದಾರರಿಗೆ ನೋಟಿಸ್ ನೀಡಲಾಗುತ್ತಿದ್ದು, ವಿಶೇಷ ಶಿಬಿರಗಳ ಮೂಲಕ ಅಕ್ಟೋಬರ್ 10 ರೊಳಗೆ ಈ ಅರ್ಜಿಗಳನ್ನು ಇತ್ಯರ್ಥಪಡಿಸಲಾಗುವುದು.

ಫಾರ್ಮ್ 6 ಮತ್ತು ಆಕ್ಷೇಪಣೆಗೆ ಅವಕಾಶ: ಕರಡು ಪಟ್ಟಿಯಲ್ಲಿ ಹೆಸರಿಲ್ಲದ ಅಥವಾ ನೋಟಿಸ್ ಪಡೆದ ಅರ್ಹ ನಾಗರಿಕರು ಆತಂಕಪಡುವ ಅಗತ್ಯವಿಲ್ಲ ಎಂದು ಚುನಾವಣಾ ನೋಂದಣಿ ಅಧಿಕಾರಿ (ERO) ಸ್ಪಷ್ಟಪಡಿಸಿದ್ದಾರೆ. ಮತದಾರರು ಅಗತ್ಯ ಗುರುತಿನ ದಾಖಲೆಗಳೊಂದಿಗೆ ‘ನಮೂನೆ ೬’ (Form 6) ಸಲ್ಲಿಸಿ ತಮ್ಮ ಹೆಸರುಗಳನ್ನು ಸೇರಿಸಿಕೊಳ್ಳಲು ಸೆಪ್ಟೆಂಬರ್ 30 ರವರೆಗೆ ಅವಕಾಶ ಕಲ್ಪಿಸಲಾಗಿದೆ.

ಬಿಎಲ್‌ಒಗಳ ಮನೆ ಮನೆ ಪರಿಶೀಲನೆ: ಮೇ 14, 2026 ರಂದು ಇಸಿಐ ಹೊರಡಿಸಿದ ಮಾರ್ಗಸೂಚಿಯಂತೆ ಬೂತ್ ಮಟ್ಟದ ಅಧಿಕಾರಿಗಳು (BLO) ಮನೆ ಮನೆಗೆ ತೆರಳಿ ಎಣಿಕೆ ನಮೂನೆಗಳ ಪರಿಶೀಲನೆ ನಡೆಸುತ್ತಿದ್ದಾರೆ.

ಅಂತಿಮ ಪಟ್ಟಿ ಪ್ರಕಟಣೆ: ಸಾರ್ವಜನಿಕರು ಸಲ್ಲಿಸುವ ಆಕ್ಷೇಪಣೆಗಳು ಹಾಗೂ ದಾಖಲೆಗಳ ಮರುಪರಿಶೀಲನೆ ಪೂರ್ಣಗೊಂಡ ಬಳಿಕ ನವೆಂಬರ್ 4 ರಂದು ದೆಹಲಿಯ ಅಧಿಕೃತ ಅಂತಿಮ ಮತದಾರರ ಪಟ್ಟಿ ಪ್ರಕಟವಾಗಲಿದೆ. ಯಾವುದೇ ಅರ್ಹ ಮತದಾರನ ಹಕ್ಕು ಕಸಿದುಕೊಳ್ಳದಂತೆ ಪಾರದರ್ಶಕವಾಗಿ ಪ್ರಕ್ರಿಯೆ ನಡೆಸಲಾಗುತ್ತಿದೆ ಎಂದು ಚುನಾವಣಾ ಆಯೋಗ ಭರವಸೆ ನೀಡಿದೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Loading...
Unable to load recommendations.
Follow Us