ಬಂಗಾಳಕೊಲ್ಲಿ ವಾಯುಭಾರ ಕುಸಿತ: ಕರ್ನಾಟಕ, ಗುಜರಾತ್, ಮಹಾರಾಷ್ಟ್ರದಲ್ಲಿ ಭಾರಿ ಮಳೆ
ಮೂರೂ ರಾಜ್ಯಗಳ ಕರಾವಳಿ ಭಾಗದಲ್ಲಿ ಮಳೆ ಮುಂದುವರಿಯುವ ಸಾಧ್ಯತೆಯಿದ್ದು ಕರಾವಳಿ ಜಿಲ್ಲೆಗಳಿಗೆ ರೆಡ್ ಅಲರ್ಟ್ ಘೋಷಿಸಲಾಗಿದೆ.
ದೆಹಲಿ: ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ (Deep Depression in Bay of Bengal) ಉಂಟಾಗಿರುವ ಹಿನ್ನೆಲೆಯಲ್ಲಿ ಕರ್ನಾಟಕ, ಮಹಾರಾಷ್ಟ್ರ ಮತ್ತು ಗುಜರಾತ್ನಲ್ಲಿ ಇನ್ನೂ ನಾಲ್ಕು ದಿನ ಮಳೆ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಮೂರೂ ರಾಜ್ಯಗಳ ಕರಾವಳಿ ಭಾಗದಲ್ಲಿ ಮಳೆ ಮುಂದುವರಿಯುವ ಸಾಧ್ಯತೆಯಿದ್ದು ಕರಾವಳಿ ಜಿಲ್ಲೆಗಳಿಗೆ ರೆಡ್ ಅಲರ್ಟ್ ಘೋಷಿಸಲಾಗಿದೆ. ಗುಜರಾತ್ನ ಅಹಮದಾಬಾದ್ ಮತ್ತು ಮಹಾರಾಷ್ಟ್ರದ ಮುಂಬೈ ಮತ್ತು ಥಾಣೆ ನಗರಗಳಲ್ಲಿ ಕುಂಭದ್ರೋಣ ಮಳೆ ಸುರಿಯುತ್ತಿದೆ.
ಗುಜರಾತ್ನ ಅಹಮದಾಬಾದ್ನಲ್ಲಿ ಒಂದೇ ರಾತ್ರಿ 228 ಮಿಮೀ (9 ಇಂಚು) ಮಳೆಯಾಗಿದ್ದು, ತಗ್ಗು ಪ್ರದೇಶಗಳು ಮುಳುಗಿವೆ. ಹಲವು ರಸ್ತೆಗಳಲ್ಲಿ ಆರು ಅಡಿ ಎತ್ತರದವರೆಗೆ ನೀರು ಹರಿಯಿತು. ಇನ್ನೂ ಹಲವು ಪ್ರದೇಶಗಳಲ್ಲಿ ಆಳೆತ್ತರ ನೀರು ನಿಂತಿದ್ದು ಪರಿಹಾರ ಕಾಮಗಾರಿಗಳು ಭರದಿಂದ ಸಾಗಿವೆ. ಅಹಮದಾಬಾದ್ ರಸ್ತೆಗಳು ನದಿಗಳಂತೆ ಆಗಿವೆ. ಮನೆಗಳ ನೆಲಮಹಡಿಗಳು ಸಂಪೂರ್ಣ ಜಲಾವೃತಗೊಂಡಿವೆ. ಪಾಲಡಿ ಪ್ರದೇಶದ ಶಾಪಿಂಗ್ ಮಾಲ್ ಒಂದರಲ್ಲಿದ್ದ ವಸ್ತುಗಳು ನೀರಿನಲ್ಲಿ ಕೊಚ್ಚಿಹೋಗಿವೆ.
ಮಹಾರಾಷ್ಟ್ರದ ರಾಯಗಢ, ರತ್ನಗಿರಿ, ಸತಾರ, ಪುಣೆ ಜಿಲ್ಲೆಗಳಿಗೆ ಹವಾಮಾನ ಇಲಾಖೆಯು ಇಂದು (ಜುಲೈ 11) ರೆಡ್ ಆಲರ್ಟ್ ಘೋಷಿಸಿದೆ. ಮುಂಬೈ, ಥಾಣೆಗೆ ಆರೇಂಜ್ ಆಲರ್ಟ್ ಘೋಷಿಸಲಾಗಿದೆ. ಮುಂಬೈನ ಸಮುದ್ರದಲ್ಲಿ 13 ಅಡಿಗಳಷ್ಟು (ನಾಲ್ಕು ಮೀಟರ್) ಎತ್ತರಕ್ಕೆ ಅಲೆಗಳು ಏಳುತ್ತಿದ್ದು, ಸಮುದ್ರದತ್ತ ಹೋಗಬಾರದು ಎಂದು ಜನರಿಗೆ ಎಚ್ಚರಿಕೆ ನೀಡಲಾಗಿದೆ.
ಮಹಾರಾಷ್ಟ್ರದ ಕೊಂಕಣ ವಲಯದಲ್ಲಿ ನಾಳೆಯವರೆಗೂ ಭಾರಿ ಮಳೆಯ ಮುನ್ಸೂಚನೆ ನೀಡಲಾಗಿದೆ. ಚಂದ್ರಾಪುರ, ಗಡಚಿರೋಲಿ ಜಿಲ್ಲೆಗಳಲ್ಲಿ ಎಚ್ಚರದಿಂದ ಇರುವಂತೆ ಜನರಿಗೆ ಸೂಚಿಸಲಾಗಿದೆ. ಕೊಂಕಣ ಪ್ರಾಂತ್ಯದಲ್ಲಿ 64ರಿಂದ 200 ಮಿಲಿಮೀಟರ್ನಷ್ಟು ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಭವಿಷ್ಯ ನುಡಿದಿದೆ.
ಮುಂಬೈನಲ್ಲಿ ಜೂನ್ 1ರಿಂದ ಈವರೆಗೆ 336 ಮಿಮೀ ಮಳೆಯಾಗಿದೆ. ಮುಂಬೈನಲ್ಲಿ ವಾಡಿಕೆಗಿಂತ ಶೇ 107ರಷ್ಟು ಹೆಚ್ಚಿನ ಮಳೆಯಾಗಿದೆ. ಮುಂಬೈನಲ್ಲಿ ಕಳೆದ 24 ಗಂಟೆ ಅವಧಿಯಲ್ಲಿ 28 ಮಿಮೀ ಮಳೆಯಾಗಿದೆ. ಮಹಾರಾಷ್ಟ್ರದಲ್ಲಿ ಮಳೆ ಅನಾಹುತಗಳಿಂದ ಈವರೆಗೆ 76 ಜನರು ಮೃತಪಟ್ಟಿದ್ದಾರೆ. 125 ಜಾನುವಾರು ಸಾವನ್ನಪ್ಪಿವೆ.
ಕರ್ನಾಟಕ ಕರಾವಳಿಗೆ ರೆಡ್ ಅಲರ್ಟ್
ಕರ್ನಾಟಕದ ಕರಾವಳಿ ಜಿಲ್ಲೆಗಳಿಗೆ ರೆಡ್ ಅಲರ್ಟ್ ಘೋಷಿಸಲಾಗಿದೆ. ಉತ್ತರ ಕರ್ನಾಟಕ ಭಾಗದ ಧಾರವಾಡ, ಹಾವೇರಿ ಸೇರಿ 5 ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಯಾದಗಿರಿ, ವಿಜಯಪುರ, ಬಾಗಲಕೋಟೆ, ದಾವಣಗೆರೆ, ಮೈಸೂರು ಸೇರಿದಂತೆ 6 ಜಿಲ್ಲೆಗಳಲ್ಲಿ ಯೆಲ್ಲೊ ಅಲರ್ಟ್ ಘೋಷಿಸಲಾಗಿದೆ. ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ, ಚಿಕ್ಕಮಗಳೂರು ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ.
ರಾಜಧಾನಿ ಬೆಂಗಳೂರಿನಲ್ಲಿ ಇನ್ನೂ ನಾಲ್ಕು ದಿನ ಮಳೆ ಮುಂದುವರಿಯಲಿದ್ದು, ಮೋಡ ಕವಿದ ವಾತಾವರಣ ಮುಂದುವರಿಯಲಿದೆ. ಕೆಲವೆಡೆ ಗಾಳಿ ಸಹಿತ ಮಳೆಯಾಗುವ ಸಾಧ್ಯತೆಯಿದೆ.
Published On - 11:28 am, Mon, 11 July 22