ಬಿಜೆಪಿ ಶಾಂತಿ ಬಯಸುವುದಿಲ್ಲ, ಅದು ಮುಸ್ಲಿಮರನ್ನು ದ್ವೇಷಿಸುತ್ತದೆ: ಅಸಾದುದ್ದೀನ್ ಓವೈಸಿ
ನಮ್ಮೊಂದಿಗೆ ರಾಜಕೀಯವಾಗಿ ಹೋರಾಡಿ. ಆದರೆ ಈ ರೀತಿ ಅಲ್ಲ. ಈ ಹೇಳಿಕೆಗಳನ್ನು ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ಬೆಂಬಲಿಸದಿದ್ದರೆ ಅವರು ಪ್ರತಿಕ್ರಿಯಿಸಬೇಕು
ಪ್ರವಾದಿ ಮೊಹಮ್ಮದ್ (Prophet Mohammad) ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿ ಹೈದರಾಬಾದ್‌ನಲ್ಲಿ ಪ್ರತಿಭಟನೆಗೆ ಕಾರಣವಾದ ಕೆಲವೇ ಗಂಟೆಗಳ ನಂತರ ತೆಲಂಗಾಣ ಶಾಸಕ ಟಿ ರಾಜಾ ಸಿಂಗ್ (T Raja Singh) ಅವರನ್ನು ಬಂಧಿಸಿದ್ದು ಬಿಜೆಪಿ ಅವರನ್ನು ಅಮಾನತುಗೊಳಿಸಿದೆ . ಈ ವಿವಾದ ನಡುವೆ ಪ್ರತಿಕ್ರಿಯಿಸಿದ ಆಲ್ ಇಂಡಿಯಾ ಮಜ್ಲಿಸ್-ಎ-ಇತೆಹಾದುಲ್ ಮುಸ್ಲಿಮೀನ್ ಮುಖ್ಯಸ್ಥ ಅಸಾದುದ್ದೀನ್ ಓವೈಸಿ (Asaduddin Owaisi) ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಬಿಜೆಪಿ ಶಾಸಕರ ಹೇಳಿಕೆಯನ್ನು ನಾನು ಖಂಡಿಸುತ್ತೇನೆ. ಹೈದರಾಬಾದ್‌ನಲ್ಲಿ ಶಾಂತಿಯಾಗಿರುವುದು ಬಿಜೆಪಿಗೆ ಇಷ್ಟವಿಲ್ಲ. ಬಿಜೆಪಿ ಪ್ರವಾದಿ ಮುಹಮ್ಮದ್ ಮತ್ತು ಮುಸ್ಲಿಮರನ್ನು ದ್ವೇಷಿಸುತ್ತದೆ. ಅವರು ಭಾರತದ ಸಾಮಾಜಿಕ ರಚನೆಯನ್ನು ನಾಶಮಾಡಲು ಬಯಸುತ್ತಾರೆ ಎಂದು ಓವೈಸಿ ಹೇಳಿರುವುದಾಗಿ ಎಎನ್ಐ ಉಲ್ಲೇಖಿಸಿದೆ.
ನಮ್ಮೊಂದಿಗೆ ರಾಜಕೀಯವಾಗಿ ಹೋರಾಡಿ. ಆದರೆ ಈ ರೀತಿ ಅಲ್ಲ. ಈ ಹೇಳಿಕೆಗಳನ್ನು ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ಬೆಂಬಲಿಸದಿದ್ದರೆ ಅವರು ಪ್ರತಿಕ್ರಿಯಿಸಬೇಕು. ನಾನು ಕೂಡ ಘೋಷಣೆಗಳನ್ನು (ಸರ್ ತಾನ್ ಸೆ ಜುದಾ) ಖಂಡಿಸುತ್ತೇನೆ. ಜನರು ಕಾನೂನನ್ನು ಕೈಗೆ ತೆಗೆದುಕೊಳ್ಳಬಾರದು ಎಂದು ನಾನು ಅವರಿಗೆ ಹೇಳುತ್ತೇನೆ.
ಪ್ರವಾದಿಯ ಬಗ್ಗೆ ಬಿಜೆಪಿ ನಾಯಕರ ಹೇಳಿಕೆ ಖಂಡಿಸಿ ಎಐಎಂಐಎಂ ಕಾರ್ಯಕರ್ತರು ಹೈದರಾಬಾದ್ ಪೊಲೀಸ್ ಮುಖ್ಯಸ್ಥರ ಕಚೇರಿಯ ಮುಂದೆ ಧರಣಿ ನಡೆಸಿ ರಾಜಾ ಸಿಂಗ್ನ್ನು ಬಂಧಿಸುವಂತೆ ಕರೆ ನೀಡಿದರು. ಕಮಿಷನರ್ ಕಚೇರಿಗೆ ನುಗ್ಗಲು ಯತ್ನಿಸಿದ ಕೆಲ ಪ್ರತಿಭಟನಾಕಾರರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಸೋಮವಾರ ಯೂಟ್ಯೂಬ್‌ನಲ್ಲಿ ಅಪ್‌ಲೋಡ್ ಮಾಡಿದ ವೀಡಿಯೊದಲ್ಲಿ ಸಿಂಗ್ ಪ್ರವಾದಿ ವಿರುದ್ಧ ಅಸಭ್ಯ ಭಾಷೆ ಬಳಸಿದ್ದಾರೆ ಎಂದು ಕಾರ್ಯಕರ್ತ ವಜಿಹುದ್ದೀನ್ ಸಲ್ಮಾನ್ ಹೇಳಿದ್ದಾರೆ. ನಂತರ ವಿಡಿಯೊವನ್ನು ತೆಗೆದುಹಾಕಲಾಗಿದೆ.
ರಾಜಾ ಸಿಂಗ್ ಅವರು ಉದ್ರೇಕಕಾರಿ ಭಾಷಣಗಳಿಂದ ಆಗಾಗ್ಗೆ ಸುದ್ದಿಯಲ್ಲಿರುತ್ತಾರೆ. ಈ ಹಿಂದೆ ತೆಲಂಗಾಣ ಸರ್ಕಾರ ಹೈದರಾಬಾದ್‌ನಲ್ಲಿ ಪ್ರದರ್ಶನ ನೀಡಲು ಅವಕಾಶ ನೀಡಿದರೆ ಸ್ಟ್ಯಾಂಡ್-ಅಪ್ ಕಾಮಿಡಿಯನ್ ಮುನಾವರ್ ಫರುಕಿಯ ಮೇಲೆ ಹಲ್ಲೆ ನಡೆಸುವುದಾಗಿ ಬೆದರಿಕೆ ಹಾಕಿದ್ದರು. “ಕಾರ್ಯಕ್ರಮ ಎಲ್ಲೇ ನಡೆದರೂ ನಾವು ಅವನನ್ನು ಥಳಿಸುತ್ತೇವೆ. ಅವನಿಗೆ ಸ್ಥಳವನ್ನು ಯಾರು ನೀಡಿದರೆ, ನಾವು ಅಲ್ಲಿಗೆ ಬೆಂಕಿ ಹಚ್ಚುತ್ತೇವೆ ಎಂದಿದ್ದರು ರಾಜಾ ಸಿಂಗ್.
Published On - 8:18 pm, Tue, 23 August 22