AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಡಿಎಂಕೆ ಸೇರಲು10 ಶಾಸಕರು ಸಿದ್ಧರಿದ್ದಾರೆ ಎಂದು ಆಮಿಷ; ಟಿವಿಕೆ ಎಂಎಲ್​ಎ ಇಳಯರಾಜ ಆರೋಪ

ತಮಿಳುನಾಡು ರಾಜಕೀಯದಲ್ಲಿ ಕುದುರೆ ವ್ಯಾಪಾರದ ಆರೋಪ ತೀವ್ರಗೊಂಡಿದ್ದು, ಪಕ್ಷಾಂತರ ಮಾಡಲು ತಮಗೆ 30ರಿಂದ 35 ಕೋಟಿ ರೂ. ಆಮಿಷ ಒಡ್ಡಲಾಗಿತ್ತು ಎಂದು ಟಿವಿಕೆ ಶಾಸಕ ಎನ್. ಇಳಯರಾಜ ಆರೋಪಿಸಿದ್ದಾರೆ. ಈಗಾಗಲೇ ಆಡಳಿತ ಪಕ್ಷದ 10 ಶಾಸಕರು ಮತ್ತು ಒಬ್ಬರು ಹಾಲಿ ಸಚಿವರು ಡಿಎಂಕೆ ಸೇರಲು ಒಪ್ಪಿಕೊಂಡಿದ್ದಾರೆ ಎಂದು ಆರೋಪಿಯು ತಮಗೆ ತಿಳಿಸಿದ್ದಾಗಿ ಅವರು ಹೇಳಿದ್ದಾರೆ. ಡಿಎಂಕೆ ವಿರುದ್ಧ ಟಿವಿಕೆ ಕುದುರೆ ವ್ಯಾಪಾರದ ಗಂಭೀರ ಆರೋಪ ಮಾಡಿದ್ದು, ನಿನ್ನೆ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರನ್ನು ಬಂಧಿಸಲಾಗಿದೆ.

ಡಿಎಂಕೆ ಸೇರಲು10 ಶಾಸಕರು ಸಿದ್ಧರಿದ್ದಾರೆ ಎಂದು ಆಮಿಷ; ಟಿವಿಕೆ ಎಂಎಲ್​ಎ ಇಳಯರಾಜ ಆರೋಪ
Vijay And StalinImage Credit source: PTI
ಸುಷ್ಮಾ ಚಕ್ರೆ
|

Updated on: Jul 02, 2026 | 3:47 PM

Share

ಮುಖ್ಯಾಂಶಗಳು

  • ತಮಿಳುನಾಡಿನಲ್ಲಿ ಕುದುರೆ ವ್ಯಾಪಾರ
  • ಟಿವಿಕೆಗೆ ಡಿಎಂಕೆ ಶಾಸಕನಿಗೆ 30 ಕೋಟಿ ರೂ. ಆಮಿಷ
  • ಏನಿದು ಹೊಸ ವಿವಾದ?

ಚೆನ್ನೈ, ಜುಲೈ 2: ತಮಿಳುನಾಡಿನ ಆಡಳಿತಾರೂಢ ತಮಿಳಗ ವೆಟ್ರಿ ಕಳಗಂ (TVK) ಮತ್ತು ವಿರೋಧ ಪಕ್ಷವಾದ ದ್ರಾವಿಡ ಮುನ್ನೇತ್ರ ಕಳಗಂ (DMK) ಪರಸ್ಪರ ಕುದುರೆ ವ್ಯಾಪಾರದ ಆರೋಪಗಳನ್ನು ಹೊರಿಸಿವೆ. ರಾಜ್ಯ ವಿಧಾನಸಭೆಯಲ್ಲಿ ಸ್ಪೀಕರ್ ವಿರುದ್ಧ ಮತ ಚಲಾಯಿಸಲು ಹಣದ ಆಮಿಷ ಒಡ್ಡಲಾಗಿದೆ ಎಂದು ಟಿವಿಕೆ ಶಾಸಕ ಎನ್. ಇಳಯರಾಜ ನೀಡಿದ ದೂರಿನ ಮೇರೆಗೆ ಮೂವರನ್ನು ಬಂಧಿಸಿದ ನಂತರ ಈ ರಾಜಕೀಯ ಸಂಘರ್ಷ ಉಂಟಾಗಿದೆ.ಪಕ್ಷಾಂತರ ಮಾಡಲು ತಮಗೆ 30 ರಿಂದ 35 ಕೋಟಿ ರೂ. ಆಮಿಷ ಒಡ್ಡಲಾಗಿತ್ತು ಎಂದು ಟಿವಿಕೆ ಶಾಸಕ ಎನ್. ಇಳಯರಾಜ ಆರೋಪಿಸಿದ್ದಾರೆ. ಈಗಾಗಲೇ ಆಡಳಿತ ಪಕ್ಷದ 10 ಶಾಸಕರು ಮತ್ತು ಒಬ್ಬರು ಹಾಲಿ ಸಚಿವರು ಡಿಎಂಕೆ ಸೇರಲು ಒಪ್ಪಿಕೊಂಡಿದ್ದಾರೆ ಎಂದು ಆರೋಪಿಯು ತಮಗೆ ತಿಳಿಸಿದ್ದಾಗಿ ಅವರು ಹೇಳಿದ್ದಾರೆ.

30-35 ಕೋಟಿ ರೂ. ನಗದು ಆಮಿಷ:

ಈ ಪ್ರಕರಣದ ಪ್ರಮುಖ ಆರೋಪಿ ತಿರುನಾವುಕ್ಕರಸು ಎಂಬಾತ ನನಗೆ ನಿರಂತರವಾಗಿ ಕರೆ ಮಾಡಿ ಈ ಪಿತೂರಿಗೆ ಒಪ್ಪಿಕೊಳ್ಳುವಂತೆ ಒತ್ತಾಯಿಸುತ್ತಿದ್ದ ಎಂದು ಟಿವಿಕೆ ಶಾಸಕ ಇಳಯರಾಜ ತಿಳಿಸಿದ್ದಾರೆ ಎಂದು ಇಂಡಿಯಾ ಟುಡೇ ವರದಿ ಮಾಡಿದೆ. ‘ಆರೋಪಿ ತಿರುನಾವುಕ್ಕರಸು ಈಗಾಗಲೇ 10 ಟಿವಿಕೆ ಶಾಸಕರು ಹಾಗೂ ಒಬ್ಬ ಸಚಿವರನ್ನು ಡಿಎಂಕೆ ಪರವಾಗಿ ಸೆಳೆದಿದ್ದೇನೆ ಎಂದು ಹೇಳಿಕೊಂಡಿದ್ದ. ನನಗೆ 30 ರಿಂದ 35 ಕೋಟಿ ರೂ. ನಗದು ನೀಡುವುದಾಗಿ ಆಮಿಷ ಒಡ್ಡಿದ ಆತ, ಇದು ನಿನಗೆ ಸಿಗುತ್ತಿರುವ ದೊಡ್ಡ ಆಫರ್ ಎಂದು ಒಪ್ಪಿಸಲು ಯತ್ನಿಸಿದ’ ಎಂದು ಶಾಸಕ ವಿವರಿಸಿದ್ದಾರೆ.

ಇದನ್ನೂ ಓದಿ: ತಮಿಳುನಾಡಿನಲ್ಲಿ ವಿಜಯ್ ಸರ್ಕಾರದ ಪತನಕ್ಕೆ ಸಂಚು; ಟಿವಿಕೆ ಶಾಸಕನಿಗೆ 35 ಕೋಟಿ ಆಫರ್

ಮುಖ್ಯಮಂತ್ರಿ ವಿಜಯ್‌ಗೆ ನಿಷ್ಠೆ:

ಆದರೆ, ತಮಗೆ ಬಂದ ಆಫರ್ ಅನ್ನು ಸಂಪೂರ್ಣವಾಗಿ ತಿರಸ್ಕರಿಸಿರುವುದಾಗಿ ಹೇಳಿರುವ ಶಾಸಕ ಇಳಿಯರಾಜ, ತಾವು ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ಅವರಿಗೆ ನಿಷ್ಠರಾಗಿರುವುದಾಗಿ ಸ್ಪಷ್ಟಪಡಿಸಿದ್ದಾರೆ. ‘ಈ ಕಾರಣಕ್ಕಾಗಿಯೇ ಆತ ನನಗೆ ಕರೆ ಮಾಡುತ್ತಿದ್ದಾನೆ ಎಂದು ತಿಳಿದಿದ್ದರೆ, ನಾನು ಫೋನ್ ಅನ್ನೇ ರಿಸೀವ್ ಮಾಡುತ್ತಿರಲಿಲ್ಲ ಎಂದು ಅವನಿಗೆ ಹೇಳಿದೆ’ ಎಂದು ಇಳಯರಾಜ ತಿಳಿಸಿದ್ದಾರೆ. ಜನರು ತಮಗೆ ನೀಡಿದ ಬೆಂಬಲಕ್ಕೆ ದ್ರೋಹ ಬಗೆಯುವ ಯಾವುದೇ ಉದ್ದೇಶ ತಮಗಿಲ್ಲ ಎಂದು ಅವರು ಪುನರುಚ್ಚರಿಸಿದ್ದಾರೆ.

ಎಫ್‌ಐಆರ್‌ನಲ್ಲಿ ಮಾಜಿ ಸಚಿವರ ಹೆಸರು:

ಟಿವಿಕೆ ಶಾಸಕರನ್ನು ಸೆಳೆಯಲು ಯತ್ನಿಸಿದ ಆರೋಪದ ಮೇಲೆ ತಮಿಳುನಾಡು ಪೊಲೀಸರು ತಿರುನಾವುಕ್ಕರಸು, ನರೇಶ್ ಮತ್ತು ತ್ಯಾಗರಾಜನ್ ಎಂಬುವವರನ್ನು ಬಂಧಿಸಿದ ಬೆನ್ನಲ್ಲೇ ಶಾಸಕ ಇಳಿಯರಾಜ ಈ ಹೇಳಿಕೆ ನೀಡಿದ್ದಾರೆ. ಪೊಲೀಸರು ದಾಖಲಿಸಿರುವ ಎಫ್‌ಐಆರ್‌ನಲ್ಲಿ ಡಿಎಂಕೆಯ ಮಾಜಿ ಸಚಿವ ವಿ. ಸೆಂಥಿಲ್ ಬಾಲಾಜಿ ಮತ್ತು ಅವರ ಸಹೋದರ ಅಶೋಕ್ ಕುಮಾರ್ ಅವರ ಹೆಸರನ್ನೂ ಸೇರಿಸಲಾಗಿದ್ದು, ಆರೋಪಿಗಳೊಂದಿಗೆ ಇವರಿಗೆ ನಂಟಿದೆ ಎಂದು ಆರೋಪಿಸಲಾಗಿದೆ. ಆದರೆ ಡಿಎಂಕೆ ಈ ಆರೋಪಗಳನ್ನು ನಿರಾಕರಿಸಿದೆ.

ಇದನ್ನೂ ಓದಿ: ತಮಿಳುನಾಡು ಉಪಚುನಾವಣೆ; ಕಾಂಗ್ರೆಸ್‌ಗೆ ರಾಜ್ಯಸಭಾ ಸ್ಥಾನ ಬಿಟ್ಟುಕೊಟ್ಟ ವಿಜಯ್ ನೇತೃತ್ವದ ಟಿವಿಕೆ

ಈ ವಿವಾದವು ಇದೀಗ ತಮಿಳುನಾಡಿನಲ್ಲಿ ಪೂರ್ಣ ಪ್ರಮಾಣದ ರಾಜಕೀಯ ಸಂಘರ್ಷಕ್ಕೆ ಕಾರಣವಾಗಿದೆ. ವಿಜಯ್ ನೇತೃತ್ವದ ಸರ್ಕಾರವನ್ನು ಉರುಳಿಸಲು ಡಿಎಂಕೆ ಕುದುರೆ ವ್ಯಾಪಾರ ನಡೆಸುತ್ತಿದೆ ಎಂದು ಟಿವಿಕೆ ಆರೋಪಿಸಿದೆ. ಇದಕ್ಕೆ ಪ್ರತಿಯಾಗಿ, ಮುಖ್ಯಮಂತ್ರಿ ವಿಜಯ್ ಅವರು ಡಿಎಂಕೆಯ ಇಬ್ಬರು ಶಾಸಕರು ರಾಜೀನಾಮೆ ನೀಡುವಂತೆ ಪ್ರೇರೇಪಿಸಿದ್ದಾರೆ ಎಂದು ಆರೋಪಿಸಿ ಡಿಎಂಕೆ ಪಕ್ಷವು ರಾಜ್ಯಪಾಲರು ಮತ್ತು ಭ್ರಷ್ಟಾಚಾರ ನಿಗ್ರಹ ನಿರ್ದೇಶನಾಲಯಕ್ಕೆ (DVAC) ದೂರು ನೀಡಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Follow Us