ನಿನ್ನೆ ಉತ್ತರಪ್ರದೇಶದ ಮೆಹೋಬಾಕ್ಕೆ ಭೇಟಿ ನೀಡಿ, ಅಲ್ಲಿ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಿರುವ ಪ್ರಧಾನಿ ಮೋದಿ (PM Modi) ಸಂಜೆ ಲಖನೌಗೆ ತೆರಳಿದ್ದಾರೆ. ಅಲ್ಲಿಂದು ನಡೆಯಲಿರುವ ಡಿಜಿಪಿಗಳ ಸಮ್ಮೇಳನದಲ್ಲಿ ಪಾಲ್ಗೊಂಡಿದ್ದಾರೆ. ಆದರೆ ಈ ಮಧ್ಯೆ ಪ್ರಧಾನಿ ನರೇಂದ್ರ ಮೋದಿಯವರಿಗೆ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಮನವಿಯೊಂದನ್ನು ಮಾಡಿದ್ದಾರೆ. ರೈತರ ಹಿತಾಸಕ್ತಿ ದೃಷ್ಟಿಯಿಂದ, ಇಂದು ಮತ್ತು ನಾಳೆ ನಡೆಯಲಿರುವ ಡಿಜಿಪಿಗಳ ಸಮ್ಮೇಳನದಲ್ಲಿ ನೀವು ಕೇಂದ್ರ ಸಚಿವ ಅಜಯ್ ಮಿಶ್ರಾ ಜತೆ ವೇದಿಕೆ ಹಂಚಿಕೊಳ್ಳಬೇಡಿ ಎಂದು ಹೇಳಿದ್ದಾರೆ.
ಅಜಯ್ ಮಿಶ್ರಾ ಕೇಂದ್ರ ಗೃಹ ಇಲಾಖೆ ರಾಜ್ಯ ಸಚಿವರಾಗಿದ್ದು, ಇವರ ಪುತ್ರ ಆಶೀಶ್ ಮಿಶ್ರಾ ಲಖಿಂಪುರ ಖೇರಿ ಹಿಂಸಾಚಾರದಲ್ಲಿ ಪ್ರಮುಖ ಆರೋಪಿ ಎನ್ನಿಸಿದ್ದಾರೆ. ಇದೀಗ ಪ್ರಿಯಾಂಕಾ ಗಾಂಧಿ ಕೂಡ ಇದೇ ಕಾರಣಕ್ಕೆ ಮೋದಿಯವರಿಗೆ ಹೀಗೆ ಮನವಿ ಮಾಡಿದ್ದಾರೆ. ಅಜಯ್ ಮಿಶ್ರಾರನ್ನು ಆದಷ್ಟು ಬೇಗ ಹುದ್ದೆಯಿಂದ ಕೆಳಗೆ ಇಳಿಸಿ ಎಂದೂ ಒತ್ತಾಯಿಸಿದ್ದಾರೆ. ಈ ಸಂಬಂಧ ತಾವು ಪ್ರಧಾನಿ ಮೋದಿಯವರಿಗೆ ಬರೆದ ಪತ್ರವನ್ನು ಮಾಧ್ಯಮಗಳ ಎದುರು ಓದಿದ ಪ್ರಿಯಾಂಕಾ ಗಾಂಧಿ, ‘ನಿನ್ನೆ ನೀವು ದೇಶವನ್ನುದ್ದೇಶಿಸಿ ಮಾತನಾಡುತ್ತ, ರೈತರ ಹಿತಾಸಕ್ತಿಯನ್ನು ಮನಸಲ್ಲಿ ಇಟ್ಟುಕೊಂಡು ಕೃಷಿ ಕಾಯ್ದೆಗಳನ್ನು ವಾಪಸ್ ಪಡೆಯುತ್ತಿರುವುದಾಗಿ ಹೇಳಿಕೊಂಡಿದ್ದೀರಿ. ಹಾಗೇ, ರೈತರ ಹಿತಾಸಕ್ತಿ ನಿಮಗೆ ಅಷ್ಟು ಮುಖ್ಯ ಎಂದಾದರೆ, ಲಖಿಂಪುರ ಖೇರಿ ಹಿಂಸಾಚಾರದಲ್ಲಿ ಮೃತಪಟ್ಟ ರೈತರ ಕುಟುಂಬಕ್ಕೆ ನ್ಯಾಯ ಒದಗಿಸುವುದೂ ನಿಮ್ಮ ಬಹುಮುಖ್ಯ ಆದ್ಯತೆ ಆಗಬೇಕು. ಈ ಘಟನೆಯಲ್ಲಿ ಕೇಂದ್ರ ಸಚಿವ ಅಜಯ್ ಮಿಶ್ರಾ ಪುತ್ರ ಆಶೀಶ್ ಮಿಶ್ರಾ ಹೆಸರು ಕೇಳಿಬಂದಿದೆ ಮತ್ತವರನ್ನು ಪೊಲೀಸರು ಬಂಧಿಸಿದ್ದಾರೆ. ಆದರೂ ಅಜಯ್ ಮಿಶ್ರಾ ಇನ್ನೂ ನಿಮ್ಮ ಸಂಪುಟದಲ್ಲಿ ಮುಂದುವರಿದಿದ್ದಾರೆ. ಆರೋಪಿ ಆಶೀಶ್ ಮಿಶ್ರಾ ತಂದೆಯೊಟ್ಟಿಗೆ ನೀವು ಡಿಜಿಪಿ ಸಮ್ಮೇಳನದಲ್ಲಿ ವೇದಿಕೆ ಹಂಚಿಕೊಂಡಿದ್ದೇ ಆದರೆ, ನೀವಿನ್ನೂ ಕೊಲೆಗಾರರಿಗೆ ಉತ್ತೇಜನ ನೀಡುವ ವ್ಯಕ್ತಿಗಳೊಟ್ಟಿಗೇ ಇದ್ದೀರಿ, ಅವರಿಗೆ ಬೆಂಬಲ ನೀಡುತ್ತಿದ್ದೀರಿ ಎಂಬ ಅರ್ಥವೇ ಬರುತ್ತದೆ’ ಎಂದು ಹೇಳಿದ್ದಾರೆ.
ಲಖಿಂಪುರ ಖೇರಿಯಲ್ಲಿ ಮೃತಪಟ್ಟ ರೈತರ ಕುಟುಂಬಗಳು ಈ ಪ್ರಕರಣದಲ್ಲಿ ತಮಗೆ ನ್ಯಾಯ ಸಿಗಬೇಕು ಎಂದು ಬಯಸುತ್ತಿವೆ. ಆದರೆ ಅಜಯ್ ಮಿಶ್ರಾ ಇನ್ನೂ ಸಚಿವರಾಗಿಯೇ ಮುಂದುವರಿಯುತ್ತಿರುವ ಕಾರಣ ನ್ಯಾಯ ಸಿಗುವ ಆಶಯವನ್ನು ಬಿಟ್ಟಿವೆ. ಲಖಿಂಪುರ ಖೇರಿಯಲ್ಲಿ ರೈತರಿಗೆ ಏನಾಯಿತು? ಆ ಕ್ರೌರ್ಯಕ್ಕೆ ಕಾರಣವಾಗಿದ್ದು ಯಾರು ಎಂಬುದು ಇಡೀ ದೇಶಕ್ಕೇ ಗೊತ್ತು. ಹೀಗಾಗಿ ಆದಷ್ಟು ಬೇಗ ಅಜಯ್ ಮಿಶ್ರಾರನ್ನು ಸಂಪುಟದಿಂದ ವಜಾಗೊಳಿಸಿ, ತನಿಖೆ ನಡೆಸಿ ಎಂದು ಪ್ರಿಯಾಂಕಾ ಗಾಂಧಿ ಪ್ರಧಾನಿ ಮೋದಿ ಮತ್ತು ಉತ್ತರ ಪ್ರದೇಶ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಇದನ್ನೂ ಓದಿ: ಚಿಕ್ಕಬಳ್ಳಾಪುರ: 360 ಕೋಟಿ ರೂ. ಮೌಲ್ಯದ ಆಸ್ತಿ ಪಾಸ್ತಿ, ಬೆಳೆ ಹಾನಿ; 48 ಮನೆ ಸಂಪೂರ್ಣ ಕುಸಿತ
Viral Video: ಆನೆ ಮರಿಯ ಬಾಬ್ ಕಟ್ ಕೂದಲನ್ನು ಬಾಚಿದ ಮಾವುತನ ವಿಡಿಯೋ ವೈರಲ್