ಹೈದರಾಬಾದ್: ‘ಮ್ಯಾನ್ ಅಂಡ್ ಮಿಷಿನ್ ಜಾಯಿನ್ ಫೋರ್ಸಸ್’ ಶೀರ್ಷಿಕೆಯ ಸಾಕ್ಷ್ಯಚಿತ್ರದ 30 ಸೆಕೆಂಡ್ಗಳ ಪ್ರೊಮೊ ತೆಲಂಗಾಣದಲ್ಲಿ ಕುತೂಹಲ ಉಂಟು ಮಾಡಿದೆ. ಗೋದಾವರಿ ನದಿ ನೀರಿನ ಸದುಪಯೋಗಕ್ಕಾಗಿ ರೂಪಿಸಿರುವ ಕಾಳೇಶ್ವರಂ ಏತ ನೀರಾವರಿ ಯೋಜನೆ (Kaleshwaram Lift Irrigation Scheme – KLIS) ಕುರಿತ ಈ ಪ್ರೊಮೊ ಹಲವು ಸಾಮಾಜಿಕ ವೇದಿಕೆಗಳಲ್ಲಿ ವ್ಯಾಪಕವಾಗಿ ಶೇರ್ ಆಗಿದ್ದು, ವೈರಲ್ ಆಗಿದೆ.
ಜೂನ್ 25ರಂದು ರಾತ್ರಿ 8 ಗಂಟೆಗೆ ಈ ಸಾಕ್ಷ್ಯಚಿತ್ರವು ಡಿಸ್ಕವರಿ ಸಮೂಹದ ಚಾನೆಲ್ಗಳಲ್ಲಿ ಪ್ರಸಾರವಾಗಲಿದೆ. ಇದು ವಿಶ್ವದ ಅತ್ಯಂತ ದೊಡ್ಡ ಏತ ನೀರಾವರಿ ಯೋಜನೆ ಎಂದು ಪ್ರೊಮೊ ವಿವರಿಸಿದೆ. ಇಷ್ಟು ಬೃಹತ್ ಸಾಮರ್ಥ್ಯದ ಪಂಪ್ಗಳನ್ನು ಬೇರೆಲ್ಲೂ ಸ್ಥಾಪಿಸಿಲ್ಲ ಅಥವಾ ಕಾರ್ಯನಿರ್ವಹಿಸಲು ಅಳವಡಿಸಿಲ್ಲ ಎಂದು ಪ್ರೊಮೊ ಹೇಳುತ್ತದೆ. ಮುಖ್ಯಮಂತ್ರಿ ಕೆ.ಚಂದ್ರಶೇಖರ್ರಾವ್ ಈ ಯೋಜನೆಯನ್ನು ಜೂನ್ 21, 2019ರಂದು ದೇಶಕ್ಕೆ ಸಮರ್ಪಿಸಿದ್ದರು.
ತೆಲಂಗಾಣದ ನೀರಾವರಿ ಇಲಾಖೆ ಅಧಿಕಾರಿಗಳಲ್ಲಿ ಈ ಪ್ರೊಮೊ ಕುತೂಹಲ ಹುಟ್ಟುಹಾಕಿದೆ. ರಾಜ್ಯದ ಮುಖ್ಯ ಎಂಜಿನಿಯರ್ರಿಂದ ಅಸಿಸ್ಟೆಂಟ್ ಎಕ್ಸಿಕ್ಯುಟಿವ್ ಎಂಜಿನಿಯರ್ವರೆಗೂ ಹಲವು ಹಂತದ ಸಿಬ್ಬಂದಿ ಈ ಪ್ರೊಮೊ ಲಿಂಕ್ ಫಾರ್ವರ್ಡ್ ಮಾಡುತ್ತಿದ್ದಾರೆ. ಸಾಕ್ಷ್ಯಚಿತ್ರ ನೋಡಲು ತಮ್ಮ ಆತ್ಮೀಯರನ್ನು ವಿನಂತಿಸುತ್ತಿದ್ದಾರೆ.
ನನಗೆ ನಿನ್ನೆಯಿಂದಲೂ ವಾಟ್ಸ್ಯಾಪ್ನಲ್ಲಿ ಸಾಕಷ್ಟು ಮೆಸೇಜ್ಗಳು ಬರುತ್ತಿವೆ. ನಾವೂ ಈ ಶುಕ್ರವಾರ ಸಾಕ್ಷ್ಯಚಿತ್ರ ನೋಡಲು ಉತ್ಸುಕರಾಗಿದ್ದೇವೆ. ಈ ಯೋಜನೆಯನ್ನು ಕಾರ್ಯಗತಗೊಳಿಸಲು ನೀರಾವರಿ ಇಲಾಖೆ ಸಿಬ್ಬಂದಿ ಎಷ್ಟು ಕಷ್ಟಪಟ್ಟಿದ್ದಾರೆ ಎನ್ನುವುದನ್ನು ಈ ಸಾಕ್ಷ್ಯಚಿತ್ರ ಸಾರಿಹೇಳಲಿದೆ ಎಂದು ಹೆಸರು ಹೇಳಲು ಇಚ್ಛಿಸದ ನೀರಾವರಿ ಇಲಾಖೆಯ ಅಧಿಕಾರಿಯೊಬ್ಬರು ಹೇಳಿದರು.
Save The Date!
“Lifting A River” A @Discovery Channel exclusive documentary on #KaleshwaramProject on June 25, at 8 PM. Don’t miss! @KTRTRS pic.twitter.com/kZwZUp755C— Telangana Digital Media Wing (@DigitalMediaTS) June 19, 2021
ಈ ಸಾಕ್ಷ್ಯಚಿತ್ರ ರೂಪಿಸುವ ಕೆಲಸವನ್ನು ಡಿಸ್ಕವರಿ ಚಾನೆಲ್ ಕಳೆದ 2017ರಿಂದಲೇ ಆರಂಭಿಸಿತ್ತು. ಯೋಜನೆಯ ಹಲವು ಸ್ಥಳಗಳಲ್ಲಿ ಚಾನೆಲ್ನ ಸಿಬ್ಬಂದಿ ಶೂಟಿಂಗ್ ನಡೆಸಿದರು. ತೆಲಂಗಾಣಕ್ಕೆ ಈ ಯೋಜನೆಯ ಪ್ರಾಮುಖ್ಯತೆ ಏನು ಎಂಬ ಬಗ್ಗೆ ನೀರಾವರಿ ವಿಭಾಗದ ಮುಖ್ಯ ಎಂಜಿನಿಯರ್ ರಾಮಗುಂಡಮ್ ನಲ್ಲಾ ವೆಂಕಟೇಶ್ವರಲು ವಿವರಿಸಿದ್ದರು. ಸಾಕ್ಷ್ಯಚಿತ್ರ ನೋಡಲು ನನಗೂ ಕುತೂಹಲವಿದೆ ಎಂದು ವೆಂಕಟೇಶ್ವರು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದಾರೆ.
ಈ ಬಾರಿ ಮಹಾರಾಷ್ಟ್ರ ಸೇರಿದಂತೆ ದಕ್ಷಿಣ ಭಾರತದಲ್ಲಿ ಉತ್ತಮ ಮಳೆಯಾಗುತ್ತಿದೆ. ಕಾಳೇಶ್ವರಂ ಯೋಜನೆ ಮೊದಲ ನಿರ್ಮಾಣವಾದ ಲಕ್ಷ್ಮೀ (ಮಾದಿಗಡ್ಡ) ಬ್ಯಾರೇಜ್ಗೆ ಪ್ರಾಣಿಹಿತಾ ನದಿಯಿಂದ ಬರುತ್ತಿರುವ ಒಳಹರಿವಿನ ಪ್ರಮಾಣ ಹೆಚ್ಚಾಗಿದೆ. ಈ ನದಿಯಲ್ಲಿ ಜುಲೈ ತಿಂಗಳಲ್ಲಿ ನೀರಿನ ಹರಿವು ಹೆಚ್ಚಾಗುವುದು ವಾಡಿಕೆ.
ಜೂನ್ 25ಕ್ಕೆ ಪ್ರಸಾರ
ವಿಶ್ವವಿಖ್ಯಾತ ಫಿಲಂ ಮೇಕರ್ ರಾಜೇಂದ್ರ ಕೊಂಡಪಲ್ಲಿ ರೂಪಿಸಿರುವ ಚಿತ್ರ ಜೂನ್ 25ರ ಶುಕ್ರವಾರ ರಾತ್ರಿ 8 ಗಂಟೆಗೆ ಡಿಸ್ಕವರಿ ಚಾನೆಲ್ನಲ್ಲಿ ಪ್ರಸಾರವಾಗಲಿದೆ. ಯೋಜನೆಯ ವಿವರಗಳೊಂದಿಗೆ ಜನರಿಗೆ ಈ ಯೋಜನೆ ಎಷ್ಟು ಉಪಯುಕ್ತ ಎಂಬ ಮಾಹಿತಿಯನ್ನೂ ಈ ಸಾಕ್ಷ್ಯಚಿತ್ರ ಪ್ರಸ್ತುತಪಡಿಸಲಿದೆ. ಇಂಗ್ಲಿಷ್ ಮತ್ತು ಇತರ 6 ಭಾರತೀಯ ಭಾಷೆಗಳಲ್ಲಿ ಸಾಕ್ಷ್ಯಚಿತ್ರ ಪ್ರಸಾರಗೊಳ್ಳಲಿದೆ.
ಮೇಘಾ ಎಂಜಿನಿಯರಿಂಗ್ ಅಂಡ್ ಇನ್ಫ್ರಾಸ್ಟ್ರಕ್ಚರ್ ಲಿಮಿಟೆಡ್ ಕಂಪನಿಯು ‘ಎಂಜಿನಿಯರಿಂಗ್ ಮಾರ್ವೆಲ್’ ಎನಿಸಿದ ಈ ಯೋಜನೆಯನ್ನು ಕಾರ್ಯಗತಗೊಳಿಸಿದೆ.
(Documentary on Kaleshwaram project to be aired on Discovery Channel)
ಇದನ್ನೂ ಓದಿ: ತೆಲಂಗಾಣದ 135 ವರ್ಷ ಹಳೆಯ ಜೈಲು ಖಾಲಿ, ಇಲ್ಲಿ ತಲೆ ಎತ್ತಲಿದೆ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ
ಇದನ್ನೂ ಓದಿ: ಕೊವಿಡ್ 19 ಲಸಿಕೆ ತಯಾರಿಕೆಗಾಗಿ ತೆಲಂಗಾಣ ಮೂಲದ ಕಂಪನಿಯೊಂದಿಗೆ ಕೈಜೋಡಿಸಿದ ಜಾನ್ಸನ್ ಆ್ಯಂಡ್ ಜಾನ್ಸನ್..
Published On - 5:02 pm, Sun, 20 June 21