ಸತ್ಯ ಹೇಳಿದ್ದಕ್ಕೆ ಸಂತೋಷ; ಭಾರತದ್ದು ‘ಸತ್ತ ಆರ್ಥಿಕತೆ’ ಎಂಬ ಟ್ರಂಪ್ ಹೇಳಿಕೆಗೆ ರಾಹುಲ್ ಗಾಂಧಿ ಬೆಂಬಲ

ಪ್ರಧಾನಿ ನರೇಂದ್ರ ಮೋದಿ ಮತ್ತು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಹೊರತುಪಡಿಸಿ ಬೇರೆ ಎಲ್ಲರಿಗೂ ಭಾರತದ ಆರ್ಥಿಕತೆ ಸತ್ತಿದೆ ಎಂದು ತಿಳಿದಿದೆ ಎಂದು ಟೀಕಿಸಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಡೊನಾಲ್ಡ್ ಟ್ರಂಪ್ ಅವರ ಹೇಳಿಕೆಯನ್ನು ಬೆಂಬಲಿಸಿದ್ದಾರೆ. ಭಾರತದ ಆರ್ಥಿಕತೆಯ ಬಗ್ಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಕಟುವಾದ ಹೇಳಿಕೆಗಳನ್ನು ಬೆಂಬಲಿಸಿದ ರಾಹುಲ್ ಗಾಂಧಿ, ಬಿಜೆಪಿ ನೇತೃತ್ವದ ಸರ್ಕಾರವು ಭಾರತದ ಆರ್ಥಿಕ, ರಕ್ಷಣಾ ಮತ್ತು ವಿದೇಶಾಂಗ ನೀತಿಗಳನ್ನು ನಾಶಪಡಿಸಿದೆ ಎಂದು ಆರೋಪಿಸಿದ್ದಾರೆ.

ಸತ್ಯ ಹೇಳಿದ್ದಕ್ಕೆ ಸಂತೋಷ; ಭಾರತದ್ದು ಸತ್ತ ಆರ್ಥಿಕತೆ ಎಂಬ ಟ್ರಂಪ್ ಹೇಳಿಕೆಗೆ ರಾಹುಲ್ ಗಾಂಧಿ ಬೆಂಬಲ
Rahul Gandhi

Updated on: Jul 31, 2025 | 4:40 PM

ನವದೆಹಲಿ, ಜುಲೈ 31: ಭಾರತದ ಆರ್ಥಿಕತೆ ‘ಸತ್ತ ಆರ್ಥಿಕತೆ’ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಟೀಕಿಸಿದ್ದರು. ಅದಕ್ಕೆ ಬೆಂಬಲ ಸೂಚಿಸಿರುವ ವಿಪಕ್ಷ ನಾಯಕ ಹಾಗೂ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ (Rahul Gandhi), “ಡೊನಾಲ್ಡ್ ಟ್ರಂಪ್ ಸತ್ಯ ಹೇಳಿದ್ದಕ್ಕೆ ಸಂತೋಷವಾಗಿದೆ. ಭಾರತದ ಪ್ರಧಾನಿ ಮತ್ತು ಹಣಕಾಸು ಸಚಿವರನ್ನು ಹೊರತುಪಡಿಸಿ ಎಲ್ಲರಿಗೂ ಭಾರತದ ಆರ್ಥಿಕತೆಯ ಪರಿಸ್ಥಿತಿ ಹೇಗಿದೆ” ಎಂಬುದರ ವಾಸ್ತವದ ಅರಿವಿದೆ ಎಂದಿದ್ದಾರೆ. ಬಿಜೆಪಿ ನೇತೃತ್ವದ ಸರ್ಕಾರವು ಭಾರತದ ಆರ್ಥಿಕ, ರಕ್ಷಣಾ ಮತ್ತು ವಿದೇಶಾಂಗ ನೀತಿಗಳನ್ನು ನಾಶಪಡಿಸಿದೆ ಎಂದು ಅವರು ಆರೋಪಿಸಿದ್ದಾರೆ.

ಭಾರತದ ಮೇಲೆ ಶೇ. 25 ರಷ್ಟು ಸುಂಕ ಮತ್ತು ದಂಡ ವಿಧಿಸುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿದ ನಂತರ ಹಾಗೂ ಭಾರತ ಮತ್ತು ರಷ್ಯಾವನ್ನು “ಸತ್ತ ಆರ್ಥಿಕತೆಗಳು” ಎಂದು ಕರೆದ ನಂತರ ರಾಹುಲ್ ಗಾಂಧಿ ಅವರ ಈ ಹೇಳಿಕೆಗಳು ಬಂದಿವೆ.


ಇದನ್ನೂ ಓದಿ: Dead Economy: ಭಾರತದ ಸತ್ತ ಆರ್ಥಿಕತೆ ನೆಲಕಚ್ಚಬೇಕು: ಡೊನಾಲ್ಡ್ ಟ್ರಂಪ್ ಹಿಡಿಶಾಪ

ಟ್ರಂಪ್ ಅವರ ಸತ್ತ ಆರ್ಥಿಕತೆ ಹೇಳಿಕೆಯ ಕುರಿತು ಸಂಸತ್ ಭವನದ ಸಂಕೀರ್ಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ, “ಹೌದು, ಟ್ರಂಪ್ ಹೇಳಿದ್ದು ಸರಿ. ಪ್ರಧಾನಿ ಮತ್ತು ಹಣಕಾಸು ಸಚಿವರನ್ನು ಹೊರತುಪಡಿಸಿ ಎಲ್ಲರಿಗೂ ಇದು ತಿಳಿದಿದೆ. ಭಾರತದ ಆರ್ಥಿಕತೆ ಸತ್ತ ಆರ್ಥಿಕತೆ ಎಂದು ಎಲ್ಲರಿಗೂ ತಿಳಿದಿದೆ. ಅಧ್ಯಕ್ಷ ಟ್ರಂಪ್ ಈ ಸತ್ಯವನ್ನು ಹೇಳಿದ್ದಕ್ಕೆ ನನಗೆ ಸಂತೋಷವಾಗಿದೆ. ಭಾರತದ ಆರ್ಥಿಕತೆ ಸತ್ತ ಆರ್ಥಿಕತೆ ಎಂದು ಇಡೀ ಜಗತ್ತಿಗೆ ತಿಳಿದಿದೆ.” ಎಂದಿದ್ದಾರೆ.


ಬಿಲಿಯನೇರ್ ಗೌತಮ್ ಅದಾನಿಗೆ ಸಹಾಯ ಮಾಡಲು ಬಿಜೆಪಿ ಭಾರತದ ಆರ್ಥಿಕತೆಯನ್ನು ನಾಶಪಡಿಸಿದೆ ಎಂದು ರಾಹುಲ್ ಗಾಂಧಿ ಆರೋಪಿಸಿದ್ದಾರೆ. “ನಮ್ಮದು ಪ್ರತಿಭಾನ್ವಿತ ವಿದೇಶಾಂಗ ನೀತಿ ಎಂದು ವಿದೇಶಾಂಗ ಸಚಿವರು ಭಾಷಣ ಮಾಡುತ್ತಾರೆ. ಒಂದೆಡೆ, ಅಮೆರಿಕ ನಿಮ್ಮನ್ನು ನಿಂದಿಸುತ್ತಿದೆ, ಮತ್ತೊಂದೆಡೆ, ಚೀನಾ ಬೆನ್ನಟ್ಟುತ್ತಿದೆ. ಮೂರನೆಯದಾಗಿ, ನೀವು ಜಗತ್ತಿನಾದ್ಯಂತ ನಿಯೋಗಗಳನ್ನು ಕಳುಹಿಸಿದಾಗ ಯಾವುದೇ ದೇಶವು ಪಾಕಿಸ್ತಾನವನ್ನು ಖಂಡಿಸಲಿಲ್ಲ” ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.

ಇದನ್ನೂ ಓದಿ: ಟ್ರಂಪ್ ಕುರಿತು ರಾಹುಲ್ ಗಾಂಧಿ ಕೇಳಿದ್ದ ಪ್ರಶ್ನೆಗೆ ಪ್ರಧಾನಿ ಮೋದಿ ಕೊಟ್ಟ ಉತ್ತರವೇನು?

ಭಾರತದ ವಿರುದ್ಧ ಟ್ರಂಪ್ ಅವರ ಸಾಲು ಸಾಲು ಹೇಳಿಕೆಗಳಿಗೆ ಪ್ರತಿಕ್ರಿಯೆಯಾಗಿ ಕೇಂದ್ರ ಸರ್ಕಾರದ ಮೌನದ ಬಗ್ಗೆ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ತೀಕ್ಷ್ಣವಾದ ಪ್ರಶ್ನೆಗಳನ್ನು ಎತ್ತಿದರು. “ಮುಖ್ಯ ಪ್ರಶ್ನೆಯೆಂದರೆ, ಟ್ರಂಪ್ 30ರಿಂದ 32 ಬಾರಿ ತಾನೇ ಭಾರತ ಮತ್ತು ಪಾಕಿಸ್ತಾನದ ನಡುವೆ ಕದನ ವಿರಾಮವನ್ನು ಮಾಡಿರುವುದಾಗಿ ಹೇಳಿಕೊಂಡಿದ್ದಾರೆ. 5 ಭಾರತೀಯ ಜೆಟ್‌ಗಳು ಬಿದ್ದಿವೆ ಎಂದು ಅವರು ಹೇಳಿದ್ದಾರೆ. ಟ್ರಂಪ್ ಈಗ 25% ಸುಂಕವನ್ನು ವಿಧಿಸುವುದಾಗಿ ಹೇಳುತ್ತಿದ್ದಾರೆ. ಇದಕ್ಕೆಲ್ಲ ಪ್ರಧಾನಿ ಮೋದಿಗೆ ಉತ್ತರ ನೀಡಲು ಏಕೆ ಸಾಧ್ಯವಾಗುತ್ತಿಲ್ಲ? ನಿಜವಾದ ಕಾರಣವೇನು? ಯಾರ ಕೈಯಲ್ಲಿ ಮೋದಿಯ ನಿಯಂತ್ರಣವಿದೆ?” ಎಂದು ರಾಹುಲ್ ಗಾಂಧಿ ಕೇಳಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 4:39 pm, Thu, 31 July 25