ಅಹಮದಾಬಾದ್‌ನಲ್ಲಿ ದೃಶ್ಯ ಸಿನಿಮಾ ಶೈಲಿಯ ಕೊಲೆ; ಅಡುಗೆಮನೆ ಅಡಿಯಲ್ಲಿತ್ತು ಗಂಡನ ಶವ!
ಗುಜರಾತಿನ ಅಹಮದಾಬಾದ್‌ನಲ್ಲಿ ದೃಶ್ಯ ಸಿನಿಮಾ ರೀತಿಯ ಘಟನೆಯೊಂದು ನಡೆದಿದೆ. ಗಂಡನನ್ನು ಕೊಂದ ಹೆಂಡತಿಯ ಪ್ಲಾನ್ ನೋಡಿ ಪೊಲೀಸರೇ ಶಾಕ್ ಆಗಿದ್ದಾರೆ. ಮಹಿಳೆಯೊಬ್ಬಳು ತನ್ನ ಗಂಡನನ್ನು ಕೊಂದು, ಆತನ ಶವವನ್ನು ಅಡುಗೆಮನೆಯಲ್ಲಿ ಹೂತುಹಾಕಿದ್ದಾಳೆ. ಆಕೆ ಈ ರೀತಿಯ ಪ್ಲಾನ್ ಮಾಡಿದ್ದು ಹೇಗೆ? ಅದಕ್ಕೆ ಕಾರಣವೇನು? ಎಂಬುದರ ಬಗ್ಗೆ ಪೂರ್ತಿ ಮಾಹಿತಿ ಇಲ್ಲಿದೆ.

ಅಹಮದಾಬಾದ್, ನವೆಂಬರ್ 5: ಮೋಹನ್ಲಾಲ್ ನಟಿಸಿದ್ದ ಮಲಯಾಳಂ ಭಾಷೆಯ ದೃಶ್ಯಂ (Drishyam) ಸಿನಿಮಾ ನೋಡದವರೇ ಇಲ್ಲ ಎನ್ನಬಹುದು. ಈ ಸಿನಿಮಾವನ್ನು ಕನ್ನಡದಲ್ಲಿ ಕೂಡ ದೃಶ್ಯ ಎಂಬ ಹೆಸರಿನಲ್ಲಿ ರಿಮೇಕ್ ಮಾಡಲಾಗಿದ್ದು, ರವಿಚಂದ್ರನ್ ಮುಖ್ಯ ಪಾತ್ರದಲ್ಲಿ ನಟಿಸಿದ್ದರು. ಇದೀಗ ಈ ಸಿನಿಮಾದಲ್ಲಿ ನಾಯಕ ಕೊಲೆಯನ್ನು ಮುಚ್ಚಿಹಾಕಲು ಯಾವ ರೀತಿ ಪ್ಲಾನ್ ಮಾಡುತ್ತಾನೋ ಅದೇ ರೀತಿಯ ಪ್ಲಾನ್ ಅನ್ನು ಅಹಮದಾಬಾದ್‌ನ ಮಹಿಳೆಯೊಬ್ಬಳು ಮಾಡಿದ್ದಾಳೆ. ತನ್ನ ಗಂಡನನ್ನು ಕೊಲೆ (Murder) ಮಾಡಿದ ಆಕೆ ಆತನ ಶವವನ್ನು ಅಡುಗೆಮನೆಯ ಟೈಲ್ಸ್ ಅಡಿಯಲ್ಲಿ ಹೂತುಹಾಕಿದ್ದಾಳೆ!
ಅಹಮದಾಬಾದ್ ನಗರದಲ್ಲಿ ಮಹಿಳೆಯ ಪ್ರಿಯಕರ ಮತ್ತು ಇಬ್ಬರು ಸಂಬಂಧಿಕರು ಸೇರಿ ವ್ಯಕ್ತಿಯೊಬ್ಬರನ್ನು ಕೊಲೆ ಮಾಡಿದ್ದಾರೆ. ಸಮೀರ್ ಅನ್ಸಾರಿ ಎಂಬ ವ್ಯಕ್ತಿ ನಿಗೂಢವಾಗಿ ಕಣ್ಮರೆಯಾಗಿ ಸುಮಾರು 1 ವರ್ಷವಾಗಿತ್ತು. ಬರೋಬ್ಬರಿ 1 ವರ್ಷದ ನಂತರ, ಈ ಕೊಲೆಯ ರಹಸ್ಯ ಬಯಲಾಗಿದೆ.
ಇದನ್ನೂ ಓದಿ: UPSC ಆಕಾಂಕ್ಷಿಯಾಗಿದ್ದ ಪ್ರಿಯಕರನ ಕಥೆ ಮುಗಿಸಿದ ಪ್ರಿಯತಮೆ: ರಾಸಲೀಲೆ ವಿಡಿಯೋಕ್ಕಾಗಿ ನಡೆಯಿತು ಕೊಲೆ
ನಿನ್ನೆ ರಾತ್ರಿ ಅಹಮದಾಬಾದ್‌ನ ಅಪರಾಧ ವಿಭಾಗವು ಅಹಮದಾಬಾದ್‌ನ ಸರ್ಖೇಜ್ ಪ್ರದೇಶದಲ್ಲಿ ಬೀಗ ಹಾಕಿದ ಸಮೀರ್ ಅವರ ಮನೆಯ ಅಡುಗೆಮನೆಯ ನೆಲದ ಕೆಳಗಿನಿಂದ ಅವರ ಮೂಳೆಗಳು ಮತ್ತು ಇತರ ಅವಶೇಷಗಳನ್ನು ಹೊರತೆಗೆದಿದೆ. ಸಮೀರ್ ಅನ್ಸಾರಿ ಅವರ ಪತ್ನಿ ರೂಬಿ ಅವರು ಅನ್ಸಾರಿಯನ್ನು ಕೊಲ್ಲಲು ತಮ್ಮ ಪ್ರಿಯಕರ ಇಮ್ರಾನ್ ವಘೇಲಾ ಮತ್ತು ಅವರ ಇಬ್ಬರು ಸಂಬಂಧಿಕರ ಸಹಾಯವನ್ನು ಪಡೆದುಕೊಂಡಿದ್ದರು. ಈ ಅಕ್ರಮ ಸಂಬಂಧವೇ ಕೊಲೆಗೆ ಮುಖ್ಯ ಕಾರಣವಾಗಿದೆ. ಹಾಗಾದರೆ, ಈ ಕೊಲೆ ಹಾಗೂ ಶವದ ರಹಸ್ಯ ಬಯಲಾಗಿದ್ದು ಹೇಗೆ? ಎಂಬುದರ ಕುತೂಹಲಕಾರಿ ಸಂಗತಿ ಇಲ್ಲಿದೆ.
1 ವರ್ಷದ ಹಿಂದೆ ಆಗಿದ್ದೇನು?:
35 ವರ್ಷದ ಸಮೀರ್ ಅನ್ಸಾರಿ 2024ರಲ್ಲಿ ಇದ್ದಕ್ಕಿದ್ದಂತೆ ನಾಪತ್ತೆಯಾಗಿದ್ದರು. 1 ವರ್ಷದಿಂದ ಅವರಿಗಾಗಿ ಹುಡುಕಾಟ ನಡೆದಿತ್ತು. ಆದರೆ ಅವರ ಸುಳಿವು ಸಿಕ್ಕಿರಲಿಲ್ಲ. ರೂಬಿ ಮತ್ತು ಆಕೆಯ ಗಂಡ ಸಮೀರ್ ನಡುವೆ ಆಗಾಗ ಜಗಳ ನಡೆಯುತ್ತಿತ್ತು. ರೂಬಿ ಇಮ್ರಾನ್‌ನೊಂದಿಗೆ ಅಕ್ರಮ ಸಂಬಂಧ ಹೊಂದಿರುವುದೇ ಈ ಜಗಳಕ್ಕೆ ಕಾರಣವಾಗಿತ್ತು. ಈ ಜಗಳವೇ ಅಂತಿಮವಾಗಿ ಭೀಕರ ಹತ್ಯೆಗೆ ಕಾರಣವಾಯಿತು.
ಸಮೀರ್ ನಾಪತ್ತೆ ಅನುಮಾನಾಸ್ಪದವಾಗಿದೆ ಎಂದು ಅನುಮಾನಗೊಂಡ ಪೊಲೀಸರು ಮೂರು ತಿಂಗಳ ಹಿಂದೆ ಈ ಕೇಸ್ ಅಪರಾಧ ಶಾಖೆಗೆ ಬಂದಾಗ ತನಿಖೆ ಪ್ರಾರಂಭಿಸಿದ್ದರು. ಸಮೀರನ ಮೊಬೈಲ್ ಫೋನ್ 14 ತಿಂಗಳಿನಿಂದ ಸ್ವಿಚ್ ಆಫ್ ಆಗಿತ್ತು. ಅವನು ಯಾವುದೇ ಸ್ನೇಹಿತರು ಅಥವಾ ಸಂಬಂಧಿಕರನ್ನು ಸಂಪರ್ಕಿಸಿರಲಿಲ್ಲ. ಸಿಕ್ಕ ಸುಳಿವುಗಳ ಮೇಲೆ ಕಾರ್ಯನಿರ್ವಹಿಸಿದ ಪೊಲೀಸರು ಇಮ್ರಾನ್‌ನನ್ನು ಪತ್ತೆಹಚ್ಚಿದರು. ಆತನ ವಿಚಾರಣೆಯಲ್ಲಿ ಆಘಾತಕಾರಿ ಸಂಗತಿ ಬಹಿರಂಗವಾಯಿತು.
ದೃಶ್ಯ ಸಿನಿಮಾದಲ್ಲಿ ನಾಯಕ ತನ್ನ ಹೆಂಡತಿ-ಮಗಳಿಗೆ ತೊಂದರೆಯಾಗದಂತೆ ಕೊಲೆಯಾದ ವ್ಯಕ್ತಿಯ ಶವವನ್ನು ನಿರ್ಮಾಣವಾಗುತ್ತಿದ್ದ ಪೊಲೀಸ್ ಸ್ಟೇಷನ್ ಅಡಿ ಹೂತುಹಾಕಿರುತ್ತಾನೆ. ಇದರಿಂದ ಕೊನೆಯವರೆಗೂ ಆತ ಶವವನ್ನು ಎಲ್ಲಿ ಹೂತಿದ್ದಾನೆ ಎಂಬುದರ ಸುಳಿವೇ ಪೊಲೀಸರಿಗೆ ಸಿಗುವುದಿಲ್ಲ. ಈ ಕೊಲೆ ಕತೆಯ ವಿಲನ್ ಆಗಿರುವ ಮಹಿಳೆ ರೂಬಿ ಕೂಡ ಬಹಳ ಪ್ಲಾನ್ ಮಾಡಿ, ತನ್ನ ಗಂಡನನ್ನು ಕೊಲೆ ಮಾಡಿದ್ದಳು. ಅವಳ ಪ್ಲಾನ್ ಎಷ್ಟು ಚೆನ್ನಾಗಿತ್ತೆಂದರೆ 1 ವರ್ಷವಾದರೂ ಪೊಲೀಸರಿಗೆ ಈ ಕೊಲೆಯ ಬಗ್ಗೆ ಯಾವುದೇ ಸುಳಿವು ಸಿಕ್ಕಿರಲಿಲ್ಲ. ರೂಬಿ ಮೇಲೆ ಅನುಮಾನವಿದ್ದರೂ ಆಕೆಯ ಕೃತ್ಯಕ್ಕೆ ಯಾವುದೇ ಸಾಕ್ಷಿ ಸಿಕ್ಕಿರಲಿಲ್ಲ.
ಇದನ್ನೂ ಓದಿ: ಪತಿ ಜತೆ ಜಗಳವಾಡಿ ತವರು ಮನೆಗೆ ಹೋದ ಮಹಿಳೆ, ಅವಳಿ ಮಕ್ಕಳ ಕತ್ತು ಸೀಳಿ ಕೊಲೆಗೈದ ತಂದೆ
ರೂಬಿ ತನ್ನ ಗಂಡನನ್ನು ಕೊಂದು, ತನ್ನ ಲವರ್ ಮತ್ತು ಸ್ನೇಹಿತರ ಸಹಾಯದಿಂದ ಅವನ ಶವವನ್ನು ತುಂಡುಗಳಾಗಿ ಕತ್ತರಿಸಿದ್ದರು. ನಂತರ ಅವನ ಶವವನ್ನು ಅವರ ಮನೆಯ ಅಡುಗೆಮನೆಯ ನೆಲದ ಕೆಳಗೆ ಹೂತುಹಾಕಿದ್ದಾಳೆ. ಆರೋಪಿಗಳಲ್ಲಿ ಒಬ್ಬನಾದ ರೂಬಿಯ ಪ್ರಿಯಕರನ ತಪ್ಪೊಪ್ಪಿಗೆಯ ನಂತರ ಅಹಮದಾಬಾದ್ ಅಪರಾಧ ವಿಭಾಗವು ಮನೆಯಿಂದ ಅಸ್ಥಿಪಂಜರದ ಅವಶೇಷಗಳನ್ನು ಹೊರತೆಗೆದಿದೆ. ಇದರಿಂದ ಈ ಸಂಚಲನಾತ್ಮಕ ಪ್ರಕರಣ ಬೆಳಕಿಗೆ ಬಂದಿದೆ.
“ವಿಚಾರಣೆಯ ಸಮಯದಲ್ಲಿ ಇಮ್ರಾನ್ ಈ ಕೊಲೆಯನ್ನು ರೂಬಿಯೇ ಪ್ಲಾನ್ ಮಾಡಿದ್ದಾಗಿ ಒಪ್ಪಿಕೊಂಡರು. ಅವರೆಲ್ಲರೂ ಮೊದಲು ಸಮೀರ್‌ನನ್ನು ಕಟ್ಟಿಹಾಕಿ, ಇರಿದು ಕೊಂದು, ಅವನ ದೇಹವನ್ನು ತುಂಡು ಮಾಡಿ, ಅವಶೇಷಗಳನ್ನು ಅಡುಗೆಮನೆಯ ನೆಲದ ಕೆಳಗೆ ಹೂತುಹಾಕಿತು” ಎಂದು ಪೊಲೀಸರು ತಿಳಿಸಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




