Earthquake: ಗುಜರಾತ್ನಲ್ಲಿ 4.3 ತೀವ್ರತೆಯ ಭೂಕಂಪ; ಭಾರತದಲ್ಲಿ ಹೆಚ್ಚು ಕಂಪನ ಸೂಕ್ಷ್ಮ ಪ್ರದೇಶಗಳು ಎಲ್ಲಿವೆ?
4.3 Intensity Earthquake in Gujarat: ಗುಜರಾತ್ನ ರಾಜಕೋಟ್ನಿಂದ 270 ಕಿಮೀ ದೂರದಲ್ಲಿ ಕೇಂದ್ರ ಬಿಂದುವಾಗಿ ಮಧ್ಯಾಹ್ನ 3:21ಕ್ಕೆ ಸಂಭವಿಸಿದ ಭೂಕಂಪವು ರಿಕ್ಟರ್ ಮಾಪಕದಲ್ಲಿ 4.3 ತೀವ್ರತೆ ದಾಖಲಾಗಿದೆ. ಕಳೆದ ಒಂದು ವಾರದಲ್ಲಿ ಇದು ಗುಜರಾತ್ ರಾಜ್ಯದಲ್ಲಿ ಸಂಭವಿಸಿದ ಮೂರನೇ ಭೂಕಂಪವಾಗಿದೆ.
ನವದೆಹಲಿ: ಗುಜರಾತ್ ರಾಜ್ಯದಲ್ಲಿ ಇಂದು ಭಾನುವಾರ ಲಘು ಭೂಕಂಪ (Earthquake) ಸಂಭವಿಸಿರುವುದು ವರದಿಯಾಗಿದೆ. ಭಾನುವಾರ ಮಧ್ಯಾಹ್ನ 3:21ಕ್ಕೆ ಸಂಭವಿಸಿದ ಭೂಕಂಪ ರಿಕ್ಟರ್ ಮಾಪಕದಲ್ಲಿ 4.3 ತೀವ್ರತೆ ದಾಖಲಾಗಿತ್ತು ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ (National Seismology Center) ತಿಳಿಸಿದೆ. ಭೂಕಂಪದ ಕೇಂದ್ರಬಿಂದು ಗುಜರಾತ್ನ ರಾಜಕೋಟ್ನಿಂದ ವಾಯವ್ಯ ದಿಕ್ಕಿಗೆ (ನಾರ್ತ್ ವೆಸ್ಟ್) 270 ಕಿಮೀ ದೂರದ ಸ್ಥಳದಲ್ಲಿ ಇತ್ತು. ನೆಲದಿಂದ 10 ಕಿಮೀ ಆಳದಲ್ಲಿ ಕೇಂದ್ರ ಬಿಂದು ಇತ್ತೆಂದು ವರದಿಯಾಗಿದೆ.
ಈ ಲಘು ಭೂಕಂಪದಿಂದ ಯಾವುದೇ ಅನಾಹುತವಾದ ವರದಿ ಬಂದಿಲ್ಲ. ಕಳೆದ ವಾರ ಕೂಡ ಗುಜರಾತ್ನ ಅಮರೇಲಿ ಜಿಲ್ಲೆಯಲ್ಲಿ ಎರಡು ದಿನಗಳ ಅಂತರದಲ್ಲಿ ಮೂರು ಲಘು ಭೂಕಂಪಗಳು ಸಂಭವಿಸಿದ್ದವು. ಭಾರತದಲ್ಲಿ ಅತ್ಯಂತ ಭೂಕಂಪ ಸೂಕ್ಷ್ಮ ಸ್ಥಳಗಳಲ್ಲಿ ಗುಜರಾತ್ ಕೂಡ ಒಂದು. ಹಿಂದೆಲ್ಲಾ ಹಲವು ಬಾರಿ ಇಲ್ಲಿ ಭೂಕಂಪಗಳು ಸಂಭವಿಸಿದ ದೊಡ್ಡ ಅನಾಹುತಗಳಿಗೆ ಕಾರಣವಾಗಿದ್ದಿದೆ.
ಭೂಕಂಪ ಸೂಕ್ಷ್ಮ ಪ್ರದೇಶಗಳು
ಅತಿಹೆಚ್ಚು ಭೂಕಂಪಗಳು ಸಂಭವಿಸುವ ಸಾಧ್ಯತೆ ಇರುವ ಪ್ರದೇಶಗಳನ್ನು ಭಾರತದಲ್ಲಿ ಝೋನ್ 5 ಎಂದು ಪಟ್ಟಿ ಮಾಡಲಾಗಿದೆ. ಇದರಲ್ಲಿ ಗುಜರಾತ್ ರಾಜ್ಯವಿದೆ. ಜೊತೆಗೆ ಹಿಮಾಚಲಪ್ರದೇಶ, ಬಿಹಾರ, ಅಸ್ಸಾಮ್, ಮಣಿಪುರ, ನಾಗಾಲೆಂಡ್, ಜಮ್ಮು ಕಾಶ್ಮೀರ, ಅಂಡಮಾನ್ ನಿಕೋಬಾರ್ ಇವೆ.
ಇದನ್ನೂ ಓದಿ: Earthquake: ಪಪುವಾ ನ್ಯೂ ಗಿನಿಯಾ ದ್ವೀಪ ರಾಷ್ಟ್ರದಲ್ಲಿ 6.5ರಷ್ಟು ತೀರ್ವತೆಯಲ್ಲಿ ಕಂಪಿಸಿದ ಭೂಮಿ
ಹಿಮಾಲಯ ಪ್ರದೇಶದಲ್ಲಿ ಸದ್ಯ ಭಾರೀ ಭೂಕಂಪ ಸಂಭವಿಸುವ ಸಾಧ್ಯತೆ ಇದೆ ಎಂದು ಕೆಲ ವರದಿಗಳು ಹೇಳುತ್ತಿವೆ. ಇಲ್ಲಿ ಭೂಕಂಪ ಸಂಭವಿಸುವುದಕ್ಕೆ ಪೂರಕವಾದ ಘಟನೆಗಳು ಭೂಗರ್ಭದಲ್ಲಿ ಆಗುತ್ತಿವೆ. ಯಾವಾಗ ಬೇಕಾದರೂ ಹಿಮಾಲಯದ ಗರ್ಭ ಅಲುಗಾಡಬಹುದು ಎನ್ನುವಂತಹ ಅಭಿಪ್ರಾಯಗಳನ್ನು ಕೆಲ ಭೂಕಂಪ ತಜ್ಞರು ನೀಡಿ ಎಚ್ಚರಿಸುತ್ತಿದ್ದಾರೆ.