ಬಿಹಾರದ ಯಾವುದೇ ಮತದಾರರನ್ನು ಪೂರ್ವ ಸೂಚನೆ ಇಲ್ಲದೆ ಪಟ್ಟಿಯಿಂದ ತೆಗೆದುಹಾಕುವುದಿಲ್ಲ: ಚುನಾವಣಾ ಆಯೋಗ

ಬಿಹಾರದಲ್ಲಿ ಯಾವುದೇ ಅರ್ಹ ಮತದಾರರನ್ನು ಪೂರ್ವ ಸೂಚನೆ ಇಲ್ಲದೆ, ವಿಚಾರಣೆಗೆ ಅವಕಾಶವಿಲ್ಲದೆ ಮತ್ತು ಸಮಂಜಸ ಆದೇಶವಿಲ್ಲದೆ ಮತದಾರರ ಪಟ್ಟಿಯಿಂದ ತೆಗೆದುಹಾಕಲಾಗುವುದಿಲ್ಲ ಎಂದು ಭಾರತೀಯ ಚುನಾವಣಾ ಆಯೋಗ (ECI) ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ.ಆಗಸ್ಟ್​ 1ರಂದು ಎಸ್​ಐಆರ್​ ಅಡಿಯಲ್ಲಿ ಕರಡು ಮತದಾರರ ಪಟ್ಟಿಯಿಂದ ಅಳಿಸಲಾದ ಸುಮಾರು 65 ಲಕ್ಷ ಹೆಸರುಗಳ ವೈಯಕ್ತಿಕ ವಿವರಗಳನ್ನು ನೀಡುವಂತೆ ಚುನಾವಣಾ ಆಯೋಗಕ್ಕೆ ನ್ಯಾಯಾಲಯ ನಿರ್ದೇಶನ ನೀಡುವಂತೆ ಕೋರಿ ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ ಸಲ್ಲಿಸಿದ ಅರ್ಜಿಗೆ ಇಸಿಐ ಪ್ರತಿಕ್ರಿಯಿಸಿದೆ

ಬಿಹಾರದ ಯಾವುದೇ ಮತದಾರರನ್ನು ಪೂರ್ವ ಸೂಚನೆ ಇಲ್ಲದೆ ಪಟ್ಟಿಯಿಂದ ತೆಗೆದುಹಾಕುವುದಿಲ್ಲ: ಚುನಾವಣಾ ಆಯೋಗ
ಮತದಾರರ ಗುರುತಿನ ಚೀಟಿ

Updated on: Aug 10, 2025 | 10:22 AM

ನವದೆಹಲಿ, ಆಗಸ್ಟ್​ 10: ಬಿಹಾರದಲ್ಲಿ ನಡೆಯಲಿರುವ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಗೆ ಸಂಬಂಧಿಸಿದಂತೆ ಚುನಾವಣಾ ಆಯೋಗವು ಸುಪ್ರೀಂ ಕೋರ್ಟ್‌ನಲ್ಲಿ ಹೊಸ ಅಫಿಡವಿಟ್ ಸಲ್ಲಿಸಿದ್ದು, ಪೂರ್ವ ಸೂಚನೆ ಮತ್ತು ಆದೇಶವಿಲ್ಲದೆ ಯಾರ ಹೆಸರನ್ನು ಕರಡು ಮತದಾರರ ಪಟ್ಟಿಯಿಂದ ತೆಗೆದುಹಾಕುವುದಿಲ್ಲ ಎಂದು ಭರವಸೆ ನೀಡಿದೆ.

ಆಗಸ್ಟ್​ 1ರಂದು ಎಸ್​ಐಆರ್​ ಅಡಿಯಲ್ಲಿ ಕರಡು ಮತದಾರರ ಪಟ್ಟಿಯಿಂದ ಅಳಿಸಲಾದ ಸುಮಾರು 65 ಲಕ್ಷ ಹೆಸರುಗಳ ವೈಯಕ್ತಿಕ ವಿವರಗಳನ್ನು ನೀಡುವಂತೆ ಚುನಾವಣಾ ಆಯೋಗಕ್ಕೆ ನ್ಯಾಯಾಲಯ ನಿರ್ದೇಶನ ನೀಡುವಂತೆ ಕೋರಿ ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ ಸಲ್ಲಿಸಿದ ಅರ್ಜಿಗೆ ಇಸಿಐ ಪ್ರತಿಕ್ರಿಯಿಸಿದೆ.

ಯಾವುದೇ ಅರ್ಹ ಮತದಾರರು ಮತದಾರರ ಪಟ್ಟಿಯಿಂದ ಹೊರಗುಳಿಯದಂತೆ ನೋಡಿಕೊಳ್ಳಲು ಸಾಧ್ಯವಿರುವ ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ ಎಂದು ಚುನಾವಣಾ ಆಯೋಗ ಹೇಳಿದೆ. 2025 ರ ಬಿಹಾರ ವಿಧಾನಸಭೆಯ ಎಲ್ಲಾ 243 ಕ್ಷೇತ್ರಗಳಿಗೆ ಚುನಾವಣೆ ಈ ವರ್ಷದ ಅಕ್ಟೋಬರ್ ಅಥವಾ ನವೆಂಬರ್‌ನಲ್ಲಿ ನಡೆಯುವ ನಿರೀಕ್ಷೆಯಿದೆ.

ಮತ್ತಷ್ಟು ಓದಿ: ಬಿಹಾರ ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ ಬಗ್ಗೆ ಯಾರೂ ಆಕ್ಷೇಪಣೆ ಸಲ್ಲಿಸಿಲ್ಲ: ಚುನಾವಣಾ ಆಯೋಗ

ಭಾರತೀಯ ಚುನಾವಣಾ ಆಯೋಗ ( ECI) ಆಗಸ್ಟ್ 1 ರಂದು ಕರಡು ಮತದಾರರ ಪಟ್ಟಿಯನ್ನು ಪ್ರಕಟಿಸುವ ಮೂಲಕ ಬಿಹಾರದಲ್ಲಿ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಯ ಮೊದಲ ಹಂತವನ್ನು ಪೂರ್ಣಗೊಳಿಸಿದೆ. ವಿವಿಧ ಕಾರಣಗಳಿಗಾಗಿ 65 ಲಕ್ಷ ಹೆಸರುಗಳನ್ನು ಈ ಪಟ್ಟಿಯಿಂದ ತೆಗೆದುಹಾಕಲಾಗಿದೆ . ಬಿಹಾರದ 7.89 ಕೋಟಿ ಮತದಾರರಲ್ಲಿ 7.24 ಕೋಟಿ ಮತದಾರರು ಈ ಅಭಿಯಾನದ ಸಮಯದಲ್ಲಿ ತಮ್ಮ ಫಾರ್ಮ್‌ಗಳನ್ನು ಸಲ್ಲಿಸಿದ್ದಾರೆ ಎಂದು ಚುನಾವಣಾ ಆಯೋಗ ತಿಳಿಸಿದೆ.

ಈ ಕಾರ್ಯಕ್ರಮದಲ್ಲಿ 77,000 ಕ್ಕೂ ಹೆಚ್ಚು ಬಿಎಲ್‌ಒಗಳು, 2.45 ಲಕ್ಷ ಸ್ವಯಂಸೇವಕರು ಮತ್ತು 1.6 ಲಕ್ಷ ಪಕ್ಷ ನೇಮಿಸಿದ ಬೂತ್ ಮಟ್ಟದ ಏಜೆಂಟ್‌ಗಳು ಭಾಗವಹಿಸಿದ್ದರು. ಹಿರಿಯ ನಾಗರಿಕರು, ಅಂಗವಿಕಲರು ಮತ್ತು ಇತರ ದುರ್ಬಲ ಮತದಾರರಿಗೆ ಅಗತ್ಯ ದಾಖಲೆಗಳನ್ನು ಪಡೆಯಲು ಸಹಾಯ ಮಾಡಲು ವಿಶೇಷ ವ್ಯವಸ್ಥೆಗಳನ್ನು ಮಾಡಲಾಗಿದೆ ಎಂದು ಅಫಿಡವಿಟ್‌ನಲ್ಲಿ ತಿಳಿಸಲಾಗಿದೆ.  ಮಾಧ್ಯಮಗಳ ಮೂಲಕ ತಿಳಿಸಲಾದ ಯಾವುದೇ ಸಮಸ್ಯೆಯನ್ನು ಜಿಲ್ಲಾ ಅಧಿಕಾರಿಗಳು ತಕ್ಷಣವೇ ಪರಿಹರಿಸುತ್ತಾರೆ ಎಂದು ಅದು ಹೇಳಿದೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Nayana Rajeev

ನಯನಾ ರಾಜೀವ್- ಮೂಲತಃ ಸಾಗರದ ಬಾಳೆಗೆರೆಯವಳು, ಹಿಂದಿಯಲ್ಲಿ ಎಂ.ಎ ಮಾಡಿದ್ದೇನೆ, ಮಾಧ್ಯಮದಲ್ಲಿ 9 ವರ್ಷಗಳ ಅನುಭವವಿದೆ, ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ, ಒನ್​ ಇಂಡಿಯಾ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದೇನೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಒಂದೂವರೆ ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್, ಸಂಗೀತ

Read More
Follow Us